Siddaramaiah: ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರ ಬೇಡ ಎಂದ ಹೈಕಮಾಂಡ್?: 'ವರುಣ ರಾಗ' ಹಾಡಲು ಸಜ್ಜಾದ ಮಾಜಿ ಸಿಎಂ?
ಕೋಲಾರದಿಂದ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಕಡೆಯಿಂದ ಬಹುತೇಕವಾಗಿ ರೆಡ್ ಸಿಗ್ನಲ್ ಸಿಕ್ಕಂತಾಗಿದೆ. ಇದರಿಂದ ನಿರಾಶರಾಗಿರುವಂತೆ ಕಾಣುತ್ತಿರುವ ಸಿದ್ದರಾಮಯ್ಯ, ಕ್ಷೇತ್ರ ಆಯ್ಕೆಗೆ ಸಂಬಂಧಿಸಿದಂತೆ ಮತ್ತಷ್ಟು ಗೊಂದಲದಲ್ಲಿ ಸಿಲುಕಿದ್ದಾರೆ. ದೆಹಲಿಯಿಂದ ವಾಪಸ್ಸಾಗುತ್ತಲೇ ತಮ್ಮ ಬೆಂಬಲಿಗರು ಮತ್ತು ಆಪ್ತರೊಂದಿಗೆ ಸಭೆ ನಡೆಸಿರುವ ಸಿದ್ದರಾಮಯ್ಯ, ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕಾರ್ಯದಲ್ಲಿ ಮಗ್ನವಾಗಿರುವ ಕಾಂಗ್ರೆಸ್ ಹೈಕಮಾಂಡ್, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ನಿಗದಿ ಮಾಡುವಲ್ಲಿ ಗೊಂದಲಕ್ಕೀಡಾಗಿರುವ ಅನುಮಾನ ಕಾಡುತ್ತಿದೆ.
ಟ್ರೆಂಡಿಂಗ್ ಸುದ್ದಿ
ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಲು ನವದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ, ನಿರಾಸೆಯ ಮುಖ ಹೊತ್ತು ಮರಳಿರುವುದನ್ನು ನೋಡಿದರೆ, ಹೈಕಮಾಂಡ್ ಸಿದ್ದಾರಮಯ್ಯ ಅವರಿಗೆ ಕೋಲಾರ ಕ್ಷೇತ್ರ ಅಂತಿಮಗೊಳಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ಕಠಿಣ ಸ್ಪರ್ಧೆ ಎದುರಾಗಲಿದೆ ಎಂದು ಕಾಂಗ್ರೆಸ್ ಆಂತರಿಕ ಸಮೀಕ್ಷಾ ವರದಿಗಳು ಹೇಳುತ್ತಿವೆ. ಈ ವರದಿಯ ಬಗ್ಗೆ ತೀವ್ರ ಕಾಳಜಿ ತೋರಿರುವ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡುವ ಕುರಿಉ ಮತ್ತೊಮ್ಮೆ ಚಿಂತಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಅಂದರೆ ಕೋಲಾರದಿಂದ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಕಡೆಯಿಂದ ಬಹುತೇಕವಾಗಿ ರೆಡ್ ಸಿಗ್ನಲ್ ಸಿಕ್ಕಂತಾಗಿದೆ. ಇದರಿಂದ ನಿರಾಶರಾಗಿರುವಂತೆ ಕಾಣುತ್ತಿರುವ ಸಿದ್ದರಾಮಯ್ಯ, ಕ್ಷೇತ್ರ ಆಯ್ಕೆಗೆ ಸಂಬಂಧಿಸಿದಂತೆ ಮತ್ತಷ್ಟು ಗೊಂದಲದಲ್ಲಿ ಸಿಲುಕಿದ್ದಾರೆ.
ಇದಕ್ಕೆ ಪುಷ್ಠಿ ಎಂಬಂತೆ ದೆಹಲಿಯಿಂದ ವಾಪಸ್ಸಾಗುತ್ತಲೇ ತಮ್ಮ ಬೆಂಬಲಿಗರು ಮತ್ತು ಆಪ್ತರೊಂದಿಗೆ ಸಭೆ ನಡೆಸಿರುವ ಸಿದ್ದರಾಮಯ್ಯ, ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ಕೋಲಾರ ಕ್ಷೇತ್ರದ ಟಿಕೆಟ್ ದೊರೆಯುವ ವಿಶ್ವಾಸದಲ್ಲಿದ್ದ ಸಿದ್ದರಾಮಯ್ಯ, ಇದೀಗ ಹೈಕಮಾಂಡ್ ಸೂಚನೆ ಬಳಿಕ ವರುಣ ಕ್ಷೇತ್ರದತ್ತ ಮುಖ ಮಾಡುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಸಿದ್ದರಾಮಯ್ಯ ಅವರಾಗಲಿ ಕಾಂಗ್ರೆಸ್ ಪಕ್ಷವಾಲಿ ಇದುವರೆಗೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಕಳೆದ ಬಾರಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ, ಈ ಬಾರಿ ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಕೋಲಾರದಲ್ಲಿ ತಮ್ಮ ಗೆಲುವು ಸುಲಭವಾಗಲಿದೆ ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರವಾತ್ತು. ಆದರೆ ಆಂತರಿಕ ಸಮೀಕ್ಷಾ ವರದಿಗಳು, ಸ್ಥಳೀಯ ನಾಯಕರ ನಡುವಿನ ಭಿನ್ನಾಭಿಪ್ರಾಯ ಹಾಗೂ ಬಿಜೆಪಿ-ಜೆಡಿಎಸ್ ಒಳಒಪ್ಪಂದದ ಸಾಧ್ಯತೆಯ ಸುಳಿವು ನೀಡಿವೆ.
ಈ ಕಾರಣಕ್ಕೆ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರ ಬೇಡ ಎಂಬ ಸೂಚನೆ ನೀಡಿದೆ. ಇದರಿಂದಾಗಿ ತಮ್ಮ ಬೆಂಬಲಿಗರೊಂದಿಗೆ ನಡೆಸಿದ ಸಭೆಯಲ್ಲಿ, ವರುಣ ಕ್ಷೇತ್ರ ಆಯ್ಕೆಯನ್ನು ಮುಕ್ತವಾಗಿ ಇರಿಸಿಕೊಳ್ಳುವ ಬಗ್ಗೆ ಸಿದ್ದರಾಮಯ್ಯ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, 'ಹೈಕಮಾಂಡ್ ಇನ್ನೂ ನನ್ನ ಹೆಸರನ್ನು ಅಂತಿಮಗೊಳಿಸಿಲ್ಲ. ಹೈಕಮಾಂಡ್ ಏನು ನಿರ್ಧರಿಸುತ್ತದೆಯೋ ಅದಕ್ಕೆ ನಾನು ಬದ್ಧ ಎಂದು ಕೋಲಾರದಲ್ಲಿ ನಾನು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ..' ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಈ ಮಾತನ ಧಾಟಿಯಲ್ಲೇ, ಕೋಲಾರದಿಂದ ಸ್ಪರ್ಧೆ ಮಾಡಲು ಅವರಿಗೆ ಹೈಕಮಾಂಡ್ ಅನುಮತಿ ಕೊಟ್ಟಿಲ್ಲ ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ ಈ ಕುರಿತು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರ ಕಡೆಯಿಂದ ಅಂತಿಮ ಘೋಷಣೆ ಹೊರಬೀಳಬೇಕಿದೆ.
ಒಂದು ವೇಳೆ ಸಿದ್ದರಾಮ್ಯಯ ಅವರಿಗೆ ಕೋಲಾರ ಕ್ಷೇತ್ರ ನಿರಾಕರಿಸಲ್ಪಟ್ಟರೆ, ಆಡಳಿತಾರೂಢ ಬಿಜೆಪಿಗೆ ಮತ್ತೊಂದು ಪ್ರಬಲ ಅಸ್ತ್ರ ಸಿಕ್ಕಂತಾಗಲಿದೆ. ಸಿದ್ದರಾಮಯ್ಯ ತಮಗಿಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗದಷ್ಟು ದುರ್ಬಲರಾಗಿದ್ದಾರೆ ಎಂದು ಬಿಜೆಪಿ ಪ್ರಚಾರ ಮಾಡಬಹುದು.
ಓರ್ವ ಮಾಜಿ ಸಿಎಂ ಚುನಾವಣೆಗೆ ನಿಲ್ಲಲು ಹೀಗೆ ಕ್ಷೇತ್ರ ಹುಡುಕಾಟದಲ್ಲಿ ತಲ್ಲೀನರಾಗಿರುವುದು, ಕಾಂಗ್ರೆಸ್‌ನಲ್ಲಿ ಮನೆ ಮಾಡಿರುವ ಆಂತರಿಕ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ಕುಹುಕವಾಡಬಹುದು. ಆದರೆ ಈ ಎಲ್ಲಾ ಸವಾಲುಗಳನ್ನು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೇಗೆ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.