ಫೆ 16ರಂದು ಕರ್ನಾಟಕ ಬಜೆಟ್; ಗೃಹಜ್ಯೋತಿ ನಿಯಮ ಬದಲಾವಣೆ, ಒಳಮೀಸಲಾತಿ ಕುರಿತು ಸಚಿವ ಸಂಪುಟ ನಿರ್ಣಯ ಹೀಗಿದೆ
Karnataka Budget 2024-25: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಜ್ಯೋತಿಯಲ್ಲಿ ಮಹತ್ವದ ಬದಲಾವಣೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. (ವರದಿ: ಎಚ್ ಮಾರುತಿ, ಬೆಂಗಳೂರು)
ಫೆಬ್ರುವರಿ 12ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದ್ದು, ಫೆಬ್ರುವರಿ 16ಕ್ಕೆ ಕರ್ನಾಟಕ ರಾಜ್ಯ ಬಜೆಟ್ (Karnataka Budget) ಮಂಡನೆಯಾಗಲಿದೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಫೆ. 12ರಂದು ವಿಧಾನ ಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಫೆ.25ವರೆಗೆ ಅಧಿವೇಶನ ನಡೆಯಲಿದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಕುರಿತ ಪ್ರಮುಖಾಂಶಗಳನ್ನು ಎಚ್‌ಕೆ ಪಾಟೀಲ್ ವಿವರಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ 48 ಯೂನಿಟ್‌ಗಳಿಗಿಂತ ಕಡಿಮೆ ಬಳಸುವ ಗ್ರಾಹಕರಿಗೆ ಶೇ.10ರಷ್ಟು ಬದಲಿಗೆ ಹೆಚ್ಚುವರಿ 10 ಅರ್ಹತಾ ಯೂನಿಟ್‌ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ರಾಜ್ಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇರುವ ವಿವಿಧ ಸಮುದಾಯಗಳಿಗೆ ಒಳಮೀಸಲಾತಿ ನೀಡುವ ನಿಟ್ಟಿನಲ್ಲಿ ಸಂವಿಧಾನದ 341(3)ನೇ ವಿಧಿಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಇದನ್ನೂ ಓದಿ | ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ, ರಾಜ್ಯ ಸರ್ಕಾರ ಅಧಿಕೃತ ಘೋಷಣೆ, ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಕಡ್ಡಾಯ
ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಪರಿಶಿಷ್ಟ ಎಡಗೈ ಸಮುದಾಯದ ಸಚಿವರು ಮತ್ತು ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿಗೊಳಿಸುವ ಭರವಸೆಯನ್ನು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿತ್ತು.
341(3) ಗೆ ತಿದ್ದುಪಡಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು
ಸಮಾಜ ಕಲ್ಯಾಣ ಸಚಿವ ಡಾ.ಎಚ್‌ಸಿ ಮಹದೇವಪ್ಪ ವಿವರ ನೀಡಿ ಸುಮಾರು ಎರಡು ದಶಕಗಳಿಂದ ದಲಿತರ ಒಳಪಂಗಡಗಳು ಒಳಮೀಸಲಾತಿಗೆ ಬೇಡಿಕೆ ಇಟ್ಟಿದ್ದವು. ಎಸ್‌ಸಿ, ಎಸ್‌ಟಿ ಸಮಾವೇಶದಲ್ಲಿ ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡುತ್ತೇವೆ ಎಂದು ಹೇಳಿದ್ದೆವು. ಆದರೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಿ ಸದಾಶಿವ ಆಯೋಗದ ವರದಿ ಅಪ್ರಸ್ತುತ ಎಂದು ಶಿಫಾರಸು ಮಾಡಿತ್ತು. 101 ಜಾತಿಗಳ ಹಿತ ಕಾಪಾಡಲು ಯಾರನ್ನು ಹೊರಗಡೆ ಬಿಡುವ ಪ್ರಶ್ನೆ ಇಲ್ಲ. ಈ ನಿಟ್ಟಿನಲ್ಲಿ 341(3) ಗೆ ತಿದ್ದುಪಡಿ ಮಾಡದೆ ಒಳಮೀಸಲಾತಿ ಕೊಡಲು ಸಾಧ್ಯ ಇಲ್ಲ. ಈ ನಿಟ್ಟಿನಲ್ಲಿ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಂಪುಟ ನಿರ್ಧಾರ ಮಾಡಲಾಗಿದೆ ಎಂದರು.
ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ
ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿವಿಧ ಮಠಗಳ ಸುಮಾರು 48 ಶ್ರೀಗಳು ಮನವಿ ಪತ್ರಕ್ಕೆ ಹಾಕಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಳೆದ ವಾರ ಮನವಿ ಸಲ್ಲಿಸಿದ್ದರು. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಪಿಎಚ್ ಗ್ರಾಮದ ಹೆಸರನ್ನು ಆರೂಢ ನಂದಿಹಾಳ, ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕು ಅನ್ನು ಚನ್ನಮ್ಮನ ಕಿತ್ತೂರು ತಾಲೂಕು ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯ ಶ್ರೀ ಗುರುದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಗೆ ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿರುವ ಎಸ್ಎಲ್‌ಪಿ(ಸಿವಿಲ್)ಗೆ ಆಕ್ಷೇಪಣಾ ಹೇಳಿಕೆಯನ್ನು ತಯಾರಿಸುವ ಸಂಬಂಧ ಸೂಕ್ತ ಶಿಫಾರಸ್ಸುಗಳನ್ನು ಮಾಡಲು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಶಿವಮೊಗ್ಗ ನಗರದ ಹಳೆಯ ಜೈಲು ಆವರಣದ ಒಟ್ಟು 46 ಎಕರೆ 32 ಗುಂಟೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿದ ಪ್ರದೇಶವನ್ನು ಅಲ್ಲಮ ಪ್ರಭು ಉದ್ಯಾನವನ ಎಂದು ನಾಮಕರಣ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.
ಇದನ್ನೂ ಓದಿ | ಬಜೆಟ್ ಮಂಡನೆಗೆ ಸಿದ್ಧತೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ; ಸಾಲದ ಅನಿವಾರ್ಯತೆ ಸೃಷ್ಟಿಸಿದ ಗ್ಯಾರಂಟಿಗಳು
ಕರ್ನಾಟಕ ವಿದ್ಯುತ್ ನಿಗಮವು 2022-2ನೇ ಸಾಲಿನಲ್ಲಿ 1630 ಕೋಟಿ ರೂಪಾಯಿ ಮತ್ತು 2023-24ನೇ ಸಾಲಿನಲ್ಲಿ 2800 ಕೋಟಿ ರೂಪಾಯಿಗಳು ಸೇರಿ ಒಟ್ಟು 4,430.00 ಕೋಟಿ ರೂಪಾಯಿಗಳನ್ನು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲಕ್ಕೆ ಸರ್ಕಾರದ ಖಾತರಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ.
ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ
ಉನ್ನತ ಶಿಕ್ಷಣ ಇಲಾಖೆಯ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ 15.13 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶವನ್ನು ಇ-ಆಡಳಿತ ಇಲಾಖೆಯ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಹಯೋಗದೊಂದಿಗೆ ರಾಜ್ಯದಲ್ಲಿ ಅಭಿವೃದ್ದಿಪಡಿಸಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ಷೇರು ಬಂಡವಾಳವನ್ನು 600 ಕೋಟಿ ರೂಪಾಯಿಗಳಿಂದ 1200 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.
ಉಡುಪಿ ನ್ಯಾಯಾಲಯ ಆವರಣದಲ್ಲಿ ವಕೀಲರ ಭವನ ಮತ್ತು ಎಡಿಆರ್ ಸಂಕೀರ್ಣವನ್ನೊಳಗೊಂಡ ಅನೆಕ್ಸ್ ನ್ಯಾಯಾಲಯ ಕಟ್ಟಡ ನಿರ್ಮಾಣ ಕಾಮಗಾರಿಯ (ಪ್ರಥಮ ಹಂತ) 15.14 ಕೋಟಿ ರೂಪಾಯಿಗಳ ಅಂದಾಜು ಪಟ್ಟಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯು ಬೆಂಗಳೂರಿನ ಹಲಸೂರು ಕೆರೆಯ ಬಳಿ ಕೆನ್ಸಿಂಗ್ ಟನ್ ರಸ್ತೆಯಲ್ಲಿ ಪ್ರವಾಸಿ ಸೌಧ ನಿರ್ಮಿಸಲು 18 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.
ವರದಿ: ಎಚ್ ಮಾರುತಿ, ಬೆಂಗಳೂರು
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ.
ಇಮೇಲ್: ht.kannada@htdigital.in