Channapatna Elections: ಎನ್ ಡಿಎ ಅಭ್ಯರ್ಥಿ ಘೋಷಣೆ: ಯೋಗೇಶ್ವರ್‌ ಡಿಕೆಶಿ ಚನ್ನಪಟ್ಟಣ ಚಕ್ರವ್ಯೂಹದಲ್ಲಿ ನಿಖಿಲ್ ಗೆ ಗೆಲುವು ಸುಲಭವೇ
ಕನ್ನಡ ಸುದ್ದಿ  /  ಕರ್ನಾಟಕ  /  Channapatna Elections: ಎನ್ ಡಿಎ ಅಭ್ಯರ್ಥಿ ಘೋಷಣೆ: ಯೋಗೇಶ್ವರ್‌ ಡಿಕೆಶಿ ಚನ್ನಪಟ್ಟಣ ಚಕ್ರವ್ಯೂಹದಲ್ಲಿ ನಿಖಿಲ್ ಗೆ ಗೆಲುವು ಸುಲಭವೇ

Channapatna Elections: ಎನ್ ಡಿಎ ಅಭ್ಯರ್ಥಿ ಘೋಷಣೆ: ಯೋಗೇಶ್ವರ್‌ ಡಿಕೆಶಿ ಚನ್ನಪಟ್ಟಣ ಚಕ್ರವ್ಯೂಹದಲ್ಲಿ ನಿಖಿಲ್ ಗೆ ಗೆಲುವು ಸುಲಭವೇ

ಈಗಾಗಲೇ ಎರಡು ಚುನಾವಣೆಯಲ್ಲಿ ಸೋತಿರುವ ನಿಖಿಲ್‌ ಕುಮಾರಸ್ವಾಮಿ ಮೂರನೇ ಬಾರಿ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ಈ ಬಾರಿ ಡಿಕೆ ಶಿವಕುಮಾರ್‌ ಹಾಗೂ ಸಿ.ಪಿ. ಯೋಗೇಶ್ವರ್‌ ಎಂಬ ಅನುಭವಿಗಳ ಚಕ್ರವ್ಯೂಹದಿಂದ ಹೇಗೆ ಪಾರಾಗಬಹುದು ಎನ್ನುವ ಕುತೂಹಲವಿದೆಸುದ್ದಿ ವಿಶ್ಲೇಷಣೆ: ಎಚ್‌.ಮಾರುತಿ. ಬೆಂಗಳೂರು

ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರ್‌ ಎನ್‌ಡಿಎ ಅಭ್ಯರ್ಥಿಯಾಗಿದ್ದು ಅವರ ಗೆಲುವು ಸೋಲಿನ ಲೆಕ್ಕಾಚಾರ ನಡೆದಿದೆ.
ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರ್‌ ಎನ್‌ಡಿಎ ಅಭ್ಯರ್ಥಿಯಾಗಿದ್ದು ಅವರ ಗೆಲುವು ಸೋಲಿನ ಲೆಕ್ಕಾಚಾರ ನಡೆದಿದೆ.

ಬೆಂಗಳೂರು: ಅಳೆದೂ ತೂಗಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ. ಸತತ ಎರಡು ಸೋಲುಗಳ ಸೇದನ್ನು ತೀರಿಸಿಕೊಳ್ಳುವರೋ ಅಥವಾ ಹ್ಯಾಟ್ರಿಕ್ ಸೋಲು ಅನುಭವಿಸುವರೋ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿಖಿಲ್ ಅವರನ್ನು ಅಭ್ಯರ್ಥಿ ಮಾಡಲು ಒಪ್ಪಿದ್ದೇವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಮೈತ್ರಿಕೂಟದ ಅಭ್ಯರ್ಥಿ ಎಂದು ಎರಡೂ ಪಕ್ಷಗಳ ಮುಖಂಡರು ಘೋಷಿಸಿದ್ದಾರೆ.

ದೇವೇಗೌಡರ ಶಪಥ

ನಿಖಿಲ್ ನಿಮ್ಮ ಮನೆ ಮಗ, ಅವನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಆರಿಸಿ ಕಳುಹಿಸಿ ಎಂದು ಭಾವನಾತ್ಮಕವಾಗಿ ಕೇಳಿಕೊಂಡಿದ್ದಾರೆ. ಮೂರನೇ ಬಾರಿಗೆ ನಿಖಿಲ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚನ್ನಪಟ್ಟಣದಲ್ಲೇ ಉಳಿದು ಮೊಮ್ಮಗನನ್ನು ಗೆಲ್ಲಿಸುವುದಾಗಿ ದೊಡ್ಡಗೌಡರು ಶಪಥ ಮಾಡಿದ್ದಾರೆ.

ಜೆಪಿ ಭವನದಿಂದ ಕುಮಾರಸ್ವಾಮಿ ಮತ್ತು ಅವರ ತಂಡ ಬಿಜೆಪಿ ವರಿಷ್ಠ ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದರು. ನಂತರ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಎಂದು ಘೋಷಿಸಿದರು.

ಚನ್ನಪಟ್ಟಣದಲ್ಲಿ ಒಟ್ಟಾಗಿ ಪ್ರಚಾರ ಮಾಡುತ್ತೇವೆ. ನೂರಕ್ಕೆ ನೂರು ನಿಖಿಲ್ ಗೆಲ್ಲುವ ವಿಶ್ವಾಸ ಇದೆ. ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದವೂ ಇದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಅನಿತಾ ಅಭಿಪ್ರಾಯ ಏನಿತ್ತು

ನಿಖಿಲ್ ಗೆ ನಿಜಕ್ಕೂ ಸ್ಪರ್ಧೆ ಮಾಡುವ ಬಯಕೆ ಇದ್ದಿದ್ದರೆ ಈ ಹೊತ್ತಿಗೆ ಪ್ರಚಾರದಲ್ಲಿ ತೊಡಗಿಸಿ ಕೊಳ್ಳುತ್ತಿದ್ದರು. ಅವರ ತಾಯಿ ಅನಿತಾ ಕುಮಾರಸ್ವಾಮಿ ಅವರಿಗೂ ಪುತ್ರ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯುವುದು ಬೇಕಿರಲಿಲ್ಲ.

ಚನ್ನಪಟ್ಟಣದಿಂದ ಗೆದ್ದು ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. ಈಗ ಅದೇ ಅಂಶವನ್ನು ಮುಂದಿಟ್ಟುಕೊಂಡು ಭಾವನಾತ್ಮಕವಾಗಿ ಮತದಾರರನ್ನು ಓಲೈಸಲು ಮುಂದಾಗಬಹುದು. ಮತದಾರನ ಮನ ಕರಗುವುದೇ ಎಂದು ಇಷ್ಟು ಬೇಗ ಹೇಳಲು ಅಸಾಧ್ಯ. ಮತದಾನಕ್ಕೆ 20 ದಿನಗಳಿದ್ದು ಏನೆಲ್ಲಾ ಬೆಳವಣಿಗೆಗಳು ಘಟಿಸಬಹುದು. ಯಾರು ಬೇಕಾದರೂ ಗೆಲ್ಲಬಹುದು.

ಚನ್ನಪಟ್ಟಣ ಚಕ್ರವ್ಯೂಹ ಸುಲಭವಿಲ್ಲ

ಸಿ.ಪಿ. ಯೋಗೇಶ್ವರ್‌ ಇಂದು ಸಿಎಂ ಡಿಸಿಎಂ ಸಮ್ಮುಖದಲ್ಲಿ ಭರ್ಜರಿ ರೋಡ್ ಶೋ ನಡುವೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಇವರ ಗೆಲುವಿಗೆ ಇಡೀ ಸರ್ಕಾರ ನಿಲ್ಲಲಿದೆ. ಆದರೆ ನಿಖಿಲ್ ಪರವಾಗಿ ಅಲ್ಲಿ ಯಾವುದೇ ಕಮಾಲ್ ನಡೆಯುವ ಸಾಧ್ಯತೆಗಳು ಕಡಿಮೆ. ಒಕ್ಕಲಿಗರು ಸಾರಾಸಗಟಾಗಿ ಮತ ಚಲಾಯಿಸಿದರೆ ಗೆಲುವು ಕಾಣಬಹುದು. ಒಕ್ಕಲಿಗ ಮತಗಳು ಹಂಚಿಕೆಯಾದರೆ ಕಷ್ಟ ಎನ್ನುವ ಅಭಿಪ್ರಾಯ ಕ್ಷೇತ್ರಾದ್ಯಂತ ಇದೆ.

ಹೇಳಿ ಕೇಳಿ ಯೋಗೇಶ್ವರ್‌ ಪ್ರಬಲ ಅಭ್ಯರ್ಥಿ. ಅವರದ್ದೇ ಆದ ಸ್ವಂತ ವರ್ಚಸ್ಸು ಬಳ ಇದೆ. ಜೊತೆಗೆ ಈಗ ಅವರು ಆಡಳಿತಾರೂಢ ಕಾಂಗ್ರೆಸ್‌ ಅಭ್ಯರ್ಥಿ.

ಅಧಿಕಾರದಲ್ಲಿರುವ ಪಕ್ಷಕ್ಕೆ ಉಪ ಚುನಾವಣೆ ನಡೆಸುವುದು ಕಷ್ಟವೇನಲ್ಲ. ಬಿಜೆಪಿ ಜತೆ ಮೈತ್ರಿ ಇರುವುದರಿಂದ ಜೆಡಿಎಸ್‌ ಗೆ ಮುಸ್ಲಿಂ ಮತಗಳು ಮೈತ್ರಿ ಬದಲಾದ ನಂತರ ದೂರ ದೂರ. ಕೊನೆಯದಾಗಿ ಬಿಜೆಪಿಯ ಒಂದು ಬಣ ಸದಾ ಕುಮಾರಸ್ವಾಮಿ ಅವರನ್ನು ವಿರೋಧಿಸುತ್ತಾ ಬಂದಿದೆ. ಸಹೋದರ ಡಿ.ಕೆ. ಸುರೇಶ್‌ ಸೋಲಿಗೆ ಸೇಡು ತೀರಿಸಿಕೊಳ್ಳದೆ ಶಿವಕುಮಾರ್ ಬಿಡಲಾರರು. ಹೆಜ್ಜೆ ಹೆಜ್ಜೆಗೂ ತೊಂದರೆಗಳು ಕಾಣಿಸಿಕೊಳ್ಳುತ್ತವೆಯೇ ಹೊರತು ಪೂರಕವಾದ ಅಂಶಗಳು ಇಲ್ಲವೇ ಇಲ್ಲ ಎನ್ನಬಹುದು.

ಸತತ ಎರಡನೇ ಸೋಲಿನ ನಂತರ

ಈ ಚುನಾವಣೆಯಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿಯಿದೆ. ಯಾರೇ ಸೋತರೂ ಅದು ಹ್ಯಾಟ್ರಿಕ್ ಸೋಲಾಗುತ್ತದೆ. ಯೋಗೇಶ್ವರ್ 2018 ಮತ್ತು 2023 ರಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಎದುರು ಸೋತಿದ್ದರು. ನಿಖಿಲ್ 2019 ರಲ್ಲಿ ಮಂಡ್ಯ ಲೋಕಸಭೆ ಮತ್ತು 2023ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಅಭ್ಯರ್ಥಿ ಅಂತಿಮವಾಗಿ ಆರೇ ತಿಂಗಳಲ್ಲಿ ಎಚ್‌ ಡಿಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್‌ ಅವರ ನಡುವೆ ಜಿದ್ದಾಜಿದ್ದಿನ ಎರಡನೇ ಕದನವಾಗಿ ಚನ್ನಪಟ್ಟಣ ಕಣ ಮಾರ್ಪಡಲಿದೆ.

ಸುದ್ದಿ ವಿಶ್ಲೇಷಣೆ: ಎಚ್. ಮಾರುತಿ, ಬೆಂಗಳೂರು

Whats_app_banner