ಯಾರೊಂದಿಗೂ ಮೈತ್ರಿ ಇಲ್ಲ ಎನ್ನುತ್ತಲೇ ಎಸ್ ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡ ಕಾಂಗ್ರೆಸ್; ದಕ್ಷಿಣ ಕನ್ನಡದಲ್ಲಿ ಚರ್ಚೆಗೆ ಕಾರಣವಾದ ನಡೆ
ಬಂಟ್ವಾಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನಡೆದಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬಿ.ವಾಸು ಪೂಜಾರಿ ಲೊರೆಟ್ಟೊ ಮತ್ತು ಉಪಾಧ್ಯಕ್ಷರಾಗಿ ಎಸ್.ಡಿ.ಪಿ.ಐ.ನ ಮೊನೀಶ್ ಆಲಿ ಆಯ್ಕೆಯಾಗಿದ್ದಾರೆ. ವರದಿ: ಹರೀಶ ಮಾಂಬಾಡಿ, ಮಂಗಳೂರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ನ ಹೈಕಮಾಂಡ್ ಎಂದೇ ಹೇಳಲಾಗುವ ರಮಾನಾಥ ರೈ ಪದೇ ಪದೇ ಸುದ್ದಿಗೋಷ್ಠಿಗಳಲ್ಲಿ ತಾವು ಎಸ್.ಡಿ.ಪಿ.ಐ. ಜೊತೆ ಯಾವುದೇ ರೀತಿಯ ಹೊಂದಾಣಿಕೆಗಳನ್ನು ಎಲ್ಲೂ ಮಾಡಿಲ್ಲ, ಕಾಂಗ್ರೆಸ್ ಸಮಾನಾಂತರವನ್ನು ಕಾಪಾಡಿಕೊಂಡು ಬರುತ್ತಿದೆ ಎನ್ನುತ್ತಿದ್ದರು. ಆದರೆ ಗುರುವಾರ ಬಂಟ್ವಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಎಸ್.ಡಿ.ಪಿ.ಐ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಬೆಂಬಲ ನೀಡುವ ಮೂಲಕ ಬಿಜೆಪಿಯ ಕಟು ಟೀಕೆಗೆ ಕಾರಣವಾಗಿದೆ.
ಪ್ರತಿ ಚುನಾವಣೆಗಳಲ್ಲೂ ಕಾಂಗ್ರೆಸ್ ಜೊತೆ ಎಸ್.ಡಿ.ಪಿ.ಐ. ಹೊಂದಾಣಿಕೆ ಮಾಡಿಕೊಳ್ಳುತ್ತಿದೆ, ಒಳಒಪ್ಪಂದಗಳು ನಡೆಯುತ್ತಿವೆ, ಎದುರಿನಿಂದ ಬದ್ಧ ವೈರಿಗಳಂತೆ ವರ್ತಿಸುತ್ತಿದ್ದರೂ ಒಳಗೊಳಗೆ ಮೈತ್ರಿ ಮಾಡಿಕೊಳ್ಳುತ್ತವೆ ಎಂದು ಬಿಜೆಪಿ ಟೀಕಿಸುತ್ತಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಸ್ವಂತ ಬಲದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತದೆ. ನಮಗೆ ಯಾರದ್ದೇ ಹೊಂದಾಣಿಕೆ ಬೇಡ, ಹಾಗೆ ನೋಡಿದರೆ ಬಿಜೆಪಿಯೇ ಎಸ್.ಡಿ.ಪಿ.ಐ. ಜೊತೆ ಒಳಒಪ್ಪಂದ ಮಾಡಿಕೊಳ್ಳುತ್ತದೆ ಎಂದು ಕಾಂಗ್ರೆಸ್ ಮುಖಂಡರು ತಿರುಗೇಟು ನೀಡುತ್ತಿದ್ದರು.
ಬಂಟ್ವಾಳದಲ್ಲಿ ಏನಾಯಿತು?
ಬಂಟ್ವಾಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನಡೆದಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬಿ.ವಾಸು ಪೂಜಾರಿ ಲೊರೆಟ್ಟೊ ಮತ್ತು ಉಪಾಧ್ಯಕ್ಷರಾಗಿ ಎಸ್.ಡಿ.ಪಿ.ಐ.ನ ಮೊನೀಶ್ ಆಲಿ ಆಯ್ಕೆಯಾಗಿದ್ದಾರೆ. ಒಟ್ಟು 27 ಸದಸ್ಯರ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಸದಸ್ಯರೊಬ್ಬರು ರಾಜೀನಾಮೆ ನೀಡಿದ್ದು, ಸ್ಥಾನಬಲ 26ಕ್ಕೆ ಕುಸಿದಿತ್ತು. ಕಾಂಗ್ರೆಸ್ ನಿಂದ 11, ಬಿಜೆಪಿಯಿಂದ 11, ಎಸ್.ಡಿ.ಪಿ.ಐ.ನಿಂದ 4 ಮಂದಿ ಸದಸ್ಯರು ಇದ್ದು, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಲೋಕಸಭೆ ಮತ್ತು ವಿಧಾನಸಭೆ ಸದಸ್ಯರ ಮತವೂ ಸೇರಿ ಬಿಜೆಪಿ 13, ಕಾಂಗ್ರೆಸ್ 11 ಮತ್ತು ಎಸ್.ಡಿ.ಪಿ.ಐ. 4 ಮತಗಳು ಇದ್ದವು. ಆಯ್ಕೆ ಪ್ರಕ್ರಿಯೆ ಸಂದರ್ಭ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ.ಪರಸ್ಪರ ಪೂರಕವಾಗಿ ಹೊಂದಾಣಿಕೆಯಿಂದ ಉಭಯ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರ ಪರಿಣಾಮ, ಕಾಂಗ್ರೆಸ್-ಎಸ್.ಡಿ.ಪಿ.ಐ. ಅಭ್ಯರ್ಥಿಗಳಿಗೆ 15, ಬಿಜೆಪಿ ಅಭ್ಯರ್ಥಿಗಳಿಗೆ 13 ಮತಗಳು ಲಭಿಸಿದವು.
ಕಣಕ್ಕಿಳಿದವರು ಯಾರು?
ನಾಮಪತ್ರ ಸಲ್ಲಿಕೆ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಬಿ.ವಾಸು ಪೂಜಾರಿ, ಎಸ್.ಡಿ.ಪಿ.ಐ.ನ ಇದ್ರೀಸ್ ಹಾಗೂ ಬಿಜೆಪಿಯ ಎ.ಗೋವಿಂದ ಪ್ರಭು ಸ್ಪರ್ಧೆಗಿಳಿದಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೆ, ಕಾದು ನೋಡುವ ತಂತ್ರ ಅನುಸರಿಸಿತು. ಎಸ್.ಡಿ.ಪಿ.ಐ. ಮೊನೀಶ್ ಆಲಿ ಮತ್ತು ಬಿಜೆಪಿ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಿತು. ನಾಮಪತ್ರ ಹಿಂಪಡೆಯುವ ವೇಳೆ ಎಸ್.ಡಿ.ಪಿ.ಐ.ನ ಇದ್ರೀಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿತನದಿಂದ ಹಿಂದಕ್ಕೆ ಸರಿದರು. ಈ ವೇಳೆ ಕಾಂಗ್ರೆಸ್ ನ ಅಧ್ಯಕ್ಷ ಅಭ್ಯರ್ಥಿ, ಎಸ್.ಡಿ.ಪಿ.ಐ.ನ ಉಪಾಧ್ಯಕ್ಷ ಅಭ್ಯರ್ಥಿ ಹಾಗೂ ಬಿಜೆಪಿಯ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಇದ್ದು, ವೇದಿಕೆ ಕಾಂಗ್ರೆಸ್ – ಎಸ್.ಡಿ.ಪಿ.ಐ. ಜಂಟಿ ಆಯ್ಕೆಗೆ ಸಿದ್ಧಗೊಂಡಿತ್ತು. ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿಗೆ ಎಸ್.ಡಿ.ಪಿ.ಐ, ಎಸ್.ಡಿ.ಪಿ.ಐ. ಅಭ್ಯರ್ಥಿಗೆ ಕಾಂಗ್ರೆಸ್ ಮತ ಚಲಾಯಿಸುವುದರ ಮೂಲಕ ಜಂಟಿಯಾಗಿ ಜಯಗಳಿಸಿದರು.
ಈ ಬಾರಿಯೂ ನಿರ್ಣಾಯಕವಾಗಿದ್ದ ಎಸ್.ಡಿ.ಪಿ.ಐ.
ಕಳೆದ ಬಾರಿ ಕಾಂಗ್ರೆಸ್ ನ ಮಹಮ್ಮದ್ ಶರೀಫ್ ಮತ್ತು ಜೆಸಿಂತಾ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಸಂದರ್ಭ ಎಸ್.ಡಿ.ಪಿ.ಐ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಗಿತ್ತು. ಆ ಸಂದರ್ಭ ಕಾಂಗ್ರೆಸ್ ಎಸ್.ಡಿ.ಪಿ.ಐ. ಜೊತೆ ತಾನು ಹೊಂದಾಣಿಕೆ ಮಾಡಿಕೊಂಡಿಲ್ಲ, ಅವರೇ ನಮ್ಮನ್ನು ಬೆಂಬಲಿಸಿದರು ಎಂದು ಹೇಳಿತ್ತು. ಆಗ ಎಸ್.ಡಿ.ಪಿ.ಐ. ಹೇಗೆ ನಿರ್ಣಾಯಕವಾಗಿದ್ದೋ ಈ ಬಾರಿಯೂ ಅದೇ ಪುನರಾವರ್ತನೆ ಆಯಿತು. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷ ಎಸ್.ಡಿ.ಪಿ.ಐ. ಅಭ್ಯರ್ಥಿಗೆ ಮತ ಹಾಕುವ ಮೂಲಕ ಆ ಪಕ್ಷಕ್ಕೆ ಬೆಂಬಲ ನೀಡಿದಂತಾಗಿದೆ.
ಕಾಂಗ್ರೆಸ್‌ಗೆ ಎಸ್‌ಡಿಪಿಐ ದಯೆಯಲ್ಲಿ ಬದುಕುವ ಸ್ಥಿತಿ ಬಂದಿದೆ: ಸಂಸದ ಕ್ಯಾ. ಬ್ರಿಜೇಶ್ ಚೌಟ ಲೇವಡಿ
ಮಾಜಿ ಸಚಿವ ರಮಾನಾಥ ರೈ ಅವರ ಕೃಪಾಪೋಷಿತ 'ಬಂಟ್ವಾಳ ಕಾಂಗ್ರೆಸ್ 'ಗೆ ಇವತ್ತು ಎಸ್‌ಡಿಪಿಐನ ದಯೆಯಲ್ಲಿ ಬದುಕುವ ಶೋಚನೀಯ ಪರಿಸ್ಥಿತಿ ಬಂದಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಲೇವಡಿ ಮಾಡಿದ್ದಾರೆ. ಬಂಟ್ವಾಳದಲ್ಲಿ ಮಾಧ್ಯಮದ ಜತೆಗೆ ಮಾತನಾಡಿದ ಕ್ಯಾ. ಚೌಟ, "ಕಾಂಗ್ರೆಸ್ ಸಹಜವಾಗಿಯೇ ತನ್ನ ಡಿಎನ್‌ಎಗೆ ಅನುಗುಣವಾಗಿ ಎಸ್‌ಡಿಪಿ ಜತೆಗೆ ಮೈತ್ರಿ ಮಾಡಿಕೊಂಡು ಬಂಟ್ವಾಳ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಗೆದ್ದುಕೊಂಡಿದೆ. ಆ ಮೂಲಕ ಕಾಂಗ್ರೆಸ್ ತಾವು ಯಾರ ಜತೆಗಿದ್ದೇವೆ ಎನ್ನುವ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ರವಾನಿಸಿದೆ" ಎಂದು ಹೇಳಿದರು.
" ಕಾಂಗ್ರೆಸ್‌ನ ಸಖ್ಯ ಯಾರ ಜತೆಗಿದೆ ಎಂಬುದನ್ನು ನಾವು ಹಲವಾರು ವರ್ಷಗಳಿಂದ ಹೇಳಿಕೊಂಡು ಬಂದಿದ್ದೇವೆ. ಆದರೆ, ಬಂಟ್ವಾಳದ ಜನತೆಗೆ ಇವತ್ತು ಇದರ ಅರಿವಾಗಿದೆ. ವಿಶೇಷವಾಗಿ ಪಿಎಫ್‌ಐನ ರಾಜಕೀಯ ಸಂಸ್ಥೆಯಾಗಿರುವ ಎಸ್‌ಡಿಪಿಐ ಕಾಂಗ್ರೆಸ್ ಜತೆಗೆ ಖುಲ್ಲಂಖುಲ್ಲಾವಾಗಿ ಹೊಂದಾಣಿಕೆ ಮಾಡಿಕೊಂಡು ಬಂಟ್ವಾಳದ ಮಹಾಜನತೆಗೆ ಮೋಸವನ್ನು ಮಾಡಿರುವ ಕಾಂಗ್ರೆಸ್‌ಗೆ ಈ ಸಂದರ್ಭದಲ್ಲಿ ನಾನು ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ" ಎಂದು ಹೇಳಿದ್ದಾರೆ. ಇದೀಗ ಎಸ್.ಡಿ.ಪಿ.ಐ. ಜೊತೆ ಮೈತ್ರಿ ವಿಚಾರ ರಾಜ್ಯಮಟ್ಟದಲ್ಲೂ ಬಿಜೆಪಿ ಪ್ರಸ್ತಾಪಿಸಿ ಸದ್ದು ಮಾಡಲು ಹೊರಟಿದೆ.