ಹೃದಯಾಘಾತ ಸೇರಿ ಹೆಚ್ಚುತ್ತಿರುವ ಅಸಹಜ ಸಾವುಗಳ ಸಂಬಂಧ ರಾಜಾರಾಂ ತಲ್ಲೂರು ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದನೆ; ಅಗತ್ಯ ಕ್ರಮದ ಭರವಸೆ
ಹಠಾತ್ ಕುಸಿದು ಸಾವು, ಹೃದಯಾಘಾತ ಇತ್ಯಾದಿ ಅಸಹಜವಾಗಿ ರಾಜ್ಯದಲ್ಲಿ ಹೆಚ್ಚುತ್ತಿರುವ ಸಾವುಗಳ ಸಂಬಂಧ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಬರೆದಿದ್ದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದೀಚೆಗೆ ರಾಜ್ಯದಲ್ಲಿ ಎಲ್ಲೆಡೆ ಹಠಾತ್ ಕುಸಿದು ಬಿದ್ದು ಸಾವು, ಹೃದಯಾಘಾತ, ಮೆದುಳಿನ ಲಕ್ವಾ ಮತ್ತಿತರ ಕಾರಣಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಜನರು ಸಾವಿಗೀಡಾಗುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಉತ್ಪಾದಕ ಪ್ರಾಯ ವರ್ಗದವರಾಗಿದ್ದು, ಪ್ರತಿ ಸಾವು ಹಲವಾರು ಕುಟುಂಬಗಳನ್ನು ಆರ್ಥಿಕ-ಸಾಮಾಜಿಕ ಸಮಸ್ಯೆಗಳಿಗೆ ತಳ್ಳುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರಕರ್ತ ರಾಜಾರಾಂ ತಲ್ಲೂರು ಅವರು ಜನಪ್ರತಿನಿಧಿಗಳಿಗೆ ಬರೆದಿದ್ದ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ.
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಇತ್ತೀಚೆಗೆ ರಾಜ್ಯದಲ್ಲಿ ಹೃದಯಾಘಾತ, ಹೃದಯಸ್ತಂಭನ, ಮೆದುಳು ಸಂಬಂಧಿ, ನರ ಸಂಬಂಧಿ ಮತ್ತಿತರ ಕಾರಣಗಳಿಂದಾಗಿ ಯುವ ಜನರು ಹಠಾತ್ ಸಾವಿಗೀಡಾಗುತ್ತಿರುದು ದಿನಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದು, ಪ್ರತಿ ಸಾವು ಅವರ ಅವಲಂಬಿತ ಕುಟುಂಬಗಳನ್ನು ಆರ್ಥಿಕ-ಸಾಮಾಜಿಕ ಸಮಸ್ಯೆಗಳಿಗೆ ತಳ್ಳುತ್ತಿದೆ ಎಂದು ತಿಳಿಸಿರುತ್ತಾರೆ. ಈ ಸಾವುಗಳು ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳ ಕಾರಣಕ್ಕೆ ಸಂಭವಿಸುತ್ತಿರಬಹದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದ್ದರಿಂದ ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಇಂತಹ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿರುತ್ತಾರೆ.
ಆದ್ದರಿಂದ ಇಂತಹ ಹಠಾತ್ ಸಾವುಗಳ ಕುರಿತಂತೆ ಹಾಗೂ ಮುಂದೆ ಈ ರೀತಿಯ ಸಾವುಗಳು ಸಂಭವಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮರ್ಪಕ ಸಂಶೋಧನೆ ನಡೆಸಲು ಒಂದು ತಜ್ಞರ ಹಾಗೂ ವಿಜ್ಞಾನಿಗಳ ಸಮಿತಿಯನ್ನು ರಚಿಸಿ, ವರದಿ ಪಡೆದು ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಪತ್ರದ ಮೂಲಕ ತಿಳಿಸಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ
ಹೃದಯ, ನರ ಮತ್ತು ಮೆದುಳು ಸಂಬಂಧಿ ಕಾಯಿಲೆಗಳಿಂದ ಹಠಾತ್ ಸಾವುಗಳು ವರದಿಯಾಗುತ್ತಿದ್ದು, ಈ ಸಾವುಗಳು ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡಪರಿಣಾಮದಿಂದ ಉಂಟಾಗುತ್ತಿರಬಹುದು ಎಂದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಠಾತ್ ಸಾವುಗಳ ಕುರಿತು ಅಧ್ಯಯನ ನಡೆಸಿ, ಮುಂದೆ ಇಂತಹ ಸಾವುಗಳು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಸಮರ್ಪಕ ಸಂಶೋಧನೆ ನಡೆಸಲು ತಜ್ಞರು ಹಾಗೂ ವಿಜ್ಞಾನಿಗಳನ್ನು ಒಳಗೊಂಡ ಒಂದು ಸಮಿತಿ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಸಮಿತಿ ವರದಿ ಆಧರಿಸಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಸಮಸ್ಯೆಯ ಕುರಿತು ಗಮನ ಸೆಳೆದ ಹಿರಿಯ ಪತ್ರಕರ್ತರಾದ ಶ್ರೀ ರಾಜಾರಾಂ ತಲ್ಲೂರು ಅವರಿಗೆ ಧನ್ಯವಾದಗಳು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಪ್ರತಿಕ್ರಿಯಿಸಿದ್ದಾರೆ.
ರಾಜಾರಾಂ ತಲ್ಲೂರು ಅವರು ಪತ್ರದಲ್ಲಿ ಉಲ್ಲೇಖಿಸಿದ್ದ ಪ್ರಮುಖ ಕೋರಿಕೆಗಳು
- ಅಸಹಜವಾದ ಹಠಾತ್ ಕುಸಿದು ಸಾವು, ಎಳೆಯರ ಹೃದಯಾಘಾತದ ಸಾವಿನ ಪ್ರಕರಣಗಳನ್ನು ಅಂಕಿಸಂಖ್ಯೆ ಸಹಿತ ದಾಖಲಿಸಿಕೊಳ್ಳಲು ಮತ್ತು ಅವಕ್ಕೆ ಕಾರಣ ಪತ್ತೆಗಾಗಿ ಆವಶ್ಯಕ ವೈದ್ಯಕೀಯ ಸಂಶೋಧನೆಗಳನ್ನು ಕೈಗೆತ್ತಿಕೊಳ್ಳುವಂತೆ ರಾಜ್ಯದ ವೈದ್ಯಕೀಯ ಸಂಶೋಧನಾ ಸಂಸ್ಥೆಗಳಿಗೆ ತಾವು ಆದೇಶ ನೀಡಬೇಕು.
- ಕೋವಿಡ್ ಅಥವಾ ಕೋವಿಡ್ ಲಸಿಕೆಯ ನಿರೀಕ್ಷಿತ ಅಡ್ಡಪರಿಣಾಮಗಳ ಪಟ್ಟಿಯಲ್ಲಿ ಇರುವ ಎಲ್ಲ ಸಂಭಾವ್ಯ ರೋಗಗಳಿಗೆ ತುತ್ತಾದವರು ಮತ್ತು ಬಲಿಯಾದವರ ಅಂಕಿಸಂಖ್ಯೆಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಬೇಕು ಮತ್ತು ಈ ನಿಟ್ಟಿನಲ್ಲಿ ತಮ್ಮ ತಮ್ಮ ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗುವ ಅಂತಹ ಎಲ್ಲ ಕೇಸ್‌ಗಳನ್ನು ಸರ್ಕಾರಕ್ಕೆ ನಿಯಮಿತವಾಗಿ ವರದಿ ಮಾಡುವಂತೆ ಖಾಸಗಿ ವೈದ್ಯಕೀಯ ವ್ಯವಸ್ಥೆಗಳಿಗೂ ತಾವು ಆದೇಶ ನೀಡಬೇಕು.
- ದುಬಾರಿ ಮತ್ತು ದೀರ್ಘಕಾಲಿಕ ಚಿಕಿತ್ಸೆ ಬೇಡುವ ಗಿಲ್ಲಾನ್ ಬಾರೆ ಸಿಂಡ್ರೋಮ್ (GBS) ಮತ್ತು ಟ್ರಾನ್ಸ್‌ವರ್ಸ್ ಮಯಲೈಟಿಸ್‌ನಂತಹ ನರಸಂಬಂಧಿ ತೊಂದರೆಗಳು ಕಾಣಿಸಿಕೊಂಡವರಿಗೆ ಚಿಕಿತ್ಸೆಯ ಹೆಸರಲ್ಲಿ ಅಂದಾದುಂದು ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ತಮ್ಮ ಸರ್ಕಾರ ಕಡಿವಾಣ ಹಾಕಬೇಕು.
- ಸರ್ಕಾರ ತಕ್ಷಣ ಒಂದು ಉನ್ನತಮಟ್ಟದ ಟಾಸ್ಕ್ ಫೋರ್ಸ್ ರಚಿಸಿ, ಈ ಎಲ್ಲ ಅಸಹಜ ಸಾವುಗಳಿಂದ ಉತ್ಪಾದಕ ಪ್ರಾಯವರ್ಗದಲ್ಲಿರುವ ಅಮಾಯಕರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಯೋಜಿಸಲು ಮತ್ತು ಈಗಾಗಲೇ ಪೀಡಿತರಿಗೆ ಅಗತ್ಯವಿರುವ ಪರಿಹಾರ ಕ್ರಮಗಳನ್ನು ರೂಪಿಸಲು ಸೂಕ್ತಕ್ರಮಗಳನ್ನು ಸರ್ಕಾರದ ಕಡೆಯಿಂದ ಕೈಗೊಳ್ಳಬೇಕು.
- ಜನಪರ ಕಾಳಜಿಗಳಿರುವ ಮುಖ್ಯಮಂತ್ರಿಗಳಾಗಿರುವ ತಾವು ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಕ್ರಮಗಳನ್ನು ಕೈಗೊಳ್ಳುವಿರಿ ಎಂಬ ಭರವಸೆಯೊಂದಿಗೆ ತಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.
