ಬೆಂಗಳೂರು ಚಿತ್ರಸಂತೆ ಮತ್ತೆ ಬಂತು ನೋಡಿ, ಜನವರಿ 5 ರಂದು ಕುಮಾರಕೃಪಾ ರಸ್ತೆಯಲ್ಲಿ ಹೆಜ್ಜೆ ಹಾಕೋದನ್ನು ಮರೆಯಬೇಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಚಿತ್ರಸಂತೆ ಮತ್ತೆ ಬಂತು ನೋಡಿ, ಜನವರಿ 5 ರಂದು ಕುಮಾರಕೃಪಾ ರಸ್ತೆಯಲ್ಲಿ ಹೆಜ್ಜೆ ಹಾಕೋದನ್ನು ಮರೆಯಬೇಡಿ

ಬೆಂಗಳೂರು ಚಿತ್ರಸಂತೆ ಮತ್ತೆ ಬಂತು ನೋಡಿ, ಜನವರಿ 5 ರಂದು ಕುಮಾರಕೃಪಾ ರಸ್ತೆಯಲ್ಲಿ ಹೆಜ್ಜೆ ಹಾಕೋದನ್ನು ಮರೆಯಬೇಡಿ

Chitra Santhe 2025: ಬೆಂಗಳೂರು ಚಿತ್ರಸಂತೆ ಮತ್ತೆ ಬಂದಿದೆ. ಈ ಸಲ ಮೊದಲ ಭಾನುವಾರ ಜನವರಿ 5. ಆ ದಿನ ಚಿತ್ರಕಲಾ ಪರಿಷತ್‌ ಮತ್ತು ಕುಮಾರಕೃಪಾ ರಸ್ತೆ ಉದ್ದಕ್ಕೂ ಹಬ್ಬದ ಸಂಭ್ರಮ, ಸಡಗರ, ದಾರಿಯುದ್ದಕ್ಕೂ ಚಿತ್ರಗಳದ್ದೇ ಕಾರುಬಾರು. ಹಾಗಾಗಿ, ಜನವರಿ 5 ರಂದು ಕುಮಾರಕೃಪಾ ರಸ್ತೆಯಲ್ಲಿ ಹೆಜ್ಜೆ ಹಾಕೋದನ್ನು ಮರೆಯಬೇಡಿ. ಏನೇನಿರುತ್ತೆ ಎಂಬ ವಿವರ ಇಲ್ಲಿದೆ ನೋಡಿ.

ಬೆಂಗಳೂರು ಚಿತ್ರಸಂತೆ ಮತ್ತೆ ಬಂತು ನೋಡಿ, ಜನವರಿ 5 ರಂದು ಕುಮಾರಕೃಪಾ ರಸ್ತೆಯಲ್ಲಿ ಹೆಜ್ಜೆ ಹಾಕೋದನ್ನು ಮರೆಯಬೇಡಿ (ಕಡತ ಚಿತ್ರ)
ಬೆಂಗಳೂರು ಚಿತ್ರಸಂತೆ ಮತ್ತೆ ಬಂತು ನೋಡಿ, ಜನವರಿ 5 ರಂದು ಕುಮಾರಕೃಪಾ ರಸ್ತೆಯಲ್ಲಿ ಹೆಜ್ಜೆ ಹಾಕೋದನ್ನು ಮರೆಯಬೇಡಿ (ಕಡತ ಚಿತ್ರ) (utsav.gov.in)

Chitra Santhe 2025: ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರಿನ ಕುಮಾರಕೃಪಾ ರಸ್ತೆ, ಚಿತ್ರಕಲಾ ಪರಿಷತ್ ಅಂಗಳದಲ್ಲಿ ವರ್ಷದ ಮೊದಲ ಭಾನುವಾರ (ಜನವರಿ 5) ಸಂಭ್ರಮ ಸಡಗರಗಳಿಂದ ತುಂಬಿರಲಿದೆ. ಹೌದು, ಚಿತ್ರಕಲಾವಿದರ ಕಲಾಕೃತಿಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ಒದಗಿಸುವ ಬೃಹತ್ ಸಂತೆಗೆ ದಿನಗಣನೆ ಶುರುವಾಗಿದೆ. ಈ ಬಾರಿ ಜನವರಿ 5 ರಂದು ಬೆಂಗಳೂರು ಚಿತ್ರಸಂತೆ ನಡೆಯಲಿದೆ. ಕುಮಾರಕೃಪಾ ರಸ್ತೆಯಲ್ಲಿ ಈ ವರ್ಷ 22ನೇ ರಾಷ್ಟ್ರೀಯ ಚಿತ್ರಸಂತೆ ನಡೆಯುತ್ತಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಮೂಲಗಳು ತಿಳಿಸಿವೆ.

ಚಿತ್ರಸಂತೆ 2025; ಈ ಬಾರಿ ಚಿತ್ರಸಂತೆಯ ಥೀಮ್‌

ಚಿತ್ರ ಸೃಜನಶೀಲ ಮಾಧ್ಯಮ. ನೋಡುಗರ ಮೇಲೆ ನಾನಾ ರೀತಿಯ ಪ್ರಭಾವ ಬೀರುವ ಕಾರಣ, ಇದು ಪರಿಣಾಮಕಾರಿ. ನೋಡುಗರ ಭಾವನೆ ಮತ್ತು ಆಲೋಚನಾ ಕ್ರಮ, ಗ್ರಹಿಕೆಗಳಿಗೆ ಅನುಗುಣವಾಗಿ ಚಿತ್ರಗಳು ಬೇರೆ ಬೇರೆ ಅರ್ಥವನ್ನು ಬಿಂಬಿಸಬಲ್ಲಂಥವು. ಹೀಗಾಗಿ ಪ್ರತಿ ವರ್ಷವೂ ಚಿತ್ರಕಲಾ ಪರಿಷತ್ ಒಂದೊಂದು ಥೀಮ್ ಪ್ರಕಾರ ಚಿತ್ರಸಂತೆಯನ್ನು ಆಯೋಜಿಸುತ್ತದೆ. ಚಿತ್ರಸಂತೆ 2025ರ ಚಿತ್ರಸಂತೆಯ ಥೀಮ್‌ ‘ಹೆಣ್ಣಿನ ರಕ್ಷಣೆ ಪ್ರತಿಯೊಬ್ಬರ ಹೊಣೆ’. ಬಾಲ್ಯ ವಿವಾಹ, ಹೆಣ್ಣು ಭ್ರೂಣಹತ್ಯೆಯಂತಹ ಕೆಲವು ಸಾಮಾಜಿಕ ಅನಿಷ್ಟ ಪದ್ಧತಿಗಳ ಕುರಿತು ಚಿತ್ರಸಂತೆ ಬೆಳಕು ಚೆಲ್ಲಲಿದೆ. ಈ ಸಲವೂ ಚಿತ್ರಕಲಾ ಪರಿಷತ್ತಿನ ರಸ್ತೆಯುದ್ದಕ್ಕೂ ಇಡೀದಿನ ನಡೆಯಲಿರುವ ಚಿತ್ರ ಸಂತೆಗೆ ಚಿತ್ರಕಲಾ ವಿದ್ಯಾರ್ಥಿಗಳು, ಕಲಾಸಕ್ತರು ಸೇರಿ ಲಕ್ಷಾಂತರ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ. ಕಳೆದ 21 ವರ್ಷಗಳ ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ ಚಿತ್ರಸಂತೆ ಜನಪ್ರಿಯವಾಗುತ್ತ ಸಾಗಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಮೂಲಗಳು ತಿಳಿಸಿವೆ.

ಚಿತ್ರಸಂತೆ 2025; ಆದ್ಯತೆಯ ಕಲಾ ಚಿತ್ರಗಳಿವು

ಚಿತ್ರಸಂತೆಯಲ್ಲಿ ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿರುವ ಚಿತ್ರಗಳು, ಆಕ್ರಿಲಿಕ್, ಗಾಜಿನ ಮೇಲೆ ಬಿಡಿಸಿರುವ ಚಿತ್ರಗಳು, ಸಾಂಪ್ರದಾಯಿಕ ಮೈಸೂರು ಶೈಲಿಯ ಕಲೆ, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿ ಶೈಲಿ ಚಿತ್ರಗಳು, ಅದೇ ರೀತಿ, ಕೊಲಾಜ್, ಲಿಥೋಗ್ರಾಫ್, ಡೂಡಲ್, ಎಂಬೋಸಿಂಗ್, ವಿಡಿಯೋ ಕಲೆ, ಗ್ರಾಫಿಕ್ ಕಲೆ, ಶಿಲ್ಪ ಕಲೆ, ಪ್ರತಿಷ್ಠಾಪನಾ ಕಲೆ, ಪರ್ಫಾರ್ಮೆನ್ಸ್ ಕಲೆ, ಮಿಶ್ರ ಮಾಧ್ಯಮ, ಫೋಟೋಗ್ರಫಿ ಹೀಗೆ ಹಲವು ಬಗೆಯ ಕಲಾ ಪ್ರಕಾರಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಮೂಲಗಳು ತಿಳಿಸಿದ್ದು, ಒಂದೇ ಸೂರಿನಡಿ ಈ ಎಲ್ಲ ಬಗೆಯ ಚಿತ್ರಗಳು ನೋಡುಗರ ಗಮನ ಸೆಳೆಯಲಿವೆ ಎಂದು ವಿವರಿಸಿದೆ.

ಚಿತ್ರಸಂತೆ 2025; ಪ್ರದರ್ಶನಕ್ಕೆ ಮೂರು ಸಾವಿರ ಅರ್ಜಿ

ಬೆಂಗಳೂರು ಸೇರಿ ಹೊರ ರಾಜ್ಯ ಹಾಗೂ ಹೊರ ರಾಷ್ಟ್ರಗಳಿಂದಲೂ ಈ ಬಾರಿ ಚಿತ್ರಸಂತೆಗೆ ಅರ್ಜಿಗಳು ಬಂದಿದ್ದವು. 3000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಚಿತ್ರಸಂತೆಯಲ್ಲಿ 1,300 ಮಳಿಗೆ ತೆರೆಯಲಷ್ಟೇ ಅವಕಾಶವಿದ್ದು, ನಿರ್ದಿಷ್ಟ ಮಾನದಂಡ ಆಧರಿಸಿ ಅರ್ಹ ಕಲಾವಿದರನ್ನು ಆಯ್ಕೆ ಮಾಡಲು ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ಗುಣಮಟ್ಟದ ಚಿತ್ರಗಳಿಗೆ ಆದ್ಯತೆ ನೀಡಲಿದೆ ಎಂದು ಕರ್ನಾಟಕ ಪರಿಷತ್‌ನ ಮೂಲಗಳು ತಿಳಿಸಿವೆ.

ಕಲಾವಿದರು ಅರ್ಜಿ ಸಲ್ಲಿಸಲು ಮತ್ತು ನೋಂದಾಯಿಸಲು ನವೆಂಬರ್ 30ರ ತನಕ www.chitrasanthe.in ವೆಬ್‌ಸೈಟ್‌ ಮೂಲಕ ಕಾಲಾವಕಾಶ ನೀಡಲಾಗಿತ್ತು. ಕಳೆದ ವರ್ಷ 4 ಲಕ್ಷಕ್ಕೂ ಹೆಚ್ಚು ಜನ ಚಿತ್ರಕಲಾ ಆಸಕ್ತರು ಚಿತ್ರಸಂತೆಗೆ ಭೇಟಿ ನೀಡಿದ್ದರು. 5 ಕೋಟಿ ರೂಪಾಯಿ ವಹಿವಾಟು ನಡೆದಿತ್ತು ಎಂದು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಮೂಲಗಳು ತಿಳಿಸಿವೆ.

Whats_app_banner