Chintamani Crime: ಚಿಂತಾಮಣಿ; ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಬಟ್ಟೆ ವ್ಯಾಪಾರಿ
Chikkaballapura News: ವಿಜಯ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಈ ವಿಡಿಯೊ ಕ್ಲಿಪ್ ವೈರಲ್ ಆಗಿತ್ತು. ಆರೋಪಿ ಮತ್ತು ಗಾಯಾಳು ಇಬ್ಬರೂ ಚಿಂತಾಮಣಿಯಲ್ಲಿಯೇ ವಾಸಿಸುತ್ತಿದ್ದರು. ಇಬ್ಬರದೂ ಬಟ್ಟೆ ವ್ಯಾಪಾರವೇ ಉದ್ಯೋಗವಾಗಿತ್ತು.
ಚಿಂತಾಮಣಿ: ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಸ್ನೇಹಿತನನ್ನು ನಿರ್ಜನ ಪ್ರದೇಶಕ್ಕೆ ಕರೆತಂದು ಆತನ ಕತ್ತುಕೊಯ್ದು ರಕ್ತ ಕುಡಿದ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನಡೆದಿದೆ. ಕ್ರೌರ್ಯ ಮೆರೆದ ವ್ಯಕ್ತಿಯನ್ನು ಬಟ್ಟೆ ವ್ಯಾಪಾರಿ ವಿಜಯ್ ಎಂದು ಗುರುತಿಸಲಾಗಿದೆ. ಕುತ್ತಿಗೆ ಭಾಗದಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಾರೇಶ್ ಎಂಬಾತ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ವಿಜಯ್ನನ್ನು ಬಂಧಿಸಿದ್ದಾರೆ.
ಆರೋಪಿ ವಿಜಯ್ನ ಪತ್ನಿ ಜೊತೆ ಮಾರೇಶ್ ಅನೈತಿಕ ಸಂಬಂಧ ಹೊಂದಿದ್ದ. ಈ ವಿಷಯ ವಿಜಯ್ ಗಮನಕ್ಕೆ ಬಂದ ನಂತರ ಇವರಿಬ್ಬರ ನಡುವೆ ವೈಮನಸ್ಯ ಮೂಡಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ಈ ಮೊದಲೂ ಜಗಳಗಳು ಆಗಿದ್ದ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಾಗಿಲ್ಲ. ಮಾರೇಶ್ಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ವಿಜಯ್ ಮತ್ತು ಆತನ ಸ್ನೇಹಿತ ಜಾನ್ ಕಳೆದ ಜೂನ್ 19ರಂದು ಆತನನ್ನು ಚಿಂತಾಮಣಿ ತಾಲ್ಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ಇರುವ ಅರಣ್ಯಕ್ಕೆ ಕರೆದೊಯ್ದಿದ್ದರು.
ಅಲ್ಲಿ ಮಾತಿಗೆ ಮಾತು ಬೆಳೆದು ಮಾರೇಶ್ನ ಕುತ್ತಿಗೆಗೆ ವಿಜಯ್ ಚಾಕು ಹಾಕಿದ. ಹರಿದು ಬಂದ ರಕ್ತ ಕುಡಿಯುವ ವಿಡಿಯೊ ಮಾಡಿಸಿಕೊಂಡ. ಈ ವಿಡಿಯೊ ಚಿತ್ರೀಕರಿಸಿದ್ದು ಜೂನ್ 19ರಂದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವೇಳೆ ಹೇಗೋ ಸ್ಥಳಕ್ಕೆ ಬಂದಿದ್ದ ಮಾರೇಶ್ನ ಸಹೋದರ ವಿಜಯ್ ಮತ್ತು ಜಾನ್ರಿಂದ ಅವನನ್ನು ರಕ್ಷಿಸಿ, ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ. ನಂತರ ಇಬ್ಬರನ್ನೂ ಕರೆಸಿ ಎಚ್ಚರಿಸಿದ ಗ್ರಾಮದ ಹಿರಿಯರು ರಾಜಿ ಮಾಡಿಸಿದ್ದರು. ವಿಜಯ್ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿಬಿಟ್ಟ ನಂತರ ಪ್ರಕರಣ ಬಯಲಿಗೆ ಬಂದಿತ್ತು. ಆರೋಪಿಗಳ ವಿರುದ್ಧ ಮಾರೇಶ್ನ ಸೋದರನೇ ಕೆಂಚಾರ್ಲಹಳ್ಳಿ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಿದ್ದ.
ವಿಜಯ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಈ ವಿಡಿಯೊ ಕ್ಲಿಪ್ ವೈರಲ್ ಆಗಿತ್ತು. ಆರೋಪಿ ವಿಜಯ್ ಮತ್ತು ಗಾಯಾಳು ಮಾರೇಶ್ ಕಳೆದ ಕೆಲ ದಿನಗಳಿಂದ ಚಿಂತಾಮಣಿಯ ಗಾಂಧಿ ನಗರದಲ್ಲಿ ವಾಸಿಸುತ್ತಿದ್ದರು. ಗಾಯಗೊಂಡಿರುವ ಮಾರೇಶ್ ಸಹ ಬಟ್ಟೆ ವ್ಯಾಪಾರದ ಕೆಲಸ ಮಾಡುತ್ತಾನೆ. ಇವನು ಮೂಲತಃ ಬಾಗೇಪಲ್ಲಿ ತಾಲ್ಲೂಕು ಮಂಡ್ಯಂಪಲ್ಲಿ ಗ್ರಾಮದನು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ವಿಜಯ್ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಗ್ರಾಮದವನು.
ಕುಣಿಗಲ್: ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ, ಕೊಡಗಿನ ವ್ಯಕ್ತಿ ಸಾವು
ಕುಣಿಗಲ್: ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಗೊಟ್ಟಿಕೆರೆ ಬಳಿ ಭಾನುವಾರ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಈ ವೇಳೆ ಕಾರಿನಲ್ಲಿದ್ದ ಚೇತನ್ (29) ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟರು. ಅಪಘಾತದಲ್ಲಿ ಅವರ ಪತ್ನಿ ಜಯಂತಿ ಮತ್ತು ಪುತ್ರ ವಿಹಾನ್ ತೀವ್ರವಾಗಿ ಗಾಯಗೊಂಡರು.
ಬೆಂಗಳೂರಿನಲ್ಲಿ ನೆಲೆಸಿದ್ದ ಚೇತನ್ ಮೂಲತಃ ಕೊಡಗು ಜಿಲ್ಲೆ ಗೋಪಾಲಪುರದವರು. ಪತ್ನಿ ಮತ್ತು ಪುತ್ರನೊಂದಿಗೆ ಕೊಡಗಿನಿಂದ ಬೆಂಗಳೂರಿಗೆ ಹಿಂತಿರುಗುವಾಗ ಅಪಘಾತ ಸಂಭವಿಸಿದೆ. ಕುಣಿಗಲ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.