ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ; ವಿದ್ಯಾಸಿರಿ ವಿದ್ಯಾರ್ಥಿ ವೇತನ 2000ಕ್ಕೆ ಏರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ; ವಿದ್ಯಾಸಿರಿ ವಿದ್ಯಾರ್ಥಿ ವೇತನ 2000ಕ್ಕೆ ಏರಿಕೆ

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ; ವಿದ್ಯಾಸಿರಿ ವಿದ್ಯಾರ್ಥಿ ವೇತನ 2000ಕ್ಕೆ ಏರಿಕೆ

ವಿದ್ಯಾಸಿರಿ ಯೋಜನೆಯಡಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಒದಗಿಸುವ ವಿದ್ಯಾರ್ಥಿ ವೇತನವನ್ನು ಮುಂದಿನ ವರ್ಷದಿಂದ 2000 ರೂಪಾಯಿಗಳಿಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ವಿದ್ಯಾಸಿರಿ ವಿದ್ಯಾರ್ಥಿ ವೇತನ 2000ಕ್ಕೆ ಏರಿಕೆ; ಸಿಎಂ ಸಿದ್ದರಾಮಯ್ಯ
ವಿದ್ಯಾಸಿರಿ ವಿದ್ಯಾರ್ಥಿ ವೇತನ 2000ಕ್ಕೆ ಏರಿಕೆ; ಸಿಎಂ ಸಿದ್ದರಾಮಯ್ಯ

ಮೈಸೂರು: ಕರ್ನಾಟಕದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ವಿದ್ಯಾಸಿರಿ ಯೋಜನೆಯಡಿ ಒದಗಿಸುವ 1500 ರೂ. ವಿದ್ಯಾರ್ಥಿ ವೇತನವನ್ನು ಮುಂದಿನ ವರ್ಷದಿಂದ 2000ಕ್ಕೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಮೈಸೂರಿನ ಸಿದ್ದಾರ್ಥನಗರದ ಕನಕಭವನದಲ್ಲಿ ಆಯೋಜಿಸಿದ್ದ ‘ಶ್ರೀ ಭಕ್ತ ಕನಕದಾಸರ 537ನೇ ಜಯಂತ್ಯುತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಜೀವನದ ಅನುಭವದಿಂದ ಮೂಡಿಬಂದ ಯೋಜನೆಗಳು ಇವು ಎಂದು ತಿಳಿಸಿದರು.

ಪ್ರೌಢಶಾಲೆಗೆ ಬರುವವರೆಗೂ ತಾವು ಚಪ್ಪಲಿಯನ್ನು ಹಾಕಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು ಎಲ್ಲಾ ಶಾಲಾ ಮಕ್ಕಳು ಶೂ ಹಾಕಬೇಕೆಂದು ಶೂಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ರಾಜ್ಯದಲ್ಲಿ ಹೆಚ್ಚುವರಿ ಹಾಲು ಉತ್ಪಾದನೆಯಾದ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಹಾಲು ಕೊಡಲಾಯಿತು. ಪ್ರಸ್ತುತ ವಾರದಲ್ಲಿ ಆರು ದಿನಗಳು ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಲಾಗುತ್ತಿದೆ ಎಂದರು. ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಅನ್ನಭಾಗ್ಯ ಸಿಗಲಿ ಎನ್ನುವ ಉದ್ದೇಶದಿಂದಲೇ ಆ ಯೋಜನೆ ಶುರು ಮಾಡಿದ್ದಾಗಿ ಹೇಳಿದರು.

ಬಡವರಿಗೆ ಆರ್ಥಿಕವಾಗಿ - ಸಾಮಾಜಿಕವಾಗಿ ಶಕ್ತಿ ತುಂಬಲು ಗ್ಯಾರಂಟಿ ಯೋಜನೆಗಳು ಜಾರಿ

ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರೂ ಉಚಿತವಾಗಿ ಬಸ್ಸುಗಳಲ್ಲಿ ಓಡಾಡುತ್ತಾರೆ. ಗೃಹಲಕ್ಷ್ಮೀ ಯೋಜನೆಯಡಿ 1 ಕೋಟಿ 22 ಲಕ್ಷ ಕುಟುಂಬಗಳ ಮನೆ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ವರ್ಷಕ್ಕೆ 32 ಸಾವಿರ ಕೋಟಿ ಒದಗಿಸಲಾಗುತ್ತಿದೆ ಎಂದರು. ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಬಡವರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬಲು ಈ ಯೋಜನೆಗಳು ಜಾರಿಯಾಗಿವೆ. ವರ್ಷಕ್ಕೆ 50-60 ಸಾವಿರ, ತಿಂಗಳಿಗೆ 4-5 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ನಾನು ಹಳ್ಳಿಯಿಂದ ಬಂದು ನನ್ನ ಹಾಗೆ ಕಷ್ಟ ಪಡಬಾರದೆಂದು ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಕನಕದಾಸರ ಪ್ರತಿಮೆ ಸ್ಥಾಪಿಸುವ ಭರವಸೆ

ಮೈಸೂರು ನಗರದಲ್ಲಿ ಕನಕದಾಸರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು. ಶಿಕ್ಷಣ ಹಾಗೂ ಪ್ರತಿಭೆ ಯಾರ ಅಥವಾ ಯಾವ ಜಾತಿಯ ಸ್ವತ್ತು ಕೂಡಾ ಅಲ್ಲ. ಶೇಕಡ 90 ಅಂಕಗಳನ್ನು ಪಡೆಯುವುದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಸಾಧ್ಯ. ಅದಕ್ಕಾಗಿ ಅವರು ಸಾಕಷ್ಟು ಶ್ರಮವಹಿಸಿರುತ್ತಾರೆ. ನಾನು ಕೂಡಾ ಹತ್ತನೇ ತರಗತಿವರೆಗೆ ವಿದ್ಯಾವರ್ಧಕ ಶಾಲೆಯಲ್ಲಿ ಮೊದಲಿಗನಾಗಿದ್ದೆ. ನಂತರ ಪಿಯುಸಿ ತರಗತಿಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಂಡಿದ್ದರಿಂದ ಸ್ವಲ್ಪ ಶ್ರಮ ವಹಿಸಬೇಕಾಯಿತು. ಪಿಯುಸಿ ಹಾಗೂ ಬಿಎಸ್‌ಸಿ ಮತ್ತು ಲಾ ವ್ಯಾಸಂಗವನ್ನು ಸೆಕೆಂಡ್ ಕ್ಲಾಸಿನಲ್ಲಿ ಪಾಸ್ ಮಾಡಿದೆ. ಆದರೆ ವಿದ್ಯಾರ್ಥಿ ಜೀವನದಲ್ಲಿ ಒಮ್ಮೆಯೂ ಫೇಲ್ ಆಗಲಿಲ್ಲ ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

1988ರಲ್ಲಿ 37 ವರ್ಷಗಳ ಹಿಂದೆ ನಾನು ಸಾರಿಗೆ ಮಂತ್ರಿಯಾಗಿದ್ದಾಗ ಕನಕದಾಸ ಜಯಂತಿಯ 500ನೇ ವರ್ಷಾಚರಣೆಯನ್ನು ಆಚರಿಸಲಾಯಿತು ಎಂದು ಸ್ಮರಿಸಿದ ಮುಖ್ಯಮಂತ್ರಿ, ಕನಕದಾಸರ ಒಬ್ಬ ಕವಿ, ಸಂತ, ದಾರ್ಶನಿಕ ಎಂದು ಜೀವನವನ್ನು ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಪರಿಚಯಿಸಿದರು. ಕನಕದಾಸರು ಹಿಂದುಳಿದ ಜಾತಿಗೆ ಸೇರಿದ್ದರಿಂದ ಅನೇಕ ಅಪಮಾನಗಳನ್ನು ಎದುರಿಸಬೇಕಾಯಿತು. ಅದನ್ನೆಲ್ಲಾ ಮೀರಿ ಅವರು ಸಂತರಾದ ಬಗೆಯನ್ನು ವಿದ್ಯಾರ್ಥಿಗಳಿಗೆ ಕತೆಗಳ ಮೂಲಕ ವಿವರಿಸಿದರು.

Whats_app_banner