ಚಿತ್ರದುರ್ಗ: ಆರತಕ್ಷತೆ ಭೋಜನದಲ್ಲಿ ಕುಡಿಯುವ ನೀರು ಕೊಡದ ಕಾರಣಕ್ಕೆ ಜಗಳ, ನಿಂತು ಹೋಯಿತು ಮದುವೆ
Chitradurga Wedding Chaos: ಮದುವೆ ನಿಂತು ಹೋಗಲು ಕ್ಷುಲ್ಲಕ ಕಾರಣವೂ ಸಾಕಾಗಿ ಬಿಡುತ್ತದೆ ನೋಡಿ. ಚಿತ್ರದುರ್ಗದಲ್ಲಿ ಆರತಕ್ಷತೆ ಭೋಜನದಲ್ಲಿ ಕುಡಿಯುವ ನೀರು ಕೊಡದ ಕಾರಣಕ್ಕೆ ಜಗಳ ಉಂಟಾಗಿ, ಟೆಕ್ಕಿಗಳ ಮದುವೆಯೇ ನಿಂತು ಹೋಯಿತು.

Chitradurga Wedding Chaos: ಮದುವೆಗೆ ಮುನ್ನಾ ದಿನ ಆರತಕ್ಷತೆ (ರಿಸೆಪ್ಶನ್) ಕಾರ್ಯಕ್ರಮದ ನಂತರ ಭೋಜನದ ವೇಳೆ ಕುಳಿತವರಿಗೆ ಕುಡಿಯಲು ತತ್‌ಕ್ಷಣ ನೀರು ನೀಡಲಿಲ್ಲ ಎಂಬ ಕಾರಣಕ್ಕೆ ಉಂಟಾದ ಜಗಳದ ಮದುವೆಯೇ ಮುರಿದು ಬೀಳುವಂತೆ ಮಾಡಿತು. ಇಂತಹ ವಿಲಕ್ಷಣ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಲಿಜ ಶ್ರೇಯಾ ಭವನದಲ್ಲಿ ಭಾನುವಾರ ನಡೆಯಿತು.
ಆರತಕ್ಷತೆ ಭೋಜನದಲ್ಲಿ ಕುಡಿಯುವ ನೀರು ಕೊಡದ ಕಾರಣಕ್ಕೆ ಜಗಳ
ತುಮಕೂರು ಜಿಲ್ಲೆ ಶಿರಾ ತಾಲೂಕು ಚಿರತಹಳ್ಳಿ ಗ್ರಾಮದ ಯುವತಿ ಹಾಗೂ ಜಗಳೂರು ಪಟ್ಟಣದ ಯುವಕನ ವಿವಾಹ ಭಾನುವಾರ (ಮಾರ್ಚ್ 16) ನಡೆಯಬೇಕಾಗಿತ್ತು. ವಧು- ವರ ಇಬ್ಬರೂ ಎಂಜಿನಿಯರ್ ಪದವೀಧರರು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಗಂಡಿನ ಕಡೆಯವರ ಪೈಕಿ ಕೆಲವರು ಶನಿವಾರ ರಾತ್ರಿ ಮದ್ಯಪಾನ ಮಾಡಿ ತಡ ರಾತ್ರಿ 1 ಗಂಟೆಗೆ ಊಟಕ್ಕೆ ಕುಳಿತರು. ಮಲಗಿದ್ದ ಕ್ಯಾಟರಿಂಗ್ ಸಿಬ್ಬಂದಿಯನ್ನು ಎಬ್ಬಿಸಿ ಊಟಕ್ಕೆ ಆಗ್ರಹಿಸಿದರು. ಅವರು ಊಟ ಬಡಿಸುವಾಗ ಕುಡಿಯುವ ನೀರು ಕೊಡುವುದು ತಡವಾಯಿತು ಎಂದು ಜಗಳ ಉಂಟಾಯಿತು. ಈ ಸಂದರ್ಭದಲ್ಲಿ ಗಂಡು ಮತ್ತು ಹೆಣ್ಣಿನ ಕಡೆಯವರ ನಡುವೆ ಭಾರಿ ಜಗಳ ಉಂಟಾಯಿತು.
ಭಾನುವಾರ ಮುಂದುವರಿಯಿತು ಶನಿವಾರ ತಡರಾತ್ರಿ ಶುರುವಾದ ಜಗಳ
ಟೆಕ್ಕಿಗಳ ಮದುವೆ ಭಾನುವಾರ ಬೆಳಿಗ್ಗೆ 10.30ಕ್ಕೆ ಮುಹೂರ್ತ ನಿಗದಿಯಾಗಿತ್ತು. ಶನಿವಾರ ತಡರಾತ್ರಿ ನೀರಿನ ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಮದುವೆಯೇ ನಿಲ್ಲುವ ಸೂಚನೆ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಹಿರಿಯರು ಶನಿವಾರ ರಾತ್ರಿಯಿಂದಲೇ ಸಂಧಾನ ನಡೆಸಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಸಂಬಂಧಿಕರು ಸಾಕಷ್ಟು ಪ್ರಯತ್ನಪಟ್ಟರೂ ಜಗಳ ಬಗೆಹರಿಸಲು ಸಾಧ್ಯವಾಗಲಿಲ್ಲ. ಟೆಕ್ಕಿಗಳ ಮದುವೆ ಮುರಿದುಬಿತ್ತು ಎಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ಸಮೀಪದ ಬಲಿಜ ಶ್ರೇಯ ಕಲ್ಯಾಣ ಮಂಟಪದ ಸಿಬ್ಬಂದಿ ಹಾಗೂ ಸಂಬಂಧಿಕರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಸಂಬಂಧಿಕರ ನಡುವಿನ ನೀರಿನ ಗಲಾಟೆಯಲ್ಲಿ ಟೆಕ್ಕಿ ವಧು- ವರ ಇಬ್ಬರೂ ನೇರವಾಗಿ ಭಾಗಿಯಾದರು. ಪರಿಣಾಮ ರಾಜಿ ಸಂಧಾನ ಕಷ್ಟವಾಯಿತು. ವಧುವಿನ ಕಡೆಯವರು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಮದುವೆ ಮಾಡಿಸುತ್ತಿರುವಾಗ ಕುಡಿಯುವ ನೀರು ಕೊಡುವಾಗ ತಡವಾಯಿತು ಎಂದು ಖ್ಯಾತೆ ತೆಗೆದು ಗಲಾಟೆ ಮಾಡಿದ್ದು ಸರಿಯಲ್ಲ ಎಂಬ ವಾದ ಜೋರಾಗಿ ಕೇಳಿಬಂತು. ಈಗಲೇ ಹೀಗೆ. ಮುಂದೆ ಹೇಗೋ ಎಂಬ ವಾದ ಸರಣಿ ಮುಂದುವರಿದು ಮದುವೆ ಮುರಿದು ಬಿತ್ತು ಎಂದು ಮೂಲಗಳು ತಿಳಿಸಿವೆ.
