ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಹಿರಿಯ ಪತ್ರಕರ್ತ, ಲೇಖಕ ಸಿಕೆ ಮೂರ್ತಿ ನಿಧನ
ಕನ್ನಡ ಸುದ್ದಿ  /  ಕರ್ನಾಟಕ  /  ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಹಿರಿಯ ಪತ್ರಕರ್ತ, ಲೇಖಕ ಸಿಕೆ ಮೂರ್ತಿ ನಿಧನ

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಹಿರಿಯ ಪತ್ರಕರ್ತ, ಲೇಖಕ ಸಿಕೆ ಮೂರ್ತಿ ನಿಧನ

ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಪ್ರದೇಶ ಕಡೂರಿನಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಪತ್ರಕರ್ತರಾಗಿ, ಲೇಖಕರಾಗಿ ಗುರುತಿಸಿಕೊಂಡಿದ್ದ ಸಿ.ಕೆ.ಮೂರ್ತಿ ಅವರು ಬುಧವಾರ ನಿಧನರಾದರು.

ಕಡೂರಿನ ಹಿರಿಯ ಪತ್ರಕರ್ತ ಸಿಕೆ ಮೂರ್ತಿ ನಿಧನರಾಗಿದ್ದಾರೆ.
ಕಡೂರಿನ ಹಿರಿಯ ಪತ್ರಕರ್ತ ಸಿಕೆ ಮೂರ್ತಿ ನಿಧನರಾಗಿದ್ದಾರೆ.

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಪ್ರದೇಶ ಎಂದೇ ಹೆಸರುವಾಸಿಯಾಗಿರುವ ಕಡೂರಿನ ಹಿರಿಯ ಪತ್ರಕರ್ತ ಹಾಗೂ ಲೇಖಕ ಸಿ.ಕೆ.ಮೂರ್ತಿ ಅವರು ಬುಧವಾರ ನಿಧನರಾದರು.ಕಡೂರು ಭಾಗದಲ್ಲಿ ನಾಲ್ಕು ದಶಕ ಕಾಲದಿಂದ ಪತ್ರಕರ್ತರಾಗಿ, ಲೇಖಕರಾಗಿ ಗುರುತಿಸಿಕೊಂಡಿದ್ದ ಮೂರ್ತಿ ಅವರು ಈಗಲೂ ಸಕ್ರಿಯರಾಗಿದ್ದರು. ಅನಾರೋಗ್ಯದ ಕಾರಣದಿಂದ ಅವರು ಚಿಕಿತ್ಸ ಪಡೆದಿದ್ದರೂ ಬುಧವಾರ ನಿಧನರಾದರು ಎಂದು ಕುಟುಂಬವರು ತಿಳಿಸಿದ್ದಾರೆ. ಕಡೂರು ಭಾಗದಲ್ಲಿ ಅತ್ಯುತ್ತಮ ಪತ್ರಕರ್ತರಾಗಿ ಹೆಸರು ಮಾಡಿದ್ದ ಮೂರ್ತಿ ಅವರು ವಿಜಯಕರ್ನಾಟಕ, ಸಂಯುಕ್ತ ಕರ್ನಾಟಕ ಸಹಿತ ಹಲವು ಪತ್ರಿಕೆಗಳಲ್ಲಿ, ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಯಾಗಿಯೂ ಕೆಲಸ ಮಾಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಸಹಿತ ವಿವಿಧ ಸಂಘ ಸಂಸ್ಥೆಗಳ ಮೂಲಕವೂ ಸಿಕೆ ಮೂರ್ತಿ ಅವರು ಗುರುತಿಸಿಕೊಂಡು ಸಮಾಜಮುಖಿಯಾಗಿದ್ದರು.

ಹಾಸನ ಜಿಲ್ಲೆ ಹೆಬ್ಬಾಲೆಯವರಾದ ಮೂರ್ತಿ ಎಂಬತ್ತರ ದಶಕದಲ್ಲೇ ಕಡೂರಿಗೆ ಬಂದು ನೆಲೆಸಿದ್ದರು. ಗಿರಿ ವಾರ್ತೆ ಪತ್ರಿಕೆ ಮೂಲಕ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ್ದರು. ನಂತರ ಹೊಸದಿಗಂತ, ಶಿರೋರತ್ನ, ಮಾರ್ಗ ಪ್ರಭ ಪತ್ರಿಕೆಯಲ್ಲಿ ಕೆಲಸ ಮಾಡಿ ಹೊಸ ಅಧ್ಯಾಯ ಎನ್ನುವ ವಾರಪತ್ರಿಕೆ ಆರಂಭಿಸಿದ್ದರು. ಹಾಸನ ಜಿಲ್ಲೆಯ ಜನತಾಮಾಧ್ಯಮ, ಜನಮಿತ್ರರಾಗಿ ಉಪಸಂಪಾದಕರಾಗಿದ್ದರು. ಪ್ರಜಾವಾಣಿ, ಸಂಯುಕ್ತಕರ್ನಾಟಕ. ವಿಜಯಕರ್ನಾಟಕದಲ್ಲೂ ವರದಿಗಾರರಾಗಿ ಕಡೂರಲ್ಲಿ ಸೇವೆ ಸಲ್ಲಿಸಿದರು. ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ರಾಜ್ಯ ಸದಸ್ಯರಾಗಿದ್ದರು. ಚಿಕ್ಕಮಗಳೂರು ಲೇಖಕರ ಸಂಘದ ಸಹ ಕಾರ್ಯದರ್ಶಿ, ಕಸಾಪ ಅಜೀವ ಸದಸ್ಯರೂ ಆಗಿದ್ದರು ಅವರಿಗೆ ಕಡೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯೋತ್ಸವ ಪ್ರಶಸ್ತಿ, ಕಡೂರು ಜೇಸಿ ಪ್ರಶಸ್ತಿ ಬಂದಿದ್ದವು, ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರೂ ಆಗಿದ್ದರು.

ಮೃತರಿಗೆ ಪತ್ನಿ ಪುಷ್ಪಲತಾ ಇದ್ದಾರೆ. ಅಂತ್ಯಕ್ರಿಯೆ ಕಡೂರಿನಲ್ಲಿಯೇ ನೆರವೇರಿತು.

ಎರಡು ವರ್ಷದ ಹಿಂದೆ ಕಡೂರಿನಲ್ಲಿ ಬಗರ್‌ ಹುಕುಂ ಸಮಿತಿ ಭೂಮಿಯ ಅವ್ಯವಹಾರ ನಡೆದಿದ್ದನ್ನು ಮೊದಲು ಬಯಲಿಗೆಳೆದವರೇ ಸಿಕೆ ಮೂರ್ತಿ ಅವರು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಹಸಿಲ್ದಾರ್‌ ಅವರನ್ನು ಅಮಾನತುಗೊಳಿಸಿತು. ಈಗಲೂ ಪ್ರಕರಣದ ವಿಚಾರಣೆ ನಡೆದಿದೆ. ಇದೇ ರೀತಿ ವೃತ್ತಿ ಜೀವನದುದ್ದಕ್ಕೂ ಹಲವು ವರದಿಗಳನ್ನು ಅವರು ಮಾಡಿದ್ದಾರೆ ಕಡೂರಿನ ಪತ್ರಕರ್ತರಾದ ಬಾಲು ಮಚ್ಚೇರಿ ನೆನಪಿಸಿಕೊಳ್ಳುತ್ತಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner