ಕನ್ನಡ ಸುದ್ದಿ  /  Karnataka  /  Count How Many Rowdy Sheeters There Are In Congress Says Cm Basavaraj Bommai

CM Bommai on rowdy sheeter Sunil issue: ಕಾಂಗ್ರೆಸ್ ನಲ್ಲಿ ಎಷ್ಟು ಜನ ರೌಡಿಶೀಟರ್ ಇದ್ದಾರೆ ಎಂದು ಲೆಕ್ಕ ಹಾಕಲಿ: ಸಿಎಂ ಬೊಮ್ಮಾಯಿ

ಕಾಂಗ್ರೆಸ್ ನಲ್ಲಿ ಎಷ್ಟು ಜನ ರೌಡಿಶೀಟರ್ ಇದ್ದಾರೆ ಎಂದು ಲೆಕ್ಕ ಹಾಕಲಿ ಎಂದು ಸಿಎಂ ಬೊಮ್ಮಾಯಿ ಕೈ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಫೋಟೋ-ANI File)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಫೋಟೋ-ANI File)

ನವದೆಹಲಿ: ಬೆಂಗಳೂರಿನಲ್ಲಿ ರೌಡಿ ಶೀಟರ್ ಸೈಲೆಂಟ್ ಸುನೀಲ್ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡಿರುವ ಸಂಬಂಧ ಕಾಂಗ್ರೆಸ್ ನಾಯಕರು ಸರಣಿ ಟ್ವೀಟ್ ಗಳ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಇದೇ ವಿಚಾರ ಸಂಬಂಧ ಇಂದು ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನಲ್ಲಿ ಎಷ್ಟು ಜನ ರೌಡಿಶೀಟರ್ ಇದ್ದಾರೆ ಎಂದು ಲೆಕ್ಕ ಹಾಕಲಿ ಎಂದು ತಿರುಗೇಟು ನೀಡಿದರು.

ಚಾಮರಾಜಪೇಟೆಯಲ್ಲಿ ರಾಜ್ಯ ಕೂಲಿ ಕಾರ್ಮಿಕರ ಹಾಗೂ ಆಟೋ ಚಾಲಕರ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳು ಜಂಟಿಯಾಗಿ ಕಳೆದ ಭಾನುವಾರ ಅಪ್ಪು ನಮನ ಮತ್ತು ರಕ್ತದಾನ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಈ ಕಾರ್ಯಕ್ರಮದಲ್ಲಿ ರೌಡಿ ಶೀಟರ್ ಸೈಲೆಂಟ್ ಸುನೀಲ್ ಜೊತೆ ಆರೋಗ್ಯ ಸಚಿವ ಡಾ ಕೆ ಸುಧಾಕರ್, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ ಹಾಗೂ ಪಿಸಿ ಮೋಹನ್ ಅವರು ಸುನೀಲ್ ಪಕ್ಕದಲ್ಲಿ ಕುಳಿತಿದ್ದಾರೆ. ಹೀಗಾಗಿ ಸುನೀಲ್ ಬಿಜೆಪಿ ಸೇರುತ್ತಾನೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಬಿಜೆಪಿಯಲ್ಲಿ ಈ ಮೊದಲು ವೈಟ್ ಕಾಲರ್ ರೌಡಿಗಳಿದ್ದರು, ಈಗ ರಿಯಲ್ ರೌಡಿಗಳು ಸೇರಿದ್ದಾರೆ. ಮುಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೂಡ ಬಿಜೆಪಿ ಸೇರಿ ಪಾವನನಾಗಬಹುದು! ಪಾತಕಿಗಳು, ದರೋಡೆಕೋರರು, ಡ್ರಗ್ ಪೆಡ್ಲರ್‌ಗಳು, ಕ್ರೀಮಿನಲ್‌ಗಳು, ಭ್ರಷ್ಟರು, ರೇಪಿಸ್ಟರು ಎಲ್ಲರಿಗೂ ಭಾರತೀಯ ಜನತಾ ಪಕ್ಷ ತವರು ಮನೆ ಇದ್ದಂತೆ! ಎಂದು ತರಾಟೆಗೆ ತೆಗೆದುಕೊಂಡಿದೆ .

ಸೈಲೆಂಟ್ ಸುನಿಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ

ಸೈಲೆಂಟ್ ಸುನಿಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ. ಸೈಲೆಂಟ್ ಸುನಿಲ್ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಕೆಲವು ಪ್ರಮುಖರು ಭಾಗವಹಿಸಿದ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖಂಡರಿಂದ ವಿವರಣೆ ಕೇಳಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವರ ಭೇಟಿ

ಕಾಂಗ್ರೆಸ್ ಗೆ ತಿರುಗೇಟಿಗೂ ಮುನ್ನ ಸಿಎಂ, ದೆಹಲಿ ಭೇಟಿ ಬಗ್ಗೆ ಮಾಹಿತಿ ನೀಡಿದರು. ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸಮಯ ಕೇಳಿದ್ದು, ನಾಳೆ ಸಮಯ ದೊರೆಯುವ ವಿಶ್ವಾಸವಿದೆ ಎಂದರು. ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ , ಭೂಪೇಂದ್ರ ಯಾದವ್ ಮತ್ತು ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದು, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆಗೆ ಮೇಕೆದಾಟು, ಭದ್ರಾ ಮೇಲ್ಡಂಡೆ ಯೋಜನೆ, ಮಹದಾಯಿ ಬಗ್ಗೆ ಚರ್ಚೆ ಮಾಡಲಿರುವುದಾಗಿ ತಿಳಿಸಿದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಉದ್ಘಾಟನೆಗೆ ಆಹ್ವಾನಿಸಲಾಗುವುದು ಹಾಗೂ ಭೂಪೇಂದ್ರ ಯಾದವ್ ಅವರೊಂದಿಗೆ ಪರಿಸರ ಸಂಬಂಧಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

IPL_Entry_Point