Chitradurga Drought: ಚಿತ್ರದುರ್ಗ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಬರ, ಬೇಸಿಗೆ ಪೂರ್ವದಲ್ಲೇ ತತ್ವಾರ
ಬೇಸಿಗೆ ಮುನ್ನವೇ ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಚಳ್ಳಕೆರೆ, ಮೊಳಕಾಳ್ಮೂರಲ್ಲಿ ಈಗಲೇ ಟ್ಯಾಂಕರ್ ನೀರು ಹರಿಸಲಾಗುತ್ತಿದೆ.(ವರದಿ: ಎ.ಯಶವಂತಕುಮಾರ್, ಚಿತ್ರದುರ್ಗ)
ಚಿತ್ರದುರ್ಗ : ಕೋಟೆನಾಡು ಚಿತ್ರದುರ್ಗ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಬಿಸಿಲ ನಾಡು ಎಂದು ಗುರುತಿಸಿಕೊಳ್ಳುತ್ತಿದೆ. ಪ್ರತಿ ವರ್ಷ ಬಿಸಿಲಿನ ತಾಪಮಾನ ಹೆಚ್ಚುತ್ತಲೇ ಇದೆ. ಪಸಕ್ತ ವರ್ಷ ಬೇಸಿಗೆ ಆರಂಭಕ್ಕೂ ಮುನ್ನವೇ 33 ಡಿಗ್ರಿಗೂ ಹೆಚ್ಚಿನ ಬಿಸಿಲು ಕಾಣಿಸಿಕೊಂಡಿದ್ದು, ಅಂತರ್ಜಲ ಮಟ್ಟವೂ ಕುಸಿದಿದೆ.
ಪ್ರಸಕ್ತ ವರ್ಷ ಬೇಸಿಗೆ ಆರಂಭಕ್ಕೂ ಮುನ್ನವೇ ಚಿತ್ರದುರ್ಗ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ 376 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಜಿಲ್ಲಾಡಳಿತ ಗುರುತಿಸಿದೆ. ಈಗಾಗಲೇ 100 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ.
ಶಾಂತಿಸಾಗರದಲ್ಲೇ ನೀರಿಲ್ಲ
ಚಿತ್ರದುರ್ಗ ನಗರಕ್ಕೆ ದಾವಣಗೆರೆ ಜಿಲ್ಲೆಯ ಶಾಂತಿಸಾಗರ ಹಾಗೂ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, ಈ ಬಾರಿ ಶಾಂತಿಸಾಗರ ಕೆರೆಯ ನೀರು ಡೆಡ್ ಸ್ಟೋರೆಜ್ ಗೆ ತಲುಪಿದೆ. ಹೀಗಾಗಿ ಚಿತ್ರದುರ್ಗ ನಗರಕ್ಕೂ ಕುಡಿಯುವ ನೀರಿನ ಕಂಟಕ ತಪ್ಪಿದ್ದಲ್ಲ. ಇನ್ನೂ ಮೊಳಕಾಲ್ಮೂರು, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರಿನಲ್ಲೂ ಅಂತರ್ಜಲ ಕುಸಿತದಿಂದ ಕುಡಿವ ನೀರಿನ ಸಮಸ್ಯೆ ಎದುರಾಗಿದೆ.
ಕೃಷಿಗೆ ವಾಣಿವಿಲಾಸ ನೀರು
ಇಂದಿನಿಂದ ವಾಣಿವಿಲಾಸ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನಾಲೆ ಮೂಲಕ ನೀರು ಹರಿಸಲಾಗುತ್ತಿದೆ. ಒಂದು ತಿಂಗಳ ಕಾಲ ನೀರು ಹರಿಯಲಿದ್ದು, ಹಿರಿಯೂರು ತಾಲೂಕಿನ ಕೃಷಿಕರಿಗೆ ಅನುಕೂಲವಾಗಲಿದೆ. ಆದರೆ, ಕುಡಿವ ನೀರು ಪೂರೈಕೆ ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ತಲೆನೋವಾಗಿದೆ.
ಅನುದಾನ ಉಂಟು, ನೀರಿಲ್ಲ
ಜಿಲ್ಲೆಯ 6 ತಾಲೂಕುಗಳಲ್ಲಿ ಕುಡಿವ ನೀರು ನಿರ್ವಹಣೆಗೆ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಿದ್ದು, ಜಿಲ್ಲಾಡಳಿತದಿಂದ ಪ್ರತಿ ತಾಲೂಕಿಗೂ 40 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪ್ರತಿ ತಾಲೂಕಿಗೆ 25 ಲಕ್ಷ ರೂಪಾಯಿ ಮೀಸಲಿಡಲಾಗಿದೆ. ತೀರಾ ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ.
ಚಳ್ಳಕರೆ ಕಷ್ಟ
ಚಳ್ಳಕೆರೆ ತಾಲೂಕು ಒಂದರಲ್ಲೇ 52 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈಗಾಗಲೇ 14 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಚಳ್ಳಕೆರೆ ತಾಲೂಕಿನ ಕೊಡಿಹಳ್ಳಿ, ಯಾದಲಗಟ್ಟೆ, ಬೆಳಗೆರೆ, ನನ್ನಿವಾಳ ಪಂಚಾಯಿತಿ, ನಾಲ್ಕು ಹಟ್ಟಿಗಳು, ಕಲಮರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹನಿ ನೀರಿಗೂ ತಾತ್ವರ ಎದುರಾಗಿದೆ.
ಮೊಳಕಾಲ್ಲೂರಲ್ಲಿ ಭೀಕರ
ಮೊಳಕಾಲ್ಮೂರು ತಾಲೂಕಿನಲ್ಲಿ ಭೀಕರ ಬರದ ಛಾಯೆ ಈಗಲೇ ಕಾಣಿಸಿಕೊಳ್ಳುತ್ತಿದೆ. ಮೊಳಕಾಲ್ಮೂರು ತಾಲೂಕಿನ 110 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದೆ.
ತಾಲೂಕು ಆಡಳಿತ ಖಾಸಗಿ ಜಮೀನುಗಳಲ್ಲಿ ನೀರು ಖರೀದಿಸಿ ಹಂಚಿಕೆ ಮಾಡಲು ಮುಂದಾಗಿದೆ. ಆದರೆ, ಖಾಸಗಿ ಜಮೀನುಗಳ ಬೋರ್ ವೆಲ್ ಗಳಲ್ಲಿ ನೀರು ಬತ್ತಿ ಹೋಗಿರುವುದರಿಂದ ದಿಕ್ಕು ತೋಚದೆ ಕುಳಿತಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇದ್ದೇ ಇರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಮಾರ್ಚ್, ಏಪ್ರಿಲ್‌ನ ಕಾಣಿಸಿಕೊಳ್ಳಬೇಕಿದ್ದ ಕುಡಿವ ನೀರಿನ ಸಮಸ್ಯೆ ಈ ವರ್ಷ ಫೆಬ್ರವರಿ ಮೊದಲ ವಾರದಲ್ಲೇ ಕಾಣಿಸಿಕೊಂಡಿದೆ. ಈ ಬಾರಿಯ ಮುಂಗಾರು, ಹಿಂಗಾರು ಎರಡೂ ಮಳೆಗಳು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕಠಿಣ ನೀರಿನ ಪರಿಸ್ಥಿತಿಯನ್ನು ಎದುರಿಸಲು ಸಿದ್ದತೆ ಮಾಡಿಕೊಂಡಿದ್ದೇವೆ ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ.
(ವರದಿ: ಎ.ಯಶವಂತಕುಮಾರ್, ಚಿತ್ರದುರ್ಗ)