ತೆಂಗಿನಕಾಯಿ ದರ ದಿಢೀರ್ ಹೆಚ್ಚಳ, ಬೆಂಗಳೂರಲ್ಲಿ 20 ರೂಪಾಯಿ, ದಾವಣಗೆರೆಯಲ್ಲಿ 15 ರೂಪಾಯಿ ಏರಿಕೆ, ಹೋಟೆಲ್ ಉದ್ಯಮಕ್ಕೆ ಹೊರೆ
ಕನ್ನಡ ಸುದ್ದಿ  /  ಕರ್ನಾಟಕ  /  ತೆಂಗಿನಕಾಯಿ ದರ ದಿಢೀರ್ ಹೆಚ್ಚಳ, ಬೆಂಗಳೂರಲ್ಲಿ 20 ರೂಪಾಯಿ, ದಾವಣಗೆರೆಯಲ್ಲಿ 15 ರೂಪಾಯಿ ಏರಿಕೆ, ಹೋಟೆಲ್ ಉದ್ಯಮಕ್ಕೆ ಹೊರೆ

ತೆಂಗಿನಕಾಯಿ ದರ ದಿಢೀರ್ ಹೆಚ್ಚಳ, ಬೆಂಗಳೂರಲ್ಲಿ 20 ರೂಪಾಯಿ, ದಾವಣಗೆರೆಯಲ್ಲಿ 15 ರೂಪಾಯಿ ಏರಿಕೆ, ಹೋಟೆಲ್ ಉದ್ಯಮಕ್ಕೆ ಹೊರೆ

Coconut Price Hike: ಕರ್ನಾಟಕದಲ್ಲಿ ತೆಂಗಿನಕಾಯಿ ದರ ದಿಢೀರ್ ಹೆಚ್ಚಳವಾಗಿದ್ದು, ಬೆಂಗಳೂರಲ್ಲಿ 20 ರೂಪಾಯಿ, ದಾವಣಗೆರೆಯಲ್ಲಿ 15 ರೂಪಾಯಿ ಏರಿಕೆಯಾಗಿದೆ. ಹೋಟೆಲ್ ಉದ್ಯಮಕ್ಕೆ ಇದು ಹೊರೆಯಾಗಿದ್ದು, ತಿಂಡಿ ತಿನಿಸುಗಳ ಬೆಲೆ ಏರಿಕೆಯ ಸುಳಿವು ನೀಡಿದೆ.

ತೆಂಗಿನಕಾಯಿ ದರ ದಿಢೀರ್ ಹೆಚ್ಚಳ, ಬೆಂಗಳೂರಲ್ಲಿ 20 ರೂಪಾಯಿ, ದಾವಣಗೆರೆಯಲ್ಲಿ 15 ರೂಪಾಯಿ ಏರಿಕೆಯಾಗಿದೆ. ಹೋಟೆಲ್ ಉದ್ಯಮಕ್ಕೆ ಹೊರೆಯಾಗತೊಡಗಿದ್ದು, ಖಾದ್ಯಗಳ ಬೆಲೆ ಏರಿಕೆ ಸೂಚನೆ ಸಿಕ್ಕಿದೆ. (ಸಾಂಕೇತಿಕ ಚಿತ್ರ)
ತೆಂಗಿನಕಾಯಿ ದರ ದಿಢೀರ್ ಹೆಚ್ಚಳ, ಬೆಂಗಳೂರಲ್ಲಿ 20 ರೂಪಾಯಿ, ದಾವಣಗೆರೆಯಲ್ಲಿ 15 ರೂಪಾಯಿ ಏರಿಕೆಯಾಗಿದೆ. ಹೋಟೆಲ್ ಉದ್ಯಮಕ್ಕೆ ಹೊರೆಯಾಗತೊಡಗಿದ್ದು, ಖಾದ್ಯಗಳ ಬೆಲೆ ಏರಿಕೆ ಸೂಚನೆ ಸಿಕ್ಕಿದೆ. (ಸಾಂಕೇತಿಕ ಚಿತ್ರ)

Coconut Price Hike: ಕೆಎಸ್‌ಆರ್‌ಟಿಸಿ ಬಸ್ ದರ ಸೇರಿದಂತೆ ಒಂದೊಂದೇ ದರ ಏರಿಕೆ ವಿಚಾರ ಕರ್ನಾಟಕದ ಜನರನ್ನು ಕಂಗೆಡಿಸಲಾರಂಭಿಸಿದೆ. ಈ ನಡುವೆ, ದಿನಬಳಕೆ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು, ತೆಂಗಿನಕಾಯಿ ದರವೂ ದಿಢೀರ್ 15 ರೂಪಾಯಿಯಿಂದ 20 ರೂಪಾಯಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 20 ರೂಪಾಯಿ ಏರಿಕೆಯಾದರೆ, ದಾವಣಗೆರೆಯಲ್ಲಿ 15 ರೂಪಾಯಿ ಏರಿದ್ದು ಗಮನಸೆಳೆದಿದೆ. ಇನ್ನುಳಿದಂತೆ ರಾಜ್ಯದಲ್ಲಿ ಕನಿಷ್ಠ 10 ರೂಪಾಯಿಯಿಂದ 25 ರೂಪಾಯಿ ತನಕ ತೆಂಗಿನಕಾಯಿ ದರ ಏರಿಕೆಯಾಗಿರುವುದಾಗಿ ವ್ಯಾಪಾರಿಗಳು ಹೇಳುತ್ತಿದ್ದಾರೆ. ತೆಂಗಿನಕಾಯಿ ದರ ಏರಿಕೆ ಪರಿಣಾಮ ನೇರವಾಗಿ ಹೋಟೆಲ್ ಉದ್ಯಮದ ಮೇಲಾಗಿದ್ದು, ಚಟ್ನಿ, ಸಾಂಬಾರ್ ಮತ್ತು ಇತರೆ ಖಾದ್ಯಗಳ ಉತ್ಪಾದನಾ ವೆಚ್ಚ ಹೆಚ್ಚಾಗಿದೆ.

ಕರ್ನಾಟಕದಲ್ಲಿ ತೆಂಗಿನಕಾಯಿ ದರ 10 ರಿಂದ 25 ರೂ ತನಕ ಏರಿಕೆ

ಬೆಂಗಳೂರಲ್ಲಿ ಕಳೆದ ವಾರ 25 ರೂಪಾಯಿ ಇದ್ದ ತೆಂಗಿನಕಾಯಿ ದರ ಈ ವಾರ 45 ರೂಪಾಯಿ ಆಗಿದೆ. ಕರ್ನಾಟಕದ ವಿವಿಧ ನಗರಗಳಲ್ಲಿ ಸಣ್ಣ ತೆಂಗಿನಕಾಯಿಯ ಹೋಲ್‌ಸೇಲ್ 26 ರಿಂದ 28 ರೂಪಾಯಿ ಇದೆ. ಚಿಲ್ಲರೆ ಮಾರಾಟದಲ್ಲಿ ಒಂದು ದೊಡ್ಡ ತೆಂಗಿನಕಾಯಿಗೆ 35ರಿಂದ 45 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಕರ್ನಾಟಕದಲ್ಲಿ ತೆಂಗಿನಕಾಯಿ ದರ ಕನಿಷ್ಠ 10 ರೂಪಾಯಿಯಿಂದ 25 ರೂಪಾಯಿ ತನಕ ಹೆಚ್ಚಳವಾಗಿದೆ.

ಕಮಾಡಿಟಿ ಆನ್‌ಲೈನ್‌ ಪ್ರಕಟಿಸಿದ ಮಂಡಿ ದರದ ಪ್ರಕಾರ, ಬೆಂಗಳೂರಿನಲ್ಲಿ ಗ್ರೇಡ್ 1 ತೆಂಗಿನಕಾಯಿ ದರ ಕ್ವಿಂಟಲ್‌ಗೆ ಕನಿಷ್ಠ 25 ಸಾವಿರ ರೂಪಾಯಿ, ಗರಿಷ್ಠ 35 ಸಾವಿರ ರೂಪಾಯಿ ಇದೆ. ಸರಾಸರಿ ದರ 30 ಸಾವಿರ ರೂಪಾಯಿ ಇದೆ. ಹಾಸನದ ಅರಸಿಕೆರೆಯಲ್ಲಿ ಕ್ವಿಂಟಲ್‌ಗೆ 15 ಸಾವಿರ ರೂಪಾಯಿ ಕನಿಷ್ಠ ದರ ಮತ್ತು ಗರಿಷ್ಠ ದರ 31 ಸಾವಿರ ರೂಪಾಯಿ ಇದೆ. ಮಡಿಕೇರಿಯ ಸೋಮವಾರಪೇಟೆಯಲ್ಲಿ 12,500 ರೂಪಾಯಿ ಆಸುಪಾಸಿನಲ್ಲಿದೆ.

ಬೆಂಗಳೂರಿಗೆ ತೆಂಗಿನಕಾಯಿ ಪೂರೈಕೆ ಎಲ್ಲಿಂದ, ದರ ಏರಿಕೆಗೆ ಕಾರಣವೇನು

ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ತುಮಕೂರು, ತಿಪಟೂರು, ಅರಸೀಕೆರೆ ಸೇರಿದಂತೆ ಇತರೆ ಕಡೆಯಿಂದ ಬರುತ್ತಿದ್ದರೇ, ಚಿಕ್ಕಜಾಜೂರು, ಹೊಸದುರ್ಗ, ಹೊಳಲ್ಕೆರೆ, ರಾಮಗಿರಿ, ಚಿತ್ರದುರ್ಗ ಭಾಗದಿಂದ ಹೆಚ್ಚು ತೆಂಗಿನಕಾಯಿ ಆಮದಾಗುತ್ತಿದೆ. ಆದರೆ ಈ ಬಾರಿ ಇಳುವರಿ ಕಡಿಮೆಯಾಗಿರುವ ಕಾರಣ ಪೂರೈಕೆಯೂ ಕಡಿಮೆಯಾಗಿದೆ. ಹೀಗಾಗಿ ದರವೂ ದಿಢೀರ್ ಏರಿಕೆಯಾಗಿದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.

ಕಡಿಮೆ ಇಳುವರಿ, ಎಳನೀರಿಗೆ ರೈತರ ಆದ್ಯತೆ, ತೆಂಗಿನತೋಟ ನಾಶ ಮಾಡಿ ಆ ಜಮೀನುಗಳನ್ನು ನಿವೇಶನಗಳಾಗಿ ಪರಿವರ್ತನೆ ಮಾಡುತ್ತಿರುವುದು, ಅದೂ ಅಲ್ಲದೆ, ವಾಣಿಜ್ಯ ಬೆಳೆ ಅಡಕೆಗೆ ಹೆಚ್ಚು ಒತ್ತು ನೀಡಿದ ಕಾರಣ ರಾಜ್ಯಾದ್ಯಂತ ತೆಂಗಿನ ಇಳುವರಿ ಕಡಿಮೆಯಾಗಿದೆ. ಇದರಿಂದಾಗಿ, ತೆಂಗಿನಕಾಯಿ ದರ ಏರಿಕೆಯಾಗಿದ್ದು ಹೋಟೆಲ್ ಉದ್ಯಮ ಸೇರಿದಂತೆ ಶುಭಸಮಾರಂಭಗಳಿಗೆ ದರದ ಬಿಸಿ ತಟ್ಟಿದೆ.

ಹೋಟೆಲ್ ಉದ್ಯಮಕ್ಕೆ ತಟ್ಟಿದ ಬೆಲೆ ಏರಿಕೆ ಬಿಸಿ

ತೆಂಗಿನಕಾಯಿ ದರ ದಿಢೀರ್ ಗಗನಕ್ಕೇರಿದ ಹಿನ್ನೆಲೆಯಲ್ಲಿ ಅದರ ಬಿಸಿ ಹೋಟೆಲ್ ಉದ್ಯಮಕ್ಕೆ ತಟ್ಟಿದೆ. ತಿಂಡಿ ತಿನಿಸುಗಳ ಜತೆಗೆ ನೆಂಚಿಕೊಳ್ಳಲು ಕೊಡುವ ಕಾಯಿಚಟ್ನಿ ಕೊಡುವುದೇ ಈಗ ಹೋಟೆಲ್ ಮಾಲೀಕರಿಗೆ ತಲೆನೋವಿನ ವಿಚಾರವಾಗಿದೆ. ಬೆಂಗಳೂರು, ದಾವಣಗೆರೆ ಸೇರಿ ವಿವಿಧೆಡೆ ಹೋಟೆಲ್ ಮಾಲೀಕರು ತಿಂಡಿ ಬೆಲೆ ಏರಿಸಲು ಚಿಂತನೆ ನಡೆಸಿದ್ದಾರೆ. ಬಹುತೇಕ ಹೋಟೆಲ್‌ಗಳಲ್ಲಿ, ದರ್ಶಿನಿಗಳಲ್ಲಿ ಕೇಳಿದವರಿಗೆ ಮಾತ್ರವೇ ಚಟ್ನಿ ನೀಡುವ ಪರಿಪಾಠ ಶುರುಮಾಡಿಕೊಂಡಿದ್ದಾರೆ. ಇನ್ನು ಕೆಲವು ಹೋಟೆಲ್‌ಗಳಲ್ಲಿ ತೆಂಗಿನಕಾಯಿ ಕಡಿಮೆ ಬಳಸಿ, ಹುರಿಗಡಲೆ ಹೆಚ್ಚು ಹಾಕಿ ಚಟ್ನಿ ಮಾಡಿ ಕೊಡಲಾರಂಭಿಸಿದ್ದಾರೆ.

ಕಳೆದ ವಾರ 16-18 ರೂಪಾಯಿ ಇದ್ದ ತೆಂಗಿನಕಾಯಿ ದರ ಇದೀಗ 34-35 ರೂಪಾಯಿಗೆ ಏರಿಕೆ ಆಗಿದೆ. ತೆಂಗಿನಕಾಯಿ ಪೂರೈಕೆ ಕೂಡ ತಡವಾಗುತ್ತಿದೆ. ತೆಂಗಿನಕಾಯಿ ದರ ಹೆಚ್ಚಿದ್ದರೂ ಅನಿವಾರ್ಯವಾಗಿ ಬಳಕೆ ಮಾಡುತ್ತಿದ್ದೇವೆ. ಇನ್ನೂ 15 ದಿನ ನೋಡಿ ತೆಂಗಿನಕಾಯಿ ದರ ಇಳಿಕೆ ಆಗದಿದ್ದರೆ ದೋಸೆ ಮತ್ತು ಇತರೆ ತಿಂಡಿ ದರ ಏರಿಕೆ ಮಾಡುವುದಕ್ಕೆ ಹೋಟೆಲ್ ಮಾಲೀಕರು ಚಿಂತನೆ ನಡೆಸಿದ್ದಾರೆ.

Whats_app_banner