ಸಿಎಂ ಸಿದ್ಧರಾಮಯ್ಯನವರ ಆ ಹೇಳಿಕೆ ಪಾಕಿಸ್ತಾನದಲ್ಲಿ ವೈರಲ್: ‘ಪಾಕಿಸ್ತಾನ ರತ್ನ’ ಎಂದು ಲೇವಡಿ ಮಾಡಿದ ಬಿಜೆಪಿ ಮುಖಂಡರು
ಪಹಲ್ಗಾಮ್ ದಾಳಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆ ದೇಶ ವಿದೇಶಗಳಲ್ಲಿ ಚರ್ಚೆಗೆ ಗ್ರಾಸವೊದಗಿಸಿದೆ. ಸಿದ್ದರಾಮಯ್ಯನವರ ಹೇಳಿಕೆಯನ್ನು ಪಾಕಿಸ್ತಾನದ ಮಾಧ್ಯಮಗಳಲ್ಲಿ ಪದೇ ಪದೇ ಬಿತ್ತರಿಸಲಾಗುತ್ತಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದನಾ ದಾಳಿಗೆ 28 ಪ್ರವಾಸಿಗರು ಬಲಿಯಾದ ಘಟನೆಗೆ ಸಂಬಂಧಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆ ದೇಶ ವಿದೇಶಗಳಲ್ಲಿ ಚರ್ಚೆಗೆ ಗ್ರಾಸವೊದಗಿಸಿದೆ. ಸಿದ್ದರಾಮಯ್ಯನವರ ಹೇಳಿಕೆಯನ್ನು ಪಾಕಿಸ್ತಾನದ ಮಾಧ್ಯಮಗಳಲ್ಲಿ ಪದೇ ಪದೇ ಬಿತ್ತರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಅವರು ಪಾಕಿಸ್ತಾನ ಮಾಧ್ಯಮಗಳಲ್ಲೂ ಸುದ್ದಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದ್ದು ಸಿದ್ದರಾಮಯ್ಯ ಅವರ ಮೇಲೆ ಮುಗಿ ಬಿದ್ದಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆ ಏನೆಂದು ನೋಡೋಣ.
ಮೈಸೂರಿನಲ್ಲಿ ಪಹಲ್ಗಾಮ್ ದಾಳಿ ಕುರಿತು ಸಿದ್ದರಾಮಯ್ಯ ಅವರು ಪಾಕಿಸ್ತಾನದ ಮೇಲೆ ಯುದ್ಧ ಅಗತ್ಯವಿಲ್ಲ. ಕಾಶ್ಮೀರದ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕು. ನಾವು ಯುದ್ಧದ ಪರ ಇಲ್ಲ. ಬದಲಾಗಿ ಶಾಂತಿ ನೆಲಸುವಂತೆ ಮಾಡಲು ಭದ್ರತಾ ಕ್ರಮಗಳನ್ನು ಹೆಚ್ಚಿಸಬೇಕು ಎಂದು ಹೇಳಿಕೆ ನೀಡಿದ್ದರು. ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡಬಾರದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಪಾಕಿಸ್ತಾನ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪಾಕ್ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ನಂತೆ ಬಿತ್ತರಿಸುತ್ತಿವೆ. ಇದನ್ನೇ ಅಸ್ತ್ರವಾಗಿಸಿಕೊಂಡ ವಿರೋಧ ಪಕ್ಷ ಬಿಜೆಪಿ ನಾಯಕರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ನಾಯಕರ ಆಕ್ರೋಶ
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಸಿಟಿ ರವಿ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಪಾಕ್ ಟಿವಿ ಪ್ರಸಾರ ಮಾಡಿರುವ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ವಿಪಕ್ಷ ನಾಯಕ ಅಶೋಕ್ ಟ್ವೀಟ್
ವಿಪಕ್ಷ ನಾಯಕ ಅಶೋಕ್ ತಮ್ಮ ಟ್ವೀಟ್ ನಲ್ಲಿ ಅಲ್ಪಸಂಖ್ಯಾತರ ವಿಚಾರ ಬಂದಾಗ ಯಾವ ಮಟ್ಟಕ್ಕೂ ಇಳೀತಾರೆ ಎಂಬ ಸತ್ಯ ಜನರಿಗೆ ಗೊತ್ತಿದೆ. ಆದರೆ, ದೇಶದ ವಿಚಾರ ಬಂದಾಗ, ಕಾಶ್ಮೀರದ ಭಯೋತ್ಪಾದಕರ ದಾಳಿ, ಹತ್ಯೆಗಳ ಆ ಘಟನೆಯನ್ನು ಪ್ರತಿಯೊಬ್ಬ ಸ್ವಾಭಿಮಾನಿ ಕೂಡ ಖಂಡಿಸಿದ್ದಾರೆ. ಭಾರತ ಯಾವತ್ತೂ ಯುದ್ಧ ಸಾರಿದ ಇತಿಹಾಸ ಇಲ್ಲ. ಆದರೆ, ಇವತ್ತು ಭಾರತೀಯರ ರಕ್ಷಣೆ ಮಾಡಬೇಕಾದ ಸಂದರ್ಭದಲ್ಲಿ ಏನು ತೀರ್ಮಾನ ಮಾಡಬೇಕೋ ಅದನ್ನು ಪ್ರಧಾನಿಯವರು ಎಲ್ಲ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸುತ್ತಾರೆ ಎಂದರು.
ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರು, “ಸನ್ಮಾನ್ಯ ಸಿದ್ದರಾಮಯ್ಯನವರು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬಾರದು ಎಂಬ ದೃಷ್ಟಿಕೋನ ಖಂಡಿತ ಸರಿಯಲ್ಲ.ಇದು ಅಕ್ಷಮ್ಯ ಅಪರಾಧ. ಯಡಿಯೂರಪ್ಪ ಅವರ ಮಾತಿನಂತೆ ಸಿದ್ದರಾಮಯ್ಯನವರು ಈ ದೇಶದ ಜನರ ಕ್ಷಮೆ ಕೂಡ ಕೇಳಬೇಕು. ಸಿದ್ದರಾಮಯ್ಯನವರಿಂದ ಈ ರೀತಿಯ ಹೇಳಿಕೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ” ಎಂದು ಹೇಳಿದ್ದಾರೆ.
ಪಾಕಿಸ್ತಾನ ರತ್ನ" ಸಿಎಂ @siddaramaiah ನವರೇ, ತಮ್ಮ ಬಾಲಿಶ, ಅಸಂಬದ್ಧ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದೀರಿ. ತಮಗೆ ಅಭಿನಂದನೆಗಳು. ಮುಂದೆಂದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರಂಟಿ. ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು ಪಾಕಿಸ್ತಾನ ಸರ್ಕಾರ ತಮಗೆ ಅಲ್ಲಿನ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ. ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿರುವಾಗ, ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವಾಗ ಈ ರೀತಿ ಶತ್ರುರಾಷ್ಟ್ರದ ಕೈಗೊಂಬೆಯಂತೆ ವರ್ತಿಸುತ್ತದ್ದೀರಲ್ಲ, ನಿಮ್ಮಂತಹವರು ಸಾರ್ವಜನಿಕ ಬದುಕಿನಲ್ಲಿ ಇರುವುದೇ ನಮ್ಮ ದೇಶದ ಅತ್ಯಂತ ದೊಡ್ಡ ದುರಂತ ಎಂದು ಟೀಕಿಸಿದ್ದಾರೆ.
ಒಗ್ಗಟ್ಟಿನಲ್ಲಿ ನಿಲ್ಲುವ ಸಂದರ್ಭದಲ್ಲಿ ಸಿಎಂ ಬಾಲಿಶ ಹೇಳಿಕೆ ನೀಡಿದ್ದಾರೆ. ವಾಸ್ತವ ಸ್ಥಿತಿ ಅರ್ಥ ಮಾಡಿಕೊಂಡು ದೇಶವೇ ಒಂದಾಗಿದೆ. ಈ ಸಂದರ್ಭದಲ್ಲಿ ಸಿಎಂ ಹೇಳಿಕೆ ಶೋಭೆ ತರಲ್ಲ. ಸಿಎಂ ಸಿದ್ದರಾಮಯ್ಯ ದೇಶದ ಜನತೆ ಕ್ಷಮೆ ಕೇಳಬೇಕುಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸಚಿವ ಸೋಮಣ್ಣ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಸಿದ್ದರಾಮಯ್ಯ ಆಗಿದ್ರೆ ಒಳ್ಳೇದು. ಸಿಎಂ ಸಿದ್ದರಾಮಯ್ಯ ನಡವಳಿಕೆ ಬದಲಾಗಬೇಕು. ತಮ್ಮ ಹೇಳಿಕೆಗೆ ಸಿದ್ದರಾಮಯ್ಯನವರು ಬೆಲೆ ತೆರಲೇಬೇಕು. 140 ಕೋಟಿ ಜನರಿಗೆ ಸಿಎಂ ಉತ್ತರ ಕೊಡಬೇಕು ಎಂದಿದ್ದಾರೆ.
(ವರದಿ: ಎಚ್. ಮಾರುತಿ)