ಸಿದ್ದರಾಮಯ್ಯ ಸಂಪುಟದ ಸದಸ್ಯರಿಗೆ ತೀರದ ಸಂಕಷ್ಟ; ಮತ್ತೋರ್ವ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು
ಕನ್ನಡ ಸುದ್ದಿ  /  ಕರ್ನಾಟಕ  /  ಸಿದ್ದರಾಮಯ್ಯ ಸಂಪುಟದ ಸದಸ್ಯರಿಗೆ ತೀರದ ಸಂಕಷ್ಟ; ಮತ್ತೋರ್ವ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು

ಸಿದ್ದರಾಮಯ್ಯ ಸಂಪುಟದ ಸದಸ್ಯರಿಗೆ ತೀರದ ಸಂಕಷ್ಟ; ಮತ್ತೋರ್ವ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವ ಎನ್ಎಸ್ ಬೋಸರಾಜು ಅವರ ವಿರುದ್ಧ ಆರ್‌ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಬೋಸರಾಜು ಅವರು ತಮ್ಮ ಪತ್ನಿ ಹೆಸರಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ಅವರ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ಕೋರಿದ್ದಾರೆ.

ಸಿದ್ದರಾಮಯ್ಯ ಸಂಪುಟ ಸದಸ್ಯರಿಗೆ ತೀರದ ಸಂಕಷ್ಟ; ಮತ್ತೋರ್ವ ಸಚಿವರ ವಿರುದ್ಧ ದೂರು
ಸಿದ್ದರಾಮಯ್ಯ ಸಂಪುಟ ಸದಸ್ಯರಿಗೆ ತೀರದ ಸಂಕಷ್ಟ; ಮತ್ತೋರ್ವ ಸಚಿವರ ವಿರುದ್ಧ ದೂರು (PTI File)

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರವಲ್ಲ, ಅವರ ಸಂಪುಟದ ಸಹದ್ಯೋಗಿಗಳಿಗೂ ಸಂಕಷ್ಟ ತಪ್ಪಿದ ಹಾಗಿಲ್ಲ. ಒಬ್ಬೊಬ್ಬರೇ ಸಚಿವರ ವಿರುದ್ಧ ದೂರು ದಾಖಲಾಗುತ್ತಿವೆ. ಇದೀಗ ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ಅವರ ಸರದಿ. ರಾಜ್ಯ ಸಚಿವ ಸಂಪುಟದ ಮತ್ತೊಬ್ಬ ಸಚಿವ ಎನ್ಎಸ್ ಬೋಸರಾಜು ಅವರ ವಿರುದ್ಧ ಆರ್‌ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜಭವನದ ಬಾಗಿಲು ತಟ್ಟಿದ್ದಾರೆ. ಸಚಿವ ಬೋಸರಾಜು ಅವರು ತಮ್ಮ ಪತ್ನಿ ಹೆಸರಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ಅವರ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ದಿನೇಶ್ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಸಚಿವರ ಪತ್ನಿ ಮತ್ತು ಇತರರು ರಾಯಚೂರಿನ ರಕ್ಷಿತಾರಣ್ಯ ಪ್ರದೇಶದಲ್ಲಿ ಒಟ್ಟು 5 ಎಕರೆ 27 ಗುಂಟೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ. ಈ ಸಂಬಂಧ ಅರಣ್ಯ ಇಲಾಖೆಯಲ್ಲಿ ಈ ಹಿಂದೆಯೇ ದೂರು ದಾಖಲಿಸಲಾಗಿದೆ. ರಾಯಚೂರು ಉಪವಲಯ ಅರಣ್ಯಾಧಿಕಾರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ. ಆ ವರದಿ ಪ್ರಕಾರ ಬೋಸರಾಜು ಅವರ ಪತ್ನಿ ಎನ್ಎಸ್ ಕೃಷ್ಣವೇಣಿ, ಸಿಎಚ್ ಶ್ರೀನಿವಾಸ್, ಮುತ್ಯಾಲ ತಿರುಮಲ ಮತ್ತು ವಿ ಶಿವನಾದ ಆರೋಪಿಗಳಾಗಿದ್ದಾರೆ.

ಕೃಷ್ಣವೇಣಿ ಅವರು ಅರಣ್ಯ ಒತ್ತುವರಿಯಲ್ಲಿ ತಮ್ಮ ಪ್ರಭಾವವನ್ನು ಬಳಕೆ ಮಾಡಿದ್ದಾರೆ. ಭೂಮಿ ಒತ್ತುವರಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸೃಜನಪಕ್ಷಪಾತ ಎಸಗಿದ್ದಾರೆ. ಇವರು ತಮ್ಮದೇ ಗುಂಪು ಮಾಡಿಕೊಂಡು ರಕ್ಷಿತಾರಣ್ಯವನ್ನು ಕಬಳಿಸಿದ್ದಾರೆ. ರಕ್ಷಿತ ಅರಣ್ಯ ಪ್ರದೇಶಗಳಾದ ಸರ್ವೆ ನಂ. 1252, 253 ಮತ್ತು 1254 ರಲ್ಲಿ ಒಟ್ಟು 16 ಎಕರೆ 21 ಗುಂಟೆ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ.

ಅರಣ್ಯ ಒತ್ತುವರಿ ಪ್ರಕರಣ ದಾಖಲು

ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ - 35,64 (ಎ) ಮತ್ತು ಕರ್ನಾಟಕ ಅರಣ್ಯ ನಿಯಮಗಳು -1969 ಸೆಕ್ಷನ್ 25 r/w 31ರಡಿಯಲ್ಲಿ ಆರೋಪದ ಹಿನ್ನೆಲೆಯಲ್ಲಿ ಸಚಿವ ಬೋಸರಾಜು ಅವರ ಪತ್ನಿ ಕೃಷ್ಣವೇಣಿ ಅವರ ವಿರುದ್ಧ ಅರಣ್ಯ ಅಪರಾಧ ಸಂಖ್ಯೆ: 16/2022-23ರ ಪ್ರಕಾರ ರಾಯಚೂರು ವಲಯ ಅರಣ್ಯಾಧಿಕಾರಿಗಳು ಅರಣ್ಯ ಒತ್ತುವರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಭಾಗದಲ್ಲಿ ಪ್ರತಿ ಚದರ ಅಡಿಗೆ ಕನಿಷ್ಟ 4 ಸಾವಿರ ರೂಪಾಯಿ ಮಾರುಕಟ್ಟೆ ದರ ಇದೆ. ಇವರು ಒತ್ತುವರಿ ಮಾಡಿರುವ ಭೂಮಿಗೆ ನೂರಾರು ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವಿದೆ. ಕೃಷ್ಣವೇಣಿ ಅವರು 17 ಗುಂಟೆ ಜಮೀನನ್ನು ಕಬಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪತ್ನಿ ಕೃಷ್ಣವೇಣಿ ಎರಡನೇ ಆರೋಪಿ

ಈ ಪ್ರಕರಣದಲ್ಲಿ ಸಚಿವರ ಪತ್ನಿ ಕೃಷ್ಣವೇಣಿ ಅವರು ಎರಡನೇ ಆರೋಪಿಯಾಗಿದ್ದಾರೆ. ಮೀಸಲು ಅರಣ್ಯ ಭೂಮಿಯನ್ನು ಕಬಳಿಸಿರುವಲ್ಲಿ ಸಚಿವರ ಪಾತ್ರ ಹಾಗೂ ಪ್ರಭಾವ ಇದೆ. ಹೀಗಾಗಿ ಅವರ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ. ಆದ್ದರಿಂದ ಅರಣ್ಯ ಒತ್ತುವರಿ ಸಂಬಂಧ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಬೋಸರಾಜು ಅವರನ್ನು ಸಂಪುಟದಿಂದ ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ದೂರಿನಲ್ಲಿ ಕೋರಿದ್ದಾರೆ.

ಸಚಿವರಾದ ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ವಿರುದ್ಧವೂ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.