ರಾಮನ-ರಾಮ ಮಂದಿರದ ಹೆಸರಲ್ಲೂ ಸಿಕ್ಕಿಲ್ಲ ಮತ, ಅಯೋಧ್ಯೆಯಲ್ಲೇ ಬಿಜೆಪಿ ಗೆಲ್ಲಲಿಲ್ಲ; ಇದು ಮೋದಿ ಸೋಲು ಎಂದ ಸಿದ್ಧರಾಮಯ್ಯ
ಕನ್ನಡ ಸುದ್ದಿ  /  ಕರ್ನಾಟಕ  /  ರಾಮನ-ರಾಮ ಮಂದಿರದ ಹೆಸರಲ್ಲೂ ಸಿಕ್ಕಿಲ್ಲ ಮತ, ಅಯೋಧ್ಯೆಯಲ್ಲೇ ಬಿಜೆಪಿ ಗೆಲ್ಲಲಿಲ್ಲ; ಇದು ಮೋದಿ ಸೋಲು ಎಂದ ಸಿದ್ಧರಾಮಯ್ಯ

ರಾಮನ-ರಾಮ ಮಂದಿರದ ಹೆಸರಲ್ಲೂ ಸಿಕ್ಕಿಲ್ಲ ಮತ, ಅಯೋಧ್ಯೆಯಲ್ಲೇ ಬಿಜೆಪಿ ಗೆಲ್ಲಲಿಲ್ಲ; ಇದು ಮೋದಿ ಸೋಲು ಎಂದ ಸಿದ್ಧರಾಮಯ್ಯ

CM Siddaramaiah on Lok Sabha Election result: ಎಲ್ಲಾ ಸಮೀಕ್ಷೆಗಳೂ ಸುಳ್ಳಾಗಿವೆ. ನರೇಂದ್ರ ಮೋದಿ ಮುಖ ನೋಡಿ ಮತ ಹಾಕಿ ಎಂದು ಪ್ರಚಾರ ಮಾಡಿದರೂ ಬಿಜೆಪಿಗೆ ಬಹುಮತ ಬಂದಿಲ್ಲ. ಇದು ನಿಜವಾಗಿಯೂ ಮೋದಿ ಸೋಲು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಮನ-ರಾಮ ಮಂದಿರದ ಹೆಸರಲ್ಲೂ ಸಿಕ್ಕಿಲ್ಲ ಮತ, ಅಯೋಧ್ಯೆಯಲ್ಲೇ ಬಿಜೆಪಿಗಿಲ್ಲ ಬಹುಮತ; ಇದು ಮೋದಿ ಸೋಲು ಎಂದ ಸಿದ್ಧರಾಮಯ್ಯ
ರಾಮನ-ರಾಮ ಮಂದಿರದ ಹೆಸರಲ್ಲೂ ಸಿಕ್ಕಿಲ್ಲ ಮತ, ಅಯೋಧ್ಯೆಯಲ್ಲೇ ಬಿಜೆಪಿಗಿಲ್ಲ ಬಹುಮತ; ಇದು ಮೋದಿ ಸೋಲು ಎಂದ ಸಿದ್ಧರಾಮಯ್ಯ (PTI)

ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಕುಸಿದು ಕಾಂಗ್ರೆಸ್ ಏರಿಕೆ ಕಂಡ ಬೆನ್ನಲ್ಲೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಮನ-ರಾಮ ಮಂದಿರದ ಹೆಸರಲ್ಲೂ ಮತ ಕೇಳಿದ್ದರೂ ಅಯೋಧ್ಯೆಯಲ್ಲೇ ಬಿಜೆಪಿ ಹೀನಾಯವಾಗಿ ಸೋತಿದೆ. ರಾಹುಲ್ ಗಾಂಧಿ ಅವರನ್ನು ದೇಶದ ಜನ ಒಪ್ಪಿಕೊಂಡಿದ್ದಾರೆ, ಸ್ವೀಕರಿಸಿದ್ದಾರೆ ಎಂದು ಸಿದ್ಧರಾಮಯ್ಯ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ಧರಾಮಯ್ಯ ಅವರು, ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. 15-20 ಸ್ಥಾನ ನಮ್ಮ ನಿರೀಕ್ಷೆಯಾಗಿತ್ತು. ಆದರೆ, 2019ರಲ್ಲಿ ಕೇವಲ ಒಂದು ಸ್ಥಾನದಲ್ಲಿ ಗೆದ್ದಿದ್ದ ನಾವೀಗ 9ಕ್ಕೆ ಏರಿದ್ದೇವೆ. ಈ ಬಾರಿ ನಮಗೆ ಶೇ 45.34, ಬಿಜೆಪಿ ಶೇ 46.04 ರಷ್ಟು ಮತ ಬಂದಿದೆ. 2019ರಲ್ಲಿ ಬಿಜೆಪಿ ಶೇ 51.38 ರಷ್ಟು ಮತ ಗಳಿಸಿತ್ತು. ನಮಗೆ ಶೇ.31.88ರಷ್ಟು ಮಾತ್ರ ಮತಗಳು ಬಂದಿದ್ದವು ಎಂದಿದ್ದಾರೆ.

2019ಕ್ಕೆ ಹೋಲಿಸಿದರೆ ನಮ್ಮ ಮತ ಪ್ರಮಾಣ ಹೆಚ್ಚಾಗಿದೆ. ಬಿಜೆಪಿ ಮತ ಪ್ರಮಾಣ ಶೇ.5 ರಷ್ಟು ಕುಸಿದಿದೆ. ಜೆಡಿಎಸ್ ಜೊತೆ ಹೊಂದಾಣಿಕೆ ಬಳಿಕವೂ ಅವರ ಮತ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜೆಡಿಎಸ್ ಸಹ 2019ಕ್ಕಿಂತ ಕಡಿಮೆ ಪ್ರಮಾಣದ ಮತ ಪಡೆದಿದೆ. ಆದರೂ ನಾವು ನಿರೀಕ್ಷಿತ ಪ್ರಮಾಣದಲ್ಲಿ ಸೀಟು ಗೆದ್ದಿಲ್ಲ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ ಪ್ರಮಾಣ ಹೆಚ್ಚಾಗಿದೆ. ಬಿಜೆಪಿ 2014-2019ಕ್ಕಿಂತ ಕಡಿಮೆ ಸೀಟು ಗಳಿಸಿದ್ದಾರೆ. ಮೋದಿ ಮುಖ ನೋಡಿಯೂ ಬಿಜೆಪಿಗೆ ಬಹುಮತ ಬಂದಿಲ್ಲ ಎಂದು ಹೇಳಿದ್ದಾರೆ.

ಮೋದಿ ಜನಪ್ರಿಯತೆ ನೆಲ ಕಚ್ಚಿದೆ ಎಂದ ಸಿದ್ಧರಾಮಯ್ಯ

ಬಿಜೆಪಿ ಸರಳ ಬಹುಮತ ಪಡೆಯುವಲ್ಲೂ ಸೋತಿದೆ. ದೇಶದಲ್ಲಿ ಎಲ್ಲೂ ಮೋದಿ ಅಲೆ ಕಾಣುತ್ತಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಮೋದಿ ಜನಪ್ರಿಯತೆ ನೆಲ ಕಚ್ಚಿದೆ ಎನ್ನುವುದು ಮೇಲು ನೋಟಕ್ಕೆ ಗೊತ್ತಾಗಿದೆ. ಸರ್ಕಾರ ಯಾರು ಮಾಡುತ್ತಾರೆ ಎನ್ನುವುದು ಈಗಲೇ ಹೇಳಲು ಸಾಧ್ಯವಿಲ್ಲ. ಚುನಾವಣೆಯ ಕೊನೆ ಕೊನೆಗೆ ಧರ್ಮ, ದೇವರ ಹೆಸರಲ್ಲಿ ಮತ ಕೇಳಿ ನೇರವಾಗಿ ಇತರೆ ಧರ್ಮೀಯರ ವಿರುದ್ಧ ಭಾಷಣ ಮಾಡಿದ್ದ ಮೋದಿ, ಹಿಂದುಳಿದವರ ಮೀಸಲಾತಿ ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ ಎಂದು ಸುಳ್ಳು ಹೇಳಿಕೊಂಡು ತಿರುಗಿದರೂ ಬಹುಮತ ಬರಲಿಲ್ಲ ಎಂದು ಸಿದ್ಧು ವಾಗ್ದಾಳಿ ನಡೆಸಿದ್ದಾರೆ.

ಎನ್​ಡಿಎ ಕಳೆದ ಬಾರಿಗಿಂತ 64 ಸ್ಥಾನ ಕಳೆದುಕೊಂಡಿದೆ. ಇದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಸೋಲು. ಈ ಸೋಲಿನ ಕಾರಣದಿಂದ ಮೋದಿ ಅವರಿಗೆ ಮತ್ತೆ ಪ್ರಧಾನಿ ಆಗುವ ನೈತಿಕ ಹಕ್ಕಿಲ್ಲ. ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಿದರು. ಇಡಿ, ಐಟಿ, ಸಿಬಿಐ ಹೆಸರಲ್ಲಿ ಹೆದರಿಸಿದರು, ಬೆದರಿಸಿದರು. ಆದರೂ ದೇಶದ ಜನ ಬಿಜೆಪಿಗೆ ಬಹುಮತ ಕೊಡಲಿಲ್ಲ. ರಾಮನ ಹೆಸರಲ್ಲಿ, ರಾಮ ಮಂದಿರದ ಹೆಸರಲ್ಲಿ ಅಯೋಧ್ಯೆಯಲ್ಲೂ ಬಿಜೆಪಿ ಸೋತಿದೆ. ಇದು ಬಿಜೆಪಿಯ ನಿಜವಾದ ಸೋಲು ಎಂದರು. 

ರಾಹುಲ್ ಗಾಂಧಿ ಕೈಹಿಡಿದಿದ್ದಾರೆ ಎಂದ ಮುಖ್ಯಮಂತ್ರಿ

ರಾಹುಲ್ ಗಾಂಧಿಯನ್ನು ದೇಶ ಒಪ್ಪಿಕೊಂಡಿದೆ. ರಾಹುಲ್ ಗಾಂಧಿ ಅವರ ಎರಡು ಯಾತ್ರೆಗಳು ಫಲ ನೀಡಿವೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ದೇಶದ ಜನತೆ ಬಹಳ ದೊಡ್ಡ ಮಟ್ಟದಲ್ಲಿ ಒಪ್ಪಿಕೊಂಡಿದ್ದಾರೆ. ಎರಡೂ ಕ್ಷೇತ್ರಗಳಲ್ಲೂ ರಾಹುಲ್ ಗಾಂಧಿ ಭರ್ಜರಿ ಮತಗಳಿಂದ ಗೆದ್ದಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ. ಕೈಯಲ್ಲಿ ಸಂವಿಧಾನ ಹಿಡಿದೇ ರಾಹುಲ್ ಗಾಂಧಿ ಅವರು ಇಡೀ ದೇಶದಲ್ಲಿ ಚುನಾವಣಾ ಪ್ರಚಾರ ಮಾಡಿದರು. ದೇಶದ ಜನ ಸಂವಿಧಾನದ ಉಳಿವಿಗೆ, ಪ್ರಜಾಪ್ರಭುತ್ವ ಉಳಿವಿಗಾಗಿ ರಾಹುಲ್ ಗಾಂಧಿಯವರ ಕೈ ಹಿಡಿದಿದ್ದಾರೆ ಎಂದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮ ಏನಾಗಿದೆ ಎನ್ನುವ ಬಗ್ಗೆ ವಿಶ್ಲೇಷಣೆ ನಡೆಯಬೇಕಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಮತ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದ್ದರೂ ಬಿಜೆಪಿ ಮತ ಪ್ರಮಾಣ ಕುಸಿದಿದೆ. ಕಾಂಗ್ರೆಸ್ ಕಡಿಮೆ ಸೀಟು ಗೆದ್ದರೂ ಮತ ಪ್ರಮಾಣ ಹೆಚ್ಚಾಗಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದ್ದಾರೆ. ಬಿಜೆಪಿ ಜನಪ್ರಿಯತೆ ಕುಸಿದಿದೆ. ಇಡೀ ದೇಶದಲ್ಲಿ, ರಾಜ್ಯದಲ್ಲಿ 2019 ಕ್ಕಿಂತ ಬಿಜೆಪಿ ಪ್ರಭಾವ ವಿಪರೀತ ಕುಸಿದಿದೆ. ಕೇಂದ್ರದಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎನ್ನುವುದು ಅನಿಶ್ಚಿತವಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ಲೋಕಸಭಾ ಚುನಾವಣೆಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Whats_app_banner