Laxman Savadi Resign: ಬಿಜೆಪಿಯಿಂದ ದೂರ ಸರಿದ ಲಕ್ಷ್ಮಣ ಸವದಿ: ಇದು ಬೊಮ್ಮಾಯಿ, ಡಿಕೆ ಶಿವಕುಮಾರ್‌ ಪ್ರತಿಕ್ರಿಯೆ ಸರದಿ..
ಕನ್ನಡ ಸುದ್ದಿ  /  ಕರ್ನಾಟಕ  /  Laxman Savadi Resign: ಬಿಜೆಪಿಯಿಂದ ದೂರ ಸರಿದ ಲಕ್ಷ್ಮಣ ಸವದಿ: ಇದು ಬೊಮ್ಮಾಯಿ, ಡಿಕೆ ಶಿವಕುಮಾರ್‌ ಪ್ರತಿಕ್ರಿಯೆ ಸರದಿ..

Laxman Savadi Resign: ಬಿಜೆಪಿಯಿಂದ ದೂರ ಸರಿದ ಲಕ್ಷ್ಮಣ ಸವದಿ: ಇದು ಬೊಮ್ಮಾಯಿ, ಡಿಕೆ ಶಿವಕುಮಾರ್‌ ಪ್ರತಿಕ್ರಿಯೆ ಸರದಿ..

ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ವಿಫಲರಾಗಿರುವ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಿಧಾನ ಪರಿಷತ್‌ ಸ್ಥಾನ ಮತ್ತು ಬಿಜೆಪಿಯ ಪ್ರಾಥಮಿಕ ಸದ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಸವದಿ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಲಕ್ಷ್ಮಣ ಸವದಿ (ಸಂಗ್ರಹ ಚಿತ್ರ)
ಲಕ್ಷ್ಮಣ ಸವದಿ (ಸಂಗ್ರಹ ಚಿತ್ರ) (Verified Twitter)

ಬೆಂಗಳೂರು: ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ವಿಫಲರಾಗಿರುವ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಿಧಾನ ಪರಿಷತ್‌ ಸ್ಥಾನ ಮತ್ತು ಬಿಜೆಪಿಯ ಪ್ರಾಥಮಿಕ ಸದ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ತಮಗೆ ಗೌರವ ಕೊಡದ ಪಕ್ಷದಲ್ಲಿ ಇದ್ದು ಯಾವ ಪ್ರಯೋಜನವೂ ಇಲ್ಲ ಎಂದು ಲಕ್ಷ್ಮಣ ಸವದಿ ಹೇಳಿರುವುದು, ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಇದೀಗ ಲಕ್ಷ್ಮಣ ಸವದಿ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಸಮಾಧಾನಗೊಂಡಿರುವ ಲಕ್ಷ್ಮಣ ಸವದಿ ಅವರನ್ನು ಸಂಪರ್ಕಿಸಿ ಆತುರದ ನಿರ್ಧಾರ ತೆಗೆದುಕೊಳ್ಳದಿರುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಸವದಿ ಅವರು ಪಕ್ಷ ಬಿಡುವುದಿಲ್ಲ ಎಂಬ ಭರವಸೆ ಇರುವುದಾಗಿಯೂ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

''189 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಒಮ್ಮತವಿದೆ. ಟಿಕೆಟ್‌ ದೊರೆಯದ ಕಾರಣಕ್ಕೆ ಕೆಲವರು ಅಸಮಾಧಾನಗೊಳ್ಳುವುದು ಸಹಜ. ಅಸಮಾಧಾನಿತ ನಾಯಕರೊಂದಿಗೆ ಚರ್ಚೆ ಮಾಡಲಾಗುತ್ತದೆ. ನಾನು ಕೂಡ ಈ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ನಾನು ಈಗಾಗಲೇ ಲಕ್ಷ್ಮಣ ಸವದಿ ಅವರೊಂದಿಗೆ ಮಾತನಾಡಿದ್ದು, ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಕೇಳಿಕೊಂಡಿದ್ದೇನೆ.. '' ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಹೈಕಮಾಂಡ್‌ ಅತ್ಯಂತ ಪ್ರಬಲ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವು ನಿಶ್ಚಿತ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಪಕ್ಷ ನಮ್ಮ ಮೊದಲ ಪಟ್ಟಿಯನ್ನು ಕಂಡು ಬೆದರಿದೆ ಎಂಬುದಕ್ಕೆ, ಆ ಪಕ್ಷದ ನಾಯಕರ ಹೇಳಿಕೆಗಳೇ ಸಾಕ್ಷಿ ಎಂದು ಇದೇ ವೇಳೆ ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದರು.

ಡಿಕೆ ಶಿವಕುಮಾರ್‌ ಪ್ರತಿಕ್ರಿಯೆ:

ಇನ್ನು ಲಕ್ಷ್ಮಣ ಸವದಿ ರಾಜೀನಾಮೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಇದು ಬಿಜೆಪಿಯ ಅಂತರಿಕ ಬೆಳವಣಿಗೆ ಎಂದು ಹೇಳಿದ್ದಾರೆ. ''ಅಲ್ಲದೇ ಲಕ್ಷ್ಮಣ ಸವದಿ ಅವರು ಅವರು ನನ್ನನ್ನು ಇದುವರೆಗೂ ಸಂಪರ್ಕಿಸಿಲ್ಲ. ನಾನೂ ಕೂಡ ಅವರೊಂದಿಗೆ ಮಾತನಾಡುವ ಪ್ರಯತ್ನ ಮಾಡಿಲ್ಲ..'' ಎಂದು ಡಿಕೆ ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಮೇ 10 ಕರ್ನಾಟಕದಲ್ಲಿ ಬದಲಾವಣೆಯ ದಿನವಾಗಿದೆ. ನನ್ನ ಎಲ್ಲಾ ಸ್ನೇಹಿತರ ಮೇಲೆ ಈಗಾಗಲೇ ಐಟಿ, ಇಡಿ ರೇಡ್‌ ನಡೆಯುತ್ತಿವೆ. ಬಿಜೆಪಿ ನಮ್ಮನ್ನು ರಾಜಕೀಯವಾಗಿ ಟಾರ್ಗೆಟ್ ಮಾಡುತ್ತಿದ್ದು, ಬಿಜೆಪಿಯವರಿಗೆ ಸಂವಿಧಾನದ ಮೇಲೆ ಕಿಂಚಿತ್ತೂ ಗೌರವ ಇಲ್ಲ ಎಂದು ಡಿಕೆ ಶಿವಕುಮಾರ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ತೊರೆಯಲು ನಿರ್ಧರಿಸಿರುವ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬೇರೆ ರಾಜಕೀಯ ಪಕ್ಷ ಸೇರುವ ಕುರಿತು ಬಬೆಂಬಲಿಗರ ಅಭಿಪ್ರಾಯ ಕೇಳಿ ನಾಳೆಯೇ ತಮ್ಮ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ. ಆದರೆ ಡಿಕೆ ಶಿವಕುಮಾರ್‌ ಇಂತಹ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಹೇಳಿರುವುದು, ಸವದಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್‌ ಉತ್ಸುಕವಾಗಿಲ್ಲ ಎಂಬ ಚರ್ಚೆಗೆ ಇಂಬು ನೀಡಿದೆ.

ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. "ನಾನು ನನ್ನ ನಿರ್ಧಾರವನ್ನು ಮಾಡಿದ್ದೇನೆ. ನಾನು ಭಿಕ್ಷಾಪಾತ್ರೆ ಹಿಡಿದು ತಿರುಗುವವನಲ್ಲ. ನಾನು ಸ್ವಾಭಿಮಾನಿ ರಾಜಕಾರಣಿ. ನಾನು ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ.." ಎಂದು ಲಕ್ಷ್ಮಣ ಸವದಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Whats_app_banner