Childhood memories:ಬಾಲ್ಯದ ಸಂಗಾತಿ ಬೋರಂಗಿ, ಜೀರುಗೊಂಬೆ ಯಾರಿಗೆಲ್ಲಾ ನೆನಪಿದೆ !
ಕನ್ನಡ ಸುದ್ದಿ  /  ಕರ್ನಾಟಕ  /  Childhood Memories:ಬಾಲ್ಯದ ಸಂಗಾತಿ ಬೋರಂಗಿ, ಜೀರುಗೊಂಬೆ ಯಾರಿಗೆಲ್ಲಾ ನೆನಪಿದೆ !

Childhood memories:ಬಾಲ್ಯದ ಸಂಗಾತಿ ಬೋರಂಗಿ, ಜೀರುಗೊಂಬೆ ಯಾರಿಗೆಲ್ಲಾ ನೆನಪಿದೆ !

Warm memory ಬಾಲ್ಯದ ದಿನಗಳಲ್ಲಿ ಆಟಕ್ಕೆಂದು ಹುಡುಕಿಕೊಂಡು ಬರುತ್ತಿದ್ದ ಜೀರುಂಡೆ, ಬೋರಂಗಿ ಯಾರಿಗೆ ತಾನೆ ನೆನಪಿಲ್ಲ.

ಬಹುತೇಕರ ಬಾಲ್ಯದ ಸಂಗಾತಿ ಬೋರಂಗಿ
ಬಹುತೇಕರ ಬಾಲ್ಯದ ಸಂಗಾತಿ ಬೋರಂಗಿ

ನಿಮ್ಮ ಬಾಲ್ಯದಲ್ಲಿ ಇದಕ್ಕಾಗಿ ಬೇಲಿಯಲ್ಲಿ ಹುಡುಕಿದ್ದು, ಬೆಂಕಿಪೊಟ್ಟಣದಲ್ಲಿ ಇಟ್ಟು ಆಹಾರ ಹಾಕಿದ್ದು ನೆನಪಿದೆಯಾ?

ಅದೊಂದು ಬಣ್ಣ ಬಣ್ಣದ ಜೀವಿ. ಕೈಯಲ್ಲಿ ಹಿಡಿದರೂ ಪುಳುಕ್ಕನೇ ಉದುರಿ ಬೀಳುವ, ತಪ್ಪಿಸಿಕೊಂಡು ಹಾರಿ ಹೋಡುವ ವಿಶಿಷ್ಟ ಹುಳ. ಬಣ್ಣಬಣ್ಣದ ರೆಕ್ಕೆಗಳುಳ್ಳ ಒಂದು ಬಗೆಯ ಹುಳು ಗ್ರಾಮೀಣ ಪ್ರದೇಶದಲ್ಲಿದ್ದವರು ಮಾತ್ರವಲ್ಲ, ನಗರಪ್ರದೇಶದಲ್ಲಿದ್ದವರು, ರಜೆಗೆಂದು ಅಜ್ಜಿ ಮನೆಗೆ ಬರುತ್ತಿದ್ದವರು ಹುಡುಕಿಕೊಂಡು ಹೋಗಿ ಹಿಡಿಯಲು ಪಡುತ್ತಿದ್ದ ಕಷ್ಟ ಎಷ್ಟು ಗೊತ್ತಾ? ನಿಮಗೆ ಅದರ ನೆನಪು ಕೂಡ ಇರಬಹುದು, ಅದನ್ನು ಒಂದು ಭಾಗದಲ್ಲಿ ಒಂದು ಹೆಸರಿನಿಂದ ಕರೆಯುತ್ತಾರೆ. ಆದರೆ ಅದು ಎಲ್ಲರ ಆಟಕ್ಕಾಗಿ ಸಿಕ್ಕಾಗ ಅನುಭವಿಸುತ್ತಿದ್ದ ಖುಷಿ ಮಾತ್ರ ಒಂದೇ ರೀತಿಯದ್ದು. ಈ ಚಿತ್ರವನ್ನು ನೋಡಿದರೆ ಖಂಡಿತವಾಗಿಯೂ ಸವಿ ಸವಿ ನೆನಪು ಸಾವಿರ ನೆನಪು ಅರಳಲೂ ಬರುವುದು.

ಇದನ್ನು ಬೋರಂಗಿ ಎಂದು ಒಂದು ಕಡೆ ಕರೆದರೆ, ಮತ್ತೆ ಕೆಲವು ಜೀರುಗೊಂಬೆ, ಜೀರುದುಂಬಿ, ಜೀರುಂಬಿ, ಜೀರುಂಬೆ, ಜೀರುಂಡೆ ಎಂತೆಲ್ಲ ಕರೆಯುತ್ತಾರೆ. ಮಲೆನಾಡು ಭಾಗದಲ್ಲಿ ಈಗಲೂ ಇದು ಜೀರುಗೊಂಬೆ ಎಂದೇ ಗುರುತಿಸಲಾಗುತ್ತದೆ.

ಈ ಛಾಯಾಚಿತ್ರದಲ್ಲಿರುವ ಕೆಮ್ಮಡ್ಡ ಬೋರಂಗಿ" ಗಳನ್ನು ನೋಡಿದಾಗಲೆಲ್ಲ ಥಟ್ಟನೆ ಬಾಲ್ಯ ನೆನಪಾಯಿತು.ನಾವು ಪ್ರಾಥಮಿಕ ಶಾಲಾ ಹಂತದಲ್ಲಿರುವಾಗ ಶಾಲೆ ಬಿಟ್ಟ ನಂತರ ನಾಲ್ಕೈದು ಜನ ಸ್ನೇಹಿತರು ಕೂಡಿಕೊಂಡು ಊರ ಮುಂದಿನ ಹೊಲದಲ್ಲಿ ಬನ್ನಿ,ಜಾಲಿ ಗಿಡದಲ್ಲಿ ಹೇರಳವಾಗಿ ಸಿಗುತ್ತಿದ್ದ ಇವುಗಳನ್ನು ಹಿಡಿದು ತಂದು ಖಾಲಿ ಬೆಂಕಿ ಪೊಟ್ಟಣದಲ್ಲಿ ಇಟ್ಟು ಸಾಕಿ ಸಂಭ್ರಮ ಪಡುತ್ತಿದ್ದುದು ಸಾಮಾನ್ಯ ಎಂದು ಮಲ್ಲಿಕಾರ್ಜುನ ಕರಡಿ ನೆನಪಿಸಿಕೊಳ್ಳುತ್ತಾರೆ.

ಅವುಗಳ ನಿತ್ಯ ಆಹಾರಕ್ಕಾಗಿ ಬನ್ನಿ ತಪ್ಪಲ, ಜೋಳದ ಹಿಟ್ಟು ಹಾಕಿ ಸಂರಕ್ಷಣೆ ಮಾಡುತ್ತಿದ್ದೆವು.ಅವುಗಳು ಕೂಡ ಖಾಲಿ ಬೆಂಕಿ ಪೊಟ್ಟಣದಲ್ಲಿ ಮೊಟ್ಟೆ ಹಾಕಿದ ಹಲವು ಸಂದರ್ಭಗಳನ್ನು ನಾವೆಲ್ಲಾ ಕಂಡಿದ್ದೇವೆ. ಶಾಲಾ ಬಿಡುವಿದ್ದಾಗ ಇವುಗಳ ಕುತ್ತಿಗೆಗೆ ದಾರ ಕಟ್ಟಿ ಮನೆಯ ಮಾಳಿಗೆ,ಗುಡಿ ಗುಂಡಾರಗಳ ಆವರಣಗಳ ಮೇಲೆ ಆಡಿಸುವಾಗ ಒಮ್ಮೊಮ್ಮೆ ಕಾಗೆಗಳು ನಮ್ಮ ಮೇಲೆ ಸದ್ದಿಲ್ಲದೆ ಆಕ್ರಮಿಸಿ ಅವುಗಳನ್ನು ಆಪೋಷನ ತೆಗೆದುಕೊಂಡದ್ದುಂಟು.

ತಂತ್ರಜ್ಞಾನ ಯುಗದಲ್ಲಿ ಮಕ್ಕಳ ಬಾಲ್ಯವನ್ನು ನಾವೆಲ್ಲರೂ ಕಸಿದುಕೊಂಡಿದ್ದೇವೆ ಎಂಬುದಕ್ಕೆ ಹಲವು ಸಾಕ್ಷಿಗಳಿವೆ. ಕ್ರಾಂತಿ ಮಾಡುವ ನೆಪದಲ್ಲಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಅತಿಯಾದ ಒತ್ತಡ ಹೇರಿದ್ದರಿಂದ,ಗ್ರಾಮೀಣ ಸೊಗಡಿನ ಆಟಗಳನ್ನು ಆಡಿ ಸ್ವಚ್ಛಂದವಾಗಿ ಬೆಳೆಯಬೇಕಿದ್ದ ಮಕ್ಕಳು ಇದರಿಂದ ವಂಚಿತವಾಗಿವೆ ಎಂಬ ಪಾಲಕರ ಅಭಿಪ್ರಾಯದಲ್ಲೂ ಹುರುಳಿದೆ ಅಲ್ವಾ?

ಅಂದಿನ ಬಾಲ್ಯದ ಕ್ಷಣಗಳು ಈಗಿನ ಮಕ್ಕಳಲ್ಲಿ ಬರುವುದು ಸಾಧ್ಯವಿಲ್ಲ ಬಿಡಿ.ನಮ್ಮ ಬಾಲ್ಯದಲ್ಲಿಯ ಆಟಗಳಾದ ಚಿನ್ನಿದಾಂಡು,ಚಿಣಿ ಪಣಿ ,ಗೋಲಿ ಗುಂಡು,ಗಜಗ,ಬೆಂಕಿ ಪಟ್ಟಣದ ಮುಖಚಿತ್ರಗಳು,ಸಿಗರೇಟ್ ಪ್ಯಾಕಿನ ಕವರ್ ಗಳನ್ನು ಜೋಡಿಸಿ ಸಂಗ್ರಹಿಸಿ ಆಡುತ್ತಿದ್ದೆವು. ಬೊರಂಗಿ ತತ್ತಿ ಇಡುತ್ತಿದ್ದವು. ಅದನ್ನು ಕಾಪಾಡಲು, ಅವುಗಳಿಗಾಗಿ ವಶೇಷ ಆಹಾರ ತರಲು ಅನುಭವಿಸುತ್ತಿದ್ದ ಖುಷಿ.ಮನೆಯವರಿಗೆ ಸ್ನೇಹಿತರಿಗೆ ತೋರಿಸಿ ಪಡುತ್ತಿದ್ದ ಸಂತಸವೇ  ಬೇರೆ. ಈಗಿನ ತಂತ್ರಜ್ಞಾನದ ಯುಗದಲ್ಲಿ ದೇಶಿಯ ಆಟಗಳು ಮರೆಯಾಗಿ ನಮ್ಮ ಮಕ್ಕಳು ಕ್ರಿಕೆಟ್ ಮೋಹಕ್ಕೆ ಬಿದ್ದು ಗ್ರಾಮೀಣ ಸೊಗಡಿನ ಆಟಗಳತ್ತ ಮುಖ ಮಾಡದೇ ಇರುವುದು ಕೂಡ ಗಂಭೀರ ವಿಚಾರ. ಈಗಿನ ಮಕ್ಕಳಲ್ಲಿ ಇಂಥ ಆಟಗಳ ಬಗ್ಗೆ ಒಂಚೂರು ತಿಳಿವಳಿಕೆ ಇರುವುದಿರಲಿ, ಅವುಗಳ ಬಗ್ಗೆ ಆಸಕ್ತಿಯಂತೂ ಖಂಡಿತ ಇಲ್ಲ ಅಲ್ವಾ ಸ್ನೇಹಿತರೇ ಎಂದು ಭಾವನಾತ್ಮಕವಾಗಿಯೇ ಕರಡಿ ಅವರು ಪ್ರಶ್ನಿಸುತ್ತಾರೆ.

 

 

Whats_app_banner