ChannaPatna election Counting: ಬೊಂಬೆಯಾಡ್ಸೋನು ಯಾರು; ಚನ್ನಪಟ್ಟಣದಲ್ಲಿ ಮಣೆ ಮನೆ ಮಗನೋ, ಕುಮಾರಸ್ವಾಮಿ ಪುತ್ರಗೋ , ಇಂದು ಫಲಿತಾಂಶ
ChannaPatna Assembly Election Result: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಇಂದು ನಡೆಯಲಿದ್ದು. ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ChannaPatna Assembly Election Result: ಉಪ ಚುನಾವಣೆಯಾದರೂ ತೀವ್ರ ಕುತೂಹಲ ಮೂಡಿಸಿದ ಬೊಂಬೆಗಳ ನಾಡು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆ ನಂತರ ಫಲಿತಾಂಶವೂ ಅಷ್ಟೇ ಕುತೂಹಲವನ್ನು ಹುಟ್ಟಿಸಿದೆ. ಎರಡು ತಿಂಗಳ ಟಿಕೆಟ್ ವಿಚಾರದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗೆ ಕಾರಣವಾಗಿ ಆರು ತಿಂಗಳ ಹಿಂದಿನ ಲೋಕಸಭೆ ಚುನಾವಣೆಯಲ್ಲಿಯೇ ಜತೆಗಿದ್ದವರೇ ಎದುರಾಳಿಗಾಗಿ ಎದುರಿಸಿದ ವಿಶಿಷ್ಟ ಕಣವಿದು. ಇದರಿಂದ ಇಲ್ಲಿ ಯುವ ನಾಯಕ ನಿಖಿಲ್ ಕುಮಾರಸ್ವಾಮಿಗೆ ಮತದಾರರು ಮಣೆ ಹಾಕಿದ್ದಾರೋ, ಇಲ್ಲವೇ ಚನ್ನಪಟ್ಟಣದವರೇ ಆಗಿರುವ ಐದು ಬಾರಿ ಗೆದ್ದು ರಾಜಕೀಯದಲ್ಲಿ ಅನುಭವ ಇರುವ ಯೋಗೇಶ್ವರ್‌ಗೆ ಶಕ್ತಿ ತುಂಬಿದ್ಧಾರೋ ಎನ್ನುವುದು ಇನ್ನು ಕೆಲವು ಗಂಟೆಗಳಲ್ಲಿ ತಿಳಿಯಲಿದೆ. ಇಂದು ರಾಮನಗರದಲ್ಲಿ ಮತ ಎಣಿಕೆ ಬೆಳಿಗ್ಗೆ 8ಕ್ಕೆ ಶುರುವಾಗಲಿದ್ದು, ಎರಡು ಮೂರು ಗಂಟೆಗಳಲ್ಲಿಯೆ ಸ್ಪಷ್ಟ ಚಿತ್ರಣ ಸಿಗಲಿದೆ.
ಮತ ಎಣಿಕೆ ಹೇಗೆ
ಶನಿವಾರ ಬೆಳಿಗ್ಗೆ ಮತ ಎಣಿಕೆಗೆ ರಾಮನಗರದ ಹೊರ ವಲಯದಲ್ಲಿರುವ ಅರ್ಚಕರಹಳ್ಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 7.30ಕ್ಕೆ ಅಂಚೆ ಮತ ಎಣಿಕೆ ಆರಂಭಗೊಂಡರೆ, 8ಕ್ಕೆ ಎರಡು ಕೊಠಡಿಗಳ 14 ಟೇಬಲ್ ಗಳಲ್ಲಿ ಮತ ಎಣಿಕೆ ನಡೆಯಲಿದೆ. ಒಟ್ಟು20 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಇದಕ್ಕಾಗಿ 69 ಸಿಬ್ಬಂದಿ ನಿಯೋಗಿಸಲಾಗಿದೆ. ಅಲ್ಲದೇ ಮೇಲ್ವಿಚಾರಕರು, ಸಹಾಯಕರು ಹಾಗೂ ಸೂಕ್ಷ್ಮ ವೀಕ್ಷಕರೂ ಕಾರ್ಯನಿರ್ವಹಿಸಲಿದ್ದಾರೆ. ವಿವಿಧ ಪಕ್ಷಗಳ ರಾಜಕೀಯ ಏಜೆಂಟರು ಎಣಿಕಾ ಕೇಂದ್ರದಲ್ಲಿ ಇರಲಿದ್ದಾರೆ. ಮತ ಎಣಿಕೆ ಕೇಂದ್ರದ ಸುತ್ತಲೂ ಪೊಲೀಸ್ ಇಲಾಖೆಯಿಂದ ಭಾರೀ ಭದ್ರತೆಯನ್ನು ಹಾಕಲಾಗಿದೆ ಎನ್ನುವುದು ರಾಮನಗರ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ವಿವರಣೆ.
ಬದಲಾಯಿತೇ ದಿಕ್ಕು
ಚನ್ನಪಟ್ಟಣ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಗೆ ಯಾರು ಅಭ್ಯರ್ಥಿಯಾಗುವರು ಎನ್ನುವುದೂ ಸೇರಿದಂತೆ ಹಲವಾರು ರಾಜಕೀ ಯ ಬೆಳವಣಿಗೆ ನಡೆದವು. ಐದು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿರುವ ಯೋಗೇಶ್ವ ರ್ ಬಿಜೆಪಿ ಟಿಕೆಟ್ ಬಯಸಿದ್ದರು. ಇದು ನಮ್ಮ ಕ್ಷೇತ್ರ. ಬಿಟ್ಟುಕೊಡಲಾಗದು ಎಂದು ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.
ಕೊನೆಗೆ ಯೋಗೇಶ್ವರ್ ತಮ್ಮ ಹಳೆಯ ಪಕ್ಷ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡು ಅಭ್ಯರ್ಥಿಯಾದರು. ಸತತ ಎರಡು ಚುನಾವಣೆಯಲ್ಲಿ ಸೋತಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಬಯಕೆಯಿದ್ದರೂ ಅದನ್ನು ಕುಟುಂಬದವರು ಬಿಟ್ಟುಕೊಟ್ಟಿರಲಿಲ್ಲ.
ಯೋಗೇಶ್ವರ್ ಕಾಂಗ್ರೆಸ್‌ಗೆ ಹೋಗುತ್ತಿದ್ದಂತೆ ನಿಖಿಲ್ ಅವರನ್ನೇ ಎನ್‌ಡಿಎ ಅಭ್ಯರ್ಥಿಯಾಗಿ ಘೋಷಿಸಲಾಯಿತು. ಈ ಬೆಳವಣಿಗೆಗಳ ನಂತರ ಮತ ಪ್ರಚಾರದ ವೇಳೆ ಸಚಿವ ಜಮೀರ್ ಅಹಮದ್ ನೀಡಿದ ಕುಮಾರಸ್ವಾಮಿ ಕುರಿತಾಗಿನ ಕರಿಯಾ ಹೇಳಿಕೆ, ಮುಸ್ಲೀಂ ಮತದಾರರ ಖರೀದಿಯಂತ ವಿಚಾರ, ದೇವೇಗೌಡರ ಕುಟುಂಬ ಕುರಿತಾದ ಅವಹೇಳಕಾರಿ ಹೇಳಿಕೆ ಕೊಂಚ ಕಾಂಗ್ರೆಸ್‌ಗೆ ಹಿನ್ನಡೆಯನ್ನು ತಂದಿರಬಹುದು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಇದನ್ನು ಖುದ್ದು ಯೋಗೇಶ್ವರ್ ಅವರೇ ಮತದಾನ ಮುಗಿದ ನಂತರ ಹೇಳಿಕೊಂಡಿದ್ದಾರೆ.
ಇದರಿಂದ ಆರಂಭದಿಂದಲೂ ಕಾಂಗ್ರೆಸ್ ಪರವಾಗಿಯೇ ಇದ್ದ ಕ್ಷೇತ್ರದ ಫಲಿತಾಂಶ ಮತ್ತೆ ಜೆಡಿಎಸ್‌ಗೆ ಮರಳಿರಬಹುದೇ ಎನ್ನುವ ಚರ್ಚೆಗಳು ಕ್ಷೇತ್ರವನನೂ ಮೀರಿ ಕರ್ನಾಟಕದ ಎಲ್ಲೆಡೆ ನಡೆದವು. ಇದಕ್ಕೆ ಇಂದಿನ ಫಲಿತಾಂಶ, ಮತಗಣಿತ ಉತ್ತರ ನೀಡಬಲ್ಲದು.
ದೇವೇಗೌಡರ ಪ್ರಯತ್ನ
ಈ ನಡುವೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂಡ 93 ರ ಇಳಿ ವಯಸ್ಸಿನಲ್ಲೂ ಭರ್ಜರಿಯಾಗಿಯೇ ಪ್ರಚಾರ ಮಾಡಿ ಚುನಾವಣೆಗೆ ಖದರು ತಂದರು. ಒಂದು ವಾರ ಕಾಲ ಕ್ಷೇತ್ರದಾದ್ಯಂತ ಸುತ್ತು ಹಾಕಿದರು. ಇದು ಕೂಡ ಜೆಡಿಎಸ್‌ಗೆ ಪ್ಲಸ್ ಎನ್ನಲಾಗುತ್ತಿದೆ.
ಇನ್ನು ಎರಡು ಬಾರಿ ಮಗ ಸೋಲು ಅನುಭವಿಸಿ ಈ ಬಾರಿಯೂ ಫಲಿತಾಂಶ ಮರುಕಳಿಸಬಾರದು ಎಂದು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವ್ಯವಸ್ಥಿತವಾಗಿ ಚುನಾವಣೆ ಮಾಡಿದರು. ಎಲ್ಲಿಯೂ ಗೊಂದಲಕ್ಕೆ ಅವಕಾಶ ಮಾಡಿಕೊಡದೇ ನಡೆದುಕೊಂಡಿದ್ದೂ ಪೂರವಾಗಿರಬಹುದು ಎನ್ನುವ ಲೆಕ್ಕಾಚಾರಗಳಿವೆ.
ಈ ಎರಡೂ ಅಂಶದ ಜತೆಗೆ ನಿಖಿಲ್ ಕುಮಾರಸ್ವಾಮಿ ಕೂಡ ತಮ್ಮ ನಡವಳಿಕೆ ಮೂಲಕವೇ ಜನರ ಮನಸು ಗೆದ್ದಿರಬಹುದು. ಅನುಕಂಪವೂ ಅವರಿಗೆ ಮತವಾಗಿ ಪರಿವರ್ತನೆ ಆಗಿರಬಹುದು ಎನ್ನುವ ವಿಶ್ಲೇಷಣೆಗಳೂ ಇವೆ. ಇವುಗಳಿಗೆಲ್ಲಾ ಇಂದೇ ಉತ್ತರ ಸಿಗಲಿದೆ.