Chikkamagaluru News: ಕೋತಿಗಳ ಕಾಟಕ್ಕೆ ವಿಷವಿಕ್ಕಿದರು, ತಲೆಗೆ ಹೊಡೆದು ಕೊಂದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರೋಪಿಗಳಿಗೆ ಹುಡುಕಾಟ-chikkamagaluru news 30 monkeys poisoned killed after hitting head inhuman activity in koppa forest division kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Chikkamagaluru News: ಕೋತಿಗಳ ಕಾಟಕ್ಕೆ ವಿಷವಿಕ್ಕಿದರು, ತಲೆಗೆ ಹೊಡೆದು ಕೊಂದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರೋಪಿಗಳಿಗೆ ಹುಡುಕಾಟ

Chikkamagaluru News: ಕೋತಿಗಳ ಕಾಟಕ್ಕೆ ವಿಷವಿಕ್ಕಿದರು, ತಲೆಗೆ ಹೊಡೆದು ಕೊಂದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರೋಪಿಗಳಿಗೆ ಹುಡುಕಾಟ

Forest News ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಅರಣ್ಯ ವಿಭಾಗದ ಬಾಳೆಹೊನ್ನೂರು ಬಳಿ ಕೋತಿಗಳನ್ನು ಕೊಂದು ಬಿಸಾಕಿದ್ದು. ವಿಷ ಪ್ರಾಶನ ಮಾಡಿರುವ ಶಂಕೆ ವ್ಯಕ್ತವಾಗಿದೆ.

ವಿಷ ಪ್ರಾಶನಕ್ಕೆ ಬಲಿಯಾದ ಕೋತಿಗಳು.
ವಿಷ ಪ್ರಾಶನಕ್ಕೆ ಬಲಿಯಾದ ಕೋತಿಗಳು.

ಚಿಕ್ಕಮಗಳೂರು: ಮೂರು ದಿನದ ಹಿಂದೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಅರಣ್ಯ ವಿಭಾಗದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ನಾಲ್ಕು ಮರಿಗಳೂ ಸೇರಿ 30 ಕೋತಿಗಳಿಗೆ ವಿಷ ಪ್ರಾಶನ ಮಾಡಿ ಆನಂತರ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವುದು ಬಯಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಪಾಸಣೆ ನಡೆಸಿದಾಗ ಆಹಾರದಲ್ಲಿ ವಿಷ ಹಾಕಿಕೊಟ್ಟ ನಂತರ ಅವುಗಳ ಬಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುವುದು ವೈದ್ಯಕೀಯ ವರದಿಯಿಂದ ಬಯಲಾಗಿದೆ. ಬೇರೆ ಕಡೆ ಈ ಕೃತ್ಯ ನಡೆಸಿ ಇಲ್ಲಿ ಕೋತಿಗಳನ್ನು ತಂದು ಎಸೆದಿರುವ ಶಂಕೆಯಿದ್ದು, ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ಕೋತಿಗಳ ಕಾಟವಿದ್ದರೆ ಅವುಗಳನ್ನು ಓಡಿಸಬಹುದು. ಇಲ್ಲವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬಹುದು. ಈ ರೀತಿ ವಿಷವಿಟ್ಟು ಕೊಲ್ಲುವುದು ಅಮಾನವೀಯ ಮಾತ್ರವಲ್ಲ. ಕಾನೂನು ರೀತಿಯಲ್ಲಿ ಅಪರಾಧವೂ ಹೌದು ಎನ್ನುವ ಮಾತುಗಳು ಕೇಳಿ ಬಂದಿವೆ.

ಶುಕ್ರವಾರದಂದು ಕೊಪ್ಪ ವಿಭಾಗದ ಎನ್‌ಆರ್‌ ಪುರ ತಾಲ್ಲೂಕಿನ ಚಿಕ್ಕ ಅಗ್ರಹಾರದ ಬಳಿ ಗುಡ್ಡೆಹಳ್ಳದಿಂದ ದಾವಣಕ್ಕೆ ತೆರಳುವ ರಸ್ತೆಯ ರಾಮನಹಡ್ಲುನ ಮೇಗರಮಕ್ಕಿ ಮೀಸಲು ಅರಣ್ಯ ಪ್ರದೇಶದ ಬಳಿ ಕೋತಿಗಳ ಮೃತದೇಹ ಕಂಡು ಬಂದಿದ್ದವು. ಚೀಲದಲ್ಲಿ ತುಂಬಿ ತಂದು ಹಾಕಿದ್ದ, ಮೃತಪಟ್ಟ ಸ್ಥಿತಿಯಲ್ಲಿ 4 ಮರಿ, 14 ಗಂಡು ಹಾಗೂ 16 ಹೆಣ್ಣು ಕೋತಿಗಳ ದೇಹ ಪತ್ತೆಯಾಗಿತ್ತು. ಇದನ್ನು ಗಮನಿಸಿದ್ದ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಕೋತಿಗಳ ಮೃತಪಟ್ಟಿರುವುದನ್ನು ನೋಡಿ ಮಂಗನ ಕಾಯಿಲೆ ಭಯವೂ ವ್ಯಕ್ತವಾಗಿತ್ತು. ಇಷ್ಟೊಂದು ಕೋತಿಗಳ ಮೃತಪಟ್ಟಿರುವುದು ಸಹಜವಾಗಿಯೇ ಆತಂಕವನ್ನು ಸೃಷ್ಟಿಸಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಮೃತ ಕೋತಿಗಳ ದೇಹವನ್ನು ಒಳಪಡಿಸಿದಾಗ ವಿಷ ಪ್ರಾಶನವಾಗಿರುವುದು ಬಯಲಾಗಿತ್ತು. ಅಲ್ಲದೇ ತಲೆ ಭಾಗದಲ್ಲಿ ರಕ್ತ ಇದ್ದುದರಿಂದ ಬಲವಾಗಿ ಕೋಲಿನಿಂದ ಹೊಡೆದಿರುವ ಶಂಕೆಯೂ ವ್ಯಕ್ತವಾಗಿತ್ತು. ಈ ಸಂಬಂಧ ಎನ್‌ಆರ್‌ಪುರ ಠಾಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೊಕದ್ದಮೆ ದಾಖಲಿಸಿದ್ದರು.

ನಮ್ಮ ಪ್ರಾಥಮಿಕ ವಿಚಾರಣೆಯ ಪ್ರಕಾರ, ಈ ಕೋತಿಗಳಿಗೆ ಕೆಲವು ವಿಷಕಾರಿ ವಸ್ತುವನ್ನು ನೀಡಲಾಗಿದೆ. ಪ್ರಜ್ಞೆ ತಪ್ಪಿದಾಗ, ಅವುಗಳನ್ನು ಕೆಲವು ಆಯುಧಗಳಿಂದ ಥಳಿಸಲಾಗಿದೆ. ಅವರು ಸತ್ತ ನಂತರ, ಅವರನ್ನು ಯಾವುದೋ ವಾಹನದಲ್ಲಿ ತಂದು ಅರಣ್ಯ ಪ್ರದೇಶದ ಒಳಗೆ ಎಸೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.

ಮಂಗಗಳು ಉಪಟಳ ನೀಡುತ್ತಿದ್ದ ಕಾರಣದಿಂದ ಅವುಗಳಿಗೆ ವಿಷ ಹಾಕಿದ ಬಾಳೆ ಹಣ್ಣು ನೀಡಿ ಆನಂತರ ತಲೆಗೆ ಹೊಡೆದು ಹತ್ಯೆ ಮಾಡಿರಬಹುದು ಎಂದು ಎನ್‌ಆರ್‌ ಪುರ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವಕುಮಾರ್ ಮಾಹಿತಿ ನೀಡಿದ್ದರು. ಆದರೂ ಹೆಚ್ಚಿನ ತನಿಖೆಗೆಂದು ದೇಹದ ಭಾಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ. ಅಲ್ಲದೇ ಮಂಗನ ಕಾಯಿಲೆ ಇದ್ದರೂ ಅದರ ಮಾಹಿತಿ ಪಡೆಯಲು ಪುಣೆ ಪ್ರಯೋಗಾಲಯಕ್ಕೂ ದೇಹದ ಭಾಗ ಕಳುಹಿಸಿ ಕೊಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೋತಿಗಳ ಹತ್ಯೆಯ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದಿದೆ. ಈಗಾಗಲೇ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳ ಪತ್ತೆಗೆ ಕ್ರಮ ವಹಿಸುತ್ತಿದ್ದೇವೆ. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಕೊಪ್ಪ ವಿಭಾಗದ ಡಿಸಿಎಫ್‌ ಎಲ್‌. ನಂದೀಶ್‌ ಹೇಳಿದ್ದಾರೆ.