ಬೆಂಗಳೂರು ಗೋಕರ್ಣ ಸೀಬರ್ಡ್ ಬಸ್ ಪಲ್ಟಿ, ಚಿತ್ರದುರ್ಗ ಹೊಳಲ್ಕೆರೆ ಬಳಿ ದುರಂತ, ಕನಿಷ್ಠ 4 ಸಾವು, ಹಲವರಿಗೆ ಗಾಯ
ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟ ಸೀಬರ್ಡ್ ಬಸ್ ಪಲ್ಟಿಯಾಗಿದ್ದು, ಕನಿಷ್ಠ 4 ಸಾವು ಸಂಭವಿಸಿದೆ. ಹಲವರಿಗೆ ಗಾಯಗಳಾಗಿವೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದ ಬಳಿ ಭಾನುವಾರ ಬೆಳಗ್ಗೆ ಈ ದುರಂತ ಸಂಭವಿಸಿತು. (ವರದಿ - ಯಶವಂತ್, ದಾವಣಗೆರೆ)
ಚಿತ್ರದುರ್ಗ: ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಸೀಬರ್ಡ್ ಎಂಬ ಖಾಸಗಿ ಬಸ್ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಸಮೀಪ ಪಲ್ಟಿಯಾಗಿದೆ. ಖಾಸಗಿ ಬಸ್ ದುರಂತದಲ್ಲಿ ಕನಿಷ್ಠ 4 ಜನ ಮೃತಪಟ್ಟಿದ್ದು, 30 ರಷ್ಟು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಹೊಳಲ್ಕೆರೆ ಪಟ್ಟಣದ ಬಳಿ ಭಾನುವಾರ ನಸುಕಿನಲ್ಲಿ ಈ ದುರಂತ ಸಂಭವಿಸಿತು. ಹೊಳಲ್ಕೆರೆಯ ಪಟ್ಟಣದ ಹೊರವಲಯದಲ್ಲಿರುವ ಆಂಜನೇಯ ದೇವಸ್ಥಾನದ ಸಮೀಪ ಈ ಅಪಘಾತ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ದುರಂತದಲ್ಲಿ ಅಂದಾಜು 30 ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ 8 ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.
ದುರಂತ ನಡೆದ ಸ್ಥಳದಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿರುವುದೇ ದುರಂತಕ್ಕೆ ಕಾರಣ. ಇಲ್ಲಿ ಇದೇ ಅಪಘಾತ ನಡೆಯವುದು ಇದೇ ಮೊದಲ ಸಲವಲ್ಲ. ಅನೇಕ ಸಲ ಈ ರೀತಿ ಅಪಘಾತಗಳಾಗಿವೆ. ಆಗುತ್ತಲೇ ಇವೆ ಎಂದು ಸ್ಥಳೀಯರು ದೂರಿದ್ದಾರೆ.
ಪೇಪರ್ ಬ್ಯಾಗ್‌ಗೆ 10 ರೂಪಾಯಿ ಪಡೆದ ಮ್ಯಾಕ್ಸ್ ರಿಟೇಲ್‌ಗೆ ದಂಡ
ದಾವಣಗೆರೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು, ಪ್ಯಾಂಟ್ ಮಾರಾಟದ ವೇಳೆ ಪೇಪರ್ ಬ್ಯಾಗ್‌ಗೆ ಹೆಚ್ಚುವರಿಯಾಗಿ 10 ರೂಪಾಯಿ ಪಡೆದಿದ್ದ ಲೈಫ್ ಸ್ಟೈಲ್ ಇಂಟರ್ ನ್ಯಾಷನಲ್ ವಾಣಿಜ್ಯ ಸಂಸ್ಥೆಗೆ 7,000 ರೂಪಾಯಿ ದಂಡ ವಿಧಿಸಿದೆ.
ವಕೀಲ ಆರ್ ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರಿಟೇಲ್ ಮಳಿಗೆಯಲ್ಲಿ 2023ರ ಅಕ್ಟೋಬರ್ 29ರಂದು 1,499 ರೂಪಾಯಿ ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದ್ದರು. ಈ ಸಂದರ್ಭದಲ್ಲಿ ಅದನ್ನು ಸಾಗಿಸಲು ಕೊಟ್ಟ ಪೇಪರ್ ಬ್ಯಾಗ್‌ಗೆ ಹೆಚ್ಚುವರಿಯಾಗಿ 10 ರೂಪಾಯಿಯನ್ನು ರಿಟೇಲ್ ಮಳಿಗೆಯವರು ಪಡೆದುಕೊಂಡಿದ್ದರು. ಇದರಿಂದ ಕಿರಿಕಿರಿಗೆ ಒಳಗಾಗಿದ್ದ ಬಸವರಾಜ್ ಅವರು, ಮಳಿಗೆಯವರ ಬಳಿ ವಿವರಣೆ ಕೇಳಿದ್ದರು. ಆದರೆ ಅವರು ಕೊಟ್ಟ ಉತ್ತರ ಸಮಾಧಾನ ಕೊಟ್ಟಿರಲಿಲ್ಲ.
ಮ್ಯಾಕ್ಸ್ ರಿಟೇಲ್ ಮಳಿಗೆಯ ಮಾಲೀಕತ್ವ ಹೊಂದಿರುವ ಲೈಫ್ ಸ್ಟೈಲ್ ಇಂಟರ್ ನ್ಯಾಷನಲ್ ವಾಣಿಜ್ಯ ಸಂಸ್ಥೆ ವಿರುದ್ಧ ಆರ್ ಬಸವರಾಜ್ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು. 50,000 ರೂಪಾಯಿ ಮಾನಸಿಕ ಕಿರುಕುಳ ಪರಿಹಾರ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ 10,000 ರೂಪಾಯಿ ಕೊಡಿಸುವಂತೆ ಮನವಿ ಮಾಡಿದ್ದರು.
ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದ ಗ್ರಾಹಕ ನ್ಯಾಯಾಲಯ, ವಿಚಾರಣೆ ಎದುರಿಸುವಂತೆ ಸೂಚಿಸಿತ್ತು. ಇದನ್ನು ವಕೀಲರ ಮೂಲಕ ಎದುರಿಸಿದ ಲೈಫ್ ಸ್ಟೈಲ್ ಇಂಟರ್ ನ್ಯಾಷನಲ್, ಬ್ಯಾಗ್‌ಗೆ ಹೆಚ್ಚುವರಿಯಾಗಿ ಹಣ ಪಡೆದ ಕ್ರಮವನ್ನು ಸಮರ್ಥಿಸಿಕೊಂಡಿತು. ಆದರೆ, ಈ ವಾದ, ಸಮಜಾಯಿಷಿಯನ್ನು ಪುರಸ್ಕರಿಸದ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು 7,000 ರೂಪಾಯಿ ದಂಡ ವಿಧಿಸಿದೆ.
ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗವು ಬಿಗ್ ಬಜಾರ್ ವಿರುದ್ಧದ ಪ್ರಕರಣದಲ್ಲಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್ ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಕೂಡ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಉಲ್ಲೇಖಿಸಿತು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯೆ ಬಿ.ಯು. ಗೀತಾ ಈ ಆದೇಶ ನೀಡಿದರು.
(ವರದಿ - ಯಶವಂತ್, ದಾವಣಗೆರೆ)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.