ಹಸಿವು ನೀಗಿಸುವ ಕಾಯಕದಲ್ಲಿ ಫೇಸ್‌ಬುಕ್ ಪೇಜ್ ಗೆಳೆಯರು, ಚಿಕ್ಕಬಳ್ಳಾಪುರದ ಮೂರ್ತಿ ಮೆಸ್‌ನಲ್ಲಿನ್ನು ಸಿಗಲಿದೆ ಉಚಿತ ಊಟ; ಏನಿದು ಸ್ಟೋರಿ?
ಚಿಕ್ಕಬಳ್ಳಾಪುರದ ಮೂರ್ತಿ ಮೆಸ್‌ನಲ್ಲಿನ್ನು ಬಡವರಿಗೆ, ಕೈಲಾಗದವರಿಗೆ, ಅಶಕ್ತರಿಗೆ ಉಚಿತವಾಗಿ ಊಟ-ತಿಂಡಿ ಸಿಗಲಿದೆ. ಇದನ್ನು ಮೆಸ್‌ನವರು ಕೊಡ್ತಿಲ್ಲ, ಬದಲಾಗಿ AVLGI ಎಂಬ ಫೇಸ್‌ಬುಕ್ ಪುಟದ ಗೆಳೆಯರು ಕೊಡುತ್ತಿದ್ದಾರೆ. ಇವರ್ಯಾಕೆ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ, ಈ ಎಫ್‌ಬಿ ಪೇಜ್ ತಂಡದ ಉದ್ದೇಶವೇನು ನೋಡಿ.

ಸಮಾಜದಲ್ಲಿನ ಸಂಘಟನೆಯೊಂದು ಮನಸ್ಸು ಮಾಡಿದರೆ ಏನು ಬೇಕಾದರೂ ಬದಲಾವಣೆ ಮಾಡಬಹುದು. ಸಂಘಟನೆಯ ಶಕ್ತಿ ಅದು. ಇದೀಗ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲೇ ಒಗ್ಗೂಡಿರುವ ಗೆಳೆಯರ ಬಳಗವೊಂದು ಸಮಾಜದ ಕಣ್ಣೊರಿಸುವ ವಿನೂತನ ಕೆಲಸವೊಂದನ್ನು ಮಾಡಲು ಹೊರಟಿದೆ. ಹಸಿದವರ ಹೊಟ್ಟೆ ತುಂಬಿಸುವ ಕಾಯಕ ಮಾಡಲು ಹೊರಟಿರುವ ಫೇಸ್‌ಬುಕ್ ಗೆಳೆಯರ ಬಳಗದ ಹೆಸರು ʼAVLGIʼ. ಸಮಾನಮನಸ್ಕರು ಸೇರಿಕೊಂಡು ಈ ಹೆಸರಿನ ಫೇಸ್‌ಬುಕ್ ಪುಟ ತೆರೆದಿದ್ದು ಮಾತ್ರವಲ್ಲ, ರಾಜ್ಯದಾದ್ಯಂತ ಈ ಫೇಸ್‌ಬುಕ್ ಪುಟದ ಸದಸ್ಯರಿದ್ದಾರೆ.
ಇದೀಗ AVLGI ಚಿಕ್ಕಬಳ್ಳಾಪುರದ ಸದಸ್ಯರು ಸೇರಿಕೊಂಡು ʼತೃಪ್ತಿ AVLGIʼ ಹೆಸರಿನಲ್ಲಿ ಬಡವರು, ಕೈಲಾಗದವರು ಅಶಕ್ತರಿಗೆ ಅನ್ನದಾನ ಮಾಡುವ ಮಹತ್ಕಾರ್ಯ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ಚಿಕ್ಕಬಳ್ಳಾಪುರದ ಮೂರ್ತಿ ಮೆಸ್ ಅನ್ನು. ಅಶಕ್ತರು, ಕೈಲಾಗದೇ ಇರುವ ದುರ್ಬಲರು, ಊಟ ಸಿಗದೇ ತೊಂದರೆ ಪಡುವವರು ಇನ್ನು ಮುಂದೆ ಈ ಮೂರ್ತಿ ಮೆಸ್‌ನಲ್ಲಿ ಉಚಿತವಾಗಿ ಊಟ-ತಿಂಡಿ ತಿನ್ನಬಹುದು. ಸಮುದಾಯಕ್ಕೆ ಮೀಸಲಾದ ಈ ಫೇಸ್‌ಬುಕ್ ಪುಟದ ಸದಸ್ಯರು ದಾನಿಗಳ ಪ್ರಾಯೋಜಕತ್ವದಲ್ಲಿ ಉಚಿತವಾಗಿ ಆಹಾರ ನೀಡಲು ಮುಂದಾಗಿದ್ದಾರೆ.
ಮೂರ್ತಿ ಮೆಸ್‌ನಲ್ಲಿ ನಾಮಫಲಕ
ಬಡ-ಬಗ್ಗರಿಗೆ ಉಚಿತವಾಗಿ ಊಟ ನೀಡುವ ವಿಚಾರವನ್ನು ಮೂರ್ತಿ ಮೆಸ್‌ನಲ್ಲಿ ಎದುರು ಬೋರ್ಡ್ ಹಾಕಲಾಗಿದೆ. ಸಾರ್ವಜನಿಕರು ಹಾಗೂ ದಾನಿಗಳು ಇಲ್ಲಿ ಸಹಾಯ ಮಾಡಬಹುದು. ಇಲ್ಲಿ ನೀವು ಕೊಡಿಸಲು ಬಯಸಿದರೆ ಹೋಟೆಲ್‌ನಲ್ಲಿ ಟೋಕನ್ ಪಡೆದು ಅಲ್ಲೇ ಇರುವ ಬುಲೆಟಿನ್ ಬೋರ್ಡ್‌ನಲ್ಲಿ ಇಡಬೇಕು. ಹಸಿವಿನಿಂದ ಇರುವವರು ಆ ಟೋಕನ್ ಪಡೆದು ಹೋಟೆಲ್‌ನಲ್ಲಿ ಉಚಿತವಾಗಿ ಊಟ ಮಾಡಬಹುದು.
ಕಳೆದ ಶನಿವಾರ (ಮಾರ್ಚ್ 17) ಫೇಸ್‌ಬುಕ್ ಪುಟದ ಸದಸ್ಯರು ಹಾಗೂ ಸಂಯೋಜಕರು ಮೂರ್ತಿ ಮೆಸ್‌ನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
35 ಸಾವಿರ ಮಂದಿ ಸದಸ್ಯರಿರುವ ಫೇಸ್‌ಬುಕ್ ಪುಟ ಇದಾಗಿದೆ. ಈ ರೀತಿ ಉಚಿತ ಆಹಾರ ನೀಡುವ ಸೇವೆಯನ್ನು ಚಿಕ್ಕಬಳ್ಳಾಪುರದಲ್ಲಿ ಮೊದಲ ಬಾರಿಗೆ ಆರಂಭಿಸಲಾಗಿದೆ. ಸದ್ಯ ಮೂರ್ತಿ ಮೆಸ್‌ನಲ್ಲಿ ಮಾತ್ರ ಉಚಿತ ಊಟ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ಬೇರೆ ಹೋಟೆಲ್‌ಗಳಿಗೂ ವಿಸ್ತರಿಸುವ ಬಗ್ಗೆ ಯೋಚಿಸುತ್ತಿದ್ದಾರೆ ತಂಡದ ಸದಸ್ಯರು. ಈಗಾಗಲೇ ಮೂರ್ತಿ ಮೆಸ್‌ನಲ್ಲಿರುವ ಬುಲೆಟಿನ್ ಬಾಕ್ಸ್‌ನಲ್ಲಿ 2 ಸಾವಿರಕ್ಕಿಂತ ಹೆಚ್ಚು ಮೌಲ್ಯದ ಟೋಕನ್‌ಗಳಿವೆ. ಫೇಸ್‌ಬುಕ್ ತಂಡದ ಈ ಕಾರ್ಯವು ಹಸಿದವರ ಹೊಟ್ಟೆ ತಣಿಸುವುದು ಮಾತ್ರವಲ್ಲ, ಹಲವರು ಇತರ ತಂಡಕ್ಕೂ ಸ್ಫೂರ್ತಿಯಾಗುವುದರಲ್ಲಿ ಅನುಮಾವಿಲ್ಲ.
ಇದನ್ನೂ ಓದಿ
ಲೋಕಸಭೆ ಚುನಾವಣೆ 2024; ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳ ಪೈಪೋಟಿ
ಲೋಕಸಭೆ ಚುನಾವಣೆ 2024ಕ್ಕೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಕಾಂಗ್ರೆಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಯುವ ನಾಯಕ ರಕ್ಷಾ ರಾಮಯ್ಯ, ಬಿಜೆಪಿಯಿಂದ ಮಾಜಿ ಸಚಿವ ಡಾ ಕೆ ಸುಧಾಕರ್, ಯುವ ನಾಯಕ ಅಲೋಕ್ ವಿಶ್ವನಾಥ್ ಆಕಾಂಕ್ಷಿಗಳು. ಕ್ಷೇತ್ರ ಚಿತ್ರಣ ಹೀಗಿದೆ
