ಕನ್ನಡ ಸುದ್ದಿ  /  Karnataka  /  Cm Basavaraj Bommai To Take Up Karnataka Maharashtra Border Dispute With Amit Shah

Border dispute: ರಾಜ್ಯ ಗಡಿಭಾಗದ ಜನರಿಗೆ ಮಹಾರಾಷ್ಟ್ರ ಆರೋಗ್ಯ ವಿಮಾ ಯೋಜನೆ ವಿಚಾರ; ಅಮಿತ್ ಶಾಗೆ ಸಿಎಂ ಬೊಮ್ಮಾಯಿ ದೂರು

ಕರ್ನಾಟಕದ 865 ಗಡಿ ಗ್ರಾಮಗಳಲ್ಲಿ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಲು ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನ ತೀವ್ರವಾಗಿ ಖಂಡಿಸಿರುವ ಸಿಎಂ ಬೊಮ್ಮಾಯಿ, ಇದು "ಕ್ಷಮಾಪಣೆಯಿಲ್ಲದ ಅಪರಾಧ" ಎಂದು ಕರೆದಿದ್ದಾರೆ. ಅಲ್ಲದೆ, ಕೇಂದ್ರ ಗೃಹ ಅಮಿತ್ ಶಾ ಅವರಿಗೆ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಗಡಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುವ ಮಹಾರಾಷ್ಟ್ರ ಸರ್ಕಾರ ಇದೀಗ ಕರ್ನಾಟಕ ಗಡಿಭಾಗದ 865 ಗ್ರಾಮಗಳಲ್ಲಿ 54 ಕೋಟಿ ರೂಪಾಯಿಯ ಆರೋಗ್ಯ ವಿಮಾ ಯೋಜನೆ ಜಾರಿಗೆ ಮುಂದಾಗಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಗಡಿ ಕನ್ನಡಿಗರಿಗೆ ಆರೋಗ್ಯ ವಿಮೆ ಯೋಜನೆಯ ಮಹಾರಾಷ್ಟ್ರ ಸಚಿವ ಸಂಪುಟದ ನಿರ್ಣಯವನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ.

ತಮ್ಮ ನಿವಾಸದ ಬಳಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಎಂ, ಕರ್ನಾಟಕ ಗಡಿ ಭಾಗದ ಜನರಿಗೆ ಆರೋಗ್ಯ ವಿಮೆ ಯೋಜನೆಯನ್ನು ಮಹಾರಾಷ್ಟ್ರದ ಸಂಪುಟ ನಿರ್ಣಯ ಘೋಷಿಸಿರುವುದು ಅಕ್ಷಮ್ಯ ಅಪರಾಧ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದಾಗ ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಕಾಯಬೇಕು. ಯಾವುದೇ ಪ್ರಚೋದನೆ ಯಾಗಬಾರದೆಂದು ಒಪ್ಪಲಾಗಿತ್ತು.

ಗೃಹ ಸಚಿವರ ಗಮನಕ್ಕೂ ತರಲಾಗುವುದು

ಈಗ ಅದರ ಉಲ್ಲಂಘನೆಯಾಗಿದೆ. ಕೂಡಲೇ ಆಜ್ಞೆಯನ್ನು ಹಿಂದೆಗೆದುಕೊಳ್ಳಬೇಕು. ಈ ವಿಚಾರವನ್ನು ಗೃಹ ಸಚಿವರ ಗಮನಕ್ಕೂ ತರಲಾಗುವುದು. ಈ ರೀತಿಯ ಯೋಜನೆಗಳನ್ನು ನಾವೂ ಕೂಡ ಪ್ರಕಟಿಸಬಹುದು. ಹಲವಾರು ತಾಲ್ಲೂಕುಗಳು, ಗ್ರಾಮ ಪಂಚಾಯಿತಿಗಳು ಮಹಾರಾಷ್ಟ್ರದಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲ, ಕರ್ನಾಟಕಕ್ಕೆ ಸೇರಬೇಕು ಎಂದು ಈಗಾಗಲೇ ನಿರ್ಣಯ ಮಾಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಇದ್ದಾಗ ಮಹಾರಾಷ್ಟ್ರದ ಸರ್ಕಾರ ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಸರ್ಕಾರ ತನ್ನ 'ಮಹಾತ್ಮ ಜ್ಯೋತಿಬಾ ಫುಲೆ ಆರೋಗ್ಯ ಯೋಜನೆ'ಗೆ ಹೆಚ್ಚುವರಿ 54 ಕೋಟಿ ವಿನಿಯೋಗಿಸುವುದಾಗಿ ಇತ್ತೀಚೆಗೆ ಘೋಷಿಸಿದ ನಂತರ ಎರಡು ರಾಜ್ಯಗಳ ನಡುವೆ ಇತ್ತೀಚಿನ ಉದ್ವಿಗ್ನತೆ ಉಂಟಾಗಿದೆ. ಕರ್ನಾಟಕದ ಗಡಿ ಗ್ರಾಮಗಳಿಗೆ ಈ ಯೋಜನೆಯ ಪ್ರಯೋಜನೆಗಳನ್ನು ವಿಸ್ತರಿಸುವ ತನ್ನ ಸಚಿವ ಸಂಪುಟದಲ್ಲಿ ಇತ್ತೀಚೆಗೆ ನಿರ್ಣಯಕೈಗೊಳ್ಳಲಾಗಿತ್ತು.

ಕರ್ನಾಟಕದ ಗಡಿ ಭಾಗದಲ್ಲಿರುವ ಹಳ್ಳಿಗಳಲ್ಲಿ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸುವ ಕುರಿತು ಮಹಾರಾಷ್ಟ್ರ ಸರ್ಕಾರವು ತನ್ನ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸಿಎಂ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ

ವಿರೋಧ ಪಕ್ಷದ ನಾಯಕರಾದ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಬುಧವಾರ ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದರು. ಅಲ್ಲದೆ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕರ್ನಾಟಕ ಮತ್ತು ಕನ್ನಡಿಗರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ದಯನೀಯವಾಗಿ ವಿಫಲರಾಗಿದ್ದಾರೆ. ಹೀಗಾಗಿ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ದುಷ್ಟ, ನೀಚ, ಕೆಟ್ಟ ಷಡ್ಯಂತ್ರವು ರಾಜ್ಯವನ್ನು ನುಚ್ಚು ನೂರಾಗಿಸಿದೆ. ಬಿಜೆಪಿ ಸರ್ಕಾರಗಳು ಕರ್ನಾಟಕ ಭೂ ಪ್ರದೇಶವನ್ನು ಹಲವು ತುಂಡುಗಳನ್ನಾಗಿ ವಿಭಜಿಸಿ ರಾಜ್ಯವನ್ನು ಕಬಳಿಸಲು ಪ್ರಯತ್ನಿಸುತ್ತಿವೆ.

ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಕರ್ನಾಟಕ ಗಡಿಭಾಗದ 864 ಗ್ರಾಮಗಳಲ್ಲಿ ತನ್ನ ಯೋಜನೆ ಜಾರಿಗೆ ಮುಂದಾಗಿದೆ. ಇದಕ್ಕಾಗಿ 54 ಕೋಟಿ ಹಣ ಬಿಡುಗಡೆ ಮಾಡಿರುವುದು ಬಿಜೆಪಿಯ ಷಡ್ಯಂತ್ರವನ್ನು ಸ್ಪಷ್ಟಪಡಿಸಿದೆ. ಮಹಾರಾಷ್ಟ್ರ ಸರ್ಕಾರದ ಈ ನಡೆ ರಾಜ್ಯದ 6.5 ಕೋಟಿ ಕನ್ನಡಿಗರ ಸ್ವಾಭಿಮಾನ ಹಾಗೂ ಪ್ರಾದೇಶಿಕ ಸಮಗ್ರತೆಗೆ ಪೆಟ್ಟು ನೀಡಿದೆ.

ಬಿಜೆಪಿಯ ಈ ಕುತಂತ್ರದ ವಿರುದ್ಧ ಪ್ರತಿಯೊಬ್ಬ ಕನ್ನಡಿಗನು ತನ್ನ ಕೊನೆಯುಸಿರಿರುವರೆಗೂ ಹೋರಾಟ ಮಾಡಲಿದ್ದಾನೆ. ಬಿಜೆಪಿಯು ಕರ್ನಾಟಕ ರಾಜ್ಯವನ್ನು ವಿಭಜಿಸಲು ಹಾಗೂ ನಮ್ಮ ಭೂ ಪ್ರದೇಶವನ್ನು ಕಬಳಿಕೆ ಮಾಡಲು ನಾವು ಬಿಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕರ್ನಾಟಕದ ಅಸ್ಮಿತೆ ಮೇಲೆ ಬಿಜೆಪಿ ಪೈಶಾಚಿಕ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದ ಜನ ಮೋದಿ ಹಾಗೂ ಅಮಿತ್ ಶಾ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮತಿಯೊಂದಿಗೆ ಮಹಾರಾಷ್ಟ್ರ ಸರ್ಕಾರವು ಹಾಡಹಗಲಲ್ಲೇ ಸಂವಿಧಾನದ ಕಗ್ಗೊಲೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

IPL_Entry_Point