Pralhad Joshi: ಕಾಂಗ್ರೆಸ್ಸಿಗರ ನಾಲಿಗೆ ಮೇಲೆ ಪಾಕಿಸ್ತಾನ ನಲಿದಾಡುತ್ತದೆ: ಪ್ರಹ್ಲಾದ್ ಜೋಶಿ ಕಿಡಿನುಡಿ!
ಕಾಂಗ್ರೆಸ್ ಮತ್ತು ಪಾಕಿಸ್ತಾನದ ಭಾಷೆ ಒಂದೇ ಆಗಿದ್ದು, ಕಾಂಗ್ರೆಸ್ಸಿಗರ ನಾಲಿಹೆ ಮೇಲೆ ಯಾವಾಗಲೂ ಪಾಕಿಸ್ತಾನ ಕುಣಿದಾಡುತ್ತಿರುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಕಿಡಿಕಾರಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಭಾಷಣಗಳಿಗೂ, ಪಾಕ್‌ನ ವಿಚಾರಧಾರೆಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹರಿಹಾಯ್ದರು.
ವಿಜಯಪುರ: ಕಾಂಗ್ರೆಸ್ ಮತ್ತು ಪಾಕಿಸ್ತಾನದ ಭಾಷೆ ಒಂದೇ ಆಗಿದ್ದು, ಕಾಂಗ್ರೆಸ್ಸಿಗರ ನಾಲಿಹೆ ಮೇಲೆ ಯಾವಾಗಲೂ ಪಾಕಿಸ್ತಾನ ಕುಣಿದಾಡುತ್ತಿರುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಕಿಡಿಕಾರಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿವಿಯಲ್ಲಿ ಮಾಡಿದ ಭಾಷಣದಲ್ಲಿ ವಿದೇಶಿ ಶಕ್ತಿಗಳ ನೆರವು ಕೋರಿರುವುದು ಅಕ್ಷಮ್ಯ ಅಪರಾಧ ಎಂದು ಹರಿಹಾಯ್ದರು.
ಟ್ರೆಂಡಿಂಗ್ ಸುದ್ದಿ
ಕಾಂಗ್ರೆಸ್ಸಿನವರಿಗೆ ವಿದೇಶಿ ಶಕ್ತಿಗಳ ಮೇಲೆ ಬಹಳ ವಿಶ್ವಾಸವಿದೆ. ಅದಕ್ಕಾಗಿಯೇ ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವದ ವಿರುದ್ಧ ಮಾತನಾಡಿದ್ದಾರೆ. ಅಲ್ಲದೇ ಭಾರತದಲ್ಲಿ ಪರಿಸ್ಥಿತಿ ಬದಲಾಯಿಸಲು ವಿದೇಶಿ ಶಕ್ತಿಗಳ ನೆರವು ಕೋರುವ ಮೂಲಕ, ಕಾಂಗ್ರೆಸ್ ಮತ್ತು ಪಾಕಿಸ್ತಾನದ ಉದ್ದೇಶಗಳು ಒಂದೇ ಎಂಬುದನ್ನು ರಾಹುಲ್ ಗಾಂಧಿ ಪ್ರಮಾಣೀಕರಿಸಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದರು.
ಕೇಂದ್ರ ಸರ್ಕಾರ ಆರ್ಟಿಕಲ್ 370ನ್ನು ರದ್ದುಗೊಳಿಸಿದಾಗ ಪಾಕಿಸ್ತಾನ ಮತ್ತು ಕಾಂಗ್ರೆಸ್ ಇದನ್ನು ಕರಾಳ ದಿನ ಎಂದು ಕರೆದವು. ಕಾಂಗ್ರೆಸ್ ಮತ್ತು ಪಾಕಿಸ್ತಾನದ ಯೋಚನಾ ಲಹರಿ ಒಂದೇ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ದೇಶದ ಭ್ರದ್ರತೆ ವಿಚಾರದಲ್ಲಿ ಕಾಂಗ್ರೆಸ್ ನೀಡಿರುವ ಹೇಳಿಕೆಗಳು ಪಾಕಿಸ್ತಾನದ ವಿಚಾರಧಾರೆಗೆ ಹೊಂದಿಕೆಯಾಗುತ್ತವೆ ಎಂದು ಪ್ರಹ್ಲಾದ್ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನರಿಂದ ಚುನಾಯಿತರಾದ ನಾಯಕ. ಆದರೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ನಿಂದ ನೇಮಿಸಲ್ಪಟ್ಟಿರುವ ನಾಯಕ. ಸೆಲೆಕ್ಟೆಡ್ ಲೀಡರ್ ಓರ್ವ ಎಲೆಕ್ಟೆಡ್ ಲೀಡರ್ ಬಗ್ಗೆ ಮಾತನಾಡುವುದು ನಿಜಕ್ಕೂ ಹಾಸ್ಯಾಸ್ಪದ. ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದರೂ, ರಾಹುಲ್ ಗಾಂಧಿ ಅವರಿಗೆ ಬುದ್ಧಿ ಬರದಿರುವುದು ವಿಪರ್ಯಾಸ ಎಂದು ಪ್ರಹ್ಲಾದ್ ಜೋಶಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ತುಷ್ಠಿಕರಣದ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್ ಈಗ ಎಸ್‌ಡಿಪಿಐ, ಪಿಎಫ್‌ಐ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ. ಸೋಲಿನ ಭಯದಿಂದ ಯಾವುದೇ ಶಕ್ತಿ ಇರಲಿ, ಅದು ಸಮಾಜಕ್ಕೆ ಹಿತವಾಗರಲಿ ಅಥವಾ ವಿರುದ್ಧವಾಗಿರಲಿ ಅಂಥ ಶಕ್ತಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ವಿನಂತಿಯ ಮೇರೆಗೆ ನಾವು ಭಾರತೀಯ ಜನತಾ ಪಕ್ಷದ ವಿರುದ್ಧ ಸ್ಪರ್ಧೆ ಮಾಡಲ್ಲ ಎಂದು ಆ ಸಂಘಟನೆಗಳ ಮುಖಂಡರು ಹೇಳಿದ್ದಾರೆ ಎಂದು ಸಚಿವರು ಆರೋಪಿಸಿದರು.
ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಮತೀಯ ಶಕ್ತಿಗಳೊಂದಿಗೆ ಕೈಜೋಡಿಸುತ್ತದೆ ಎಂಬುದಕ್ಕೆ, ಕಾಂಗ್ರೆಸ್ ಮನವಿಯ ಮೇರೆಗೆ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದೇವೆ ಎಂಬ ಎಸ್‌ಡಿಪಿಐ ಅಧ್ಯಕ್ಷರ ಹೇಳಿಕೆಯೇ ಸಾಕ್ಷಿ. ನಾವು ಪಾಕಿಸ್ತಾನ ಪೋಷಿತ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಜಾಗತಿಕ ವೇದಿಕೆಯಲ್ಲಿ ಪ್ರಯತ್ನ ಮಾಡುತ್ತಿದ್ದರೆ, ಕಾಂಗ್ರೆಸ್ ಸ್ಥಳೀಯವಾಗಿ ಮತೀಯ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶವನ್ನು ದುರ್ಬಲಗೊಳಿಸುವ ಪಾಪಕೃತ್ಯ ಮಾಡುತ್ತಿದೆ ಎಂದು ಪ್ರಹ್ಲಾದ್ ಜೋಶಿ ಹರಿಹಾಯ್ದರು.
ಭಾರತದ ಸಂವಿಧಾನ ಇಕ್ಕಟ್ಟಿನಲ್ಲಿ ಸಿಲುಕಿದ್ದು, ಅದರ ರಕ್ಷಣೆಗಾಗಿ ಜಗತ್ತಿನ ರಾಷ್ಟ್ರಗಳು ನೆರವು ನೀಡಬೇಕು ಎಂದು ಹೇಳಿರುವ ರಾಹುಲ್ ಗಾಂಧಿ, ಭಾರತದ ಮೇಲೆ ಯುದ್ಧ ಮಾಡುವಂತೆ ಆಫ್ಘಾನಿಸ್ತಾನಕ್ಕೆ ಪತ್ರ ಬರೆದಿದ್ದ ಟಿಪ್ಪುವಿನ ಆಧುನಿಕ ಅವತಾರ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ನಮ್ಮದು ಪ್ರಜಾಸತ್ತಾತ್ಮಕ ಸ್ವತಂತ್ರ ಗಣರಾಜ್ಯವಾಗಿದೆ. 35 ವರ್ಷಗಳ ನಂತರ ಯಾವುದೇ ಒಂದು ನಿರ್ದಿಷ್ಟ ಪಕ್ಷಕ್ಕೆ ಪೂರ್ಣ ಬಹುಮತ ಬಂದಿದ್ದರೆ ಅದು ಬಿಜೆಪಿಗೆ ಮಾತ್ರ. ಬಿಜೆಪಿ ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದು, ಇದನ್ನು ಸಹಿಸದ ಕಾಂಗ್ರೆಸ್ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಪ್ರಹ್ಲಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಬಾರದು ಎಂದು ರಾಹುಲ್ ಗಾಂಧಿ ಸಲಹೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಅಮೇಥಿಯಲ್ಲಿ ಮಣ್ಣು ಮುಕ್ಕಿದ ರಾಹುಲ್ ಗಾಂಧಿ ಅವರಿಂದ ಸಿದ್ದರಾಮಯ್ಯ ಅವರಂತ ನಾಯಕರು ಸಲಹೆ ಪಡೆಯವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ವ್ಯಂಗ್ಯವಾಡಿದರು.