HD Kumaraswamy: ಶಾಸಕರನ್ನು ನಿರ್ಲಕ್ಷಿಸಿ ಕಾಮಗಾರಿ.. ಚನ್ನಪಟ್ಟಣದಲ್ಲಿ ನನಗೆ ಅಪಮಾನ ಮಾಡಲಾಗಿದೆ ಎಂದ ಹೆಚ್ಡಿಕೆ
ಕ್ಷೇತ್ರದ ಶಾಸಕರನ್ನು ಕತ್ತಲೆಯಲ್ಲಿಟ್ಟು ಕಾಮಗಾರಿ ರಾಜಕೀಯ ಮಾಡಲಾಗುತ್ತಿದೆ. ಕ್ಷೇತ್ರದ ಶಾಸಕರನ್ನು ನಿರ್ಲಕ್ಷಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ನನಗೆ ಅಪಮಾನ ಮಾಡಲಾಗಿದೆ. ಅಲ್ಲಿನ ಅಧಿಕಾರಿಗಳು ನನ್ನ ಪಾಲಿಗೆ ಹಕ್ಕುಚ್ಯುತಿ ಎಸಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಚನ್ನಪಟ್ಟಣ ಶಾಸಕರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಕ್ಷೇತ್ರದ ಶಾಸಕರನ್ನು ಕತ್ತಲೆಯಲ್ಲಿಟ್ಟು ಕಾಮಗಾರಿ ರಾಜಕೀಯ ಮಾಡಲಾಗುತ್ತಿದೆ. ಕ್ಷೇತ್ರದ ಶಾಸಕರನ್ನು ನಿರ್ಲಕ್ಷಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ನನಗೆ ಅಪಮಾನ ಮಾಡಲಾಗಿದೆ. ಅಲ್ಲಿನ ಅಧಿಕಾರಿಗಳು ನನ್ನ ಪಾಲಿಗೆ ಹಕ್ಕುಚ್ಯುತಿ ಎಸಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಚನ್ನಪಟ್ಟಣ ಶಾಸಕರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್ಡಿಕೆ, ಓರ್ವ ನಾಮನಿರ್ದೇಶಿತ ವಿಧಾನ ಪರಿಷತ್ ಸದಸ್ಯರ ರಾಜಕೀಯ ಹಿತರಕ್ಷಣೆ ಮಾಡುವ ಏಕೈಕ ಉದ್ದೇಶದಿಂದ ಎಲ್ಲ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ ರಾಜ್ಯ ಸರಕಾರದ ಅಧಿಕಾರಿಗಳು ಅಪಚಾರ ಎಸಗಿದ್ದಾರೆ. ಇಂದು ಚನ್ನಪಟ್ಟಣದಲ್ಲಿ ನಡೆದಿರುವ ಎಲ್ಲ ಘಟನೆಗಳಿಗೂ ಸರಕಾರ, ಅಧಿಕಾರಿಗಳು ಮತ್ತು ವಿಧಾನಪರಿಷತ್ ಸದಸ್ಯರೇ ಕಾರಣ ಎಂದು ಅವರು ಆರೋಪ ಮಾಡಿದರು.
ನಾನೊಬ್ಬ ಮಾಜಿ ಮುಖ್ಯಮಂತ್ರಿ. ನನ್ನಂಥವರಿಗೇ ಸರಕಾರ ಈ ರೀತಿ ಕಿರುಕುಳ ನೀಡಿದರೆ, ಇತರೆ ಶಾಸಕರ ಪಾಡೇನು? ಶಾಸಕನಾದ ನನ್ನ ಹಕ್ಕುಚ್ಯುತಿಗೆ ಕಾರಣರಾದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್.) ಅಧಿಕಾರಿಗಳು ಹಾಗೂ ಜಿಲ್ಲೆಯ ಇನ್ನಿತರೆ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಇಲ್ಲವಾದರೆ, ವಿಧಾನಸಭೆಯ ಒಳಗೆ, ಹೊರಗೆ ಹೋರಾಟ ನಡೆಸುತ್ತೇನೆ ಹಾಗೂ ಸದನದಲ್ಲಿ ಹಕ್ಕುಚ್ಯುತಿ ನಿರ್ಣಯ ಮನ್ನಡಿಸಲಾಗುವುದು. ಈ ಬಗ್ಗೆ ವಿಧಾನಸಭಾಧ್ಯಕ್ಷರಿಗೆ ದೂರು ನೀಡಲಾಗುವುದು. ಈ ಬಗ್ಗೆ ಸ್ವತಃ ಹಿಂದೆ ಮುಖ್ಯಮಂತ್ರಿಗಳಿಗೆ ಪತ್ರ ನಡೆದು ದೂರು ನೀಡಿದ್ದೆ. ಈವರೆಗೆ ಅವರು ನನಗೆ ಉತ್ತರ ನೀಡಿಲ್ಲ ಎಂದು ಗುಡುಗಿದರು ಮಾಜಿ ಮುಖ್ಯಮಂತ್ರಿಗಳು.
ನನಗೆ ಆಗಿರುವ ಅಪಮಾನ ಕ್ಷೇತ್ರದ ಜನತೆಗೆ ಮಾಡಿರುವ ಅಪಮಾನ. ಕಾಮಗಾರಿಗೆ ಅಡಿಗಲ್ಲು ಹಾಕುವುದಾದರೆ ಶಾಸಕರನ್ನು ಹೊರಗಿಟ್ಟು ಮಾಡಬೇಕು ಎನ್ನುವ ನಿಯಮ ಇದೆಯೇ? ಇಷ್ಟು ದಿನಗಳಿಂದ ಸುಮ್ಮನಿದ್ದು, ಈಗ ವಿಧಾನ ಪರಿಷತ್ ಸದಸ್ಯರಿಗೆ ಚಿತಾವಣೆ ಮಾಡಿ ಅತಿ ಉತ್ಸಾಹದಿಂದ ಕಾಮಗಾರಿಗಳಿಗೆ ಚಾಲನೆ ನೀಡಲು ಹೊರಟ ಒಳಗುಟ್ಟು ಏನು? ಈ ರೀತಿ ಆಳ್ವಿಕೆ ನಡೆಸಲೆಂದು ಆರ್ ಎಸ್ ಎಸ್ ಕಲಿಸಿಕೊಟ್ಟಿರುವುದಾ? ಎಂದು ಅವರು ಪ್ರಶ್ನಿಸಿದರು.
ಇವತ್ತಿನ ದಿನ ನನ್ನ ಕ್ಷೇತ್ರ ಚನ್ನಪಟ್ಟಣದಲ್ಲಿ ಸರಕಾರದ ಅನುದಾನ ಕಾರ್ಯಕ್ರಮದ ಶಂಕುಸ್ಥಾಪನೆ ಇತ್ತು. ಆದರೆ, ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾಜಕೀಯಕ್ಕೊಸ್ಕರ ಇವತ್ತು ಕಾರ್ಯಕ್ರಮ ಮಾಡಿದ್ದಾರೆ ಅವರು ಕಿಡಿಕಾರಿದರು.
ಕಡ್ಡಾಯವಾಗಿ ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿಯೇ ರಾಜ್ಯ ಸರಕಾರದ ಎಲ್ಲ ಅನುದಾನದ ಕಾರ್ಯಕ್ರಮಗಳನ್ನು ನಡೆಸಲೇಬೇಕು ಎಂದು ಖುದ್ದು ಮುಖ್ಯಮಂತ್ರಿಗಳೇ ಸದನದಲ್ಲೇ ಹೇಳಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಆಯೋಜಿಸುವ ಸರಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದು ಅಧಿಕಾರಿಗಳ ಗಮನಕ್ಕೆ ಇಲ್ಲವೇ? ಎಂದು ಕುಮಾರಸ್ವಾಮಿ ಅವರು ಹೇಳಿದರು.
ವಿಭಾಗ