ಕನ್ನಡ ಸುದ್ದಿ  /  Karnataka  /  Congress To Start New Name Plate Campaign Against State Bjp Government

PayCM Campaign: ಪೇಸಿಎಂ ಆಯ್ತು, ಈಗ ಕಾಂಗ್ರೆಸ್‌ನಿಂದ ಮತ್ತೊಂದು ಅಭಿಯಾನ: ಏನಿದು ಹೊಸ ಅಂದೋಲನ?

ನನಗೆ ಯಾರೂ ಲಂಚ ಕೊಡಬೇಕಿಲ್ಲ, ನಾನು ಭ್ರಷ್ಟ ಆಧಿಕಾರಿಯಾಗಲಾರೆ’ ಎನ್ನುವ ಫಲಕವನ್ನು ಎಲ್ಲಾ ಸರ್ಕಾರಿ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಅಳವಡಿಸಬೇಕು ಎಂಬ ಸರ್ಕಾರದ ಆದೇಶ, ಕಾಂಗ್ರೆಸ್‌ಗೆ ಹೊಸ ಅಸ್ತ್ರವಾಗಿ ಸಿಕ್ಕಿದೆ. ‘ನನಗೆ ಯಾರೂ ಲಂಚ ಕೊಡಬೇಕಿಲ್ಲ. ನಾನು ಭ್ರಷ್ಟ ಸಚಿವನಾಗಲಾರೆ’ ಎಂಬ ಬರಹವುಳ್ಳ ನಾಮಫಲಕವನ್ನು ವಿಧಾನಸೌಧಕ್ಕೆ ಕಳುಹಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಕಾಂಗ್ರೆಸ್‌ ಪತ್ರಿಕಾಗೋಷ್ಠಿ
ಕಾಂಗ್ರೆಸ್‌ ಪತ್ರಿಕಾಗೋಷ್ಠಿ (Verified Twitter)

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ 40 ಪರ್ಸೆಂಟ್‌ ಕಮಿಷನ್‌ ಭ್ರಷ್ಟಾಚಾರದ ಆರೋಪ ಮಾಡಿದ್ದ ಪ್ರತಿಪಕ್ಷ ಕಾಂಗ್ರೆಸ್‌, ರಾಜ್ಯಾದ್ಯಂತ ಪೇಸಿಎಂ ಅಭಿಯಾನ ಹಮ್ಮಿಕೊಂಡು ಸರ್ಕಾರಕ್ಕೆ ಚಾಟಿ ಬೀಸಿತ್ತು. ಇದೀಗ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಟಕ್ಕೆ ಸಜ್ಜಾಗಿರುವ ಕಾಂಗ್ರೆಸ್‌, ನಾಮಫಲಕ ಅಭಿಯಾನ ಹಮ್ಮಿಕೊಳ್ಳಲು ರಣತಂತ್ರ ಹೆಣೆದಿದೆ.

ಹೌದು, ‘ನನಗೆ ಯಾರೂ ಲಂಚ ಕೊಡಬೇಕಿಲ್ಲ, ನಾನು ಭ್ರಷ್ಟ ಆಧಿಕಾರಿಯಾಗಲಾರೆ’ ಎನ್ನುವ ಫಲಕವನ್ನು ಎಲ್ಲಾ ಸರ್ಕಾರಿ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಅಳವಡಿಸಬೇಕು ಎಂದು ಮುಖ್ಯಮಂತ್ರಿಗಳ ಕಚೇರಿಯಿಂದ ಆದೇಶ ನೀಡಲಾಗಿದೆ. ಇದು ಕಾಂಗ್ರೆಸ್‌ಗೆ ಹೊಸ ಅಸ್ತ್ರವಾಗಿ ಸಿಕ್ಕಿದ್ದು, ಇದು ವಿಧಾನಸೌಧದಲ್ಲಿ ಕುಳಿತಿರುವ ಸಚಿವರಿಗೂ ಅನ್ವಯವಾಗಬೇಕು ಎಂದು ಆಗ್ರಹಿಸಿದೆ.

ಈ ಹಿನ್ನೆಲೆಯಲ್ಲಿ ‘ನನಗೆ ಯಾರೂ ಲಂಚ ಕೊಡಬೇಕಿಲ್ಲ. ನಾನು ಭ್ರಷ್ಟ ಸಚಿವನಾಗಲಾರೆ’ ಎಂಬ ಬರಹವುಳ್ಳ ನಾಮಫಲಕವನ್ನು ವಿಧಾನಸೌಧಕ್ಕೆ ಕಳುಹಿಸಲು ಕಾಂಗ್ರೆಸ್‌ ನಿರ್ಧರಿಸಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಅಧಿಕಾರಿಗಳಿಗೆ ನೈತಿಕ ಪಾಠ ಹೇಳಿಕೊಡಲು ಮುಂದಾಗಿರುವ ಬೊಮ್ಮಾಯಿ ಸರ್ಕಾರ, ತನ್ನ ಸಚಿವರಿಗೂ ಇದೇ ಪಾಠ ಮಾಡಲಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಚಿವರ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಹೀಗಾಗಿ ಅವರ ಸಂಪುಟದ ಬಹುತೇಕ ಸಚಿವರು ಭ್ರಷ್ಟರು ಎಂಬುದನ್ನು ನೆನಪು ಮಾಡಿಕೊಡಲು ‘ನನಗೆ ಯಾರೂ ಲಂಚ ಕೊಡಬೇಕಿಲ್ಲ. ನಾನು ಭ್ರಷ್ಟ ಸಚಿವನಾಗಲಾರೆ’ ಎಂಬ ನಾಮಫಲಕವನ್ನು ವಿಧಾನಸೌಧಕ್ಕೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.

ಕಾಂಗೆಸ್‌ನ ಪೇಸಿಎಂ ಅಭಿಯಾನದಿಂದ ರಾಜ್ಯ ಬಿಜೆಪಿ ಸರ್ಕಾರ ತೀವ್ರ ಮುಜುಗರ ಅನುಭವಿಸಿದೆ. ರಾಜ್ಯದ ಜನರ ಮುಂದೆ ಬೆತ್ತಲಾಗಿರುವ ಬೊಮ್ಮಾಯಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ನೈತಿಕ ಹಕ್ಕಿಲ್ಲ. ಕಾಂಗ್ರೆಸ್‌ ಪಕ್ಷ ರಾಜ್ಯ ಬಿಜೆಪಿ ಸರ್ಕಾರದ ದುಡಾಡಳಿತವನ್ನು ಜನರ ಮುಂದೆ ಬಿಚ್ಚಿಡುವ ಕಾರ್ಯವನ್ನು ಮುಂದುವರೆಸಲಿದೆ ಎಂದು ಇದೇ ವೇಳೆ ರಾಮಲಿಂಗಾ ರೆಡ್ಡಿ ಗುಡುಗಿದರು.

ಇನ್ನು ಪತ್ರಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕ ಪ್ರಿಯಾಂಕ್‌ ಖರ್ಗೆ, 40 ಪರ್ಸೆಂಟ್‌ ಕಮಿಷನ್‌ ,ಪಿಎಸ್‌ಐ ಪರೀಕ್ಷಾ ಅಕ್ರಮ ಹಗರಣ ಹೀಗೆ ಸಾಲುಸಾಲು ಹಗರಣಗಳಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ದಿನಗಳು ಸಮೀಪಿಸಿವೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸದನದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಪ್ರತಿಪಕ್ಷ ಕಾಂಗ್ರೆಸ್‌ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಈ ಹಗರಣಗಳ ಕುರಿತು ರಾಜ್ಯದ ಜನರಲ್ಲಿಯೂ ಜನಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಇದರಿಂದ ಬೊಮ್ಮಾಯಿ ಸರ್ಕಾರ ಅಕ್ಷರಶಃ ನಲುಗಿದೆ ಎಂದು ಪ್ರಿಯಾಂಕ್‌ ಖರ್ಗೆ ಕಿಡಿಕಾರಿದರು.

ವ್ಯವಸ್ಥೆ ಯಾವ ಹಂತಕ್ಕೆ ಬಂದಿದೆ ಎಂದರೆ, ಶಾಸಕರ ಭವನದಲ್ಲೇ ಪಿಎಸ್ಐ ಅಕ್ರಮದ ಡೀಲ್ ನಡೆದಿದೆ. ಹಾಗಾಗಿ 'ಲಂಚ ಕೊಡಬೇಕಾಗಿಲ್ಲ' ಅಭಿಯಾನವನ್ನು ವಿಧಾನಸೌಧದಲ್ಲೂ ಆರಂಭಿಸಬೇಕು. ತಾವು ನಿಜಕ್ಕೂ ಪ್ರಾಮಾಣಿಕರಿದ್ದರೆ, ಈ ಹಾಸ್ಯಾಸ್ಪದ ಅಭಿಯಾನ ಕೈಬಿಟ್ಟು,

ನಿಮ್ಮ ಮೇಲಿನ ಭ್ರಷ್ಟಾಚಾರ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ನೀಡಿ ಎಂದು ಪ್ರಿಯಾಂಕ್‌ ಖರ್ಗೆ ಇದೇ ವೇಳೆ ಸಿಎಂ ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು.

ಒಟ್ಟಿನಲ್ಲಿ ಪೇಸಿಎಂ ಅಭಿಯಾನದಿಂದ ಮತ್ತಷ್ಟು ಚುರುಕಾಗಿರುವ ರಾಜ್ಯ ಕಾಂಗ್ರೆಸ್‌ ಘಟಕ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಇದೀಗ ಮತ್ತೊಂದು ಸುತ್ತಿನ ಅಭಿಯಾನ ಹಮ್ಮಿಕೊಳ್ಳಲು ಸಿದ್ಧವಾಗುತ್ತಿದೆ. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಪ್ರತಿಪಕ್ಷಗಳು ಮತ್ತಷ್ಟು ಕ್ರಿಯಾಶೀಲರಾಗಿರುವುದು ರಾಜ್ಯದ ಜನತೆಯ ಗಮನ ಸೆಳೆದಿದೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.
IPL_Entry_Point