Ashwath Narayan: 'ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ನಂಬಿಕೆ ಇಟ್ಟುಕೊಂಡಿರುವ ಕಳಂಕಿತ ಪಕ್ಷವಾಗಿದೆ'
ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಅಧಿಕಾರದಲ್ಲಿ ಇರುವ ಬಿಜೆಪಿ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಬದ್ಧವಾಗಿದೆ. ಆದರೆ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ನಂಬಿಕೆ ಇಟ್ಟುಕೊಂಡಿರುವ ಕಳಂಕಿತ ಪಕ್ಷವಾಗಿದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕೋಲಾರ: ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಅಧಿಕಾರದಲ್ಲಿ ಇರುವ ಬಿಜೆಪಿ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಬದ್ಧವಾಗಿದೆ. ಆದರೆ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ನಂಬಿಕೆ ಇಟ್ಟುಕೊಂಡಿರುವ ಕಳಂಕಿತ ಪಕ್ಷವಾಗಿದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ, ಬೇತಮಂಗಲ, ಕೆಜಿಎಫ್ ಮತ್ತು ಮುಳಬಾಗಿಲಿನಲ್ಲಿ ಸೋಮವಾರ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಬಿಜೆಪಿ ಸರಕಾರವು ಶೌಚಾಲಯ, ಸೂರು, ವಿದ್ಯುತ್, ರೈತ ಕಲ್ಯಾಣ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ, ಮಹಿಳಾ ಸಬಲೀಕರಣ, ಅಭಿವೃದ್ಧಿ ಕೇಂದ್ರಿತ ರಾಜಕಾರಣ, ಕೈಗಾರಿಕಾ ಬೆಳವಣಿಗೆ ಹೀಗೆ ಸಮಗ್ರ ದೃಷ್ಟಿಕೋನವನ್ನು ಹೊಂದಿದೆ ಎಂದು ಪ್ರತಿಪಾದಿಸಿದರು.
60 ವರ್ಷ ಚುನಾವಣೆಗಳಲ್ಲಿ ಗೆದ್ದು ಬಂದವರು ಕೋಲಾರ ಜಿಲ್ಲೆಗೆ ಏನೂ ಮಾಡಿಲ್ಲ. ಬಿಜೆಪಿ ಬಂದಮೇಲೆ ಜಿಲ್ಲೆಗೆ ವಿಶ್ವವಿದ್ಯಾಲಯ, ಹೊಸ ಕೈಗಾರಿಕಾ ಪಾರ್ಕ್, ಎಲೆಕ್ಟ್ರಾನಿಕ್ ಕ್ಲಸ್ಟರ್, ಎತ್ತಿನಹೊಳೆ ಮತ್ತು ಕೆ ಸಿ ವ್ಯಾಲಿ ತರಹದ ಹತ್ತಾರು ಜನಪರ ಯೋಜನೆಗಳನ್ನು ತರಲಾಗಿದೆ ಎಂದು ಅವರು ವಿವರಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರುಣಾ ಕ್ಷೇತ್ರವನ್ನು ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ಚಾಮುಂಡೇಶ್ವರಿ, ಬಾದಾಮಿ ಎಲ್ಲಾ ಸುತ್ತಾಡಿಕೊಂಡು ಈಗ ಕೋಲಾರಕ್ಕೆ ಬಂದಿದ್ದಾರೆ. ಹತ್ತು ವರ್ಷಗಳಿಂದ ರಾಜಕೀಯ ನಿವೃತ್ತಿಯ ಮಾತನಾಡುತ್ತಲೇ ಇರುವ ಅವರನ್ನು ಈ ಬಾರಿ ಮನೆಗೆ ಕಳಿಸಬೇಕು ಎಂದು ಅಶ್ವತ್ಥ ನಾರಾಯಣ ಹರಿಹಾಯ್ದರು.
ಇನ್ನು ಜೆಡಿಎಸ್ ಪಕ್ಷಕ್ಕೆ ಎಲ್ಲದರಲ್ಲೂ ರಾಜಕೀಯ ಮಾಡುವುದು ಗೊತ್ತೇ ವಿನಾ ಅಭಿವೃದ್ಧಿ ಎಂದರೇನೆಂದು ಗೊತ್ತಿಲ್ಲ. ಬೆಂಗಳೂರು-ಮೈಸೂರು ದಶಪಥ ರಸ್ತೆಯ ವಿಚಾರದಲ್ಲಿ ಕುಮಾರಸ್ವಾಮಿ ನೀಡುತ್ತಿರುವ ವಿಚಿತ್ರ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ ಎಂದು ಅವರು ಟೀಕಿಸಿದರು. ಅಲ್ಲದೆ ಈ ದಶಪಥ ರಸ್ತೆಗೆ ಇನ್ನೂ 1,000 ಕೋಟಿ ರೂಪಾಯಿ ವಿನಿಯೋಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಯಾವತ್ತೂ ಸುಗಮ ಆಡಳಿತದ ಬಗ್ಗೆ ಮಾತನಾಡಿಲ್ಲ. ಅದು ಭ್ರಷ್ಟಾಚಾರದಲ್ಲಿ ನಂಬಿಕೆ ಇಟ್ಟುಕೊಂಡಿರುವ ಕಳಂಕಿತ ಪಕ್ಷವಾಗಿದೆ. ಆದರೆ ಡಬಲ್ ಎಂಜಿನ್ ಬಿಜೆಪಿ ಸರಕಾರವು ಕೇವಲ ರಸ್ತೆಗಳ ಅಭಿವೃದ್ಧಿಗೆ 40 ಸಾವಿರ ಕೋಟಿ ರೂಪಾಯಿ ಕೊಟ್ಟಿದೆ ಎಂದು ಸಚಿವರು ಹೇಳಿದರು.
ಕಾಂಗ್ರೆಸ್ ಎಂದರೆ ಸಿ.ಡಿ.ಪಾರ್ಟಿ
ಕಾಂಗ್ರೆಸ್ ಅಂದರೆ ಪ್ರತಿಪಕ್ಷಗಳ ನಾಯಕರ ಮೇಲೆ ಸಿ.ಡಿ. ಸೃಷ್ಟಿಸಿ, ಚಾರಿತ್ರ್ಯಹರಣ ಮಾಡುವ ಪಕ್ಷವಾಗಿದೆ. ಕೆಪಿಸಿಸಿ ಅಧ್ಯಕ್ಷರೇ ಇದರ ಮುಖ್ಯಸ್ಥರಾಗಿದ್ದಾರೆ ಎಂದು ಅಶ್ವತ್ಥನಾರಾಯಣ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಸದರಾದ ಮುನಿಸ್ವಾಮಿ, ಪಿ ಸಿ ಮೋಹನ್, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ದೆಹಲಿ ಬಿಜೆಪಿ ನಾಯಕ ಮನೋಜ್ ತಿವಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಅಂಬರೀಷ್, ಮಾಜಿ ಶಾಸಕ ಎಂ. ನಾರಾಯಣಸ್ವಾಮಿ, ಮುಖಂಡ ವೆಂಕಟರಮಣಪ್ಪ ಮುಂತಾದವರು ಉಪಸ್ಥಿತರಿದ್ದರು.