ಬಜೆಟ್ ಮಂಡನೆಗೆ ಸಿದ್ಧತೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ; ಸಾಲದ ಅನಿವಾರ್ಯತೆ ಸೃಷ್ಟಿಸಿದ ಗ್ಯಾರಂಟಿಗಳು
Karnataka Budget 2024-25: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರರದ ಶಾಸಕ ಬಸವರಾಜ ರಾಯರೆಡ್ಡಿ ಅವರು, ಗ್ಯಾರಂಟಿ ಯೋಜನೆಗಳು ಸರ್ಕಾರದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿರುವುದನ್ನು ಒಪ್ಪಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ರ ಹಣಕಾಸು ವರ್ಷದ ಬಜೆಟ್ ಮಂಡನೆಗೆ ಸಿದ್ದತೆ ಆರಂಭಿಸಿದ್ದಾರೆ. ಈ ಸಾಲಿನ ಬಜೆಟ್ ಗಾತ್ರ 3.7 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಆದರೆ ಬಜೆಟ್ ಗಾತ್ರಕ್ಕೆ ಅನುಗುಣವಾಗಿ ಆದಾಯ ಸಂಗ್ರಹಣೆಯಾಗುತ್ತಿಲ್ಲ. ಹೀಗಾಗಿ ಸರ್ಕಾರ ಸಾಲದ ಮೊರೆ ಹೋಗುವುದು ಅನಿವಾರ್ಯ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.
ಈ ಬಾರಿಯ ಬಜೆಟ್ ಫೆಬ್ರುವರಿ 16ರಂದು ಮಂಡನೆಯಾಗುವ ಸಾಧ್ಯತೆಗಳಿವೆ. ಫೆ.12ರಿಂದ ವಿಧಾನಸಭಾ ಅಧಿವೇಶನ ಆರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 15ನೇ ಬಜೆಟ್ ಮಂಡಿಸಲಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಹಜವಾಗಿಯೇ ಕುತೂಹಲ ಮೂಡಿಸಿದೆ.
ಇದನ್ನೂ ಓದಿ | ಬೆಂಗಳೂರಿನ ಈ 2 ಜಂಕ್ಷನ್‌ಗಳಲ್ಲಿ ಕಡಿಮೆಯಾಯ್ತು ಟ್ರಾಫಿಕ್ ಜಾಮ್; ಸಂಚಾರಿ ಪೊಲೀಸರು ಅನುಸರಿಸಿದ ಮಾರ್ಗ ಹೀಗಿತ್ತು
ಸಿಎಂ ಕಳೆದ ಬುಧವಾರದಿಂದಲೇ ಇಲಾಖಾವಾರು ಚರ್ಚೆ ಆರಂಭಿಸಲಿದ್ದಾರೆ. ಆದಾಯ ಸಂಗ್ರಹಣೆ ಗುರಿ ತಲುಪಲು ಸಾಧ್ಯವಾಗದಿದ್ದರೂ ಬಜೆಟ್ ಗಾತ್ರ ಸ್ವಾಭಾವಿಕವಾಗಿ ಹಿಗ್ಗಲಿದೆ. 2023ರಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 3.09 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದ್ದರು. ನಂತರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಗಾತ್ರವು 3.27 ಲಕ್ಷ ಕೋಟಿಗೆ ಹೆಚ್ಚಳವಾಯಿತು. ಸರ್ಕಾರದ ಮೂಲಗಳ ಪ್ರಕಾರ ಹಿಂದಿನ ಬಜೆಟ್ ಗಾತ್ರಕ್ಕಿಂತ ಶೇ.13ರಷ್ಟು ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದೆ.
ಸರ್ಕಾರದ ಆರ್ಥಿಕ ಸ್ಥಿತಿ ಮೇಲೆ ಗ್ಯಾರಂಟಿ ಪರಿಣಾಮ
ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರರದ ಶಾಸಕ ಬಸವರಾಜ ರಾಯರೆಡ್ಡಿ ಅವರ ಪ್ರಕಾರ, ಐದು ಗ್ಯಾರಂಟಿಗಳು ಸರ್ಕಾರದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿರುವುದನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿಧಾನವಾಗಿ ಮತ್ತು ಹಂತ ಹಂತವಾಗಿ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದರೂ, 2023-24ನೇ ಸಾಲಿನಲ್ಲಿ ಕನಿಷ್ಠ 20 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲೇಬೇಕಾಗಿದೆ. ಈ ಮೊತ್ತವನ್ನು 6-8 ತಿಂಗಳ ವೆಚ್ಚ ಎಂದು ಭಾವಿಸಬಹುದು. ಆದರೆ 2024-25ನೇ ಸಾಲಿನಲ್ಲಿ 12 ತಿಂಗಳ ಅವಧಿಗೆ ಜಾರಿಗೊಳಿಸಬೇಕಾಗಿರುವುದರಿಂದ 58 ಸಾವಿರ ಕೋಟಿ ರೂಪಾಯಿಗಳ ಅವಶ್ಯಕತೆ ಇದೆ ಎಂದು ಆರ್ಥಿಕ ಇಲಾಖೆ ಹೇಳುತ್ತದೆ.
ಈ ಭಾರಿ ಗಾತ್ರದ ಸಂಪನ್ಮೂಲವನ್ನು ಸರ್ಕಾರ ಹೇಗೆ ಕ್ರೋಢೀಕರಿಸುತ್ತದೆ ಎನ್ನುವುದು ಸದ್ಯ ಯಕ್ಷ ಪ್ರಶ್ನೆಯಾಗಿದೆ. ಮುಖ್ಯಮಂತ್ರಿ ಅವರು ಅಂತಿಮ ಹಂತದ ಚರ್ಚೆ ಆರಂಭಿಸುವುದಕ್ಕೂ ಮುನ್ನ ರಾಯರೆಡ್ಡಿ ಅವರು ವಿವಿಧ ಇಲಾಖೆಗಳ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚೆ ಆರಂಭಿಸಿದ್ದಾರೆ.
ಸಾಲದ ಮೊರೆ ಹೋಗುವುದು ಅನಿವಾರ್ಯ
ಸಂಪನ್ಮೂಲ ಕ್ರೋಢೀಕರಣವೇ ಸರ್ಕಾರಕ್ಕೆ ಪ್ರಮುಖ ಸಮಸ್ಯೆಯಾಗಿದೆ. ಆದಾಯ ತಂದು ಕೊಡುವ ಇಲಾಖೆಗಳು ಗುರಿ ತಲುಪುವುದು ಅಸಾಧ್ಯ. ವಾಣಿಜ್ಯ ತೆರಿಗೆ ಇಲಾಖೆಗೆ 1.01 ಲಕ್ಷ ಕೋಟಿ ರೂಪಾಯಿ ಸಂಗ್ರಹದ ಗುರಿ ನಿಗದಿಪಡಿಸಲಾಗಿತ್ತಾದರೂ, 95,000 ಕೋಟಿ ರೂಪಾಯಿ ಮಾತ್ರ ಸಂಗ್ರಹ ಮಾಡಬಹುದು. ಹೀಗೆ ಒಟ್ಟಾರೆ 1.7 ಲಕ್ಷ ಕೋಟಿ ರೂ.ಗಳ ಸಂಗ್ರಹದ ಗುರಿ ಹಾಕಿಕೊಳ್ಳಲಾಗಿತ್ತಾದರೂ, 1.6 ಲಕ್ಷ ಕೋಟಿ ಗುರಿ ತಲುಪಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ | ಬೆಂಗಳೂರು ಸ್ಯಾಂಕಿ ಲೇಕ್‌ಗಿರೋ ಅಭಿವೃದ್ಧಿ ಭಾಗ್ಯ ನನಗೆ ಏಕಿಲ್ಲ? ಕೇಳಿಸದೇ ಪುರಾತನ ಹಲಸೂರು ಕೆರೆಯ ನೋವಿನ ಕರೆ
ಸಾಲದ ಮೊತ್ತ ಯಾವುದೇ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕಿಂತ ಶೇ.25ರಷ್ಟನ್ನು ಮೀರುವಂತಿಲ್ಲ. ಆದರೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ 27 ಲಕ್ಷ ಕೋಟಿ ರೂ ದಾಟಿದ್ದು, ಸಾಲಕ್ಕೆ ಅವಕಾಶಗಳಿವೆ ಎಂದು ಹೇಳಲಾಗುತ್ತಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಹೆಚ್ಚಳ ಕಾಣುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಸಾಲದ ಮೊತ್ತ ಮಿತಿಯಲ್ಲಿದ್ದರೆ ರಾಜ್ಯದ ಆರ್ಥಿಕ ದೃಷ್ಟಿಯಿಂದ ಕ್ಷೇಮ. ಈ ಮಧ್ಯೆ ರಾಜ್ಯದಿಂದ ಕೇಂದ್ರಕ್ಕೆ 4 ಲಕ್ಷ ಕೋಟಿ ರೂಪಾಯಿವರೆಗೆ ಜಿಎಸ್ ಟಿ ಸಂಗ್ರಹಿಸಿಕೊಡಲಾಗುತ್ತಿದ್ದರೂ ಹಿಂತಿರುಗಿ ಬರುತ್ತಿರುವ ಸಹಾಯಧನ ಅತ್ಯಲ್ಪ. ಇತ್ತೀಚೆಗಷ್ಟೇ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ಕುರಿತು ಧ್ವನಿ ಎತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಆರ್ಥಿಕ ತಜ್ಞರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ಸರಿದೂಗಿಸಿಕೊಂಡು ಹೋಗುತ್ತಾರೆ ಎಂದು ಕಾದುನೋಡಬೇಕಿದೆ.