Forests of Karnataka: ಕಾಡ ನೋಡ ಹೋದೆ, ನೆನಪಿನೊಂದಿಗೆ ಬಂದೆ; ಕಾಡಿನ ಸಂಸ್ಕೃತಿಯ ಅನುಭೂತಿಗೆ ಇಲ್ಲಿದೆ ಅಕ್ಷರರೂಪ - ಕಾಡಿನ ಕಥೆಗಳು ಅಂಕಣ
Karnataka Forests: ಕಾಡೆಂದರೆ ಬರೀ ಗಿಡ, ಮರ, ಹಕ್ಕಿ, ಪ್ರಾಣಿಗಳ ತಾಣವಲ್ಲ. ಕಾಡೆಂದರೆ ತನ್ನದೇ ಆದ ಅಸ್ಮಿತೆ ಇರುವ ಸಂಸ್ಕೃತಿ. ಅದನ್ನು ಅನುಭವಿಸುವುದೇ ವಿಶಿಷ್ಟ ಅನುಭೂತಿ. ಕಾಡಿನೊಂದಿಗೆ ನಮ್ಮ ಪ್ರೀತಿ ಹೇಗಿರಬೇಕು? ಕಾಡು ನಮ್ಮನ್ನು ಹೇಗೆ ಸ್ವೀಕರಿಸುತ್ತದೆ? 'ಕಾಡಿನ ಕಥೆಗಳು' ಅಂಕಣದ ಮೂಲಕ ಉತ್ತರ ಹುಡುಕುತ್ತಿದ್ದಾರೆ ಪತ್ರಕರ್ತ ಕುಂದೂರು ಉಮೇಶ ಭಟ್ಟ
ಕರ್ನಾಟಕದ ಅರಣ್ಯ ಇಲಾಖೆಯಲ್ಲಿ (Karnataka Forest Department) ಮರೆಯಲಾಗದಂತಹ ಕೆಲಸ ಮಾಡಿರುವ ಎ.ಸಿ.ಲಕ್ಷ್ಮಣ ಅವರು ಇಲಾಖೆ ಕಾರ್ಯದರ್ಶಿಯಾಗಿದ್ದರು. ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು, ಅರಣ್ಯ ಸಚಿವರಾಗಿದ್ದ ಕೆ.ಎಚ್.ಪಾಟೀಲರಂತಹವರಿಗೆ ಅರಣ್ಯದ ವಿಚಾರದಲ್ಲಿ ನಿಷ್ಠುರವಾಗಿ ಹೇಳುವಂತಹ ಛಾತಿ ಹೊಂದಿದ್ದ ಲಕ್ಷ್ಮಣರಿಗೆ ಈಗ 83 +ವರ್ಷ. ಹತ್ತಾರು ಬಿದಿರಿನ ತಳಿಗಳನ್ನು ಕರ್ನಾಟಕದ ಅರಣ್ಯಕ್ಕೆ ಪರಿಚಯಿಸಿದ ಲಕ್ಷ್ಮಣ ಅವರ ಹೆಸರಿನ ಬಿದಿರು ತಳಿಗೆ ಹೆಸರಿಟ್ಟು ಅಮೆರಿಕಾ ಕೂಡ ಗೌರವ ನೀಡಿದೆ
ಲಕ್ಷ್ಮಣ ಅವರಿಗೆ ಈಗಲೂ ಕಾಡಿನದ್ದೇ ಪ್ರೀತಿ. ಪ್ರತೀ ಮಾತಿನಲ್ಲೂ ಅದು ಧ್ವನಿಸುತ್ತದೆ. ಮೂರು ವರ್ಷದ ಹಿಂದೆ ಲಕ್ಷ್ಮಣ ಅವರಿಗೆ ತಾವು 70ರ ದಶಕದಲ್ಲಿ ಶಿವಮೊಗ್ಗದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದಾಗ ಬೆಳೆಸಿದ ಅರಣ್ಯ ಹೇಗಿದೆ ಎಂದು ನೋಡುವ ಆಸೆಯಾಯಿತು. ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ ನಾನು ಮೂರು ದಿನ ಬರುವೆ ಎಂದು ತಿಳಿಸಿದರು. ಶಿವಮೊಗ್ಗದಲ್ಲಿ ಲಕ್ಷ್ಮಣ ಅವರು ಎಲ್ಲೆಲ್ಲಿ ಅರಣ್ಯ ಅಭಿವೃದ್ದಿಪಡಿಸಿದ್ದರು ಎನ್ನುವ ಮಾಹಿತಿಗಳನ್ನು ಇಲಾಖೆಯವರು ಸಂಗ್ರಹಿಸಿದರು. ಲಕ್ಷ್ಮಣ ಅವರು 80ರ ಇಳಿ ವಯಸ್ಸಿನಲ್ಲೂ 30ರ ಉತ್ಸಾಹಿಯಂತೆ ಅರಣ್ಯದೊಳಗೆ ಹೆಜ್ಜೆ ಹಾಕುತ್ತಾ ಸಸಿಗಳು ಹೆಮ್ಮರವಾಗಿ ಬೆಳೆದಿದ್ದನ್ನು ನೋಡಿ ತಬ್ಬಿಕೊಂಡರು. ಪ್ರೀತಿಯಿಂದ ಮುತ್ತಿಟ್ಟು ಖುಷಿಪಟ್ಟರು. ಇದೇ ರೀತಿ ಹಿಂದೆ ಮೈಸೂರು ಜಿಲ್ಲೆಯಲ್ಲಿದ್ದು ಈಗ ಚಾಮರಾಜನಗರ ಜಿಲ್ಲೆಯ ಭಾಗವಾಗಿರುವ ಬಿಳಿಗಿರಿ ರಂಗನ ಬೆಟ್ಟ ಅರಣ್ಯ ಪ್ರದೇಶದಲ್ಲೂ ಇಂತದೇ ನೆನಪಿನ ಹೆಜ್ಜೆಗಳನ್ನುಲಕ್ಷ್ಮಣ ಹಾಕಿದರು. ತಾವು ಬೆಳೆಸಿದ್ದ ಆ ಪ್ರೀತಿಯ ಅರಣ್ಯವನ್ನು ಕಂಡವರಿಗೆ ಏನೋ ಖುಷಿ. ಲಕ್ಷ್ಮಣ ಅವರು ತಮ್ಮ ಭೇಟಿಯ ನೆನಪಿಗೆ ಮತ್ತಷ್ಟು ಸಸಿ ನೆಟ್ಟು ಅಧಿಕಾರಿಗಳು, ಸಿಬ್ಬಂದಿಯ ಬೆನ್ನು ತಟ್ಟಿಯೂ ಬಂದರು. ಲಕ್ಷ್ಮ,ಣ ಅವರ ಈ ಹಸಿರು ಯಾನ ಕರುನಾಡಿನ ಅರಣ್ಯ ಬೆಳೆದ ದ್ಯೋತಕದಂತಿದೆ.
ಕರ್ನಾಟಕದಲ್ಲಿ ನೀತಿ ನಿರೂಪಿಸುತ್ತಲೇ ಅರಣ್ಯಕ್ಕೆ ಜೀವ ತುಂಬಿದ ಮಹನೀಯರು ಲಕ್ಷ್ಮಣ ಅವರಂತೆ ಹಲವರಿದ್ದಾರೆ. ಕರುನಾಡು ಹಸಿರಾಗಿಯೇ ಇರಲಿ. ಕಾಡು ಕಳೆದುಕೊಂಡು ಜನರಿಗೆ ಅಪಾಯಗಳು ಬಾರದಿರಲಿ ಎಂದು ಅರವತ್ತರ ದಶಕದಲ್ಲೇ ನೂರಾರು ಮಂದಿ ಹಾಕಿಕೊಟ್ಟ ಅಡಿಪಾಯಗಳು ಗಟ್ಟಿಯಾಗಿವೆ ಇವೆ.
ಕರುನಾಡ ಅರಣ್ಯ ಹೀಗಿದೆ
ದೇಶದಲ್ಲೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ 7ನೇ ಸ್ಥಾನದಲ್ಲಿದೆ ಕರ್ನಾಟಕ. ಶ್ರೀಗಂಧ, ಬೀಟೆ, ತೇಗದ ಸಮೃದ್ದ ನಾಡು ನಮ್ಮ ಕರುನಾಡು. ಪಶ್ಚಿಮಘಟ್ಟದ ಸಾಲೇ ನಮ್ಮ ಪ್ರಮುಖ ಅರಣ್ಯ. ಹುಲಿ, ಆನೆಗಳನ್ನು ಅತಿ ಹೆಚ್ಚು ಹೊಂದಿರುವ ಹಿರಿಮೆಯೂ ಕರ್ನಾಟಕಕ್ಕೆ ಇದೆ. ವರ್ಷದ ಹಿಂದೆ ಕೇಂದ್ರ ಅರಣ್ಯ, ಪರಿಸರ ಸಚಿವಾಲಯ ಬಿಡುಗಡೆ ಮಾಡಿದ ಅರಣ್ಯ ಸಂರಕ್ಷಣೆ ವರದಿಯಲ್ಲಿ ದೇಶದ ಅರಣ್ಯಗಳ ಸ್ಥಿತಿಗತಿಯ ಮಾಹಿತಿಯಿದೆ. ದೇಶದಲ್ಲಿ ಶೇ.24.6ರಷ್ಟು ಮಾತ್ರ ಅರಣ್ಯವಿದೆ. ಭಾರತದ ಒಟ್ಟು ಅರಣ್ಯ ಪ್ರದೇಶ 8,09,531 ಚದರ ಕಿ.ಮಿ. ಕರ್ನಾಟಕದ್ದು 43,382 ಚದರ ಕಿ.ಮಿ. ಈಶಾನ್ಯ ರಾಜ್ಯಗಳನ್ನು ಬಿಟ್ಟರೆ ಎಲ್ಲೆಡೆ ಅರಣ್ಯದ ಪ್ರಮಾಣ ಕಡಿಮೆಯೇ ಇದೆ. ಕರ್ನಾಟಕದಲ್ಲಿ ಶೇ.22.61ರಷ್ಟು ಅರಣ್ಯ ಭೂಮಿಯಿದೆ. ದೇಶದ ಒಟ್ಟು ಅರಣ್ಯದಲ್ಲಿ ಕರ್ನಾಟಕದ ಪಾಲು ಶೇ.5.83ರಷ್ಟು. ಅರಣ್ಯ ಪ್ರದೇಶ ಶೇ.33ರಷ್ಟಾದರೂ ಇರಬೇಕು ಎನ್ನುವ ನಿರೀಕ್ಷೆಯೂ ಇದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದರೂ ಗುರಿ ತಲುಪುವುದು ಸುಲಭವಲ್ಲ. ಇದು ಒಬ್ಬರಿಂದ ಆಗುವಂತದ್ದೂ ಅಲ್ಲ. ನಮ್ಮೆಲ್ಲರ ಜವಾಬ್ದಾರಿಯೂ ಇದ್ದೇ ಇದೆ.
ಇದಕ್ಕೆ ಕಾರಣಗಳೂ ಇಲ್ಲವೆಂದೇನೂ ಇಲ್ಲ. ಈ ಬೇಸಿಗೆಯಲ್ಲಿ ನಿಮ್ಮ ಮನೆಯ ನಲ್ಲಿಯಲ್ಲಿ ನೀರು ನಿಂತು ಹೋದಾಗ, ಊರಿನಲ್ಲಿ ಬಿಸಿಲ ಗಾಳಿ ಬೀಸಿದಾಗ ಅಬ್ಬಬ್ಬಾ ಎಂತಹ ಕಾಲ ಬಂದು ಬಿಟ್ಟಿತಲ್ಲ ಎಂದು ನಿಡುಸುಯ್ಯುವಲ್ಲಿಯೂ ನಮ್ಮ ಅರಣ್ಯದ ಕಾಣ್ಕೆಯೂ ಇದೆ. ಏಕೆಂದರೆ ಕಾಡಿದ್ದರೆ ಮಳೆ, ಮಳೆಯಿದ್ದರೆ ನೀರು. ಮರಗಳಿದ್ದರೆ ತಂಗಾಳಿ, ಬದುಕು ನಿರಾಳ. ಜಾಗತಿಕ ತಾಪಮಾನದ ಕುರಿತು ಹತ್ತಾರು ಕಥಾನಕಗಳನ್ನು ಕೇಳಿ ಮುಂದೇನಾಗುವುದೋ ಎಂಬ ಆತಂಕ ನಮ್ಮ ಕಣ್ಣ ಮುಂದೆ ಬಂದರೂ ಕನಿಷ್ಠ ಒಂದು ಸಸಿಯನ್ನಾದರೂ ನೆಡೋಣ. ಅದನ್ನು ಮರವಾಗಿಸುವೆಡೆಗೆ ಗಮನ ಕೊಡೋಣ ಎನ್ನುವ ಶಪಥ ಮಾಡಿಕೊಂಡರೆ ಜಾಗತಿಕ ತಾಪಮಾನದ ಆತಂಕ್ಕೆ ಪರಿಹಾರವನ್ನು ನಾವೇ ಕಂಡುಕೊಳ್ಳಬಹುದು. ಕಾಡನ್ನು ನಾವು ಪ್ರೀತಿಸುವುದೂ ಇದಕ್ಕೆ ಒಂದು ಮಾರ್ಗವೇ.
ಕಾಡನ್ನು ನಾವೇಕೆ ಪ್ರೀತಿಸಬೇಕು
ಕಾಡಿನ ಒಳಗೆ ಪ್ರವೇಶಿಸುವುದೇ ಒಂದು ಭಿನ್ನ ಅನುಭವ. ಹಸಿರು ಹೊದ್ದ ಮರಗಳ ಸಾಲು., ಹಕ್ಕಿಗಳ ಕಲರವ, ವನ್ಯಪ್ರಾಣಿಗಳ ಸ್ವಚ್ಛಂದ ವಿಹಾರ, ಮುಗಿಲೆತ್ತಕ್ಕೆ ಬೆಳೆದ ಮರಗಳೊಂದಿಗೆ ಆಕಾಶಕ್ಕೆ ದಿಟ್ಟಿಸಿದರೆ ಸಿಗುವ ಅನುಭೂತಿ., ಸಂಜೆಯಾದ ನಂತರ ಬದಲಾಗುವ ಅರಣ್ಯ ನೋಡುವ ರೀತಿ, ರಾತ್ರಿಯ ಕಾರ್ಗತ್ತಲಿನಲ್ಲಿ ಕಾಡಿನ ನೋಟ.. ಇವುಗಳನ್ನು ಅನುಭವಿಸಿಯೇ ತೀರಬೇಕು. ಗದ್ದಲಕ್ಕೆ ಆಸ್ಪದ ಕೊಡದೇ ನೀರವ ಮೌನವದ ಆ ಕ್ಷಣಗಳು ಎಂತಹ ಒತ್ತಡಗಳನ್ನುದೂರ ಮಾಡುವ ಶಕ್ತಿ ಪಡೆದಿವೆ. ಕಾಡೆಂಬುದು ತಾಯಿಯಂತೆ ಸಂತೈಸುವ ಮಹಾ ಒಡಲು. ಅಲ್ಲಿ ಜಗತ್ತಿನ ಎಲ್ಲ ಜಂಝಡಗಳನ್ನು ಮರೆತು ಧ್ಯಾನಿಯಾಗಿ ಕುಳಿತರೆ ಸಿಗುವ ಆನಂದವನ್ನು ಅನುಭವಿಸಿಯೇ ತೀರಬೇಕು. ಇದಕ್ಕೆಲ್ಲಾ ಇರುವ ಮಾರ್ಗ ಕಾಡ ಯಾನ.
ತಿಂಗಳಿಗೆ ಒಮ್ಮೆ ಇಲ್ಲದೇ ಇದ್ದರೆ ಮೂರು ತಿಂಗಳಿಗೆ ಒಮ್ಮೆಯಾದರೂ ಕಾಡ ಕಡೆ ಹೋಗಿ ಬನ್ನಿ. ಸಾಧ್ಯವಾದರೆ ಒಂದು ರಾತ್ರಿ ಅಲ್ಲಿಯೇ ಉಳಿಯಲು ಪ್ರಯತ್ನಿಸಿ. ಸ್ನೇಹಿತರು, ಕುಟುಂಬಸ್ಥರು, ಆತ್ಮೀಯರ ಜತೆಗಿರಲಿ ಕಾಡಿನ ಪಯಣ. ಇಷ್ಟವಾದುದನ್ನು ನೋಡಿ. ಕಾಡಿನ ಬಗ್ಗೆ ಇರುವ ಕುತೂಹಲದ ಅಂಶಗಳನ್ನು ತಿಳಿದುಕೊಳ್ಳಿ. ಪ್ರಾಣಿ, ಪಕ್ಷಿಗಳ ಬದುಕಿನ ವಿಶೇಷತೆಗಳನ್ನು ಅರಿಯಲು ಪ್ರಯತ್ನಿಸಿ. ಗಿಡ-ಮರಗಳ ಕುರಿತಾಗಿಯೂ ಇರುವ ವಿಷಯಗಳು ನಿಮ್ಮ ಜ್ಞಾನದ ಭಾಗವಾಗಲಿ. ಹೋದ ಖುಷಿಗೆ ಸಸಿ ನೆಟ್ಟು ಬನ್ನಿ. ಅರಣ್ಯ ಇಲಾಖೆಯಲ್ಲೇ ಸಿಗುವ ಬೀಜಗಳನ್ನಾದರೂ ಅರಣ್ಯದಲ್ಲಿ ಹಾಕಿ ಬನ್ನಿ. ಮುಂದೆ ಅದೇ ಹೆಮ್ಮರವಾಗಿ ಬೆಳೆದು ಅರಣ್ಯ ಬೆಳೆಯಲು ನಿಮ್ಮ ಸಣ್ಣ ಕೊಡುಗೆಯು ಸಮಾಧಾನ ತರಬಹುದು. ಕಾಡಿನ ನಿವಾಸಿಗಳೇ ಆಗಿರುವ ಗಿರಿಜನರು, ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೂ ಮಾತುಕತೆಗೂ ಒಂದಷ್ಟು ಸಮಯ ಮೀಸಲಿಡಿ. ಈ ಕಾಡ ಯಾನ ನಿಮ್ಮ ಬದುಕಿನ ನೋಟವನ್ನೇ ಬದಲಿಸಬಹುದು.
ಇನ್ನೊಂದು ಮುಖವೂ ಇದೆ
ವಿಶ್ವ ಪರಿಸರ ದಿನ ಮುಗಿದಿದೆ. ಕಾಡು, ಹಸಿರು, ಪ್ರಕೃತಿಯನ್ನು ಪ್ರೀತಿಸುವವರಿಗೆ ಇದು ಒಂದು ದಿನದ ಆಚರಣೆ ಅಲ್ಲವೇ ಅಲ್ಲ. ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಅರಣ್ಯ ಇಲಾಖೆ ಹತ್ತಾರು ಚಟುವಟಿಕೆಗಳನ್ನು ರೂಪಿಸುತ್ತದೆ. ಹೆಮ್ಮರವಾಗಿ ಬೆಳೆದಿರುವ ಪರಿಸರ ಪ್ರವಾಸೋದ್ಯಮದ ಕರಾಳ ಮುಖದಂತೆ ಕಾಣುವ ತ್ಯಾಜ್ಯವನ್ನು ತೆಗೆದು ಹಾಕುವುದು ಅರಣ್ಯ ಇಲಾಖೆಗೆ ವಿಶ್ವ ಪರಿಸರ ದಿನದ ಭಾಗವೂ ಆಗಿ ಹೋಗಿದೆ. ಕಾಡ ನೋಡಲು ಬರುವವರು ಅಲ್ಲಿಂದ ಸ್ವಚ್ಚಂದ ಪರಿಸರ, ಶುದ್ದ ಗಾಳಿಯೊಂದಿಗೆ ಬೆರೆತು ಹೋಗುವವರು ಕಡಿಮೆಯೇ. ಕಾಡು ಎಂದರೆ ಮೋಜು ಮಸ್ತಿಯ ತಾಣ ಎನ್ನುವುದೇ ಬಹಳಷ್ಟು ಜನರ ನಂಬಿಕೆ. ಅಲ್ಲಿ ಸಿಕ್ಕುವ ಬಾಟಲಿಗಳು, ಪ್ಲಾಸ್ಟಿಕ್ ರಾಶಿ ಯಾವುದೇ ನಗರ ಪ್ರದೇಶಕ್ಕೂ ಕಾಡೂ ಕಡಿಮೆ ಇಲ್ಲ ಎನ್ನುವಂತೆಯೇ ತೋರುತ್ತದೆ. ಮನುಷ್ಯನ ಬದುಕಿಗೆ ಮೋಜು ಬೇಕು ನಿಜ. ಆದರೆ ಕಾಡಿನ ಅನನ್ಯತೆಯನ್ನೇ ಹಾಳು ಮಾಡುವಷ್ಟರ ಮಟ್ಟಿಗೆ ಬೇಕೇ ಎಂದು ನಮ್ಮನ್ನು ನಾವೇ ಹಾಕಿಕೊಳ್ಳಬೇಕಾದ ಪ್ರಶ್ನೆ. ಇದಕ್ಕೆ ಉತ್ತರವೂ ನಮ್ಮಲ್ಲೇ ಇದೆ.
ಕೆಲ ದಿನಗಳ ಹಿಂದೆ ಕಾಡಿನ ರಸ್ತೆ ನೋಡಿ ಬರೋಣ ಎಂದು ಹೊರಟೆ. ಡ್ರೈವ್ ಮುಗಿಸಿ ವಾಪಾಸಾಗುವಾಗ ಕಾಡ ನೋಡ ಹೋದೆ.. ಎನ್ನುವ ಹಾಡು ಗುನುಗುತ್ತಿರುವಾಗ ನಾಗರಹೊಳೆ ಗಡಿಯಂಚಿನ ಗಿರಿಜನರ ಕಾಲೋನಿಯಲ್ಲಿ ನಂಗ ಕಾಡು, ನಂಗ ಹಾಡಿ ನಂಗಾವೇ ಆಳಾಕು.. ಹಾಡು ಕೇಳುತ್ತಿತ್ತು. ಗಿರಿಜನರ ಆ ಅರಣ್ಯ ಪ್ರೀತಿ ನಮ್ಮಲ್ಲೂ ಬಂದರೆ ಹೇಗಿರಬಹುದು ಎಂದು ಮೈಸೂರಿನ ಕಡೆ ಹೊರಟೆ.
1) ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.
2) ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: ht.kannada@htdigital.in