Viral News: ಪ್ರಧಾನಿ ಮೋದಿ ಸಿಕ್ಕರೆ ಚಪ್ಪಲಿಯಲ್ಲಿ ಹೊಡೆಯುವೆ, ವೈರಲ್ ಆಯ್ತು ಕರ್ನಾಟಕ ಕಾಂಗ್ರೆಸ್ ಮುಖಂಡನ ಹೇಳಿಕೆ
PM Modi ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಜುನಾಥ್, ಮೋದಿ ಅವರು ಎದುರಿಗೆ ಸಿಕ್ಕರೆ ಚಪ್ಪಲಿಯಲ್ಲಿ ಹೊಡೆಯುವೆ ಎನ್ನುವ ಹೇಳಿಕೆ ವೈರಲ್ ಆಗಿದೆ.
ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಬಡವರಿಗೆ ಇನ್ನಿಲ್ಲದ ತೊಂದರೆಯಾಗಿದೆ. ಹೀಗಿದ್ದರೂ ಅವರಿಗೆ ಬರೀ ಚುನಾವಣೆಯದ್ದೇ ಜಪ. ಮೋದಿ ಏನಾದರೂ ನನ್ನ ಎದುರಿಗೆ ಸಿಕ್ಕಿದರೆ ಅವರಿಗೆ ಚಪ್ಪಲಿಯಲ್ಲಿ ಹೊಡೆಯುವೆ ಎನ್ನುವ ಚಿತ್ರದುರ್ಗ ಕಾಂಗ್ರೆಸ್ ಮುಖಂಡ ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್ ನೀಡಿರುವ ಹೇಳಿಕೆ ವೈರಲ್ ಆಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಮಂಜುನಾಥ್ ಅವರು ನೀಡಿರುವ ಈ ಹೇಳಿಕೆ ಸಾಕಷ್ಟು ಟೀಕೆಗೂ ಗುರಿಯಾಗಿದೆ. ಇನ್ನೇನು ಚುನಾವಣೆ ಬರುತ್ತಿರುವುದರಿಂದ ಪಕ್ಷದ ನಾಯಕರ ಹೇಳಿಕೆಗಳು ಈ ರೀತಿ ಕೆಳಮಟ್ಟಕ್ಕೆ ಇಳಿಯಬಹುದೇ ಎನ್ನುವ ಅನುಮಾನವನ್ನೂ ಹುಟ್ಟು ಹಾಕಿದೆ.
ಹಿರಿಯೂರಿನಲ್ಲಿ ಆಯೋಜಿಸಲಾಗಿದ್ದ ಬೋವಿ ಸಮಾಜದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸಹಿತ ಹಲವು ಮುಖಂಡರು ಹಾಜರಿದ್ದರು. ಈ ವೇಳೆ ಭಾಷಣ ಮಾಡಿದ ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಜುನಾಥ್ ಪ್ರಧಾನಿ ವಿರುದ್ದ ಟೀಕಾ ಪ್ರಹಾರವನ್ನೇ ನಡೆಸಿದರು. ಅವರ ಆಡಳಿತದಿಂದ ಏನೂ ಆಗಿಲ್ಲ. ಬಡವರು ಇನ್ನಿಲ್ಲದ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಆಪಾದಿಸಿದರು.
9 ವರ್ಷ ಕಾಲ ದೇಶದಲ್ಲಿ ನಿರಂತರವಾಗಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸಿದವರು ಇವರೆ. ಈಗ 100 ರೂಪಾಯಿ ಸಿಲೆಂಡರ್ ದರವನ್ನು ಇಳಿಕೆ ಮಾಡಲಾಗಿದೆ. ಇಷ್ಟು ದಿನ ಬೆಲೆ ಏರಿಕೆಯಾಗಿರುವುದು ಇವರ ಗಮನಕ್ಕೆ ಬಂದಿರಲಿಲ್ಲವೇ, ಇದನ್ನು ಕರ್ನಾಟಕದ ಯುವಕರು ಬಿಜೆಪಿಯವರನ್ನು ಕೇಳಿ ಉತ್ತರ ಪಡೆದುಕೊಳ್ಳಲಿ. ಹತ್ತು ವರ್ಷದ ಹಿಂದೆ ಗೃಹೋಪಯೋಗಿ ಸಿಲಿಂಡರ್ ಬೆಲೆ 465 ರೂ. ಇತ್ತು. ಸಹಾಯಧನ ತೆಗೆದು ಸಿಲೆಂಡರ್ ಬೆಲೆಯನ್ನು 1150ಕ್ಕೆ ಏರಿಸಿದವರು ಯಾರು ಎಂಬುದನ್ನು ಜನ ಮೊದಲು ತಿಳಿದುಕೊಳ್ಳಬೇಕು. ಚುನಾವಣೆ ಬಂದಿದೆ ಎಂದು ನೂರು ರೂಪಾಯಿ ಕಡಿಮೆ ಮಾಡಿರುವವರು ಯಾವ ರೀತಿಯಲ್ಲಿ ಸಾವಿರಾರು ರೂಪಾಯಿಗಳನ್ನು ಸಿಲೆಂಡರ್ ಹೆಸರಿನಲ್ಲಿ ದೋಚಿದ್ದಾರೆ ಎಂಬುದನ್ನು ಜನ ಮರೆಯಬಾರದು ಎಂದು ಮಂಜುನಾಥ್ ಟೀಕಿಸಿದರು.
ಮೋದಿಯವರಿಗೆ ರೈತರ ಬಡವರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ಆರ್ಥಿಕ ಹೊರೆಯಾಗುತ್ತದೆ. ದೇಶದ ಆರ್ಥಿಕ ಸ್ಥಿತಿ ಹಾಳಾಗಲಿದೆ ಎಂದು ಕಾರಣ ನೀಡುತ್ತಾರೆ. ಅದೇ 21 ಮಂದಿ ಕಾರ್ಪೋರೇಟ್ ಕುಳಗಳ 11.50 ಲಕ್ಷ ಕೋಟಿ ಸಾಲಮನ್ನಾ ಮಾಡಿರುವ ಮೋದಿ ಅವರಿಗೆ ಜನರ ಕಷ್ಟ ತಿಳಿಯುವುದಿಲ್ಲವೇ. ಅವರಿಗೆ ಬಡವರಿಗಿಂತ ಉಳ್ಳವರ ಬಗ್ಗೆಯೇ ಕಾಳಜಿ ಇದ್ದಂತಿದೆ ಎಂದು ಆಪಾದಿಸಿದರು.
ದೇಶದ ಚಿತ್ರಣವನ್ನೇ ಅಭಿವೃದ್ಧಿ ಪಥದತ್ತ ಕೊಂಡೊಯ್ದದ್ದು ಕಾಂಗ್ರೆಸ್ ಪಕ್ಷ. ಇದನ್ನು ನಾವು ಗಟ್ಟಿಯಾಗಿ ಹೇಳಬೇಕಿದೆ. ಆದರೆ ಸುಳ್ಳನ್ನೇ ತಮ್ಮ ಆಸ್ತಿಯಂತೆ ಮಾಡಿಕೊಂಡಿರುವ ಬಿಜೆಪಿಯವರು ಬೀದಿಯಲ್ಲಿ ನಿಂತು ಸುಳ್ಳು ಹೇಳಿಕೆ ನೀಡಿದರೆ ಕಾಂಗ್ರೆಸ್ ಪಕ್ಷದ ಸಾಧನೆಗಳಿಗೆ ಏನು ಆಗುವುದಿಲ್ಲ. ಹೀಗೆ ಬರೀ ಸುಳ್ಳು ಹೇಳುವ ಮೋದಿ ಅವರು ನನ್ನ ಕೈಗೆ ಸಿಕ್ರೆ ಕಾಲಲ್ಲಿರೋದು ತೆಗೆದುಹೊಡಿಯುವೆ ಎಂದು ಆಕ್ರೋಶ ಹೊರ ಹಾಕಿದರು. ಅಲ್ಲದೇ ಅವರು ಮೋದಿ ಅವರ ಶೈಲಿಯಲ್ಲಿಯೇ ಮಿಮಿಕ್ರಿ ಕೂಡ ಮಾಡಿದ್ದು ಗಮನ ಸೆಳೆಯಿತು.
ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮಂಜುನಾಥ್ ಹೇಳಿಕೆಗೆ ಟೀಕೆ ವ್ಯಕ್ತವಾಗಿದೆ. ರಾಜಕೀಯವಾಗಿ ಬೇಕಾದರೆ ಎಷ್ಟಾದರೂ ಟೀಕೆ ಮಾಡಿಕೊಳ್ಳಲಿ. ಆದರೆ ವೈಯಕ್ತಿಕ ನಿಂದನೆ ಮಾಡುವುದು, ಜನರನ್ನು ಕೆರಳಿಸುವ ಕೆಲಸ ಮಾಡಬೇಡಿ. ಕರ್ನಾಟಕದ ಘನತೆ ಹಾಳುಮಾಡಬೇಡಿ ಎನ್ನುವ ರೀತಿಯಲ್ಲಿಯೇ ಹಲವರು ಪ್ರತಿಕ್ರಿಯಿಸಿದ್ದಾರೆ.