ಶಿಕ್ಷಕಿಯ ಕೃತ್ಯಕ್ಕೆ ಕಣ್ಣು ದೃಷ್ಟಿ ಕಳೆದುಕೊಂಡ ಆರು ವರ್ಷದ ಬಾಲಕ; ಶಿಕ್ಷಣ ಅಧಿಕಾರಿ ಸೇರಿದಂತೆ ಇತರ ಐವರ ವಿರುದ್ಧ ಎಫ್‌ಐಆರ್ ದಾಖಲು
ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಆರು ವರ್ಷದ ಯಶವಂತ್ ಎಂಬ ಬಾಲಕ ತನ್ನ ಬಲಗಣ್ಣಿನ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾನೆ. ಇದಕ್ಕೆ ಕಾರಣ ಇಲ್ಲಿದೆ.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಆರು ವರ್ಷದ ಯಶವಂತ್ ಎಂಬ ಬಾಲಕ ತನ್ನ ಬಲಗಣ್ಣಿನ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾನೆ. ಇದಕ್ಕೆ ಕಾರಣ ಒಂದು ವರ್ಷದ ಹಿಂದೆ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಮಾಡಿದ ಗಾಯದಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಈಗ ಶಿಕ್ಷಕಿ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆ ಮಾರ್ಚ್ 6, 2024 ರಂದು ಸರ್ಕಾರಿ ಶಾಲೆಯಲ್ಲಿ ನಡೆದಿದ್ದು, ಆಗ ಯಶ್ವಂತ್ 1 ನೇ ತರಗತಿಯಲ್ಲಿ ಓದುತ್ತಿದ್ದ. ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಶಿಸ್ತಿನಿಂದ ಕೂರಿಸಲು ಪ್ರಯತ್ನಿಸುತ್ತಿದ್ದಾಗ, ಶಿಕ್ಷಕಿಯೊಬ್ಬರು ಮಕ್ಕಳ ಗುಂಪಿನತ್ತ ಕೋಲನ್ನು ಎಸೆದಿದ್ದಾರೆ ಎನ್ನಲಾಗಿದೆ. ಕೋಲು ಬಾಲಕ ಯಶ್ವಂತ್ ಬಲಗಣ್ಣಿಗೆ ತಗುಲಿ, ಆ ಸಮಯದಲ್ಲಿ ಸಣ್ಣಪುಟ್ಟ ಗಾಯವಾಗಿತ್ತು.
ಆರಂಭದಲ್ಲಿ, ಹುಡುಗನ ಪೋಷಕರು ಗಾಯದ ಗಂಭೀರತೆಯನ್ನು ಗ್ರಹಿಸಲಿಲ್ಲ. ಆದರೆ, ನಂತರದ ದಿನಗಳಲ್ಲಿ ಅವನ ಸ್ಥಿತಿ ಹದಗೆಟ್ಟಾಗ ಅವರು ಚಿಂತಾಮಣಿಯ ನೇತ್ರಶಾಸ್ತ್ರಜ್ಞರನ್ನು ಸಂಪರ್ಕಿಸಿದರು. ಅದಾದ ನಂತರ ಅವರು ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಡಿಸೆಂಬರ್ 2024 ರಲ್ಲಿ ಮಗುವಿಗೆ ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಿ, ಹಾನಿಯನ್ನು ಸರಿಪಡಿಸಲು ಪ್ರಯತ್ನಿಸಿದ್ದಾರೆ. ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಮಗುವಿನ ದೃಷ್ಟಿ ಸುಧಾರಿಸಲಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಮತ್ತೆ ಬಾಲಕನ ದೃಷ್ಟಿ ಪರೀಕ್ಷೆ ಮಾಡಿಸಲಾಯಿತು. ಯಾಕೆಂದರೆ ಪಾಲಕರಲ್ಲಿ ಆಗಲೇ ಅನುಮಾನ ಆರಂಭವಾಗಿತ್ತು. ಪರೀಕ್ಷೆಯ ನಂತರ ಮಗುವು ತನ್ನ ಬಲಗಣ್ಣಿನ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಂಡಿರುವುದು ಖಚಿತವಾಗಿದೆ.
ಐವರ ವಿರುದ್ಧ ಎಫ್‌ಐಆರ್ ದಾಖಲು
ಆಕ್ರೋಶಗೊಂಡ ಬಾಲಕನ ಕುಟುಂಬ, ಸ್ಥಳೀಯ ನಿವಾಸಿಗಳೊಂದಿಗೆ ಬಟ್ಲಹಳ್ಳಿ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಇದರ ಪರಿಣಾಮವಾಗಿ ಶಿಕ್ಷಕಿ ಮತ್ತು ಸ್ಥಳೀಯ ಬ್ಲಾಕ್ ಶಿಕ್ಷಣ ಅಧಿಕಾರಿ ಸೇರಿದಂತೆ ಇತರ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದೈಹಿಕ ಹಲ್ಲೆಗೆ ಸಂಬಂಧಿಸಿದ ಆರೋಪಗಳು ಸೇರಿದಂತೆ ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್‌ಗಳನ್ನು ಸಹ ಅನ್ವಯಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸಂಗ್ರಹಿಸಿದ ಪುರಾವೆಗಳು ಮತ್ತು ವೈದ್ಯಕೀಯ ವರದಿಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

