Chikkamagaluru News: ಆಹಾರ ಅರಸಿ ಬಂದ ಭಾರೀ ಗಾತ್ರದ ಸಲಗ ಚಿಕ್ಕಮಗಳೂರು ಬಳಿ ವಿದ್ಯುತ್‌ ಶಾಕ್‌ ಗೆ ಬಲಿ
ಕನ್ನಡ ಸುದ್ದಿ  /  ಕರ್ನಾಟಕ  /  Chikkamagaluru News: ಆಹಾರ ಅರಸಿ ಬಂದ ಭಾರೀ ಗಾತ್ರದ ಸಲಗ ಚಿಕ್ಕಮಗಳೂರು ಬಳಿ ವಿದ್ಯುತ್‌ ಶಾಕ್‌ ಗೆ ಬಲಿ

Chikkamagaluru News: ಆಹಾರ ಅರಸಿ ಬಂದ ಭಾರೀ ಗಾತ್ರದ ಸಲಗ ಚಿಕ್ಕಮಗಳೂರು ಬಳಿ ವಿದ್ಯುತ್‌ ಶಾಕ್‌ ಗೆ ಬಲಿ

ಕಾಫಿ ಎಸ್ಟೇಟ್‌ನಲ್ಲಿ ಕಡಿದು ಬಿದ್ದಿದ್ದ ವಿದ್ಯುತ್‌ ತಂತಿಗೆ ಸಿಲುಕಿ ಭಾರೀ ಗಾತ್ರದ ಸಲಗ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಆಲ್ದೂರು ತಾಲ್ಲೂಕಲ್ಲಿ ನಡೆದಿದೆ.

ವಿದ್ಯುತ್‌ ತಂತಿಗೆ ಸಿಲುಕಿ ಮೃತಪಟ್ಟ ಭಾರೀ ಸಲಗ.
ವಿದ್ಯುತ್‌ ತಂತಿಗೆ ಸಿಲುಕಿ ಮೃತಪಟ್ಟ ಭಾರೀ ಸಲಗ.

ಚಿಕ್ಕಮಗಳೂರು: ಆಹಾರವನ್ನು ಅರಸಿ ಬಂದು ಹಲಸಿನ ಹಣ್ಣು ತಿನ್ನಲು ಮುಂದಾದ ಭಾರೀ ಗಾತ್ರದ ಸಲಗ ವಿದ್ಯುತ್‌ ತಂತಿಗೆ ಸಿಲುಕಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೀವ ಕಳೆದುಕೊಂಡಿದೆ. ಕಾಫಿ ಎಸ್ಟೇಟ್‌ ಮಾರ್ಗದಲ್ಲಿ ಬಂದ ಆನೆ ಜೀವ ಕಳೆದುಕೊಂಡಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆ ಆಲ್ದೂರು ತಾಲ್ಲೂಕಿನ ದೊಡ್ಡಮಾಗರವಳ್ಳಿ ಪಂಚಾಯಿತಿ ವ್ಯಾಪ್ತಿಯ ಕಂಚಿನ ಕಲ್ ದುರ್ಗದ ಸಮೀಪದಲ್ಲಿ.

ಕಂಚಿನಕಲ್‌ ಗ್ರಾಮದ ಸಂದೀಪ್ ಎಂಬುವರಿಗೆ ಸೇರಿದ ಎಸ್ಟೇಟ್‌ನಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದಿತ್ತು. ಇದೇ ವೇಳೆ ಆಹಾರ ಅರಸಿ ಇತ್ತ ಕಡೆ ಬಂದಿರುವ ಒಂಟಿ ಸಲಗದ ಸೊಂಡಿಲು ತಂತಿಗೆ ತಾಗಿದ್ದು, ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದೆ. ‘ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಹೆಚ್ಚಿನ ತನಿಖೆ ನಡೆಸಲಾಗುವುದು, ಸೋಮವಾರ ಅರಣ್ಯ ಇಲಾಖೆ ಹಾಗೂ ಆನೆ ಯೋಜನೆಯ ನಿಯಮಾವಳಿಗಳಂತೆ ಮೃತಪಟಟ ಆನೆಯ ಅಂತ್ಯಕ್ರಿಯೆ ನಡೆಸಲಾಗುವುದು ಆಲ್ದೂರು ವಲಯ ಅರಣ್ಯಾಧಿಕಾರಿ ಎಂ. ಆರ್ . ಹರೀಶ್ ತಿಳಿಸಿದ್ದಾರೆ.

ಎರಡು ದಿನದಿಂದ ಈ ಭಾಗದಲ್ಲಿ ಭಾರೀ ಮಳೆಯಾಗಿದೆ. ಅದರಲ್ಲೂ ಗಾಳಿ ಸಹಿತ ಮಳೆಯೂ ಸುರಿದಿದೆ. ಈ ವೇಳೆ 11 ಕೆವಿ ಮಾರ್ಗದ ವಿದ್ಯುತ್‌ ತಂತಿ ಕಡಿದು ಬಿದ್ದಿದ್ದ ಲೈನ್ ಅರ್ತಿಂಗ್ ಆಗಿದೆ. ಇದರ ಪರಿಣಾಮವಾಗಿಯೇ ದುರಂತ ನಡೆದಿದೆ. ಭಾನುವಾರ ಮಧ್ಯಾಹ್ನದ ಸಮಯದಲ್ಲಿ ಸಲಗ ವಿದ್ಯುತ್ ಲೈನ್ ಗೆ ಸಿಲುಕಿದ್ದರಿಂದ ಸಾವನ್ನಪ್ಪಿದೆ ಎಂದು ಪ್ರಾಥಮಿಕ ಹಂತದ ಮಾಹಿತಿಯಿದೆ.ತನಿಖೆ ನಂತರ ವಿವರ ತಿಳಿದು ಬರಲಿದೆ. ಆನಂತರ ನಿರ್ಲಕ್ಷ್ಯ ವಹಿಸಿದವರ ಮೇಲೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಚಿಕ್ಕಮಗಳೂರು ಡಿಸಿಎಫ್‌ ರಮೇಶ ಬಾಬು, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದರು. ಘಟನೆಗೆ ಕಾರಣವಾಗಿರುವ ಅಂಶ ಆಧರಿಸಿ ಮಾಹಿತಿಗಳನ್ನು ಅವರು ಪಡೆದುಕೊಂಡರು. ಸ್ಥಳೀಯರಿಂದಲೂ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸಿದರು.

ಒಂದು ವರ್ಷದಿಂದ ಇದೇ ಭಾಗದಲ್ಲಿ ಆನೆ ದಾಳಿಗೆ ಮೂವರು ಮೃತಪಟ್ಟಿದಾರೆ. ವಾರದ ಹಿಂದೆಯಷ್ಟೇ ಕೆಲಸಗಾರನೊಬ್ಬ ಆನೆ ದಾಳಿಗೆ ಬಲಿಯಾಗಿದ್ದ. ಆನೆ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಈಗ ಇದೇ ಆನೆ ಜೀವ ಕಳೆದುಕೊಂಡಿರಬಬಹುದು ಎಂದು ಶಂಕಿಸಲಾಗಿದೆ.

ಈ ಭಾಗದಲ್ಲಿ ವಿದ್ಯುತ್‌ ದುರಂತ ಹಾಗೂ ಇತರೆ ಕಾರಣಗಳಿಗೆ ಆನೆಗಳು ಸಾವನ್ನಪ್ಪುವ ಪ್ರಕರಣ ಹೆಚ್ಚಿದೆ. ಅಲ್ಲದೇ ಕಾಡಾನೆ ಉಪಟಳವೂ ಅಧಿಕವಾಗಿದೆ. ಅರಣ್ಯ ಇಲಾಖೆಯವರು ಈ ಕುರಿತು ಜಾಗೃತಿ ಮೂಡಿಸಿ ಆನೆಗಳು ಬಂದಾಗ ಮಾಹಿತಿ ನೀಡುವಂತೆ ಜನರಿಗೆ ತಿಳಿಸಬೇಕು. ಇಲ್ಲದೇ ಇದ್ದರೆ ಹೀಗೆಯೇ ಅನಾಹುತದಲ್ಲಿ ಆನೆಗಳು ಹಾಗೂ ಮನುಷ್ಯರು ಸಾಯುತ್ತಲೇ ಇರುವಂತಾಗಲಿದೆ ಪರಿಸರವಾದಿಗಳು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy appeared in Hindustan Times Kannada website. To read more like this please logon to kannada.hindustantimes.com)

Whats_app_banner