Rahul Gandhi: ಕಾಂಗ್ರೆಸ್‌ನಿಂದ 'ಶುದ್ಧ ಹೃದಯ'ದ ರಾಹುಲ್ ಗಾಂಧಿ ವಿರುದ್ಧ ಷಡ್ಯಂತ್ರ: ಗಂಭೀರ ಆರೋಪ ಮಾಡಿದ ಕರ್ನಾಟಕದ ಬಿಜೆಪಿ ಸಂಸದ!
ರಾಹುಲ್ ಗಾಂಧಿ ಅವರನ್ನು 'ಶುದ್ಧ ಹೃದಯದ ವ್ಯಕ್ತಿ' ಎಂದು ಕರೆದಿರುವ ಕರ್ನಾಟಕದ ಬಿಜೆಪಿ ರಾಜ್ಯಸಭಾ ಸಂಸದ ಲೆಹರ್ ಸಿಂಗ್ ಸಿರೋಯಾ, ರಾಹುಲ್ ಗಾಂಧಿ ಅವರ ರಾಜಕೀಯ ಜೀವನವನ್ನು ಮುಗಿಸಲು ಕಾಂಗ್ರೆಸ್‌ನಲ್ಲೇ ಷಡ್ಯಂತ್ರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ರಾಹುಲ್ ಅವರನ್ನು ಹರಕೆಯ ಕುರಿ ಮಾಡಲು ಪ್ರಯತ್ನಿಸುತ್ತಿದೆ ಎಂದೂ ಸಿರೋಯಾ ಗುಡುಗಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ನಾಯಕರು ಟೀಕಿಸುವುದು ಸಾಮಾನ್ಯ ಸಂಗತಿ. ರಾಹುಲ್ ಅವರ ಹೇಳಿಕೆಗಳ ಕುರಿತು ವ್ಯಂಗ್ಯವಾಡುವ ಬಿಜೆಪಿ ನಾಯಕರು, ರಾಹುಲ್ ಗಾಂಧಿ ರಾಜಕೀಯವಾಗಿ ಮತ್ತಷ್ಟು ಪಕ್ವಗೊಳ್ಳಬೇಕು ಎಂದು ಅಭಿಪ್ರಾಯಪಡುತ್ತಾರೆ.
ಆದರೆ ಕರ್ನಾಟಕದ ಬಿಜೆಪಿ ರಾಜ್ಯಸಭಾ ಸಂಸದರೊಬ್ಬರು ರಾಹುಲ್ ಗಾಂಧಿ ಅವರನ್ನು 'ಶುದ್ಧ ಹೃದಯದ ವ್ಯಕ್ತಿ' ಎಂದು ಕರೆದಿದ್ದು, ಅವರ ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ನಲೇ ಷಡ್ಯಂತ್ರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ರಾಹುಲ್ ಗಾಂಧಿ ಅವರನ್ನು ಹರಕೆಯ ಕುರಿಯಂತೆ ಬಲಿಕೊಡಲು ಮುಂದಾಗಿದೆ ಎಂಬುದು ಈ ಸಂಸದರ ಅರೋಪವಾಗಿದೆ.
ಹೌದು, ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿರುವ ಲೆಹರ್ ಸಿಂಗ್ ಸಿರೋಯಾ, ರಾಹುಲ್ ಗಾಂಧಿ ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಇದೇ ವೇಳೆ ರಾಹುಲ್ ಅವರನ್ನು ದುರ್ಬಲಗೊಳಿಸುವ ಷಡ್ಯಂತ್ರವನ್ನು ಕಾಂಗ್ರೆಸ್‌ನ ಗುಂಪೊಂದು ಹೆಣೆಯುತ್ತಿದೆ ಎಂದೂ ಗಂಭೀರ ಆರೋಪ ಮಾಡಿದ್ದಾರೆ.
"ರಾಹುಲ್ ಗಾಂಧಿ ಅವರನ್ನು ದುರ್ಬಲಗೊಳಿಸಲು, ದಾರಿತಪ್ಪಿಸಲು ಮತ್ತು ಹರಕೆಯ ಕುರಿ ಮಾಡಲು ಕಾಂಗ್ರೆಸ್‌ನಲ್ಲಿ ಷಡ್ಯಂತ್ರ ನಡೆಯುತ್ತಿದೆ.
ರಾಹುಲ್ ಗಾಂಧಿಯವರ ಸಲಹೆಗಾರರು ಅವರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಆಪ್ತ ಸಲಹೆಗಾರರೇ ರಾಹುಲ್ ಗಾಂಧಿ ಅವರ ದಾರಿ ತಪ್ಪಿಸುತ್ತಿದ್ದಾರೆ.." ಎಂದು ಲೆಹರ್ ಸಿಂಗ್ ಸಿರೋಯಾ ಅಭಿಪ್ರಾಯಪಟ್ಟಿದ್ದಾರೆ.
"ರಾಹುಲ್ ಗಾಂಧಿಗೆ ಸಲಹೆ ನೀಡುತ್ತಿರುವ ಜನರ ಕುತಂತ್ರಗಳನ್ನು ಕಂಡಾಗ ನನಗೆ ಆಶ್ಚರ್ಯವಾಗುತ್ತದೆ. ಅವರ ಸುತ್ತಮುತ್ತಲಿನ ಜನರನ್ನು ನೋಡಿದಾಗ, ನನಗೆ ಅರ್ಥವಾಗುವುದು ರಾಹುಲ್ ಗಾಂಧಿ ಓರ್ವ ಶುದ್ಧ ಹೃದಯದ ವ್ಯಕ್ತಿ. ಅವರ ಸಲಹೆಗಾರರು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ.." ಎಂದು ಸಿರೋಯಾ ಹೇಳಿದ್ದಾರೆ.
"ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕೆಟ್ಟದಾಗಿ ವರ್ತಿಸುತ್ತಿದೆ ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ವಾಸ್ತವವಾಗಿ ಅವರು ಮತ್ತೆ ಸಂಸದರಾಗಿ ಆಯ್ಕೆಯಾಗಿ ಸಂಸತ್ತಿನಲ್ಲಿ ಚರ್ಚೆಗೆ ಸಿದ್ಧರಾಗಿ ಬರಲಿ ಎಂದು ನಾವು ಹಾರೈಸುತ್ತೇವೆ. ಆದರೆ ರಾಹುಲ್ ತಮ್ಮನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ರೂಪಿಸಿರುವ ತಮ್ಮ ಆಪ್ತ ಸಲಹೆಗಾರರ ಬಗ್ಗೆ ಎಚ್ಚರಿಕೆಯಿಂದ ಇರಬೇಕು.." ಎಂದು ಬಿಜೆಪಿ ನಾಯಕ ಸಲಹೆ ನೀಡಿದ್ದಾರೆ.
"ಮಾಜಿ ಪ್ರಧಾನಿ ಮತ್ತು ರಾಹುಲ್ ಗಾಂಧಿಯವರ ಅಜ್ಜಿ ಇಂದಿರಾ ಗಾಂಧಿ, ತಮ್ಮ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ತಕ್ಷಣವೇ ಮೇಲ್ಮನವಿ ಸಲ್ಲಿಸಿದ್ದರು. ರಾಹುಲ್ ಕೂಡ ಇದೇ ರೀತಿ ಮಾಡಲಿದ್ದಾರೆ ಎಂದು ನಾವು ನಿರೀಕ್ಷೆ ಇಟ್ಟುಕೊಂಡಿದ್ದೇವೆ.." ಎಂದು ಲೆಹರ್ ಸಿಂಗ್ ಸಿರೋಯಾ ಹೇಳಿರುವುದು ಗಮನ ಸೆಳೆದಿದೆ.
"ರಾಹುಲ್ ಗಾಂಧಿ ಅವರು ತಮಗೆ ಬೇರೆ ಯಾವುದೇ ಸ್ವಂತ ಮನೆ ಇರದಿದ್ದರೂ, ಸರ್ಕಾರದ ಆದೇಶದಂತ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಅವರು ಇದನ್ನೆಲ್ಲಾ ಏಕೆ ಹೇಳುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. 1977ರಲ್ಲಿ ಇಂದಿರಾ ಗಾಂಧಿ ಸೋತ ಬಳಿಕ, 1978ರಲ್ಲಿ ಆಗಿನ ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿ ಅವರ ಬಳಿ ವಸತಿ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದರು. ತಕ್ಷಣವೇ ಇಂದಿರಾ ಅವರ ಕೋರಿಕೆಯನ್ನು ಮನ್ನಿಸಿದ ಮೊರಾರ್ಜಿ ದೇಸಾಯಿ, 12 ವಿಲ್ಲಿಂಗ್‌ಡನ್ ಕ್ರೆಸೆಂಟ್‌ನಲ್ಲಿ ಇಂದಿರಾ ಅವರಿಗೆ ಸರ್ಕಾರಿ ಬಂಗಲೆಯನ್ನು ನೀಡಿದರು. ರಾಹುಲ್ ಕೂಡ ಇಂತಹ ಪ್ರಯತ್ನಗಳನ್ನು ಮಾಡಬಹುದು.." ಎಂದು ಸಿರೋಯಾ ಅವರು ಸೂಚ್ಯವಾಗಿ ಹೇಳಿದ್ದಾರೆ.
"ಮಾಜಿ ಸಂಸದರಾಗಿ ರಾಹುಲ್ ಗಾಂಧಿ ಬೇರೆ ಮಾರ್ಗಗಳನ್ನು ಅನ್ವೇಷಿಸಬಹುದಿತ್ತು. ಆದರೆ ಅವರ ಆಪ್ತ ಸಲಹೆಗಾರರು ಅವರ ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್‌ನ ಜಿ-23 ಸಮಸ್ಯೆ ಬೃಹದಾಕಾರವಾಗಿ ಬೆಳೆದಿದ್ದು, ಅನೇಕ ಹಿರಿಯ ನಾಯಕರು ಪಕ್ಷವನ್ನು ತೊರೆದಿದ್ದಾರೆ. ಈಗಿರುವ ನಾಯಕರು ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಮುಗಿಸಲು ಬಯಸಿದ್ದಾರೆ.." ಎಂದು ಲೆಹರ್ ಸಿಂಗ್ ಸಿರೋಯಾ ಗಂಭೀರ ಆರೋಪ ಮಾಡಿದರು.
ವಿಭಾಗ