ಕನ್ನಡ ಸುದ್ದಿ  /  Karnataka  /  Cm Bommai Discusses With The World Bank About Making Karnataka As A Climate Resilient State

CM Bommai with World Bank: ಹವಾಮಾನ ವೈಪರೀತ್ಯ ನಿರೋಧಕ ರಾಜ್ಯವಾಗಿ ಕರ್ನಾಟಕ: ವಿಶ್ವಬ್ಯಾಂಕ್​​ನೊಂದಿಗೆ ಸಿಎಂ ಬೊಮ್ಮಾಯಿ ಚರ್ಚೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯವನ್ನು ಹವಾಮಾನ ವೈಪರೀತ್ಯ ನಿರೋಧಕವಾಗಿ ರೂಪಿಸುವ ಕುರಿತಂತೆ ಇಂದು ವಿಶ್ವಬ್ಯಾಂಕ್​ನ ಭಾರತದ ಕಂಟ್ರಿ ಡೈರೆಕ್ಟರ್ ಆಗಸ್ಟೆ ಟ್ಯಾನೊ ಕೊಮೆ ಅವರ ನೇತೃತ್ವದ ನಿಯೋಗದೊಂದಿಗೆ ಚರ್ಚಿಸಿದರು.

ವಿಶ್ವಬ್ಯಾಂಕ್​ನ ಭಾರತದ ಕಂಟ್ರಿ ಡೈರೆಕ್ಟರ್ ಆಗಸ್ಟೆ ಟ್ಯಾನೊ ಕೊಮೆ ಅವರ ನೇತೃತ್ವದ ನಿಯೋಗದೊಂದಿಗೆ ಸಿಎಂ ಬೊಮ್ಮಾಯಿ ಚರ್ಚೆ
ವಿಶ್ವಬ್ಯಾಂಕ್​ನ ಭಾರತದ ಕಂಟ್ರಿ ಡೈರೆಕ್ಟರ್ ಆಗಸ್ಟೆ ಟ್ಯಾನೊ ಕೊಮೆ ಅವರ ನೇತೃತ್ವದ ನಿಯೋಗದೊಂದಿಗೆ ಸಿಎಂ ಬೊಮ್ಮಾಯಿ ಚರ್ಚೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯವನ್ನು ಹವಾಮಾನ ವೈಪರೀತ್ಯ ನಿರೋಧಕವಾಗಿ ರೂಪಿಸುವ ಕುರಿತಂತೆ ಇಂದು ವಿಶ್ವಬ್ಯಾಂಕ್​ನ ಭಾರತದ ಕಂಟ್ರಿ ಡೈರೆಕ್ಟರ್ ಆಗಸ್ಟೆ ಟ್ಯಾನೊ ಕೊಮೆ ಅವರ ನೇತೃತ್ವದ ನಿಯೋಗದೊಂದಿಗೆ ಚರ್ಚಿಸಿದರು.

ಕರ್ನಾಟಕವನ್ನು ಹವಾಮಾನ ವೈಪರೀತ್ಯ ನಿರೋಧಕ ರಾಜ್ಯವಾಗಿ ರೂಪಿಸುವಲ್ಲಿ ಜಾಗತಿಕ ಮಟ್ಟದ ಪರಿಣತಿಯನ್ನು ಒದಗಿಸುವಲ್ಲಿ ವಿಶ್ವಬ್ಯಾಂಕ್​ನ ಸಹಯೋಗವನ್ನು ನೀಡುವಂತೆ ಮುಖ್ಯಮಂತ್ರಿಗಳು ಕೋರಿದರು.

ರಾಜ್ಯದಲ್ಲಿ ಕಳೆದ ಒಂದೂವರೆ ದಶಕದಲ್ಲಿ ಮೊದಲ ಏಳೆಂಟು ವರ್ಷ ತೀವ್ರ ಬರ ಪರಿಸ್ಥಿತಿ ಎದುರಾದರೆ, ಕಳೆದ ನಾಲ್ಕೈದು ವರ್ಷಗಳಿಂದ ತೀವ್ರ ಪ್ರವಾಹ, ಭೂಕುಸಿತ, ಸಮುದ್ರ ಕೊರೆತದಂತಹ ಪರಿಸ್ಥಿತಿ ತಲೆದೋರಿದೆ. ಒಂದೇ ವರ್ಷ ಪ್ರವಾಹ ಹಾಗೂ ಬರ ಪರಿಸ್ಥಿತಿಯನ್ನು ಎದುರಿಸಿದ ದಾಖಲೆಗಳೂ ರಾಜ್ಯದಲ್ಲಿವೆ. ಇದರಿಂದ ರಾಜ್ಯದಲ್ಲಿ ಬೆಳೆ, ಸಾರ್ವಜನಿಕ ಆಸ್ತಿಪಾಸ್ತಿಗೆ ತೀವ್ರ ನಷ್ಟವಾಗುವುದರೊಂದಿಗೆ ಜನಜೀವನವೇ ಅಸ್ತವ್ಯಸ್ತಗೊಳ್ಳುತ್ತಿದೆ. ಜೀವನೋಪಾಯಕ್ಕೆ ಅಡ್ಡಿಯುಂಟಾಗುತ್ತಿದೆ.

ಇದಲ್ಲದೆ ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಅತಿ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಶಾಶ್ವತ ಪರಿಹಾರ ಹಾಗೂ ವಿಪತ್ತು ನಿರ್ವಹಣೆಗೆ ಸೂಕ್ತ ಪೂರ್ವ ತಯಾರಿಯನ್ನು ಮಾಡಿಕೊಳ್ಳುವ ವ್ಯವಸ್ಥೆ ರೂಪಿಸಲು ಉದ್ದೇಶಿಸಿದೆ.

ರಾಜ್ಯದಲ್ಲಿ ಬೆಂಗಳೂರು ನಗರ ಪ್ರವಾಹ ನಿರ್ವಹಣೆ, ಬರ ಪರಿಸ್ಥಿತಿ ನಿರ್ವಹಣೆ, ಕಡಲಕೊರೆತದ ನಿರ್ವಹಣೆ ಹಾಗೂ ವಿಪತ್ತಿನ ಅಪಾಯವನ್ನು ತಗ್ಗಿಸುವುದು ಹಾಗೂ ವಿಪತ್ತು ನಿರ್ವಹಣೆಯ ವಿಷಯಗಳಲ್ಲಿ ವಿಶ್ವಬ್ಯಾಂಕಿನ ಸಹಯೋಗವನ್ನು ನಿರೀಕ್ಷಿಸುತ್ತಿದ್ದು, ಅದರಲ್ಲೂ ಬೆಂಗಳೂರು ಪ್ರವಾಹ ನಿರ್ವಹಣೆ ಹಾಗೂ ಕಡಲ ಕೊರೆತದ ನಿರ್ವಹಣೆ ಕುರಿತು ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದರು. ಯೋಜನೆಗೆ ಸಂಬಂಧಿಸಿದಂತೆ ತ್ವರಿತವಾಗಿ ಒಪ್ಪಂದ ಮಾಡಿಕೊಂಡು, ನಿಗದಿತ ಕಾಲಮಿತಿಯಲ್ಲಿ ಯೋಜನೆ ಜಾರಿಗೊಳಿಸಲು ಎಲ್ಲ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಸಮುದ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆಗೆ ವಿಶ್ವಬ್ಯಾಂಕಿನೊಂದಿಗೆ ಕೈಜೋಡಿಸುವ ಬಗ್ಗೆ ಈಗಾಗಲೇ ಆಯವ್ಯಯದಲ್ಲಿ ಘೋಷಿಸಲಾಗಿದ್ದು, ಕರ್ನಾಟಕ ರಾಜ್ಯವು ದೇಶದಲ್ಲಿಯೇ ಮೊದಲ ಬಾರಿಗೆ ಪರಿಸರ ಆಯವ್ಯಯ ಮಂಡಿಸಿದ ರಾಜ್ಯವಾಗಿದೆ. ಪರಿಸರ ನಾಶವನ್ನು ಅಂದಾಜು ಮಾಡಿ, ಅದನ್ನು ಭರ್ತಿ ಮಾಡುವ ಉದ್ದೇಶಕ್ಕೆ 100 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರದ ಪರಿಸರ ಸ್ನೇಹಿ ಕ್ರಮಗಳಿಗೆ ವಿಶ್ವಬ್ಯಾಂಕ್ ನ ಭಾರತದ ಕಂಟ್ರಿ ಡೈರೆಕ್ಟರ್ ಆಗಸ್ಟೆ ಟ್ಯಾನೊ ಕೊಮೆ (Auguste Tano Kouame) ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಪತ್ತು ನಿರೋಧಕ ರಾಜ್ಯ ನಿರ್ಮಾಣ ಯೋಜನೆಯಲ್ಲಿ ವಿಶ್ವಬ್ಯಾಂಕ್ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ. ವಿಪತ್ತು ನಿರ್ವಹಣೆಯ ಕುರಿತಾದ ಸಮಗ್ರ ಯೋಜನೆ ಇದಾಗಿದ್ದು, ಇದನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎಂ.ಎಸ್. ಶ್ರೀಕರ್, ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಆಯುಕ್ತ ಮನೋಜ್ ರಾಜನ್ ಉಪಸ್ಥಿತರಿದ್ದರು.

IPL_Entry_Point

ವಿಭಾಗ