Congress Slams Tejasvi Surya: ಅಪ್ರಬುದ್ಧರು ಸಂಸದರಾದರೇ ಹೀಗೆ ಆಗೋದು...ತೇಜಸ್ವಿ ಸೂರ್ಯ ಕಟುಕಿದ ಕಾಂಗ್ರೆಸ್!
ಕುಂಭದ್ರೋಣ ಮಳೆಗೆ ನಲುಗಿರುವ ರಾಜ್ಯ ರಾಜಧಾನಿ ಬೆಂಗಳೂರು, ಮಳೆ ನಿಂತರೆ ಸಾಕು ಎಂದು ಪ್ರಾರ್ಥಿಸುತ್ತಿದೆ. ಕಳೆದ ಅರ್ಧ ಶತಮಾನದಲ್ಲೇ ಕಂಡು ಕೇಳರಿಯದ ಭೀಕರ ಮಳೆಯಿಂದಾಗಿ ಬೆಂಗಳೂರು ನಗರ ಅಕ್ಷರಶ: ದ್ವೀಪವಾಗಿದೆ. ಈ ಮಧ್ಯೆ ದೋಸೆ ತಿನ್ನುತ್ತಿರುವ ವಿಡಿಯೋ ಹಂಚಿಕೊಂಡಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಕಿಡಿಕಾರಿದೆ.
ಬೆಂಗಳೂರು: ಕುಂಭದ್ರೋಣ ಮಳೆಗೆ ನಲುಗಿರುವ ರಾಜ್ಯ ರಾಜಧಾನಿ ಬೆಂಗಳೂರು, ಮಳೆ ನಿಂತರೆ ಸಾಕು ಎಂದು ಪ್ರಾರ್ಥಿಸುತ್ತಿದೆ. ಕಳೆದ ಅರ್ಧ ಶತಮಾನದಲ್ಲೇ ಕಂಡು ಕೇಳರಿಯದ ಭೀಕರ ಮಳೆಯಿಂದಾಗಿ ಬೆಂಗಳೂರು ನಗರ ಅಕ್ಷರಶ: ದ್ವೀಪವಾಗಿದೆ. ರಣಬೀಕರ ಮಳೆಗೆ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದು, ಬೆಂಗಳೂರಿನಲ್ಲಿ ಅಕ್ಷರಶಃ ಪ್ರವಾಹದ ಪರಿಸ್ಥಿತಿ ಎದುರಾಗಿದೆ.
ಈ ಸಂದರ್ಭದಲ್ಲಿ ಜನರೊಂದಿಗೆ ಬೆರೆತು ಸಂಕಷ್ಟಗಳನ್ನು ದೂರ ಮಾಡಬೇಕಾದ ಜನಪ್ರತಿನಿಧಿಗಳು ಮಾತ್ರ ತಮ್ಮ ತಮ್ಮ ಮನೆಗಳಲ್ಲಿ ಬೆಚ್ಚಗೆ ಕುಳಿತಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕೂಡ ತಂಪಾದ ವಾತಾವರಣದಲ್ಲಿ ಬಿಸಿಯಾದ ದೋಸೆ ಮೆಲ್ಲುತ್ತಾ ಕಾಲ ಕಳೆಯುತ್ತಿದ್ದಾರೆ.
ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ದೊರೆಯುವ ರುಚಿಯಾದ ದೋಸೆಯನ್ನು ಸವಿಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿಗರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಭೀಕರ ಮಳೆಯಿಂದಾಗಿ ರಾಜಧಾನಿಯ ಜನರು ಪರದಾಡುತ್ತಿದ್ದರೆ, ಸಂಸದರು ದೋಸೆ ಸವಿಯುವಲ್ಲಿ ಬ್ಯುಸಿಯಾಗಿದ್ದಾರೆ ಎಂದು ನೆಟ್ಟಿಗರು ತೇಜಸ್ವಿ ಸೂರ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಸದರಿಗೆ ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದು ಗೊತ್ತಿದ್ದಂತೆ ಕಾಣುತ್ತಿಲ್ಲ. ಬಡವರ ಮನೆಯಲ್ಲಿ ಯಾವುದೇ ಅಡೆತಡೆಯಿಲ್ಲದೇ ಒಲೆ ಉರಿಯುತ್ತಿದ್ದಾಗ, ತೇಜದಸ್ವಿ ಸೂರ್ಯ ದೋಸೆ ಸವಿದರೆ ತಕರಾರಿಲ್ಲ. ಆದರೆ ರಣಭೀಕರ ಮಳೆಯಿಂದಾಗಿ ಮನೆ-ಮಠ ಕಳೆದುಕೊಂಡು ಜನ ಬೀದಿಗೆ ಬಿದ್ದು ರೋದಿಸುತ್ತಿರುವಾಗ ದೋಸೆಎ ತಿನ್ನುತ್ತಿದ್ದೇನೆ ಎಂದು ಹೇಳಿದರೆ ಹೊಟ್ಟೆ ಉರಿಯುತ್ತದೆ ಎಂದು ನೆಟ್ಟಿಗರು ತೇಜಸ್ವಿ ಸೂರ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಗಿಬಿದ್ದ ಕಾಂಗ್ರೆಸ್:
ಇನ್ನು ತೇಜಸ್ವಿ ಸೂರ್ಯ ಅವರು ದೋಸೆ ತಿನ್ನುತ್ತಿರುವ ವಿಡಿಯೋಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೇ ಅಖಾಡಕ್ಕಿಳಿದಿರುವ ಪ್ರತಿಪಕ್ಷ ಕಾಂಗ್ರೆಸ್, ಸಂಸದರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮತಿ ದೋಷ ಇರುವವರು ಮಾತ್ರ ಜನರು ಸಂಕಷ್ಟದಲ್ಲಿರುವಾಗ ದೋಸೆ ತಿನ್ನುತ್ತಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್, ʼʼಮತಿ 'ದೋಷ' ಇರುವವರನ್ನು ಆಯ್ಕೆ ಮಾಡಿದರೆ, ಜನ ಮುಳುಗುವಾಗ 'ದೋಸೆ' ತಿನ್ನಲು ಹೋಗುತ್ತಾರೆ! ಬೆಂಗಳೂರು ಮುಳುಗಿದೆ, ಜನತೆ ಪರದಾಡುತ್ತಿದ್ದಾರೆ, ಆದರೆ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ
ಅವರು ದೋಸೆ ತಿನ್ನುವ ಟೆಂಪ್ಟ್ ಆಗಿದ್ಯಂತೆ! ಮಕ್ಕಳಾಟ ಆಡಿಕೊಂಡಿದ್ದ ಅಪ್ರಬುದ್ಧರನ್ನು ಸಂಸದರನ್ನಾಗಿಸಿದರೆ ಇನ್ನೇನು ನಿರೀಕ್ಷಿಸಲು ಸಾಧ್ಯ?..ʼʼ ಎಂದು ಕಿಡಿಕಾರಿದೆ.
ಬೆಂಗಳೂರಿನ ಜನರು ಪರದಾಡುತ್ತಿರುವಾಗ ಸಂಸದ ತೇಜಸ್ವಿ ಸೂರ್ಯ ದೋಸೆ ಮೆಲ್ಲುತ್ತಾ ಹಾಯಾಗಿರುವುದು ಖಂಡನೀಯ ಎಂದಿರುವ ಕಾಂಗ್ರೆಸ್, ಸಂಸದನ ಜವಾಬ್ದಾರಿ ಮರೆತಿರುವ ತೇಜಸ್ವಿ ಸೂರ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದೆ.
ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಯೊಂದರಲ್ಲಿ ಮುಸ್ಲಿಂ ಸಿಬ್ಬಂದಿ ಸಂಖ್ಯೆಗೆ ಆಕ್ರೋಶ ವ್ಯಕ್ತಪಡಿಸಿದ್ದ ತೇಜಸ್ವಿ ಸೂರ್ಯ ಅವರನ್ನು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಳಸು ಎಂದು ಜರೆದಿದ್ದರು. ಅಲ್ಲದೇ ತೇಜಸ್ವಿ ಸೂರ್ಯ ಕೇವಲ ʼಒನ್ ಟೈಮ್ ಕ್ರಾಪ್ʼ(ಒಂದು ಬಾರಿಯ ಬೆಳೆ) ಎಂದು ವ್ಯಂಗ್ಯವಾಡಿದ್ದರು.
ಒಟ್ಟಿನಲ್ಲಿ ಭಾರೀ ಮಳೆಯಿಂದ ರಾಜಧಾನಿ ಬೆಂಗಳೂರು ತತ್ತರಿಸುತ್ತಿರುವ ಸಂದರ್ಭದಲ್ಲಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ದೋಸೆ ತಿನ್ನುತ್ತಿರುವ ವಿಡಿಯೋ ಹಂಚಿಕೊಂಡಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿದೆ. ಸಂಸದರು ತಮ್ಮ ಮನೆಯಿಂದ ಹೊರಬಂದು ಜನರ ಪರದಾಟವನ್ನು ನೋಡಲಿ ಎಂಬ ಆಗ್ರಹ ಕೇಳಿಬಂದಿದೆ.