ದುಬಾರಿಯಾಗಲಿದೆ ಆಸ್ತಿ ನೋಂದಣಿ; ಕರ್ನಾಟಕ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಅ.1ರಿಂದ ಜಾರಿ
Karnataka Property Guidance Value Hike: ಶೇ. 20 ರಿಂದ ಶೇ 50ರವರೆಗೂ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಹೆಚ್ಚಿಸಲಾಗಿದ್ದು, ಸರಾಸರಿ ಶೇ 30ರಷ್ಟು ಹೆಚ್ಚಳ ಮಾಡಲಾಗಿದೆ. ಇದು ಆಸ್ತಿ ನೋಂದಣಿ ಮಾಡಿಕೊಳ್ಳುವವರಿಗೆ, ಆಸ್ತಿ ಖರೀದಿದಾರರಿಗೆ ದೊಡ್ಡ ಮೊತ್ತದ ಹೊರೆ ಉಂಟು ಮಾಡಲಿದೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಹೆಚ್ಚಿಸಿದ್ದು, ಪರಿಷ್ಕೃತ ಮಾರ್ಗಸೂಚಿ ದರಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.
ಇಂದು (ಸೆ.19, ಮಂಗಳವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಪರಿಷ್ಕೃತ ಮಾರ್ಗಸೂಚಿ ದರಗಳ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ. ಶೀಘ್ರದಲ್ಲೇ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ಶೇ. 20 ರಿಂದ ಶೇ 50ರವರೆಗೂ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಹೆಚ್ಚಿಸಲಾಗಿದ್ದು, ಸರಾಸರಿ ಶೇ 30ರಷ್ಟು ಹೆಚ್ಚಳ ಮಾಡಲಾಗಿದೆ. ಹಿಂದಿನ 5 ವರ್ಷಗಳಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳ ಪರಿಷ್ಕರಣೆ ಆಗಿರಲಿಲ್ಲ. ಹೀಗಾಗಿ ಹಿಂದೆ ದರಗಳಲ್ಲಿ ಬಹಳ ವ್ಯತ್ಯಾಸಗಳಿದ್ದವು. ಈಗ ಆ ವ್ಯತ್ಯಾಸಗಳನ್ನು ಸರಿಪಡಿಸುವ ಪ್ರಯತ್ನ ಮಾಡಲಾಗುವುದು. ಸ್ಥಿರಾಸ್ತಿಗಳ ಮಾರ್ಗಸೂಚಿ ದರದ ಹೆಚ್ಚಳದಿಂದಾಗಿ ಕಪ್ಪು ಹಣದ ವಹಿವಾಟಿನ ನಿಯಂತ್ರಣಕ್ಕೆ ಸಹಾಯವಾಗಲಿದೆ. ಎಂದು ಹೇಳಿದರು.
ದುಬಾರಿಯಾಗಲಿದೆ ಆಸ್ತಿ ನೋಂದಣಿ
2018-19ರ ಬಳಿಕ ಮೊದಲ ಬಾರಿಗೆ ಸರ್ಕಾರವು ಮಾರ್ಗಸೂಚಿ ದರ ಏರಿಕೆ ಮಾಡಲು ಮುಂದಾಗಿದೆ. ಆದರೆ, ಇದು ಆಸ್ತಿ ನೋಂದಣಿ ಮಾಡಿಕೊಳ್ಳುವವರಿಗೆ, ಆಸ್ತಿ ಖರೀದಿದಾರರಿಗೆ ದೊಡ್ಡ ಮೊತ್ತದ ಹೊರೆ ಉಂಟು ಮಾಡಲಿದೆ. ಆಸ್ತಿ ದರಗಳು ದುಬಾರಿಯಾಗಿ ನಿವೇಶನ ಅಥವಾ ಮನೆ ಖರೀದಿಗೆ ಹಿಂದೇಟು ಹಾಕುವಂತಹ ಪರಿಸ್ಥಿತಿಯೂ ಉಂಟಾಗಲಿದೆ.
ಮಾರ್ಗಸೂಚಿ ದರ ಎಂದರೇನು?
ಆಸ್ತಿಯೊಂದನ್ನು ನೋಂದಣಿ ಮಾಡಲು ನಿಗದಿಪಡಿಸಿದ ಕನಿಷ್ಠ ಮೌಲ್ಯವನ್ನು ಮಾರ್ಗದರ್ಶಿ ದರ ಎನ್ನಬಹುದು. ಇದಕ್ಕಿಂತ ಕಡಿಮೆ ದರಕ್ಕೆ ನೋಂದಣಿ ಮಾಡಲು ಅವಕಾಶ ಇರುವುದಿಲ್ಲ. ಆಸ್ತಿ ಮಾಲೀಕರು ಇದಕ್ಕಿಂತ ಹೆಚ್ಚು ದರಕ್ಕೆ ಮಾರಾಟ ಮಾಡಬಹುದು. ಆದರೆ, ನೋಂದಣಿ ಮಾಡಲು ಇದು ಸರಕಾರ ನಿಗದಿಪಡಿಸಿದ ಕನಿಷ್ಠ ದರ. ಬೆಂಗಳೂರಿನಲ್ಲಿ ಎಂಜಿ ರಸ್ತೆ, ಜಯನಗರ ಇತ್ಯಾದಿ ಪ್ರದೇಶಗಳಿಗೆ ಹೆಚ್ಚು ಮಾರ್ಗಸೂಚಿ ದರ ನಿಗದಿಯಾಗಿರುತ್ತದೆ. ಇದನ್ನು ಸಿದ್ಧ ಗಣಕ ಮೌಲ್ಯ ಅಥವಾ ರೆಡಿ ರೆಕಾನರ್ ವ್ಯಾಲ್ಯೂ ಎಂದೂ ಕರೆಯುತ್ತಾರೆ.
ಪ್ರತಿಯೊಂದು ರಾಜ್ಯದಲ್ಲಿಯೂ ಇರುವ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಆಸ್ತಿಯ ಮಾರ್ಗದರ್ಶಿ ಮೌಲ್ಯವನ್ನು ಪ್ರಕಟಿಸುತ್ತದೆ. ಈ ಮೌಲ್ಯವು ಸ್ಥಳದಿಂದ ಸ್ಥಳಕ್ಕೆ, ಕಟ್ಟಡದಿಂದ ಕಟ್ಟಡಕ್ಕೆ ಬೇರೆಬೇರೆ ರೀತಿಯಾಗಿ ಇರಬಹುದು. ಕೃಷಿ ಜಮೀನು, ನಿವೇಶನ ಮತ್ತು ಕಟ್ಟಡಗಳು, ಭೂಪರಿವರ್ತಿತ ಜಮೀನುಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ಇನ್ನಿತರ ಸ್ಥಿರಾಸ್ತಿಗಳಿಗೆ ಸಂಬಂಧಪಟ್ಟ ದಸ್ತಾವೇಜುಗಳಾದ ಕ್ರಯ, ದಾನ, ಅದಲು- ಬದಲು, ವರ್ಗಾವಣೆ, ಸೆಟ್ಲ್‌ಮೆಂಟ್, ಸಾಮಾನ್ಯ ಅಧಿಕಾರ ಪತ್ರ, ಗುತ್ತಿಗೆ, ಸ್ವಾಧೀನಸಹಿತ ಕ್ರಯದ ಕರಾರು, ಜಂಟಿ ಅಭಿವೃದ್ಧಿ ಕರಾರು, ಸ್ವಾಧೀನಸಹಿತ ಆಧಾರ ಪತ್ರ ಇತರೆ ವ್ಯವಹಾರಕ್ಕೆ ಮಾರ್ಗಸೂಚಿ ದರವೇ ಆಧಾರ.
ಕರ್ನಾಟಕ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ತಿಳಿಯುವುದು ಹೇಗೆ?
ಕರ್ನಾಟಕ ಸರ್ಕಾರದ ಕಾವೇರಿ ವೆಬ್‌ಸೈಟ್ https://www.kaveri.karnataka.gov.in/ ಗೆ ಭೇಟಿ ನೀಡಿ ಯಾವ ಪ್ರದೇಶಕ್ಕೆ ಎಷ್ಟು ಮಾರ್ಗಸೂಚಿ ದರ (Karnataka Property Guidance Value Hike ) ನಿಗದಿಪಡಿಸಲಾಗಿದೆ ಎಂದು ತಿಳಿಯಬಹುದು.