ಕನ್ನಡ ಸುದ್ದಿ  /  Karnataka  /  Chitradurga Dr Roopa Death Case: District Leprosy Control Officer Dr. Roopa Unnatural Death Case Had Many Twist Within A Day

Chitradurga Dr Roopa Death Case: ಡಾ.ರೂಪಾ ಅಸಹಜ ಸಾವು; ಹೈಡ್ರಾಮಾ ಕೇಸ್‌ನ‌ ಟ್ವಿಸ್ಟ್‌ ನೋಡಿ ಬೆಚ್ಚಿದ ಜನತೆ! ಕಂಪ್ಲೀಟ್‌ ವರದಿ ಇಲ್ಲಿದೆ

Chitradurga Dr Roopa Death Case: ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ರೂಪಾ ಸೋಮವಾರ ನಿಧನರಾಗಿದ್ದಾರೆ. ಅವರ ಸಾವಿನ ಪ್ರಕರಣ ಸಂಜೆಯೊಳಗೆ ಹಲವು ಟ್ವಿಸ್ಟ್‌ ಪಡೆದುಕೊಂಡಿದೆ. ಏನಿದು ಕುತೂಹಲಕಾರಿ ಪ್ರಕರಣ? ಲಭ್ಯ ಮಾಹಿತಿ ಆಧರಿಸಿದ ಸಂಪೂರ್ಣ ವರದಿ ಇಲ್ಲಿದೆ.

ಡಾ.ರೂಪಾ ಚಿತ್ರದುರ್ಗ
ಡಾ.ರೂಪಾ ಚಿತ್ರದುರ್ಗ

ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ರೂಪಾ (52) ಸೋಮವಾರ ನಿಧನರಾದರು. ಆದರೆ ಅವರ ಸಾವಿನ ಪ್ರಕರಣ ಸೋಮವಾರ ಸಂಜೆಯೊಳಗೆ ಹಲವು ಟ್ವಿಸ್ಟ್‌ ಪಡೆದುಕೊಂಡಿದೆ. ಅನೇಕ ಸಂದೇಹಗಳಿಗೂ ಕಾರಣವಾಗಿದೆ.

ಚಿತ್ರದುರ್ಗದ ಖ್ಯಾತ ಮೂಳೆ ತಜ್ಞ ಡಾ.ರವಿ ಅವರ ಪತ್ನಿ ರೂಪಾ. ಸೋಮವಾರ ಬೆಳಗ್ಗೆ ಮನೆಯಲ್ಲಿ ಕಾಲು ಜಾರಿ ಬಿದ್ದು ವೈದ್ಯೆ ಡಾ.ರೂಪಾ‌ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಚಿತ್ರದುರ್ಗದಾದ್ಯಂತ ಸದ್ದು ಮಾಡಿತ್ತು.

ಎಂಟು ತಿಂಗಳ ಹಿಂದೆ ಡಾ.ರೂಪ ಅವರು ಜಿಲ್ಲಾ ಆಸ್ಪತ್ರೆಗೆ ಬಡ್ತಿ ಪಡೆದು ಬಂದಿದ್ದರು. ಇದಕ್ಕೂ ಮೊದಲು ಕ್ಯಾಸಾಪುರ ಸೇರಿ ಇನ್ನಿತರೆಡೆ ಕರ್ತವ್ಯ ನಿರ್ವಹಿಸಿದ್ದರು.

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌.ನಿಜಲಿಂಗಪ್ಪ ಅವರ ಮನೆ ಇರುವ ರಸ್ತೆಯಲ್ಲಿ ತೋಟಗಾರಿಕೆ ಇಲಾಖೆ ಎದುರು ಡಾ.ರವಿ ಅವರ ಮನೆ ಮತ್ತು ಗಿರಿಶಾಂತಾ ಆರ್ಥೋಪೆಡಿಕ್‌ ಸೆಂಟರ್‌ ಎಂಬ ಕ್ಲಿನಿಕ್‌ ಇದೆ. ಕ್ಲಿನಿಕ್‌ನ ಮೇಲೆಯೇ ಮನೆ ಇರುವಂಥದ್ದು. ಬೆಳಗ್ಗೆ 9 ಗಂಟೆ ಸುಮಾರಿಗೆ ಬೆಡ್‌ ರೂಮ್‌ನಲ್ಲಿದ್ದ ಕಪಾಟಿನಿಂದ ಬಟ್ಟೆ ತೆಗೆದುಕೊಳ್ಳುವಾಗ ಆಯತಪ್ಪಿ ಬಿದ್ದಿದ್ದಾರೆ. ಆಗ ತಲೆಯ ಹಿಂಭಾಗಕ್ಕೆ ಏಟಾಗಿದ್ದು, ರಕ್ತಸ್ರಾವ ಆಗಿದೆ. ಕೂಡಲೇ ಅವರನ್ನು ಚಿತ್ರದುರ್ಗದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟು ಹೊತ್ತಿಗೆ ಅವರ ಪ್ರಾಣ ಪಕ್ಷಿ ಹಾರಿತ್ತು ಎಂಬುದನ್ನು ಅಲ್ಲಿನ ಡಾಕ್ಟರ್‌ ದೃಢೀಕರಿಸಿದ್ದಾರೆ.

ಡಾ.ರೂಪಾ ಆಯತಪ್ಪಿ ಬಿದ್ದಾಗ ಯಾರು ಎಲ್ಲಿದ್ದರು?

ಮನೆಯ ಬೆಡ್‌ರೂಮ್‌ನಲ್ಲಿದ್ದ ಕಪಾಟಿನಿಂದ ಬಟ್ಟೆ ತೆಗೆಯುವಾಗ ಡಾ.ರೂಪಾ ಆಯತಪ್ಪಿ ಬಿದ್ದಾಗ ಯಾರು ಎಲ್ಲಿದ್ದರು ಎಂಬ ಅನುಮಾನ ವ್ಯಕ್ತವಾಗಿತ್ತು. ಇದಕ್ಕೆ ಡಾ.ರವಿ ಕುಟುಂಬದ ಸದಸ್ಯರು ಪ್ರತಿಕ್ರಿಯಿಸಿದ್ದು, ಮನೆಯ ಮೇಲಿನ ಕೊಠಡಿಯಲ್ಲಿದ್ದ ಜಿಮ್‌ನಲ್ಲಿ ಡಾ.ರವಿ ವ್ಯಾಯಾಮ ಮಾಡುತ್ತಿದ್ದರು. ಮಗ ಶಾಲೆಗೆ ಹೋಗಲು ಸಿದ್ಧನಾಗುತ್ತಿದ್ದ ಎಂಬ ಉತ್ತರವನ್ನು ನೀಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಳಿಕ ನಡೆದ ವಿದ್ಯಮಾನದಲ್ಲಿ ಅನೇಕ ಟ್ವಿಸ್ಟ್‌ಗಳು!

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಡಾ.ರೂಪಾ ಅವರ ಪಾರ್ಥಿವ ಶರೀರವನ್ನು ಸಾಗಿಸಿದ್ದು ಜಗದ್ಗುರು ಮುರುಘರಾಜೇಂದ್ರ ಇಂಜಿನಿಯರಿಂಗ್‌ ಕಾಲೇಜಿಗೆ. ಅಲ್ಲಿ ಶಿತಲೀಕರಣ ಘಟಕದಲ್ಲಿ ಶವ ಇರಿಸಲಾಗಿತ್ತು. ಪೋಸ್ಟ್‌ ಮಾರ್ಟಂ ಮಾಡಲು ಆಗಮಿಸಿದ ತಜ್ಞರು ಡಾ.ರೂಪಾ ಶವದ ಪೋಸ್ಟ್‌ ಮಾರ್ಟಂ ಮಾಡಲು ಹಿಂದೇಟು ಹಾಕಿದರು. ಇದು ಸಹಜ ಸಾವಲ್ಲ. ಅಸಹಜ ಸಾವು ಎಂದು ಹೇಳಿದರು.

ಸಂಜೆ 5 ಗಂಟೆ ಸುಮಾರಿಗೆ ಡಾ.ರೂಪಾ ಅವರ ಶವವನ್ನು ಬಸವೇಶ್ವರ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು. ಅಲ್ಲಿ ಡಾ.ರೂಪಾ ತಲೆಯ ಎಂಆರ್‌ಐ ಸ್ಕ್ಯಾನ್‌ ಮಾಡಿದಾಗ ಅಲ್ಲಿ ಗುಂಡು ಇರುವುದು ದೃಢಪಟ್ಟಿದೆ.

ಹೈಡ್ರಾಮಾದ ನಡುವೆ ಪೊಲೀಸ್‌ ಎಂಟ್ರಿ

ಡಾ.ರೂಪಾ ಅವರು ಮನೆಯ ಬೆಡ್‌ರೂಮ್‌ನಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ ಎಂಬ ಸುದ್ದಿ ಹರಡಿದಲ್ಲಿಂದ ಪೊಲೀಸ್‌ ಎಂಟ್ರಿ ಆಗುವ ತನಕ ಒಂದು ಹಂತದ ತನಕ ಕೇಸ್‌ ಸದ್ದಿಲ್ಲದೇ ಮುಚ್ಚಿ ಹೋಗುವ ಹಂತಕ್ಕೆ ಜಾರಿತ್ತು. ಆದರೆ, ಪೋಸ್ಟ್‌ ಮಾರ್ಟಂ ವಿಚಾರಕ್ಕೆ ಬರುವಾಗ ಸಂಜೆ ಆಗಿತ್ತು. ತಲೆಯಲ್ಲಿ ಗುಂಡು ಇರುವುದು ಪತ್ತೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು.

ಡೆತ್‌ನೋಟ್‌ ಪತ್ತೆ; ಅದರಲ್ಲೇನಿದೆ?

ಡಾ.ರೂಪಾ ತಲೆಗೆ ಗುಂಡು ಹಾರಿಸಿಕೊಂಡದ್ದು ದೃಢಪಟ್ಟಿದ್ದು, ಪೊಲೀಸರು ಮನೆ ಶೋಧ ನಡೆಸಿದಾಗ ಅಲ್ಲಿ ಅವರಿಗೆ ಡೆತ್‌ನೋಟ್‌ ಸಿಕ್ಕಿದೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರಶುರಾಮ್‌, ಬೆಡ್‌ರೂಮ್ ಟೇಬಲ್‌ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. FSL ಬೆಂಗಳೂರಿನಿಂದ ಬ್ಯಾಲಿಸ್ಟಿಕ್ ತಂಡ ಬರಲಿದೆ. ದೇಹವನ್ನು ಎಫ್‌ಎಸ್‌ಎಲ್ ತಂಡ ಪರೀಕ್ಷಿಸಿದ ನಂತರ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮೃತಳ ಸಹೋದರ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದು ಹೇಳಿದ್ದರು. ಆದರೆ, ಡೆತ್‌ನೋಟ್‌ನಲ್ಲಿ ಏನಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ನನ್ನ ಸಾವಿಗೆ ನಾನೇ ಕಾರಣ ಯಾವುದೇ ಪೊಲೀಸರಿಗೆ ದೂರು ನೀಡಬೇಡಿ ಎಂಬ ಸಾಲು ಡೆತ್‌ನೋಟ್‌ನಲ್ಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಕೃಷಿ, ವ್ಯಾಪಾರಕ್ಕೆ ಇಳಿದು ಕೈ ಸುಟ್ಟುಕೊಂಡ್ರಾ ದಂಪತಿ?

ಡಾ.ರವಿ ಮಾಧ್ಯಮಗಳಿಗೆ ತಿಳಿಸಿದ ಪ್ರಕಾರ ಅವರದೇ ಮಾತುಗಳನ್ನು ಉಲ್ಲೇಖಿಸುವುದಾದರೆ, ಈ ಹಿಂದೆ ನಾವು 25 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆ‌ ಬೆಳೆದು ಸುಮಾರು ಕೋಟ್ಯಾಂತರ ರೂಪಾಯಿ ಸಾಲ‌ ಮಾಡಿ ಕೈ ಸುಟ್ಟುಕೊಂಡಿದ್ದೆವು. ಅದರ ಬಗ್ಗೆ ಪ್ರತೀ ಬಾರಿಯೂ ಇಬ್ಬರು ಚರ್ಚೆ ಮಾಡಿ ಬೇಸರ ವ್ಯಕ್ತಪಡಿಸಿದ ಅನೇಕ‌ ನಿದರ್ಶನಗಳು ಇವೆ. ಇದಲ್ಲದೆ, ಖಾಸಗಿ ಹೋಟೆಲ್ ಒಂದನ್ನು ಖರೀದಿಸಿ ಅದ್ರಲ್ಲೂ ಲಾಸ್ ಆಗಿ ಮಾರಾಟ ಮಾಡಿದ ನೋವಿತ್ತು. ಅಲ್ಲದೇ ಪೋಷಕರ ಸಾವಿನ ಬಳಿಕ ರೂಪಾ ತುಂಬಾ ಕುಗ್ಗಿದ್ದರು ಹಾಗಾಗಿ ಆಗಾಗ ಮನೆಯಲ್ಲಿ ಅಳುತಿದ್ದರು. ಇದನ್ನು ಹೊರತು ಪಡಿಸಿದ್ರೆ ನಮ್ಮ ಜೀವನದಲ್ಲಿಯೇ ನಾವು ಯಾವುದೇ ರೀತಿಯ ಗಲಾಟೆ ಮಾಡಿಲ್ಲ. ನಮ್ಮಲ್ಲಿ ಯಾವುದೇ ವಿಚಾರಕ್ಕೂ ವೈಮನಸ್ಸು ಇರಲಿಲ್ಲ. ಎಲ್ಲ ತನಿಖೆಗೂ ನಾನು ಸಹಕರಿಸ್ತೀನಿ ಎಂದು ಹೇಳಿದ್ದಾರೆ.

IPL_Entry_Point