ಕಲ್ಯಾಣ ಕರ್ನಾಟಕದ 'ಕಲ್ಯಾಣ'ಕ್ಕೆ ಸಿದ್ಧಿಸಿದ ಫಲ; 11,770 ಕೋಟಿ ರೂಪಾಯಿ ಯೋಜನೆಗಳಿಗೆ ಅನುಮೋದನೆ, ಪ್ರತ್ಯೇಕ ಸಚಿವಾಲಯ
ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ 11,770 ಕೋಟಿ ರೂಪಾಯಿ ಯೋಜನೆಗಳಿಗೆ ಅನುಮೋದನೆ ನೀಡಿದೆ. ಬೀದರ್ ಹಾಗೂ ರಾಯಚೂರು ನಗರ ಸಭೆಗಳನ್ನು ಮಹಾನಗರ ಪಾಲಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ನಿರ್ಣಯಿಸಲಾಗಿದೆ.

ಕಲಬುರಗಿ: ಇಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 46 ವಿಷಯಗಳಿಗೆ ಒಟ್ಟು 11,770 ಕೋಟಿ ರೂಪಾಯಿ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಇದೇ ಅವಧಿಯಲ್ಲಿ ಬೀದರ್-ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮಾಡುವ ಹಾಗೂ ಬೀದರ್-ಕಲಬುರಗಿಯಲ್ಲಿ ಬರುವ ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆಗಾಗಿ 7200 ಕೋಟಿ ರೂಪಾಯಿ ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ಕಲ್ಯಾಣ ಕರ್ನಾಟಕದ ವಿಮೋಚನಾ ದಿನದ ಹಿನ್ನೆಲೆ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು.
ಇಂದು (ಸೆಪ್ಟೆಂಬರ್ 17ರ ಮಂಗಳವಾರ) ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಭಾಗಕ್ಕೆ ಸಂಬಂಧಿಸಿ 56 ವಿಷಯಗಳ ಕುರಿತು ಚರ್ಚಿಸಲಾಗಿದೆ. ಈ ಪೈಕಿ 46 ಕಲ್ಯಾಣ ಕರ್ನಾಟಕಕ್ಕೆ ಸಂಬಂಧಪಟ್ಟ ವಿಷಯಗಳಾಗಿತ್ತು. ಸಭೆಯಲ್ಲಿ ಮಂಡಿಸಲಾಗಿದ್ದ 56 ವಿಷಯಗಳ 12,692 ಕೋಟಿ ರೂಪಾಯಿ ಯೋಜನೆಗಳ ಪ್ರಸ್ತಾವನೆ ಮಾಡಲಾಯಿತು. ನಾರಾಯಣಪುರ ಡ್ಯಾಂನಿಂದ ನೀರು ತರುವ ಯೋಜನೆ ಕೇಂದ್ರ ಸರ್ಕಾರದ ಪಾಲುದಾರಿಕೆ ಯೋಜನೆಯಿದಾಗಿದ್ದು, 7200 ಕೋಟಿ ರೂ.ಗಳಲ್ಲಿ ಅರ್ಧ ಭಾಗದ ಅನುದಾನವನ್ನು ಕೇಂದ್ರ ಸರ್ಕಾರ ನೀಡಬೇಕಿದೆ ಎಂದರು.
ಕೇಂದ್ರದಿಂದ 5,000 ಕೋಟಿ ರೂಪಾಯಿ ಕೋರಲು ನಿರ್ಣಯ
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ಭಾಗಕ್ಕೆ ಒಂದು ರೂಪಾಯಿ ಕೂಡ ನೀಡಿಲ್ಲ. ಸಂವಿಧಾನ ತಿದ್ದುಪಡಿಗೊಂಡು 371 ಜೆ ಬಂದ ನಂತರ ಈವರೆಗೆ ಅನುದಾನ ನೀಡಿಲ್ಲ. ಆದ್ದರಿಂದ ಕೇಂದ್ರ ಸರ್ಕಾರವೂ ಕೂಡ ಈ ಭಾಗದ ಅಭಿವೃದ್ಧಿಗೆ 5000 ಕೋಟಿ ರೂ. ನೀಡಲು ಕೇಂದ್ರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು ಎಂದಿದ್ದಾರೆ.
ಖಾಲಿ ಹುದ್ದೆಗಳ ಭರ್ತಿಗೆ ಕ್ರಮ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿಯಿರುವ 17,439 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ತೀರ್ಮಾನಿಸಿರುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 371ಜೆ ಜಾರಿ
ಈ ಹಿಂದೆ ಕಾಂಗ್ರೆಸ್ ಸರ್ಕಾರದ ವೇಳೆ 2014 ರಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ನಡೆಸಲಾಗಿತ್ತು. 2012 ರಲ್ಲಿ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿ ಮಾಡಲಾಯಿತು. ರಾಜ್ಯದ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಅವರ ಹೋರಾಟದಿಂದ 371 ಜೆ ಜಾರಿಗೆ ತರಲಾಯಿತು. ವಿಶೇಷ ಸವಲತ್ತುಗಳನ್ನು ಕಲ್ಯಾಣ ಕರ್ನಾಟಕದ ಭಾಗಕ್ಕೆ ನೀಡುವ ಉದ್ದೇಶದಿಂದ 2013 ರಲ್ಲಿ ಸಂವಿಧಾನ ತಿದ್ದುಪಡಿಯಾದ ನಂತರ ನಮ್ಮ ಸರ್ಕಾರದ ಅವಧಿಯಲ್ಲಿ ಈ ಕಾನೂನಿನ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಯಿತು ಎಂದು ಹೇಳಿದ್ದಾರೆ.
ಹಿಂದುಳಿದ ತಾಲೂಕುಗಳ ಸ್ಥಿತಿಗತಿ ಪರಿಶೀಲನೆಗೆ ಸಮಿತಿ
2002ರಲ್ಲಿ ನಂಜುಂಡಪ್ಪ ವರದಿಯಂತೆ ಪ್ರಾದೇಶಿಕ ಅಸಮತೋಲನ ಪರಿಹರಿಸಲು ಸಮಿತಿ ರಚಿಸಲಾಗಿತ್ತು. ಪ್ರಸ್ತುತ ಈ ಭಾಗದ ತಾಲೂಕುಗಳ ಸ್ಥಿತಿಗತಿಯ ಪರಿಶೀಲನೆ ನಡೆಸಲು ಡಾ.ಗೋವಿಂದ ರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಈ ಸಮಮಿಯನ್ನು ರಚಿಸಲಾಗಿದ್ದು, ಸಮಿತಿ ವರದಿ ಬಂದ ನಂತರ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
45 ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ತೀರ್ಮಾನ
ಕಲ್ಯಾಣ ಕರ್ನಾಟಕ ಭಾಗದಲ್ಲಿ 45 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 31 ಸಮುದಾಯ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲು , 9 ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಹಾಗೂ 2 ತಾಲೂಕು ಆಸ್ಪತ್ರೆಗಳನ್ನು ಜಿಲ್ಲಾ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಇದಕ್ಕೆ 890 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
