Siddaramaiah: ನನಗೇಕೆ ಮುಜುಗರ; ಮುಡಾ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
Chief Minister Siddaramaiah: ಮುಡಾ ಪ್ರಕರಣ ಕ್ಕೆ ಸಂಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದರು. ಅವರು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ಕೊಟ್ಟಿದ್ದೇನೆ. ಎಲ್ಲವನ್ನೂ ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಸುಳ್ಳು ಕೇಸ್ ಹಾಕಿದ್ದಾರೆ, ವಿಚಾರಣೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಮೊದಲ ಬಾರಿಗೆ ವಿಚಾರಣೆ ಎದುರಿಸಿದ ಸಿಎಂ ಸಿದ್ದರಾಮಯ್ಯ (Chief Minister Siddaramaiah), ವಿಚಾರಣೆ ಮುಗಿದ ಬಳಿಕ ಸರ್ಕಾರಿ ಅತಿಥಿ ಗೃಹಕ್ಕೆ ತೆರಳಿದರು. ಮತ್ತೊಮ್ಮೆ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಆದರೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆಗಳ ಸುರಿಮಳೆಗೈದ ಕಾರಣಕ್ಕೆ ಸಿಎಂ ಕುಪಿತಗೊಂಡು, ಎಲ್ಲರೂ ಒಟ್ಟಿಗೆ ಪ್ರಶ್ನೆ ಕೇಳಿದರೆ ಹೇಗೆ ಉತ್ತರಿಸಲಿ, ಒಬ್ಬೊಬ್ಬರಾಗಿ ಪ್ರಶ್ನೆ ಕೇಳಿ ಎಂದು ಅಬ್ಬರಿಸಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದರು. ಅವರು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ಕೊಟ್ಟಿದ್ದೇನೆ. ಎಲ್ಲವನ್ನೂ ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಸುಳ್ಳು ಕೇಸ್ ಹಾಕಿದ್ದಾರೆ, ವಿಚಾರಣೆ ಮಾಡಿದ್ದಾರೆ. ಇದರಿಂದ ನನಗೇಕೆ ಮುಜುಗರವಾಗುತ್ತದೆ. ಮತ್ತೆ ವಿಚಾರಣೆಗೆ ಬರಲು ನನಗೆ ಹೇಳಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯಿಂದ ಗೋ ಬ್ಯಾಕ್ ಸಿಎಂ ಚಳುವಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾನೆ. ಅದಕ್ಕಾಗಿ ನನ್ನ ವಿಚಾರಣೆಗೆ ಕರೆದಿದ್ದಾರೆ. ಬಿಜೆಪಿ ಅವರು ಗೋ ಬ್ಯಾಕ್ ಅಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ತನಿಖೆಗೆ ವಿರುದ್ಧವಾಗಿದ್ದಾರಾ?
ಬಿಜೆಪಿ ಗೋ ಬ್ಯಾಕ್ ಎನ್ನುತ್ತಿದೆ ಅಂದರೆ, ಅವರು ತನಿಖೆಗೆ ವಿರುದ್ದವಾಗಿದ್ದಾರಾ ಎಂದರ್ಥವೇ? ತನಿಖೆ ಆಗಬಾರದು ಎಂದು ಇದ್ದಾರಾ? ಹಾಗಾದರೆ ಇವರು ಸುಳ್ಳು ಆರೋಪ ಮಾಡಿದ್ದಾರೆ ಎಂದರ್ಥ ಎಂದರು. ಇದೇ ವೇಳೆ ಪ್ರಕರಣದ ತನಿಖೆಯನ್ನು ಲೋಕಾಯುಕ್ತದ ಬದಲು ಸಿಬಿಐಗೆ ನೀಡಿ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಹಾಗಾದರೆ ಸಿಬಿಐ ಯಾರ ಕೈಯಲ್ಲಿ ಇದೆ. ಬಿಜೆಪಿ ಅವರು ಯಾವ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರೆ? ಲೋಕಾಯುಕ್ತ ಮಾಡಿರೋರು ಯಾರು? ಎಂದು ಪ್ರಶ್ನಿಸಿದ್ದಾರೆ.
ಲೋಕಾಯುಕ್ತ ಸ್ವತಂತ್ರವಾಗಿರುವ ಸಂಸ್ಥೆ. ಅದು ಸ್ವತಂತ್ರವಾಗಿ ತನಿಖೆ ಮಾಡುವ ಸಂಸ್ಥೆ. ಬಿಜೆಪಿ ಅವರಿಗೆ ಕಾನೂನಿನ ಮೇಲೆ ಗೌರವವಿಲ್ಲ. ಬಿಜೆಪಿಯವರು ಲೋಕಾಯುಕ್ತದ ಮೇಲೆ ನಂಬಿಕೆ ಕಳೆದುಕೊಂಡಿರೋರು, ಸಿಬಿಐಗೆ ಕೊಟ್ಟಿದ್ದಾರಾ? ಬಿಜೆಪಿ ಅವರು ಕೇಳಿದ್ದಕ್ಕೆಲ್ಲ, ಉತ್ತರ ಕೊಡಬೇಕು ಅನ್ನೋದು ಏನಿದೆ. ಗವರ್ನರ್ ಯಾರಿಂದ ತನಿಖೆ ಮಾಡಬೇಕೆಂದು ಹೇಳಿದ್ದಾರೆ. ಲೋಕಾಯುಕ್ತದಿಂದಲೇ ತನಿಖೆ ಮಾಡಿ ಅಂತಾ ಹೇಳಿರೋದು ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಸೈಟ್ ವಾಪಸ್ ಕೊಟ್ರೆ ತಪ್ಪು ಅಂತಲ್ಲ ಎಂದ ಸಿಎಂ
ಮುಡಾ ಸೈಟ್ ವಿಚಾರ ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ. ಬಿಜೆಪಿ-ಜೆಡಿಎಸ್ ಅವರು ಸುಳ್ಳು ಆರೋಪ ಮಾಡಿದ್ದಾರೆ. ನಾನು ಲೋಕಾಯುಕ್ತದವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಅವರು ಎಲ್ಲಾ ರೆಕಾರ್ಡ್ ಮಾಡಿಕೊಂಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಮುಂದಿನ ತನಿಖೆ ಮಾಡ್ತಾರೆ. ನಾವು ಸೈಟ್ ವಾಪಸ್ಸು ನೀಡಿರೋದು, ತಪ್ಪು ಮಾಡಿದ್ದೇವೆ ಅಂತೇನಲ್ಲ. ನನ್ನ ಮೇಲೆ ಸುಳ್ಳು ಆರೋಪಿಸಿದ್ದಾರೆ ಎಂದು ನನ್ನ ಹೆಂಡತಿ ತೀರ್ಮಾನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಈ ಪ್ರಕರಣಗಳನ್ನು ನಮ್ಮ ವಕೀಲರು ಎದುರಿಸಲಿದ್ದಾರೆ. ನನ್ನ ಬಳಿ ಯಾವುದೇ ಡಾಕ್ಯುಮೆಂಟ್ ಇಲ್ಲ. ಇದಕ್ಕೂ ನನಗೆ ಸಂಬಂಧವೇ ಇಲ್ಲ. ಕೋರ್ಟ್‌ನಲ್ಲಿ ತೀರ್ಮಾನ ಆಗುವವರೆಗೆ ಅದು ಆರೋಪ ಅಷ್ಟೇ. ಇದು ನನಗೆ ಕಪ್ಪು ಮಸಿ ಅಲ್ಲ, ಆರೋಪ ಅಷ್ಟೇ. ಲೋಕಾಯುಕ್ತದವರಿಗೆ ನಾನು ಎಲ್ಲಾ ಉತ್ತರ ಕೊಟ್ಟಿದ್ದೇನೆ, ಕೊಡ್ತೀನಿ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.