ಮುಡಾ ಪ್ರಕರಣ ತೀವ್ರಗೊಂಡ ಬೆನ್ನಲ್ಲೇ ಸವದತ್ತಿ ಯಲ್ಲಮ್ಮನ ಮೊರೆಹೋದ ಸಿಎಂ ಸಿದ್ದರಾಮಯ್ಯ; ಪತ್ನಿ ಹೆಸರಿನಲ್ಲಿ ವಿಶೇಷ ಪೂಜೆ
CM Siddaramaiah: ಮುಡಾ ಹಗರಣದಲ್ಲಿ ಸಂಕಷ್ಟದಿಂದ ಪತ್ನಿ ಪಾರ್ವತಿ ಅವರನ್ನು ಪಾರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿದೇವತೆ ಸವದತ್ತಿ ಯಲ್ಲಮ್ಮ ದೇವಿಯ ಮೊರೆ ಹೋಗಿದ್ದಾರೆ.
ಬೆಳಗಾವಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನನ್ನು ಎಲ್ಲಾ ಸಂಕಷ್ಟಗಳಿಂದ ಪಾರು ಮಾಡುವಂತೆ ಬೆಳಗಾವಿಯ ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಿ ಮೊರೆ ಹೋಗಿದ್ದು, ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಅರ್ಚನೆಯನ್ನೂ ಮಾಡಿದ್ದಾರೆ. ಅಕ್ಟೋಬರ್ 12ರಂದು ಮೈಸೂರು ದಸರಾ ಮುಗಿಸಿ ಸಂಜೆ ಚಾಮುಂಡೇಶ್ವರಿ ದರ್ಶನ ಪಡೆದ ಅವರು ನಂತರ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿದರು.
ಇಂದು (ಅಕ್ಟೋಬರ್ 13) ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವುದಕ್ಕೂ ಮುನ್ನ ರಸ್ತೆ ಮಾರ್ಗವಾಗಿ ಸವದತ್ತಿಗೆ ತಲುಪಿದರು. ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ಪತ್ನಿ ಪಾರ್ವತಿ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮುಡಾ ಪ್ರಕರಣದಲ್ಲಿ ಎ2 ಆರೋಪಿಯಾಗರುವ ಸಿಎಂ ಪತ್ನಿ ಪಾರ್ವತಿ ಅವರಿಗೆ ಯಾವುದೇ ಕ್ಷಣದಲ್ಲಾದರೂ ಸಿಎಂ ಪತ್ನಿ ಪಾರ್ವತಿಗೆ ಲೋಕಾಯುಕ್ತ ನೋಟಿಸ್ ಕೊಡುವ ನಿರೀಕ್ಷೆ ಇದೆ. ಲೋಕಾಯುಕ್ತ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಮುಡಾ ಸಂಕಷ್ಟಕ್ಕೆ ಸಿಲುಕಿದಾಗಿನಿಂದ ಸಿದ್ದರಾಮಯ್ಯ ಅವರ ಟೆಂಪಲ್ ರನ್ ಹೆಚ್ಚಾಗಿದೆ. ತನ್ನ ವಿರುದ್ಧ ಪ್ರಕರಣ ದಾಖಲಾಗುವುದಕ್ಕೂ ಮುನ್ನ ಕೇವಲ 21 ದಿನಗಳಲ್ಲಿ ಮೂರು ಬಾರಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ದೇವರು-ಧರ್ಮದ ಹೆಸರಲ್ಲಿ ದೇಶವನ್ನು-ರಾಜ್ಯವನ್ನು ಒಡೆಯುವ ಬಿಜೆಪಿಯನ್ನು ಮೊದಲು ದೂರ ಇಡಿ. ಇಲ್ಲದಿದ್ದರೆ ನಮ್ಮ ನಾಡೂ ಉಳಿಯಲ್ಲ, ದೇಶವೂ ಉಳಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಸವದತ್ತಿ ರೇಣುಕಾ ಯಲ್ಲಮ್ಮನ ಗುಡ್ಡದಲ್ಲಿ, ಮಹಿಳಾ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣ ವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಮುಂದಿನ ವರ್ಷದ ವೇಳೆಗೆ 6 ಸಾವಿರ ಭಕ್ತರು ಉಳಿಯಲು ರೇಣುಕಾ ಯಲ್ಲಮ್ಮ ಸನ್ನಿಧಿಯಲ್ಲಿ ವ್ಯವಸ್ಥೆ ರೂಪಿಸುತ್ತೇವೆ ಎಂದರು.
300 ಕೋಟಿ ಉಚಿತ ಟ್ರಿಪ್
ಶಕ್ತಿ ಯೋಜನೆಯಿಂದಾಗಿ ಇದುವರೆಗೂ ರಾಜ್ಯದಲ್ಲಿ ಮಹಿಳೆಯರು 300 ಕೋಟಿ ಉಚಿತ ಟ್ರಿಪ್ ಮಾಡಿದ್ದಾರೆ. ಇವರಲ್ಲಿ ಲಕ್ಷಾಂತರ ಮಂದಿ ತಾಯಿ ರೇಣುಕಾ ಯಲ್ಲಮ್ಮನ ದರ್ಶನ ಕೂಡ ಪಡೆದಿದ್ದಾರೆ. ದೇವರು-ಧರ್ಮ ತಮಗೆ ಮಾತ್ರ ಸೇರಿದ್ದು ಬಿಜೆಪಿಯವರು ಭಯಾನಕ ಮಾತಾಡ್ತಾರಲ್ಲಾ, ಆದರೆ ಇದುವರೆಗೂ ದೇವಿಯ ಭಕ್ತರಿಗೆ ನಾವು ಮಾಡಿದಂಥಾ ಕಾರ್ಯಕ್ರಮವನ್ನು ಬಿಜೆಪಿಯವರು ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ತಾಯಿ ಯಲ್ಲಮ್ಮ ಶಕ್ತಿ ದೇವತೆ. ಯಾವ ದೇವರೂ ಕೂಡ ಮನುಷ್ಯರನ್ನು ಧರ್ಮದ ಕಾರಣಕ್ಕೆ ದ್ವೇಷಿಸಿ ಎಂದು ಹೇಳುವುದಿಲ್ಲ. ದೇವರ ಹೆಸರಲ್ಲಿ ದ್ವೇಷ ಹೇಳುವುದು ಬಿಜೆಪಿ ಮಾತ್ರ. ತಾಯಿ ರೇಣುಕಾ ಯಲ್ಲಮ್ಮ ದೇವರು, ಧರ್ಮದ ಹೆಸರಲ್ಲಿ ಮನುಷ್ಯರನ್ನು ದ್ವೇಷಿಸಿ ಎಂದು ಎಲ್ಲೂ ಹೇಳಿಲ್ಲ. ಗೃಹಲಕ್ಷ್ಮಿ ಯೋಜನೆ ಜಾರಿಯಾದರೆ ಅತ್ತೆ ಸೊಸೆ ಜಗಳ ಆಗ್ತದೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆದರು. ಆದರೆ ಗೃಹಲಕ್ಷ್ಮಿ ಹಣವನ್ನು ಕೂಡಿಸಿಟ್ಟು ಅತ್ತೆಯರು ಸೊಸೆಯರಿಗೆ ಬಳೆ ಅಂಗಡಿ ಹಾಕಿಕೊಟ್ಟಿದ್ದಾರೆ, ಟೈಲರಿಂಗ್ ಮೆಷಿನ್ ಕೊಡಿಸಿದ್ದಾರೆ. ಇಂಥವು ನೂರಾರು ಉದಾಹರಣೆಗಳಿವೆ ಎಂದು ಹೇಳಿದ್ದಾರೆ.
ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಸಿದ್ಧ
ತಾಯಿ ರೇಣುಕಾ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ನಾವು ರೆಡಿ. ನಿಮ್ಮ ಸಹಕಾರ ಅಗತ್ಯ. ಕ್ಷೇತ್ರದಲ್ಲಿ ಅನಧಿಕೃತವಾಗಿ ಮಳಿಗೆಗಳನ್ನು ಹಾಕಬೇಡಿ. ಅನಧಿಕೃತವಾಗಿ ಇರುವವರಿಗೆ ಬೇರೆ ವ್ಯವಸ್ಥೆ ಮಾಡೋಣ. ಆದರೆ ಅಕ್ರಮವಾಗಿ ಯಾರೂ ಮಳಿಗೆ ಹಾಕದೆ ಸಹಕರಿಸಿ ಎಂದು ಕರೆ ನೀಡಿದ್ದಾರೆ. ಬಡವರು ಹಾಗೂ ರೈತಾಪಿ ವರ್ಗದವರು ಹೆಚ್ಚು ಭೇಟಿ ನೀಡುವ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾಸೋದ್ಯಮ ಮಂಡಳಿ ಹಾಗೂ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆ ನಡೆಸಲಾಗಿದೆ. ಈ ಕ್ಷೇತ್ರಕ್ಕೆ ಸುಮಾರು 2 ಕೋಟಿ ಭಕ್ತಾದಿಗಳು ಭೇಟಿ ನೀಡುತ್ತಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವನೀರು, ಶೌಚಾಲಯ, ಪಾರ್ಕಿಂಗ್, ತಂಗುದಾಣದ ವ್ಯವಸ್ಥೆಯನ್ನು ಪೂರೈಸಬೇಕಾಗಿದೆ. ಬಡವರು ಹಾಗೂ ರೈತಾಪಿ ವರ್ಗದವರು ಹೆಚ್ಚು ಭೇಟಿ ನೀಡುವ ಈ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಕ್ಷೇತ್ರದಲ್ಲಿ 1087ಎಕರೆ ಪ್ರದೇಶ ಲಭ್ಯವಿದ್ದು, ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವ ಉದ್ದೇಶಕ್ಕೆ ಈ ಪ್ರದೇಶವನ್ನು ಬಳಸಿಕೊಳ್ಳಲಾಗುವುದು ಎಂದರು.