Chamarajanagar: ಚಾಮರಾಜನಗರದಲ್ಲಿ 4 ವಿಧಾನಸಭಾ ಕ್ಷೇತ್ರಗಳು; ಕಾಂಗ್ರೆಸ್​ಗೆ​ 3, ಜೆಡಿಎಸ್​ಗೆ​ 1 ಸ್ಥಾನ, ಬಿಜೆಪಿ ಶೂನ್ಯ
ಕನ್ನಡ ಸುದ್ದಿ  /  ಕರ್ನಾಟಕ  /  Chamarajanagar: ಚಾಮರಾಜನಗರದಲ್ಲಿ 4 ವಿಧಾನಸಭಾ ಕ್ಷೇತ್ರಗಳು; ಕಾಂಗ್ರೆಸ್​ಗೆ​ 3, ಜೆಡಿಎಸ್​ಗೆ​ 1 ಸ್ಥಾನ, ಬಿಜೆಪಿ ಶೂನ್ಯ

Chamarajanagar: ಚಾಮರಾಜನಗರದಲ್ಲಿ 4 ವಿಧಾನಸಭಾ ಕ್ಷೇತ್ರಗಳು; ಕಾಂಗ್ರೆಸ್​ಗೆ​ 3, ಜೆಡಿಎಸ್​ಗೆ​ 1 ಸ್ಥಾನ, ಬಿಜೆಪಿ ಶೂನ್ಯ

Chamarajanagar Results: ಚಾಮರಾಜನಗರ ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳು ಇವೆ. ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಕ್ಷೇತ್ರಗಳು. ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದು ಯಾವ ಕ್ಷೇತ್ರದಲ್ಲೂ ಬಿಜೆಪಿ ಪಕ್ಷದ ಹೆಸರಿಲ್ಲದಂತೆ ಮಾಡಿದೆ.

ಚಾಮರಾಜನಗರದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲುವು
ಚಾಮರಾಜನಗರದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲುವು

ಚಾಮರಾಜನಗರ : ಚಾಮರಾಜನಗರ ಕರ್ನಾಟಕ ರಾಜ್ಯದ ದಕ್ಷಿಣದ ಭಾಗದಲ್ಲಿ ಗಡಿ ಜಿಲ್ಲೆ. ಧರ್ಮ ಜಾತಿ ಎನ್ನದೆ ಎಲ್ಲಾ ಜಾತಿಯ,ಧರ್ಮದ ಹಲವಾರು ಜನರು ಇರುವ ಕ್ಷೇತ್ರ. ಹಿಂದುಗಳು ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು,ಜೈನರು, ಅಲ್ಪಸಂಖ್ಯಾತರು ಆದಿವಾಸಿಗಳು ಸೇರಿದಂತೆ ಇನ್ನು ಹಲವಾರು ಧರ್ಮದ, ಜಾತಿಯ ಜನಗಳಿಂದ ಕೂಡಿರುವ ಮತ್ತು ಕೋಮು ದ್ವೇಷಗಳಿಗೆ ಬಲಿಯಾಗದ ಕ್ಷೇತ್ರ. ಈ ಭಾಗದಲ್ಲಿ ಧರ್ಮರಾಜಕಾರಣ ಹಾಗೂ ಜಾತಿ ರಾಜಕಾರಣ ಸಲ್ಲದ ಮಾತು. ಚಾಮರಾಜನಗರ ಜಿಲ್ಲೆಗೆ ಸೇರುವ ನಾಲ್ಕು ಕ್ಷೇತ್ರಗಳಲ್ಲೂ ಪಕ್ಷವನ್ನು ನೋಡಿ ಮತ ಹಾಕುವುದರ ಜೊತೆಗೆ ವ್ಯಕ್ತಿಯನ್ನು ನೋಡಿ ಮತ ಹಾಕುವವರೂ ಹೆಚ್ಚು. ಈ ಭಾಗದ ಜನರು ಜಾತ್ಯಾತೀತತೆಯನ್ನು ಬಯಸುವ ಜನರಾಗಿದ್ದು, ಧರ್ಮರಾಜಕಾರಣಕ್ಕು ಜಾತಿ ರಾಜಕಾರಣಕ್ಕೂ ಯಾವತ್ತೂ ಕೂಡ ಮತ ಹಾಕಿಲ್ಲ ಎಂಬುದಕ್ಕೆ ಈ ಬಾರಿಯ ರಿಸಲ್ಟ್ ಕೂಡ ಸಾಕ್ಷಿ.

ಚಾಮರಾಜನಗರ ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳು ಇವೆ. ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಕ್ಷೇತ್ರಗಳು. ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದು ಯಾವ ಕ್ಷೇತ್ರದಲ್ಲೂ ಬಿಜೆಪಿ ಪಕ್ಷದ ಹೆಸರಿಲ್ಲದಂತೆ ಮಾಡಿದೆ. ಇಲ್ಲಿ ಕೆಲವರದ್ದು ಹೊಸ ಆಯ್ಕೆಯಾದರೆ ಕೆಲವರದ್ದು ಸ್ವಾಭಿಮಾನದ ಆಯ್ಕೆ . ಇರುವ ನಾಲ್ಕು ಕ್ಷೇತ್ರಗಳಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಪುಟ್ಟರಂಗಶೆಟ್ಟಿ ಅವರು ಪ್ರಸ್ತುತ ಶಾಸಕರಾಗಿ ಇದ್ದರೆ ಇನ್ನುಳಿದ ಮೂರು ಕ್ಷೇತ್ರದ ಅಭ್ಯರ್ಥಿಗಳು ಹೊಸ ಮುಖಗಳೇ.

ಚಾಮರಾಜನಗರ ಕ್ಷೇತ್ರ : ಈ ಬಾರಿ ಚಾಮರಾಜನಗರ ವಿಧಾನಸಭಾ ಕ್ಷೇತ್ರವು ಹಲವಾರು ರೋಚಕತೆಗಳಿಂದ ಕೂಡಿತ್ತು. ಯಾಕೆಂದರೆ ಗಟ್ಟಿಯಾಗಿ ಗೋವಿಂದರಾಜನಗರ ಕ್ಷೇತ್ರದಲ್ಲಿ ಬೇರೂರಿದ್ದ ಸೋಮಣ್ಣನವರಿಗೆ ಹರಕೆಯ ಕುರಿ ಎಂಬಂತೆ ವರುಣ ಕ್ಷೇತ್ರ ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಲಾಗಿತ್ತು. ಆದರೆ ದುರಾದೃಷ್ಟವಶಾತ್ ಸೋಮಣ್ಣ ಅಲ್ಲಿಯೂ ಸಲ್ಲಲಿಲ್ಲ, ಇಲ್ಲಿಯೂ ಸಲ್ಲಲಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಪ್ರಸ್ತುತ ಶಾಸಕರಾಗಿರುವ ಸಿ. ಪುಟ್ಟರಂಗಶೆಟ್ಟಿಯವರು ಇಲ್ಲಿ ಜಯಭೇರಿ ಗಳಿಸಿದ್ದಾರೆ. ಸದ್ಯದ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷದ ಹಳೇ ಹುಲಿ ಮತ್ತು ಸೀನಿಯರ್ ಆಗಿ ಪುಟ್ಟರಂಗಶೆಟ್ಟಿಯವರು ಬಿಂಬಿತವಾಗಿದ್ದಾರೆ. ಇಲ್ಲಿನ ಜನರ ನಾಡಿಮಿಡಿತವನ್ನು ಅರಿಯದ ಸೋಮಣ್ಣನವರಿಗೆ ಹಾಗೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಪಾಲಮೋಕ್ಷ ಮಾಡಿದ ಕಾರಣಕ್ಕಾಗಿಯೂ ಕೂಡ ಮತದಾರ ಮತ ನೀಡಿಲ್ಲ.

ಗುಂಡ್ಲುಪೇಟೆ : ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇಂದಿಗೆ ಕಟ್ಟು ಗಾಜು ಸಂಸ್ಕೃತಿ ಒಡೆದಿದೆ. ಒಂದುಬಾರಿ ಗೆದ್ದರೆ ಅವರೇ ಸಾಯುವ ತನಕವೂ ಶಾಸಕರಾಗಿರುತ್ತಿದ್ದದ್ದಕ್ಕೆ ಸಾಕ್ಷಿಯಾಗಿದ್ದ ಕ್ಷೇತ್ರ ಇದು. ಗುಂಡ್ಲುಪೇಟೆಯಲ್ಲಿ 2017ರಲ್ಲಿ ಮಹಾದೇವ ಪ್ರಸಾದ್ ನಿಧನದ ನಂತರ ಗೀತಾ ಮಹಾದೇವ ಪ್ರಸಾದ್ ಅವರು ಬೈ ಎಲೆಕ್ಷನ್ ನಲ್ಲಿ ಗೆದ್ದು ನಂತರ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸಿ. ಎಸ್ ನಿರಂಜನ್ ಕುಮಾರ್ ಆಯ್ಕೆಯಾಗಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಸಿ. ಎಸ್ ನಿರಂಜನ್ ಕುಮಾರ್ ಅವರನ್ನು ಮಹದೇವ್ ಪ್ರಸಾದ್ ರವರ ಪುತ್ರ ಹೆಚ್.ಎಂ ಗಣೇಶ್ ಪ್ರಸಾದ್ ಅವರು ಮೂವತ್ತಾರು ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿದ್ದಾರೆ. ಅಮಿತ್ ಶಾ ರೋಡ್ ಶೋ, ಕಿಚ್ಚ ಸುದೀಪ್ ಸ್ಟಾರ್ ಕ್ಯಾಂಪೇನ್ ಕೂಡ ಇಲ್ಲಿ ಏನೂ ಸದ್ದು ಮಾಡಲಿಲ್ಲ ಅನ್ನೋದು ಇಲ್ಲಿ ಸಾಬೀತಾಗಿದೆ. ಮತದಾರ ಇಲ್ಲಿ ನೂತನ ಅಭ್ಯರ್ಥಿಗೆ ಆಶೀರ್ವಾದ ಮಾಡಿದ್ದಾನೆ.

ಕೊಳ್ಳೇಗಾಲ (ಮೀಸಲು ವಿಧಾನಸಭಾ ಕ್ಷೇತ್ರ) :

ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರ ಅನುಯಾಯಿಗಳು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಹಿಂದುಳಿದವರು, ಬುಡಕಟ್ಟು ಜನಾಂಗದವರು, ಆದಿವಾಸಿಗಳು ಹೆಚ್ಚಾಗಿರುವ ಕ್ಷೇತ್ರ ಇದು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಈ ಬಾರಿ ಸ್ವಾಭಿಮಾನದ ಕ್ಷೇತ್ರವಾಗಿ ಬಿಂಬಿತವಾಗಿತ್ತು. ಹಾಗೆಯೇ ಈ ಬಾರಿ ಕೊಳ್ಳೇಗಾಲದಲ್ಲಿ ಸ್ವಾಭಿಮಾನವೇ ಗೆದ್ದಿದೆ ಎನ್ನಲಾಗುತ್ತಿದೆ. 2018ರ ಚುನಾವಣೆಯಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಿ ಎಸ್ ಪಿ ಪಕ್ಷವು ಗೆದ್ದಿತ್ತು. ಅನಂತರ ಎನ್.ಮಹೇಶ್ ಈ ಕ್ಷೇತ್ರದಲ್ಲಿ ಶಾಸಕರಾಗಿದ್ದರು. ದಲಿತರ ನಾಯಕನಾಗಿ ಬಿಂಬಿಸಿಕೊಂಡಿದ್ದ ಎನ್. ಮಹೇಶ್ ಗೆ ಅಲ್ಲಿನ ಮತದಾರರು ಆಶೀರ್ವಾದ ಮಾಡಿದ್ದರು. ಇದ್ದ ಒಂದೇ ಒಂದು ಬಿಎಸ್ಪಿ ಕ್ಷೇತ್ರವನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ವಿಲೀನಗೊಳಿಸಿ ಮಹೇಶ್ ಸಚಿವರು ಕೂಡ ಆಗಿದ್ದರು. ಆನಂತರ ಬಿಎಸ್ಪಿ ಪಕ್ಷದಿಂದ ಉಚ್ಛಾಟನೆಯಾಗಿ ಬಿಜೆಪಿ ಪಕ್ಷವನ್ನು ಸೇರಿ ಈ ಬಾರಿ ಬಿಜೆಪಿ ಪಕ್ಷದಿಂದ ಕೊಳ್ಳೇಗಾಲ ಕ್ಷೇತ್ರದ ಅಭ್ಯರ್ಥಿಯಾಗಿ ನಿಂತರು. ಆದರೆ ಈ ಬಾರಿ ಎನ್ ಮಹೇಶ್ ಗೆ ಮತದಾರರು ಮರುಮತ ಮಾಡಿ ಮಣೆ ಹಾಕಿಲ್ಲ. ದಲಿತ ವಿರೋಧಿ ನೀತಿ ಅನುಸರಿಸಿದ್ದಾರೆಂದು ಈ ಬಾರಿ ಎಲ್ಲೇ ಚುನಾವಣಾ ಪ್ರಚಾರಕ್ಕೆ ಹೋದರು ಗೋ ಬ್ಯಾಕ್ ಎನ್ ಮಹೇಶ್ ಎಂಬ ಕೂಗು ಕೇಳಿ ಬರುತ್ತಿತ್ತು. ಈ ಕಾರಣಕ್ಕಾಗಿಯೂ ಮಹೇಶ್ ಅವರನ್ನು ಮನೆಗೆ ಕಳುಹಿಸಿ ನೂತನ ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಅವರಿಗೆ ಕೊಳ್ಳೇಗಾಲ ಕ್ಷೇತ್ರದ ಜನತೆ ಆಶೀರ್ವಾದ ಮಾಡಿದ್ದಾರೆ. ಎ.ಆರ್ ಕೃಷ್ಣಮೂರ್ತಿ ಅವರು ಈ ಹಿಂದೆ ಕೇರಳ ಮತ್ತು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕೆಲಸ ನಿರ್ವಹಿಸಿದ ಬಿ.ರಾಚಯ್ಯ ಅವರ ಪುತ್ರ. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಎ.ಆರ್ ಕೃಷ್ಣಮೂರ್ತಿ ಅವರು ಈ ಮುಂಚೆ ಒಂದೇ ಒಂದು ಮತದಲ್ಲಿ ಸೋತಿದ್ದೆ. ಆದರೆ ಈ ಬಾರಿ 50,000ಕ್ಕೂ ಹೆಚ್ಚು ಮತಗಳಿಂದ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ.

ಹನೂರು: ಹನೂರು ಕ್ಷೇತ್ರದಲ್ಲಿ ಈ ಬಾರಿ ಜನತಾದಳಕ್ಕೆ ಜಾಕ್ಪಾಟ್ ಆಗಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಗಟ್ಟಿಯಾಗಿ ಬೇರೂರಿದ್ದರೂ ಕೂಡ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಜೆಡಿಎಸ್ ಪ್ರಾಬಲ್ಯ ಇರಲೇ ಇಲ್ಲ. ಹನೂರು ಕ್ಷೇತ್ರದ ಮತದಾರರು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಮತ ಹಾಕಿ ತಮ್ಮ ನೂತನ ನಾಯಕನಾಗಿ ಮಂಜುನಾಥ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷದ ಮುಖಂಡರು ಎಚ್ ಡಿ ಕುಮಾರಸ್ವಾಮಿ ಅವರು ಹನೂರು ಭಾಗದಲ್ಲಿ ಕ್ಯಾನ್ವಾಸ್ ಮಾಡಿ ಪಕ್ಷವನ್ನು ಕಟ್ಟುವಲ್ಲಿ ಸಹಾಯ ಮಾಡಿದ್ದರು. ನರೇಂದ್ರ ಅವರ ಉದಾಸೀನತೆ ಮತ್ತು ಇತ್ತೀಚೆಗೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದ ಲಂಚ ಪಡೆಯುತ್ತಿರುವ ವಿಡಿಯೋ ಕೂಡ ನರೇಂದ್ರ ಅವರಿಗೆ ಮೈನಸ್ ಪಾಯಿಂಟ್ ಆಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ಹಲವಾರು ಬುಡಕಟ್ಟು, ಆದಿವಾಸಿ ಜನಗಳು ಮತ್ತು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಇರುವ ಕ್ಷೇತ್ರ ಹನೂರು. ಇಲ್ಲಿ ಕಳೆದೆರಡು ಬಾರಿ ಕೂಡ ಇವರೇ ಶಾಸಕರಾಗಿದ್ದರೂ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾಣದೇ ಇರೋದು ಕೂಡ ನರೇಂದ್ರ ಅವರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಆದ ನಷ್ಟ. ಇಲ್ಲಿ ಬಿಜೆಪಿ ಪಕ್ಷವು ಪ್ರೀತಂ ನಾಗಪ್ಪ ಅವರನ್ನು ಕಣಕ್ಕೆ ಇಳಿಸಿತ್ತು. ಆದರೆ ಮತದಾರರು ನೂತನತೆಯನ್ನು ಹುಡುಕಿ ಜೆಡಿಎಸ್ ಪಕ್ಷಕ್ಕೆ ಮತ ಹಾಕಿದ್ದಾರೆ.

ಒಟ್ಟಾರೆ ಸ್ಟಾರ್ ಕ್ಯಾಂಪೇನ್ ಹಾಗೂ ರೋಡ್ ಶೋಗಳಲ್ಲೇ ಮತಯಾಚನೆ ಮಾಡಿ ಬೂತ್ ಮಟ್ಟದಲ್ಲಿ ಕಡಿಮೆ ಪ್ರಚಾರ ಮಾಡಿದ ಬಿಜೆಪಿಗೆ ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳೂ ಒಲಿಯಲಿಲ್ಲ ಹಾಗೂ ರಾಜ್ಯದಲ್ಲಿ ಮ್ಯಾಜಿಕ್ ನಂಬರ್ ಕೂಡ ಒಲಿಯಲಿಲ್ಲ. ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ ಉಳಿದಿರುವ ಒಂದೇ ಒಂದು ಬಿಜೆಪಿ ಎಂದರೆ ಅದು ಲೋಕಸಭೆ. ಮುಂದಿನ ಬಾರಿ ಅದನ್ನಾದರೂ ಉಳಿಸಿಕೊಳ್ಳುತ್ತಾರಾ ಅಥವಾ ಕಳೆದುಕೊಳ್ಳುತ್ತಾರೆ 2024ರ ವರೆಗೆ ಕಾದು ನೋಡಬೇಕಾಗಿದೆ.

ವರದಿ: ಧಾತ್ರಿ ಭಾರದ್ವಾಜ್‌

Whats_app_banner