ಒಂದು ಕಾಲದಲ್ಲಿ ಸರ್ಕಸ್ ಪ್ರದರ್ಶನವೇ ದುರಂತಕ್ಕೆ ದಾರಿ ಎಂಬಂತೆ ಆಗಿತ್ತು, ಆದರೆ ಈಗ..; ಬೇಳೂರು ಸುದರ್ಶನ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಒಂದು ಕಾಲದಲ್ಲಿ ಸರ್ಕಸ್ ಪ್ರದರ್ಶನವೇ ದುರಂತಕ್ಕೆ ದಾರಿ ಎಂಬಂತೆ ಆಗಿತ್ತು, ಆದರೆ ಈಗ..; ಬೇಳೂರು ಸುದರ್ಶನ ಬರಹ

ಒಂದು ಕಾಲದಲ್ಲಿ ಸರ್ಕಸ್ ಪ್ರದರ್ಶನವೇ ದುರಂತಕ್ಕೆ ದಾರಿ ಎಂಬಂತೆ ಆಗಿತ್ತು, ಆದರೆ ಈಗ..; ಬೇಳೂರು ಸುದರ್ಶನ ಬರಹ

Circus Culture in Danger: ಒಂದು ಕಾಲದಲ್ಲಿ ಸರ್ಕಸ್ ಪ್ರದರ್ಶನವೇ ದುರಂತಕ್ಕೆ ದಾರಿ ಎಂಬಂತೆ ಆಗಿತ್ತು. ಆದರೆ ಈಗ ಸರ್ಕಸ್ ಸಂಸ್ಕೃತಿಯೇ ದುರಂತದ ಅಂಚಿನಲ್ಲಿದೆ ಎಂದು ಬೇಳೂರು ಸುದರ್ಶನ ಅವರು ಫೇಸ್​ಬುಕ್​ ಪೋಸ್ಟ್​​​ ಹಾಕಿದ್ದಾರೆ.

ಒಂದು ಕಾಲದಲ್ಲಿ ಸರ್ಕಸ್ ಪ್ರದರ್ಶನವೇ ದುರಂತಕ್ಕೆ ದಾರಿ ಎಂಬಂತೆ ಆಗಿತ್ತು, ಆದರೆ ಈಗ..; ಬೇಳೂರು ಸುದರ್ಶನ ಬರಹ
ಒಂದು ಕಾಲದಲ್ಲಿ ಸರ್ಕಸ್ ಪ್ರದರ್ಶನವೇ ದುರಂತಕ್ಕೆ ದಾರಿ ಎಂಬಂತೆ ಆಗಿತ್ತು, ಆದರೆ ಈಗ..; ಬೇಳೂರು ಸುದರ್ಶನ ಬರಹ

ಮೊನ್ನೆ ಧಾರವಾಡದಲ್ಲಿ ಗ್ರೇಟ್ ರಾಜಕಮಲ್ ಸರ್ಕಸ್ ನೋಡಲು ಹೋಗಿದ್ದೆವು. ಒಂದು ಹೈಸ್ಕೂಲ್, ಕಾಲೇಜಿನ ವಾರ್ಷಿಕ ಕಾರ್ಯಕ್ರಮವು ಈ ಸರ್ಕಸ್​ಗಿಂತ ಕನಿಷ್ಠ 10 ಪಟ್ಟು ಚೆನ್ನಾಗಿರುತ್ತೆ ಅಂತ ಅನ್ನಿಸಿತು. ನೂರು, ಇನ್ನೂರು, ಮುನ್ನೂರರ ಟಿಕೆಟ್ ದರಗಳಿದ್ದವು. ಒಳಗೆ ಹೋದರೆ ಎಲ್ರಿಗೂ ಮಣ್ಣಿನ ಹೆಂಟೆಗಳ ಮೇಲೇ ಹಾಕಿದ್ದ ಹಳೇ ಪ್ಲಾಸ್ಟಿಕ್ ಕುರ್ಚಿಗಳು. ಹೆಚ್ಚು ದುಡ್ಡು ಕೊಟ್ಟರೆ ಮುಂದೆ ಕೂರಬಹುದು.

ಹೆಚ್ಚಾಗಿ ಪೂರ್ವಾಂಚಲದ ಹುಡುಗರು – ಹುಡುಗಿಯರೇ ಇದ್ರು. ಬೆಂಗಳೂರಿನ ಹೋಟೆಲ್​​ಗಳಲ್ಲೂ ಇವರೇ ಹೆಚ್ಚಾಗಿ ಕಾಣಿಸ್ತಾರೆ ಅಲ್ವ? ಇಲ್ಲೂ ಅದೇ ತರ. ಅವರು ಉದ್ಯೋಗಕ್ಕಾಗಿ ಸರ್ಕಸ್ ಕಂಪನಿಗಳಲ್ಲೂ ಸೇರ್ಕೋತಾ ಇರೋದು ಈ ದೇಶದ ಪ್ರಮುಖ ಭೂಭಾಗದ ಸಮಸ್ಯೆಗಳು ಇನ್ನೂ ಜ್ವಲಂತವಾಗಿವೆ ಎಂಬುದರ ನಿದರ್ಶನ ಅಷ್ಟೆ.

ಹರುಕಲು, ಮುರುಕಲು ಪೀಠೋಪಕರಣಗಳು, ಕೊಳಕೆದ್ದು ಹೋದ ಜಮಖಾನಾದ ಮೇಲೆ ಒಂದಷ್ಟು ಸರ್ಕಸ್ ಐಟಂಗಳಿದ್ದವು. ಒಂದೆರಡು ಐಟಂಗಳನ್ನು (ಅದರಲ್ಲೂ ಸಿಲಿಂಡರ್ – ಮಣೆ – ಸಿಲಿಂಡರ್ – ಮಣೆ ಮೇಲೆ ನಿಂತುಕೊಂಡು ಆಡುವ ಹುಡುಗ) ಬಿಟ್ರೆ ಯಾವುವೂ ಕಾಲೇಜ್ ಹುಡುಗರ ಎನರ್ಜಿಯನ್ನಾಗಲೀ, ಕನಿಷ್ಠ ಪ್ರಮಾಣದ ಕೋರಿಯೋಗ್ರಫಿ – ರಿದಮ್ ಅನ್ನಾಗಲೀ ಹೊಂದಿರಲಿಲ್ಲ. ಗುಣಾತ್ಮಕ ವಿಮರ್ಶೆಯನ್ನು ಬಿಟ್ಟು ನೋಡಿದರೆ, ಒಂದಷ್ಟು ಪ್ರದರ್ಶನಗಳಲ್ಲಿ ಹುಡುಗರು - ಹುಡುಗಿಯರು ತಮ್ಮೆಲ್ಲ ಶ್ರಮವನ್ನೂ ಹಾಕಿದ್ದು ನಿಜ.

ನಟನೆ, ಹಾಸ್ಯದ ಪರಿಕಲ್ಪನೆ ಕಾಣಿಸಲಿಲ್ಲ

ಪ್ರಾಣಿಗಳಂತೂ ಕಾಯ್ದೆಶೀರ ಇರಲೇ ಇಲ್ಲ. ಸಾಕುಪ್ರಾಣಿಗಳಾಗಿ ಮೂರು ಪೊಮೇರಿಯನ್ ನಾಯಿಗಳು ಏನೋ ಜಂಪ್ ಮಾಡಿ ಹೋದವು. ಜೋಕರ್​​ಗಳನ್ನು ನೋಡಿ ನನಗೆ ನಿಜಕ್ಕೂ ಬೇಜಾರಾಯ್ತು. ಹಗ್ಗ ಬಿಡಿಸುವ, ಕಟ್ಟುವ, ಮೇಜು ಸರಿಸುವ ಹುಡುಗರೇ ಇಲ್ಲಿ ಜೋಕರ್​​ಗಳಾಗಿದ್ರು. ಪಟ್ಟೆ ಪಟ್ಟೆ ಪೈಜಾಮ ಹಾಕಿ ಏನೋ ಅನಿವಾರ್ಯಕ್ಕೆ ಸಿಲುಕಿದವರಂತೆ ಒಂದಷ್ಟು ಪ್ರಹಸನ ಮಾಡಲು ಹೆಣಗಾಡಿದರು. ಅವರಿಗೆ ವೇಷ ಹಾಕಿ ನಟಿಸುವಾಗ ಅನ್ನದ ಪ್ರಶ್ನೆ ಮುಖ್ಯವಾಗಿತ್ತು ಎಂದೇ ಅನ್ನಿಸಿತು. ಹೊರತು ನಟನೆ, ಹಾಸ್ಯದ ಪರಿಕಲ್ಪನೆ – ಇವಾವುವೂ ಗೊತ್ತಿದ್ದಂತೆ ಕಾಣಿಸಲಿಲ್ಲ.

ಇನ್ನು ಶೌಚಾಲಯದ ಬಗ್ಗೆ ಹೇಳುವಂತಿಲ್ಲ. ಜನ? ಸಿಕ್ಕಾಪಟ್ಟೆ ಜನ ಬಂದಿದ್ದರು. ಅವತ್ತೇ ಒಂದೇ ಪ್ರದರ್ಶನಕ್ಕೆ ಮೂರೂ ದರದ ಟಿಕೆಟ್ ಖರೀದಿಸಿದವರು (ದಿನವಹಿ ಮೂರು ಪ್ರದರ್ಶನ) ಏನಿಲ್ಲೆಂದರೂ ಏಳುನೂರಕ್ಕೆ ಕಡಿಮೆ ಇರಲಿಲ್ಲ. ಹಾಗಾಗಿ ಸರ್ಕಸ್ ಕಂಪನಿಗೆ ಆದಾಯ ಕಡಿಮೆ ಎಂದು ಅನ್ನಿಸಲಿಲ್ಲ.

ನಾನು ಸರ್ಕಸ್ ಕಂಪನಿಯ ಸ್ಥಿತಿಯನ್ನಷ್ಟೇ ಟೀಕಿಸುತ್ತಿಲ್ಲ. ಸರ್ಕಸ್ ಕಂಪನಿಯ ತಂಡದ ಸದಸ್ಯರ ಕಷ್ಟ ಸುಖಗಳು ಏನೇನೋ ಇರಬಹುದು. ಆದರೆ ಮನರಂಜನೆಯೂ, ಯುವ ಮನಸ್ಸುಗಳಿಗೆ ಉತ್ಸಾಹ ಮೂಡಿಸುವ ಕ್ರಿಯೆಯೂ ಆಗಬಹುದಾಗಿದ್ದ ಇಂತಹ ಪ್ರದರ್ಶನವು ನಮ್ಮ ಸಮಾಜದ ಶಿಥಿಲತೆಯನ್ನೇ ಬಿಂಬಿಸಿದೆ ಎಂಬ ಭಾವ ಮೂಡಿ ಇದನ್ನು ಬರೆಯುತ್ತಿದ್ದೇನೆ.

ಸರ್ಕಸ್ ಸಂಸ್ಕೃತಿಯೇ…

ಸರ್ಕಸ್ ಪ್ರದರ್ಶನಕ್ಕೆ ನಿರ್ದಿಷ್ಟ ವ್ಯವಸ್ಥೆ ಕಲ್ಪಿಸಿ, ಒಳ್ಳೆಯ ರಂಗಸಜ್ಜಿಕೆ ಬೆಳಕಿನ ವ್ಯವಸ್ಥೆ ರೂಪಿಸಿ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯ್ತಿ ದರಕ್ಕೆ ವ್ಯವಸ್ಥೆ ಮಾಡಿದರೆ ಇಂತಹ ಜಿಮ್ನಾಸ್ಟಿಕ್ ಕೇಂದ್ರಿತ ಸರ್ಕಸ್​​​ಗಳು ಮಕ್ಕಳಿಗೆ ತಾವೂ ಹೀಗೆ ಸಾಧನೆ ಮಾಡಬೇಕು ಎಂದು ಉತ್ತೇಜನ ಕೊಡಬಹುದೇನೋ ಅನ್ನಿಸಿತು.

ಸರ್ಕಸ್ ಶೋಗಳ ಸಂಖ್ಯೆ ಕಡಿಮೆ ಮಾಡಿ, ಸರ್ಕಸ್​ನ ತಂಡದ ಸದಸ್ಯರ ಜೊತೆಗೆ ಮಕ್ಕಳ ಮಾತುಕತೆ ಏರ್ಪಡಿಸಬಹುದು. ಇದರಿಂದ ಮಕ್ಕಳಿಗೂ ಉತ್ಸಾಹ ಮೂಡುತ್ತದೆ. ತಂಡದ ಸದಸ್ಯರಿಗೂ ಊರೂರಿನ ಜನಬಳಕೆ ಆಗುತ್ತದೆ. ಸರ್ಕಸ್‌ ತಂಡದವರನ್ನು ಕಾಲೇಜುಗಳಿಗೂ ಕರೆದು ಮಾತಾಡಿಸಬಹುದು. ಇನ್ನೂ ಏನೆಲ್ಲಾ ಸಾಧ್ಯತೆಗಳಿವೆ ಎನ್ನಿಸಿತು. ಯಾರು ಮಾಡಬೇಕು, ಹೇಗೆ ಮಾಡಬೇಕು – ಇತ್ಯಾದಿ ಪ್ರಶ್ನೆಗಳು ಇದ್ದೇ ಇವೆ! ಒಂದು ಕಾಲದಲ್ಲಿ ಸರ್ಕಸ್ ಪ್ರದರ್ಶನವೇ ದುರಂತಕ್ಕೆ ದಾರಿ ಎಂಬಂತೆ ಆಗಿತ್ತು. ಆದರೆ ಈಗ ಸರ್ಕಸ್ ಸಂಸ್ಕೃತಿಯೇ ದುರಂತದ ಅಂಚಿನಲ್ಲಿದೆ.

ಬೇಳೂರು ಸುದರ್ಶನ ಅವರ ಫೇಸ್​ಬುಕ್​ ಪೋಸ್ಟ್ ಅನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ.

Whats_app_banner