ಎಳನೀರು, ತೆಂಗಿನಕಾಯಿ ಬೆಲೆ ಗಗನಮುಖಿ; ಯುಗಾದಿ ಹಬ್ಬಕ್ಕೆ ತಟ್ಟಿದ ಬೆಲೆ ಏರಿಕೆ ಬಿಸಿ; ಇನ್ನೂ 3 ತಿಂಗಳು ಇದೇ ಸ್ಥಿತಿ!
ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಕೊರತೆ ಉಂಟಾಗಿದೆ. ಇದಕ್ಕೆ ಎಳನೀರಿಗೆ ಬೇಡಿಕೆ ಹೆಚ್ಚಾಗುತ್ತಿರುವುದೇ ಕಾರಣ. ಕಳೆದ ಎರಡು ತಿಂಗಳಿನಿಂದ ಬಿಸಿಲು ಹೆಚ್ಚಾಗಿದ್ದು ಎಳನೀರು ಕುಡಿಯುವವರ ಸಂಖ್ಯೆ ಏರಿಕೆ ಕಂಡಿದೆ.

ಬೆಂಗಳೂರು: ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು ದಿನದಿಂದ ದಿನಕ್ಕೆ ತೆಂಗಿನಕಾಯಿ ಬೆಲೆ ಏರುತ್ತಲೇ ಇದೆ. ಇದಕ್ಕೆ ಪೃಯಾಯವಾಗಿ ಎಳನೀರಿನ ಬೆಲೆಯೂ ಏರುತ್ತಲೇ ಇದೆ. ಅಡುಗೆಗೆ ಎಂತಹುದೋ ಒಂದು ತೆಂಗಿನಕಾಯಿ ಬಳಸಿ ಅಡುಗೆ ಮಾಡಬಹುದು. ಆದರೆ ಒಬ್ಬಟ್ಟು ಮಾಡಲು ಚೆನ್ನಾಗಿ ಬಲಿತ, ದಪ್ಪನೆಯ ತೆಂಗಿನಕಾಯಿಯೇ ಆಗಬೇಕು. ಆಗ ಮಾತ್ರ ಒಬ್ಬಟ್ಟು ರುಚಿಕಟ್ಟಾಗಿ ಬರುತ್ತದೆ. ಹೀಗಾಗಿ ತೆಂಗಿನಕಾಯಿ ಬೆಲೆ ಗಗನಮುಖಿಯಾಗುತ್ತೇ ಇದೆ. ಎಳನೀರಿಗೆ ಬೇಡಿಕೆ ಹೆಚ್ಚಿರುವುದು ಮೊದಲನೆಯ ಕಾರಣವಾದರೆ ಹಬ್ಬದ ನೆಪದಲ್ಲಿ ಬೆಲೆ ಏರುತ್ತಿರುವುದು ಎರಡನೆಯ ಕಾರಣವಾಗಿದೆ.
ಮತ್ತೊಂದು ಕಡೆ ಮದುವೆ, ನಾಮಕರಣ ಮೊದಲಾದ ಶುಭ ಸಮಾರಂಭಗಳು ಆರಂಭವಾಗಿದ್ದು, ಬೆಲೆ ಏರಿಕೆಗೆ ಕೊಡುಗೆ ನೀಡಿದೆ. ಇನ್ನು ತೆಂಗಿನಕಾಯಿ ಬೆಲೆ ನೋಡುವುದಾದರೆ ಅಡುಗೆಗೆ ಬಳಸುವ ಚೆನ್ನಾಗಿ ಬಲಿತ ತೆಂಗಿನಕಾಯಿ ಒಂದಕ್ಕೆ 60-70 ರೂಪಾಯಿಗೆ ಮಾರಾಟವಾಗುತ್ತಿದೆ. ಎಳನೀರಿನ ಬೆಲೆಯೂ ಇದೇ ಬೆಲೆಗೆ ಮಾರಾಟವಾಗುತ್ತಿದೆ. ಆಸ್ಪತ್ರೆಗಳ ಬಳಿ ಎಳನೀರು 70-80 ರೂ. ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದು ಇವತ್ತಿನ ಬೆಲೆಯಾದರೆ ಉಗಾದಿ ಹಬ್ಬವನ್ನು ಭಾನುವಾರ ಆಚರಿಸಲಾಗುತ್ತಿದ್ದು, ಆ ವೇಳೆಗೆ ಬೆಲೆ ಮತ್ತಷ್ಟು ಹೆಚ್ಚಳವಾದರೂ ಆಶ್ಚರ್ಯವಿಲ್ಲ.
ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಕೊರತೆ ಉಂಟಾಗಿದೆ. ಇದಕ್ಕೆ ಎಳನೀರಿಗೆ ಬೇಡಿಕೆ ಹೆಚ್ಚಾಗುತ್ತಿರುವುದೇ ಕಾರಣ. ಕಳೆದ ಎರಡು ತಿಂಗಳಿನಿಂದ ಬಿಸಿಲು ಹೆಚ್ಚಾಗಿದ್ದು ಎಳನೀರು ಕುಡಿಯುವವರ ಸಂಖ್ಯೆ ಏರಿಕೆ ಕಂಡಿದೆ. ವ್ಯಾಪಾರಿಯೊಬ್ಬರು ಪ್ರತಿದಿನ 500 ಎಳನೀರು ಮಾರಾಟ ಮಾಡುವುದಾಗಿ ಹೇಳುತ್ತಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಎಳನೀರಿಗೆ ಉತ್ತಮ ಬೆಲೆ ಲಭ್ಯವಾಗುತ್ತಿದ್ದು, ರೈತರು ತೋಟಗಳಲ್ಲಿ ಎಳನೀರನ್ನೇ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ತೆಂಗಿನಕಾಯಿ ಅಲಭ್ಯವಾಗಿದೆ. ಎಳನೀರನ್ನು ಇಳಿಸಿದರೆ ತೆಂಗಿನಮರದ ಬೆಳವಣಿಗೆಗೆ ಹಾನಿ ಎಂದು ಹೇಳಲಾಗುತ್ತಿದೆಯಾದರೂ ಆರ್ಥಿಕ ಲಾಭದ ಮುಂದೆ ಇದಾವುದೂ ಪರಿಗಣನೆಗೆ ಬರುತ್ತಿಲ್ಲ.
ತೆಂಗಿನಕಾಯಿ 100 ರೂ ತಲುಪಬಹುದು
ಮರಗಳ ಆಯಸ್ಸು ಕಡಿಮೆಯಾದರೂ ಚಿಂತೆಯಿಲ್ಲ. ಕೈತುಂಬ ಕಾಸು ನೋಡವುದೇ ಮುಖ್ಯ ಎಂದು ಮಾರಾಟಕ್ಕೆ ಎಳನೀರು ತಂದಿದ್ದ ರೈತರೊಬ್ಬರು ಅಭಿಪ್ರಾಯಪಡುತ್ತಾರೆ. ಪ್ರಸ್ತುತ ತೆಂಗಿನಕಾಯಿ ಕೆಜಿಗೆ 60-70 ರೂಗೆ ಮಾರಾಟವಾಗುತ್ತಿದ್ದು, ಹಬ್ಬದ ಮುನ್ನಾದಿನ 80-90 ರೂ. ತಲುಪಿದರೂ ಅಚ್ಚರಿಯಿಲ್ಲ ಎನ್ನುತ್ತಾರೆ. ಇದೇ ರೀತಿ ಉಷ್ಣಾಂಶ ಮುಂದುವರೆದರೆ ಮೇ ವೇಳೆಗೆ 100 ರೂ. ತಲುಪಬಹುದು ಎಂದು ಹೋಲ್ ಸೇಲ್ ವ್ಯಾಪಾರಿಯೊಬ್ಬರು ಊಹಿಸುತ್ತಾರೆ. ಹೇಳುತ್ತಾರೆ. 2024ರ ಕೊನೆಯಲ್ಲಿ ಉತ್ತಮ ತೆಂಗಿನಕಾಯಿ 45-50 ರೂಗೆ ಮಾರಾಟವಾಗುತ್ತಿತ್ತು.
ಕಲ್ಪವೃಕ್ಷದ ಜಿಲ್ಲೆ ಎಂದೇ ಹೆಸರಾದ ತುಮಕೂರು ಜಿಲ್ಲೆಯ ತಿಪಟೂರು, ಗುಬ್ಬಿ, ತುರುವೇಕೆರೆ ತಾಲೂಕುಗಳಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಿದೆ. ಜಿಲ್ಲೆಯ ಶೇ.60-70 ರಷ್ಟು ತೆಂಗು ಎಳನೀರಿನ ಮಾರುಕಟ್ಟೆಗೆ ಹೋಗುತ್ತಿದೆ. ಹಾಗಾಗಿ ಬಲಿತ ತೆಂಗಿನಕಾಯಿಗೆ ಕೊರತೆ ಉಂಟಾಗಿದೆ ಎಂದು ರೈತರೇ ಹೇಳುತ್ತಾರೆ.
ಕೃಷಿಕರು, ಗ್ರಾಹಕರಿಬ್ಬರಿಗೂ ಹೊಡೆತ
ಇದು ಕೇವಲ ಕರ್ನಾಟಕದ ವ್ಯಥೆ ಅಲ್ಲ. ಕೇರಳ, ಆಂಧ್ರತಪ್ರದೇಶ, ತಮಿಳುನಾಡು ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದೆ. ತೆಂಗು ಆಧಾರಿತ ಕೈಗಾರಿಕೆಗಳ ಪ್ರಕಾರ ಶೇ.65 ರಷ್ಟು ತೆಂಗಿನಕಾಯಿ ಕೊರತೆ ಉಂಟಾಗಿದೆ. ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಬಳಿ ತೆಂಗಿನಕಾಯಿ ಮತ್ತು ಕೊಬ್ಬರಿ ಸ್ಟಾಕ್ ಇಲ್ಲವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಭವಿಷ್ಯದಲ್ಲಿ ಕೃಷಿಕರು ಮತ್ತು ಗ್ರಾಹಕರಿಬ್ಬರಿಗೂ ಹೊಡೆತ ಬೀಳುತ್ತದೆ ಎಂದು ಮಾರುಕಟ್ಟೆ ತಜ್ಞರು ಊಹಿಸುತ್ತಾರೆ.
ಬೇಡಿಕೆ ಇರುವುದರಿಂದ ಎಳನೀರನ್ನು ಹೊರ ರಾಜ್ಯಗಳಿಗೆ ಪೂರೈಕೆ ಮಾಡಲಾಗುತ್ತಿದ್ದು, ಸ್ಥಳಿಯವಾಗಿ ತೆಂಗಿನಕಾಯಿ ಬೆಲೆ ಹೆಚ್ಚಳವಾಗುತ್ತಿದೆ. ತೆಂಗಿನಕಾಯಿ, ಕೊಬ್ಬರಿಗಿಂತ ಎಳನೀರು ಮಾರಾಟವೇ ಸುಲಭ ಮತ್ತು ಲಾಭವೂ ಹೆಚ್ಚು ಎನ್ನುವುದು ರೈತರ ಅಭಿಪ್ರಾಯ. ತೆಂಗಿನಕಾಯಿ ಕೀಳಿಸಬೇಕು, ಸುಲಿಸಬೇಕು. ಕೊಬ್ಬರಿ ಮಾಡಲು ಮತ್ತಷ್ಟು ಬಂಡವಾಳ ಹೂಡಬೇಕು ಎಂಬ ಕಾರಣದಿಂದ ಎಳನೀರನ್ನೇ ಕಿತ್ತು ಮಾರಾಟ ಮಾಡಲಾಗುತ್ತದೆ. ಈ ಕಾರಣದಿಂದ ತೆಂಗಿನಕಾಯಿ ಮತ್ತು ಕೊಬ್ಬರಿ ಬೆಲೆಯೂ ಏರಿಕೆಯಾಗುತ್ತಿದೆ.
