ಆತಂಕದಲ್ಲಿ ಇದ್ದೀರಂತೆ ಹೌದಾ? ಹಾಗೆ ಕಾಣ್ತೀನಾ ಎಂದ CM; ಮೂಡಾ ಮಾಜಿ ಆಯುಕ್ತ ಸಸ್ಪೆಂಡ್ ಬಗ್ಗೆ ಹೇಳಿಕೆ ಬದಲಿಸಿದ ಸಿದ್ದರಾಮಯ್ಯ
Chief Minister Siddaramaiah: ಮೂಡಾ ಮಾಜಿ ಆಯುಕ್ತ ಅಮಾನತಿನ ಬಗ್ಗೆ ಗೊತ್ತಿಲ್ಲ ಎಂದಿದ್ದ ಕೆಲವೇ ನಿಮಿಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯನ್ನು ಬದಲಿಸಿದ್ದಾರೆ. ಅಲ್ಲದೆ, ಆತಂಕದಲ್ಲಿದ್ದರಂತೆ ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ.
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮಾಜಿ ಆಯುಕ್ತ ಜಿಟಿ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಮಾನತು ವಿಚಾರ ನನಗೆ ಗೊತ್ತೇ ಇಲ್ಲ ಎಂದು ತಿಳಿಸಿದ್ದಾರೆ. 2009ರ ಹಿಂದಿನ ಬಡಾವಣೆಗೆ 50:50 ಅನುಪಾತ ಅನ್ವಯ ಆಗುವುದಿಲ್ಲ ಎಂಬ ಅಂಶ ಉಲ್ಲೇಖದ ಬಗ್ಗೆ ನನಗೆ ಮಾಹಿತಿಯೂ ಇಲ್ಲ ಎಂದಿದ್ದಾರೆ.
ಪ್ರಸ್ತುತ ಆದೇಶದಲ್ಲಿ ಏನಿದೆ? ಅದರ ಅಂಶಗಳು ಏನು ಎಂಬುದನ್ನು ನೋಡುತ್ತೇನೆ. ಗೊತ್ತಿಲ್ಲದೆ ನಾನು ಹೇಗೆ ವಿವರವಾಗಿ ಹೇಳಲು ಸಾಧ್ಯ. ಆದೇಶ ನೋಡಿದ ಬಳಿಕ ಅದರ ಮಾಹಿತಿ ತಿಳಿದು, ಏನಿದೆ ಎಂಬುದನ್ನು ಆಮೇಲೆ ಅದರ ಕುರಿತು ಮಾತನಾಡುತ್ತೇನೆ ಎಂದು ಚಾಮುಂಡಿ ಬೆಟ್ಟಕ್ಕೆ ತೆರಳುವ ಮುನ್ನಾ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಆದರೆ ಇದೇ ವೇಳೆ ಅಮಾನತು ಗೊತ್ತಿದೆ ಎಂದು ಹೇಳುವ ಮೂಲಕ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ.
ಮೂಡಾ ಮಾಜಿ ಆಯುಕ್ತ ಅಮಾನತಿನ ಬಗ್ಗೆ ಗೊತ್ತೇ ಇಲ್ಲ ಎಂದಿದ್ದ ಸಿದ್ದು ಕೆಲವೇ ನಿಮಿಷಗಳಲ್ಲಿ ಹೇಳಿಕೆ ಬದಲಿಸಿದರು. ಅಮಾನತು ಮಾಡಿರುವುದು ಮಾತ್ರ ಗೊತ್ತಿದೆ. ಆದೇಶದ ಪ್ರತಿಯಲ್ಲಿ ಏನಿದೆ ಎಂಬುದಕ್ಕೆ ಗೊತ್ತಿಲ್ಲ. ಇಬ್ಬರು ಆಯುಕ್ತರ ಪಾತ್ರ ಏನಿದೆ ಎಂಬುದು ತನಿಖಾ ವರದಿಯಲ್ಲಿ ತಿಳಿಯಲಿದೆ. ಒಬ್ಬರನ್ನು ಮಾತ್ರ ಯಾಕೆ ಅಮಾನತು ಮಾಡಿದ್ದೀರಾ? ಹಿಂದಿನ ಆಯುಕ್ತ ನಟೇಶ್ ಅವರನ್ನು ಯಾಕೆ ಅಮಾನತು ಮಾಡಿಲ್ಲ ಎಂಬುದಕ್ಕೆ, ವರದಿ ಬರದೇ ಹೇಗೆ ಉತ್ತರ ಕೊಡಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಆತಂಕಲ್ಲಿದ್ದೀರಂತೆ ಹೌದಾ? ಸಿದ್ದು ಹೇಳಿದ್ದೇನು?
ಇಂದು ಚಾಮುಂಡಿ ತಾಯಿಯ ದರ್ಶನ ವಿಚಾರವಾಗಿ ಮಾತನಾಡಿದ ಸಿಎಂ, ಬೆಟ್ಟಕ್ಕೆ ಹೋದ ಮೇಲೆ ಚಾಮುಂಡಿ ದೇವಿಯ ದರ್ಶನ ಮಾಡುತ್ತೇನೆ. ಇದರಲ್ಲಿ ವಿಶೇಷ ಏನಿದೆ ಹೇಳಿ? ಸಭೆಗೆ ಹೋಗುತ್ತಿದ್ದೇನೆ, ಹೀಗಾಗಿ ದರ್ಶನ ಮಾಡುತ್ತಿದ್ದೇನೆ ಅಷ್ಟೇ ಎಂದರು. ಅಲ್ಲದೆ, ಮೂಡಾ ವಿಚಾರವಾಗಿ ಆತಂಕಕ್ಕೆ ಒಳಗಾಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಾನು ಯಾವುದೇ ಆತಂಕ, ಗೊಂದಲ ಇಲ್ಲ. ನನ್ನನ್ನು ನೋಡಿದರೆ ಟೆನ್ಷನ್ ಇರುವ ರೀತಿ ಕಾಣುತ್ತೀನಾ? ನಾನು ಯಾವಗಲೂ ಹೀಗೆ ಇರುತ್ತೇನೆ. ಇವತ್ತೇನು ವಿಶೇಷ ಇಲ್ಲ. ಬಿಜೆಪಿಯವರು ಹೇಳಬಾರದಷ್ಟು ಸುಳ್ಳನ್ನು ನನ್ನ ಮೇಲೆ ಹೇಳಿದ್ದಾರೆ. ಹೀಗಾಗಿ ನಾನು ಟೆನ್ಷನ್ನಲ್ಲಿದ್ದೇನೆ ಎಂದು ಹೇಳುತ್ತಿದ್ದಾರೆ ಅಷ್ಟೇ ಎಂದರು.
ದೇಶಪಾಂಡೆ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ
ಸಿದ್ದರಾಮಯ್ಯ ಅನುಮತಿ ಕೊಟ್ಟರೇ ಸಿಎಂ ಆಗುತ್ತೇನೆ ಎಂಬ ಆರ್ವಿ ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದು, ಸಿಎಂ ಮಾಡುವುದು ಯಾರು ಹೇಳಿ. ಶಾಸಕರು ಹಾಗೂ ಹೈಕಮಾಂಡ್. ಅವರು ಸಿಎಂ ಯಾರಾಗಬೇಕು ಎಂದು ತೀರ್ಮಾನ ಮಾಡುತ್ತಾರೆ. ನಾನು ಹೇಗೆ ಸಿಎಂ ಮಾಡಲಿ ಎಂದು ನಗುತ್ತಾ ಹೊರಟರು. ಆರ್ವಿ ದೇಶಪಾಂಡೆಯವರು ಸಹ ಸಿಎಂ ಸ್ಥಾನಕ್ಕೆ ಟವೆಲ್ ಹಾಕಿದ್ದಾರೆ. ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನೂ ಕೂಡ ಮುಖ್ಯಮಂತ್ರಿ ಆಗುತ್ತೇನೆ ಎಂದು ಸೆಪ್ಟೆಂಬರ್ 1ರಂದು ಹೇಳಿಕೆ ನೀಡಿದ್ದರು.
ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ಸಿದ್ದರಾಮಯ್ಯ ಹಣೆಗೆ ಅರ್ಚಕರು ಕುಂಕುಮ ಇಟ್ಟರು. ಬಳಿಕ ಚಾಮುಂಡೇಶ್ವರಿ ಪಾದುಕೆಗೆ ನಮಸ್ಕರಿಸಿದ ಸಿದ್ದರಾಮಯ್ಯ, ಗಣಪತಿ, ಆಂಜನೇಯ ಸೇರಿದಂತೆ ಇತರ ದೇವರ ಬಳಿಯೂ ಪ್ರಾರ್ಥನೆ ಮಾಡಿದರು. ಬಳಿಕ ಚಾಮುಂಡೇಶ್ವರಿ ದೇಗುಲದ ಮುಂಭಾಗದಲ್ಲಿ ಈಡುಗಾಯಿ ಒಡೆದರು. ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಬಳಿಕ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಭಾಗಿಯಾದರು.