ಕನ್ನಡ ಸುದ್ದಿ  /  Karnataka  /  Constitution Will Not Allow To Enforce Uniform Civil Code In The Country Says Hd Deve Gowda

HD Deve Gowda: ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಹೆಚ್‌ಡಿ ದೇವೇಗೌಡ ಹೇಳಿದ್ದೇನು?: ದೊರೆಯಲಿದೆಯೇ ಜೆಡಿಎಸ್‌ ವರಿಷ್ಠರ ಬೆಂಬಲ?

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ ಎಂದು ಮಾಜಿ ಪ್ರಧಾನಮಂತ್ರಿ ಮತ್ತು ಜೆಡಿಎಸ್‌ ವರಿಷ್ಠ ಹೆಚ್‌ಡಿ ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ . ಒಂದು ವೇಳೆ ಇದನ್ನು ಜಾರಿ ಮಾಡಲು ಹೋದರೆ, ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ ಎಂದು ಎಚ್ಚರಿಸಿದರು .

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (Verified Twitter)

ಮೈಸೂರು: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ ಎಂದು ಮಾಜಿ ಪ್ರಧಾನಮಂತ್ರಿ ಮತ್ತು ಜೆಡಿಎಸ್‌ ವರಿಷ್ಠ ಹೆಚ್‌ಡಿ ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ. ಇದೊಂದು ವ್ಯರ್ಥ ಪ್ರಯತ್ನವಾಗಲಿದೆ ಎಂದು ಅವರು ಹೇಳಿದ್ದಾರೆ.

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಹೆಚ್‌ಡಿ ದೇವೇಗೌಡ, ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಬಿಜೆಪಿಗೆ ರಾಜಕೀಯ ಲಾಭ ಆಗಲಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಮುಖ್ಯ ಅಲ್ಲ. ನಮ್ಮ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇದೆಯೇ ಅಥವಾ ಇಲ್ಲವೇ ಎಂಬುದು ಮುಖ್ಯ ಪ್ರಶ್ನೆ. ಆದರೆ ನಮ್ಮ ಸಂವಿಧಾನ ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬುದು ಸ್ಪಷ್ಟ ಎಂದು ಹೇಳಿದರು.

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಹೊರಟರೆ, ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ಸಂವಿಧಾನಕ್ಕೆ ಅನುಗುಣವಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವದನ್ನು ನಾನು ಕೂಡ ವಿರೋಧಿಸುತ್ತೇನೆ ಎಂದು ಹೆಚ್‌ಡಿ ದೇವೇಗೌಡ ಸ್ಪಷ್ಟಪಡಿಸಿದರು.

ಇನ್ನು ರಾಜ್ಯ ವಿಧಾನಸಭೆ ಚುನಾವಣೆ ಬಗ್ಗೆ ಮಾತನಾಡಿದ ಹೆಚ್‌ಡಿ ದೇವೇಗೌಡ, ಮುಂದಿನ ತಿಂಗಳಿನಿಂದ ತಾವು ಪ್ರಚಾರದಲ್ಲಿ ಭಾಗವಹಿಸುವುದಾಗಿ ಹೇಳಿದರು. ಶಾಸಕರು ಹಾಗೂ ಮಾಜಿ ಶಾಸಕರಿಗೆ ಪಕ್ಷ ಸಂಘಟನೆ ಮಾಡುವಂತೆ ಸೂಚನೆ ನೀಡಿದ್ದೇನೆ. ಪಂಚರತ್ನ ರಥಯಾತ್ರೆ ವೇಳೆ ಮನೆ ಮನೆಗೂ ತೆರಳುವಂತೆ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದೇನೆ. ರಾಜ್ಯದ ಜನತೆಗೆ ಪ್ರಾದೇಶಿಕ ಪಕ್ಷದ ಮಹತ್ವವನ್ನು ತಿಳಿಸಿಕೊಡುವಂತೆ ಹೇಳಿದ್ದೇನೆ ಎಂದು ನುಡಿದರು.

ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಯಾವ ಅನುಕೂಲವೂ ಆಗಿಲ್ಲ. ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯಕ್ಕೆ ಹೆಚ್ಚು ಅನುಕೂಲ ಎಂಬುದು, ನೆರೆಯ ರಾಜ್ಯಗಳ ರಾಜಕೀಯವನ್ನು ಗಮನಿಸಿದರೆ ಅರ್ಥವಾಗುತ್ತದೆ. ಜೆಡಿಎಸ್‌ ಯಾವಾಗಲೂ ರಾಜ್ಯದ ಜನರ ಧ್ವನಿಯಾಗಿ ಕೆಲಸ ಮಾಡಿದೆ ಎಂದು ಹೆಚ್‌ಡಿ ದೇವೇಗೌಡ ಇದೇ ವೇಳೆ ಅಭಿಪ್ರಾಯಪಟ್ಟರು.

ವಿಧಾನಸಭೆ ಚುನಾವಣೆಗೆ ಸಿದ್ಧವಾಗಿರುವ ಜೆಡಿಎಸ್‌ ಮೊದಲ ಪಟ್ಟಿ ಅಂತಿಮವಲ್ಲ. ಇದರಲ್ಲಿ ಬದಲಾವಣೆಗೆ ಅವಕಾಶವಿದೆ. ಅಸಮಾಧಾನಗೊಂಡಿರುವ ಶಾಸಕ ಶಿವಲಿಂಗೇಗೌಡರ ಜೊತೆ ಮಾತನಾಡುವಂತೆ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದೇನೆ. ಶೀಘ್ರದಲ್ಲೇ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ ಎಂದು ಹೆಚ್‌ಡಿ ದೇವೇಗೌಡ ಭರವಸೆ ವ್ಯಕ್ತಪಡಿಸಿದರು.

ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ನೀಡಲಿಲ್ಲ. ಆದರೆಸಮುದ್ರಕ್ಕೆ ಹರಿಯುವ ಕಾವೇರಿ ನೀರನ್ನು ಬಳಸಲು ತಮಿಳುನಾಡಿಗೆ ಅನುಮತಿ ನೀಡಿದ್ದಾರೆ. ಸೇಲಂ ಜಿಲ್ಲೆ ಸೇರಿ ಆಸುಪಾಸಿನ ಜಿಲ್ಲೆಗಳಲ್ಲಿ 4 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಯ ನೀರಾವರಿಗೆ ಈ ನೀರು ಬಳಕೆಯಾಗುತ್ತಿದೆ ಎಂದು ಹೆಚ್‌ಡಿ ದೇವೇಗೌಡ ಅಸಮಾಧಾನ ಹೊರಹಾಕಿದರು.

ತಮಿಳುನಾಡಿನ ಎಐಎಡಿಎಂಕೆ ಪಕ್ಷದೊಂದಿಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ. ಮುಂದಿನ‌ ದಿನಗಳಲ್ಲಿ ಎಐಎಡಿಎಂಕೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ, ನೀರಾವರಿ ಯೋಜನೆಗೆ ಪ್ರಧಾನಿ ಮೋದಿ ಅನುಮತಿ ಕೊಟ್ಟಿದ್ದಾರೆ. ಮೇಕೆದಾಟು ಯೋಜನೆ ವಿಚಾರವಾಗಿ ಈ ಹಿಂದೆಯೇ ಪ್ರಧಾನಿ ಮೋದಿ ಅವರಿಗೆ ನಾನು ಪತ್ರ ಬರೆದಿದ್ದೆ. ಆದರೆ ಪ್ರಧಾನಿ ಅವರು ಈ ಪತ್ರಕ್ಕೆ ಇದುವರೆಗೂ ಉತ್ತರಿಸಿಲ್ಲ. ಈ ಕುರಿತು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡುವುದಾಗಿ ಹೆಚ್‌ಡಿ ದೇವೇಗೌಡ ಹೇಳಿದರು.

ಇದಕ್ಕೂ ಮೊದಲು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿಗೆ ಭೇಟಿ ನೀಡಿದ ಹೆಚ್‌ಡಿ ದೇವೇಗೌಡ ಮತ್ತು ಕುಟುಂಬ, ನಂಜುಂಡೇಶ್ವರನ ದರ್ಶನ ಪಡೆದರು. ಈ ವೇಳೆ ಪತ್ನಿ ಚೆನ್ನಮ್ಮ ಅವರೊಂದಿಗೆ ಹೆಚ್‌ಡಿ ದೇವೇಗೌಡ ಅವರು ವಿಶೇಷ ಪೂಜೆ ಸಲ್ಲಿಸಿದರು.

ವಿಭಾಗ