ಕನ್ನಡ ಸುದ್ದಿ  /  ಕರ್ನಾಟಕ  /  ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಜಾಮೀನು ರದ್ದು, ಪೋಕ್ಸೋ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಜಾಮೀನು ರದ್ದು, ಪೋಕ್ಸೋ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ಪೋಕ್ಸೋ ಕೇಸ್‌ನಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಜಾಮೀನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌, ನ್ಯಾಯಾಂಗ ಬಂಧನಕ್ಕೆ ಒಳಗಾಗುವಂತೆ ಶರಣರಿಗೆ ಸೂಚಿಸಿದೆ. ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಕೇಸ್‌ನ ತನಿಖೆ ಪೂರ್ಣಗೊಳ್ಳುವ ತನಕ ಬಂಧನದಲ್ಲಿರುವಂತೆ ಕೋರ್ಟ್ ಆದೇಶಿಸಿದೆ.

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು (ಎಡ ಚಿತ್ರ) ಮತ್ತು ಸುಪ್ರೀಂ ಕೋರ್ಟ್‌ (ಬಲ ಚಿತ್ರ). ಚಿತ್ರದುರ್ಗ ಮುರುಘಾ ಮಠದ ವ್ಯವಹಾರ ಮೇಲ್ವಿಚಾರಣೆ ಸಮಿತಿ ರಚಿಸಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಪ್ರತಿಕ್ರಿಯೆ ನೀಡಲು 2 ವಾರದ ಗಡುವು ಕೊಟ್ಟಿದೆ.
ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು (ಎಡ ಚಿತ್ರ) ಮತ್ತು ಸುಪ್ರೀಂ ಕೋರ್ಟ್‌ (ಬಲ ಚಿತ್ರ). ಚಿತ್ರದುರ್ಗ ಮುರುಘಾ ಮಠದ ವ್ಯವಹಾರ ಮೇಲ್ವಿಚಾರಣೆ ಸಮಿತಿ ರಚಿಸಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಪ್ರತಿಕ್ರಿಯೆ ನೀಡಲು 2 ವಾರದ ಗಡುವು ಕೊಟ್ಟಿದೆ.

ನವದೆಹಲಿ/ ಬೆಂಗಳೂರು: ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಶ್ರೀ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಏಪ್ರಿಲ್ 23) ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಶಿವಮೂರ್ತಿ ಮುರುಘಾ ಶರಣರು ಮತ್ತೆ ಸೆರೆಮನೆ ಸೇರಬೇಕಾಗಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹೈಕೋರ್ಟ್‌ ಕೆಲವು ತಿಂಗಳ ಹಿಂದೆ ಮುರುಘಾ ಶರಣರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಮಾಜಿ ಸಚಿವ ಎಚ್ ಏಕಾಂತಯ್ಯ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಜಾಮೀನು ಪಡೆದು ಹೊರಗಿದ್ದು, ಸಾಕ್ಷ್ಯ ನಾಶ ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದು, ಅದರಲ್ಲಿ ಈಗ ಯಶಸ್ವಿಯಾಗಿದ್ದಾರೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ.

ನ್ಯಾಯಾಂಗ ಬಂಧನಕ್ಕೆ ತೆರಳಲು ಶಿವಮೂರ್ತಿ ಮುರುಘಾ ಶರಣರಿಗೆ ಸೂಚನೆ

ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಡಾ. ಶಿವಮೂರ್ತಿ ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌, 4 ತಿಂಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗುವಂತೆ ಅವರಿಗೆ ಆದೇಶಿಸಿದೆ. ಆರಂಭದಲ್ಲಿಒಂದು ವಾರದ ಒಳಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗುವಂತೆ ಶರಣರಿಗೆ ಆದೇಶ ನೀಡಿರುವ ನ್ಯಾಯಪೀಠ, 4 ತಿಂಗಳ ಒಳಗೆ ತನಿಖೆ ಪೂರ್ಣಗೊಳ್ಳದೇ ಇದ್ದರೆ, ನ್ಯಾಯಾಂಗ ಬಂಧನದ ಅವಧಿಯನ್ನು ಇನ್ನೆರಡು ತಿಂಗಳು ವಿಸ್ತರಿಸಬಹುದು ಎಂದು ಹೇಳಿದೆ.

ಈಗ ಸುಪ್ರೀಂ ಕೋರ್ಟ್‌ ನ್ಯಾಯಪೀಠ ನೀಡಿದ ಆದೇಶ ಪ್ರಕಾರ, ಮುರುಘಾ ಶರಣರು ಒಂದು ವಾರದ ಒಳಗೆ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಬೇಕು. ಪ್ರಕರಣ ಸಂಬಂಧ ಸಂತ್ರಸ್ತೆಯರು ಮತ್ತು ಅವರ ಪಾಲಕರ ವಿಚಾರಣೆ ಮುಗಿಸುವವರೆಗೂ ಶರಣರು ಬಂಧನದಲ್ಲೇ ಇರಬೇಕು.

ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಪ್ರಕರಣ ಏನಿದು

ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ 2022ರ ಆಗಸ್ಟ್‌ 31ರಂದು ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 1ರಂದು ಶರಣರನ್ನು ಪೊಲೀಸರು ಬಂಧಿಸಿದ್ದರು. 16 ತಿಂಗಳ ಕಾಲ ಜೈಲಿನಲ್ಲಿದ್ದ ಶಿವಮೂರ್ತಿ ಮುರುಘಾ ಶರಣರು ಎರಡು ಪ್ರಕರಣಗಳಲ್ಲಿ ಕಳೆದ ವರ್ಷ (2023) ನವೆಂಬರ್ 8 ಮತ್ತು ನವೆಂಬರ್ 16 ರಂದು ಷರತ್ತುಬದ್ಧ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮೊದಲ ಪ್ರಕರಣ ಮೈಸೂರಿನ ನಜರ್‌ಬಾದ್‌ ಪೊಲೀಸ್ ಠಾಣೆಯಲ್ಲಿ ದಾಖಲಾದರೆ, ಇನ್ನೊಂದು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ಎಸ್‌ಜೆಎಂ ವಿದ್ಯಾಪೀಠ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ಬಾಲಕಿಯರು ಶರಣರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಎಸಗಿದ ಆರೋಪ ಮಾಡಿದ್ದರು.

ಜಾಮೀನು ಪಡೆದ ಬಳಿಕ ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬಂದ ಶಿವಮೂರ್ತಿ ಮುರುಘಾ ಶರಣರು ದಾವಣಗೆರೆ ಶಾಖಾ ಮಠದಲ್ಲಿ ಉಳಿದುಕೊಂಡಿದ್ದರು. ಅಲ್ಲಿಂದಲೇ ಮಠದ ವ್ಯವಹಾರ ನೋಡಿಕೊಳ್ಳಲು ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಏಕಾಂತಯ್ಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಪೀಠ, ಚಿತ್ರದುರ್ಗ ಮುರುಘಾ ಮಠದ ವ್ಯವಹಾರಗಳಿಂದ ದೂರ ಉಳಿಯುವಂತ ಶಿವಮೂರ್ತಿ ಮುರುಘಾ ಶರಣರಿಗೆ ನಿರ್ದೇಶನ ನೀಡಿತ್ತು. ಅಲ್ಲದೆ, ಮುರುಘಾ ಮಠದ ವ್ಯವಹಾರಗಳ ಮೇಲ್ವಿಚಾರಣೆಗೆ ಸಮಿತಿಯನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದರಂತೆ ಈಗ ಸರ್ಕಾರ ನೇಮಿಸಿದ ಮೇಲ್ವಿಚಾರಣಾ ಸಮಿತಿ ಮಠದ ವ್ಯವಹಾರಗಳನ್ನು ಗಮನಿಸುತ್ತಿದೆ.

IPL_Entry_Point