ಕನ್ನಡ ಸುದ್ದಿ  /  Karnataka  /  Child Marriage In Karnataka: New Plan By Government To Prevent Child Marriage; Will It Be Effectively Implemented

Child marriage in Karnataka: ಬಾಲ್ಯ ವಿವಾಹ ತಡೆಗೆ ಸರ್ಕಾರದಿಂದ ಹೊಸ ಪ್ಲಾನ್‌; ಪರಿಣಾಮಕಾರಿಯಾಗಿ ಅನುಷ್ಠಾನವಾಗಲಿದೆಯೇ ಇದು?

Child marriage in Karnataka: ರಾಜ್ಯದಲ್ಲಿ 2017ರ ಏಪ್ರಿಲ್‌ ಮತ್ತು 2022ರ ಮಾರ್ಚ್‌ ತಿಂಗಳ ನಡುವೆ 10,352 ಬಾಲ್ಯ ವಿವಾಹದ ದೂರು/ಸುಳಿವನ್ನು ಸರ್ಕಾರ ಸ್ವೀಕರಿಸಿದೆ. ಈ ಪೈಕಿ 9,261 ಕೇಸ್‌ಗಳನ್ನು ತಡೆಯಲಾಗಿದೆ. 860 ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದನ್ನು ತಡೆಯಲು ಸರ್ಕಾರ ಹೊಸ ಪ್ಲಾನ್‌ ಮಾಡಿದೆ. ಅದರ ವಿವರ ಇಲ್ಲಿದೆ.

ಬಾಲ್ಯ ವಿವಾಹ ತಡೆಗೆ ಹೊಸ ಪ್ಲಾನ್‌ (ಸಾಂಕೇತಿಕ ಚಿತ್ರ)
ಬಾಲ್ಯ ವಿವಾಹ ತಡೆಗೆ ಹೊಸ ಪ್ಲಾನ್‌ (ಸಾಂಕೇತಿಕ ಚಿತ್ರ)

ಬೆಂಗಳೂರು: ಕರೊನಾ ಸಂಕಷ್ಟದ ಬಳಿಕ ರಾಜ್ಯದಲ್ಲಿ ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಇದಕ್ಕೆ ತಡೆಯೊಡ್ಡಲು ಹೊಸ ಪ್ಲಾನ್‌ ರೂಪಿಸಿದೆ.

ರಾಜ್ಯದಲ್ಲಿ 2017ರ ಏಪ್ರಿಲ್‌ ಮತ್ತು 2022ರ ಮಾರ್ಚ್‌ ತಿಂಗಳ ನಡುವೆ 10,352 ಬಾಲ್ಯ ವಿವಾಹದ ದೂರು/ಸುಳಿವನ್ನು ಸರ್ಕಾರ ಸ್ವೀಕರಿಸಿದೆ. ಈ ಪೈಕಿ 9,261 ಕೇಸ್‌ಗಳನ್ನು ತಡೆಯಲಾಗಿದೆ. 860 ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಹೆಚ್ಚಿನ ಬಾಲ್ಯವಿವಾಹಗಳು ಬಡತನ, ಅನಕ್ಷರತೆ, ಮೂಢನಂಬಿಕೆ ಅಥವಾ ಹೆಣ್ಣು ಮಗು ಹೊರೆ ಎಂದು ಭಾವಿಸುವ ಹಿರಿಯರ ಅಜ್ಞಾನದಿಂದ ಸಂಭವಿಸುತ್ತವೆ ಎಂಬ ಅಂಶದ ಕಡೆಗೆ ತಜ್ಞರು ಮತ್ತು ಅಧಿಕಾರಿಗಳು ಗಮನ ಸೆಳೆದಿದ್ದಾರೆ.

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿಅಂಶ ಪ್ರಕಾರ, ನಿಜವಾಗಿ 1,091 ಬಾಲ್ಯ ವಿವಾಹಗಳು ನಡೆದಿವೆ. 10,352 ಪ್ರಕರಣಗಳಲ್ಲಿ 2020ರ ಏಪ್ರಿಲ್‌ ಮತ್ತು 2021ರ ಮಾರ್ಚ್‌ ನಡುವೆ ಹೆಚ್ಚಿನವು (3,007) ಪತ್ತೆಯಾಗಿದ್ದವು. ಅದರ ನಂತರದ 12 ತಿಂಗಳಲ್ಲಿ 2,819 ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಎರಡು ವರ್ಷದ ಪ್ರಕರಣಗಳ ಸಂಖ್ಯೆ ಐದು ವರ್ಷಗಳ ಒಟ್ಟು ಪ್ರಕರಣದ ಶೇಕಡ 56ಕ್ಕಿಂತ ಹೆಚ್ಚು ಪ್ರಕರಣ ಹೊಂದಿವೆ. ಉಳಿದ ಮೂರು ವರ್ಷಗಳ ಅವಧಿಯಲ್ಲಿ 4,526 ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಐದು ವರ್ಷಗಳ ಅವಧಿಯಲ್ಲಿ ಬೆಳಕಿಗೆ ಬಂದ ಬಾಲ್ಯ ವಿವಾಹ ಪ್ರಕರಣಗಳು (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದತ್ತಾಂಶ)
ವರ್ಷದೂರುತಡೆಯಲ್ಪಟ್ಟ ಬಾಲ್ಯ ವಿವಾಹನಡೆದು ಹೋದ ಬಾಲ್ಯ ವಿವಾಹಎಫ್‌ಐಆರ್‌ ದಾಖಲಾಗಿರುವುದು
2021-222,8192,401418389
2020-213,0072,711296239
2019-201,7791,623156130
2018-191,3941,27511948
2017-181,3531,25110261
ಒಟ್ಟು ಪ್ರಕರಣ10,3529,2611,091867

ಈಗ ಇಂತಹ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಲು ಕಂಕಣ ತೊಟ್ಟಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಪ್ರಸಕ್ತ ವರ್ಷದಿಂದ ಬಾಲ್ಯ ವಿವಾಹ ತಡೆಗೆ ನೂತನ ಕ್ರಮ ಜಾರಿಗೊಳಿಸಲು ತೀರ್ಮಾನಿಸಿದೆ. ಇನ್ನು ಮುಂದೆ ಮದುವೆಯಾಗಲು ಇಚ್ಛಿಸುವವರು ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಿಸಬೇಕು. ಈ ರೀತಿ ಮಾಡುವುದರಿಂದ ಬಾಲ್ಯ ವಿವಾಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎಂಬುದು ಸರ್ಕಾರದ ಲೆಕ್ಕಾಚಾರ.

ಬಾಲ್ಯ ವಿವಾಹಗಳನ್ನು ತಡೆಗಟ್ಟುವುದಕ್ಕಾಗಿ ನಿರಂತರ ಪ್ರಯತ್ನ ನಡೆಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು, ಬಾಲ್ಯವಿವಾಹಕ್ಕೆ ಒಳಪಟ್ಟ 278 ಮಕ್ಕಳನ್ನು ರಕ್ಷಣೆ ಮಾಡಿ ಮರಳಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ, ರಾಜ್ಯದಲ್ಲಿ 2018-19ರಲ್ಲಿ 119 ಹಾಗೂ 2019-20ರಲ್ಲಿ 140 ಇದ್ದ ಬಾಲ್ಯ ವಿವಾಹಗಳ ಸಂಖ್ಯೆ 2020-21ರಲ್ಲಿ ರಾಜ್ಯದಲ್ಲಿ 296ಕ್ಕೆ ಏರಿಕೆಯಾಗಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ ಪ್ರಕಾರವೂ, 2020 ರಲ್ಲಿ 184 ಪ್ರಕರಣ ದಾಖಲಾಗಿದೆ. ಇದರೊಂದಿಗೆ ಬಾಲ್ಯ ವಿವಾಹ ಪ್ರಕರಣದಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ, ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಗ್ರಾಮ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಗ್ರಾಪಂ ವ್ಯಾಪ್ತಿಯ ಸಮಿತಿಗಳು ಸಭೆ ನಡೆಸಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗಳು 3 ತಿಂಗಳಿಗೊಮ್ಮೆ ಹಾಗೂ ರಾಜ್ಯ ಮಟ್ಟದ ಸಮಿತಿಗಳು 6 ತಿಂಗಳಿಗೊಮ್ಮೆ ಸಭೆ ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

IPL_Entry_Point