ಕನ್ನಡ ಸುದ್ದಿ  /  Karnataka  /  Court News 204 Crore Defamation Suit Bjp Mla Basanagouda Patil Yatnal Requested Case Transfer From Kanakapura Court Mrt

204 ಕೋಟಿ ರೂ ಮಾನನಷ್ಟ ಕೇಸ್‌; ಕನಕಪುರದಿಂದ ಬೆಂಗಳೂರಿಗೆ ವರ್ಗಾಯಿಸುವುದಕ್ಕೆ ಬಸನಗೌಡ ಯತ್ನಾಳ್ ಮನವಿ

Court News: ಕಳೆದ ವರ್ಷ ಡಿಕೆ ಶಿವಕುಮಾರ್ ಹೂಡಿದ್ದ 204 ಕೋಟಿ ರೂ ಮಾನನಷ್ಟ ಕೇಸ್‌ ಅನ್ನು ಕನಕಪುರದಿಂದ ಬೆಂಗಳೂರಿಗೆ ವರ್ಗಾಯಿಸುವುದಕ್ಕೆ ಬಸನಗೌಡ ಯತ್ನಾಳ್ ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ವಿಚಾರಣೆ ನಡೆದಿದ್ದು, ಅದರ ವಿವರ ಇಲ್ಲಿದೆ. (ವರದಿ- ಎಚ್‌ ಮಾರುತಿ, ಬೆಂಗಳೂರು)

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಬಲ ಚಿತ್ರ); ಕರ್ನಾಟಕ ಹೈಕೋರ್ಟ್ (ಮಧ್ಯ ಚಿತ್ರ), ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (ಎಡ ಚಿತ್ರ)
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಬಲ ಚಿತ್ರ); ಕರ್ನಾಟಕ ಹೈಕೋರ್ಟ್ (ಮಧ್ಯ ಚಿತ್ರ), ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (ಎಡ ಚಿತ್ರ)

ಬೆಂಗಳೂರು: ಕನಕಪುರ ಕೋರ್ಟ್‌ನಲ್ಲಿರುವ ದಾವೆಯನ್ನು ಬೆಂಗಳೂರು ಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಕೋರಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಕೋರ್ಟ್‌ ನೋಟಿಸ್ ಜಾರಿಗೊಳಿಸಿದೆ.

ಕೋರ್ಟ್‌ ವಿಚಾರಣೆಗಾಗಿ ನಾನು ಕನಕಪುರಕ್ಕೆ ಭೇಟಿ ನೀಡಿದರೆ ನನ್ನ ಮೇಲೆ ದಾಳಿಯಾಗುವ ಸಂಭವ ಇರುವುದರಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ಸಲ್ಲಿಸಿರುವ ಅಸಲು ದಾವೆಯೊಂದನ್ನು ಬೆಂಗಳೂರಿಗೆ ವರ್ಗಾಯಿಸುವಂತೆ ಕೋರಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ ಸಿವಿಲ್ ದಾವೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ಸುನಿಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ, ಪ್ರತಿವಾದಿಯಾಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ತುರ್ತು ನೋಟಿಸ್‌ ಜಾರಿಗೊಳಿಸಲು ಆದೇಶ ನೀಡಿದೆ.

ವಿಚಾರಣೆಯಲ್ಲಿ ಏನು ನಡೆಯಿತು

ಬಸನಗೌಡ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ, “ಕನಕಪುರ ನ್ಯಾಯಾಲಯದ ವ್ಯಾಪ್ತಿಯಲ್ಲಿ ದಾವೆಯ ವಿಚಾರಣೆ ನಡೆಸುವುದಕ್ಕೆ ಯಾವುದೇ ಸಕಾರಣಗಳಿಲ್ಲ. ಆದ್ದರಿಂದ ಕನಕಪುರ ಹಿರಿಯ ಸಿವಿಲ್‌ ಕೋರ್ಟ್‌ ಮತ್ತು ಜೆಎಂಎಫ್‌ಸಿಯಲ್ಲಿ ಹೂಡಲಾಗಿರುವ ಅಸಲು ದಾವೆಯ ವಿಚಾರಣೆಗೆ ತಡೆ ನೀಡಬೇಕು” ಎಂದು ಯತ್ನಾಳ್‌ ಪರ ವಕೀಲರು, ವಾದ ಮಂಡಿಸಿದರು.

ಈ ವಾದವನ್ನು ಒಪ್ಪಿಕೊಂಡ ನ್ಯಾಯಪೀಠ, ಡಿಕೆ ಶಿವಕುಮಾರ್ ಅವರಿಗೆ ತುರ್ತು ನೋಟಿಸ್‌ ಜಾರಿಗೊಳಿಸುವಂತೆ ಆದೇಶಿಸಿ ವಿಚಾರಣೆಯನ್ನು ನಾಳೆಗೆ (ಮಾರ್ಚ್‌ 20ಕ್ಕೆ) ಮುಂದೂಡಿದೆ.

ಬಸನಗೌಡ ಯತ್ನಾಳ್ ವಿರುದ್ಧದ ಕೇಸ್ ಏನು

“ಡಿಕೆ ಶಿವಕುಮಾರ್ ನಮ್ಮ ಬಿಜೆಪಿ ನಾಯಕರನ್ನು ಭೇಟಿ ಮಾಡಿ ತಮ್ಮ ವಿರುದ್ಧ ದಾಖಲಾಗಿರುವ ಆದಾಯ ತೆರಿಗೆ ಇಲಾಖೆ ಪ್ರಕರಣಗಳಿಂದ ರಕ್ಷಿಸುವಂತೆ ಕೇಂದ್ರ ಸಚಿವರ ಮೂಲಕ ಲಾಬಿ ಮಾಡಿದ್ದಾರೆ. ಆ ಮೂಲಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮೇಲೆ ಒತ್ತಡ ಹೇರುವುದಕ್ಕೆ ಪ್ರಯತ್ನಿಸಿದ್ದಾರೆ” ಎಂದು ಬಸನಗೌಡ ಪಾಟೀಲ್ ಯತ್ನಾಳ್‌ 2019ರ ಜೂನ್ 23ರಂದು ಹೇಳಿದ್ದರು. ಅಂದು ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು.

ತಮ್ಮ ವಿರುದ್ಧ ದಾಖಲಾಗಿರುವ ಜಾರಿ ನಿರ್ದೇಶನಾಲಯದ ಕೇಸ್‌ಗಳನ್ನು ಕೈಬಿಟ್ಟರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಡಿಕೆ ಶಿವಕುಮಾರ್ ವರಿಷ್ಠರಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ನನಗೂ ಸಿಕ್ಕಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅಂದು ಹೇಳಿದ್ದಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು.

ಹಾಗೆ, ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ಬಸನಗೌಡ ಪಾಟೀಲ್ ಯತ್ನಾಳರ ಹೇಳಿಕೆಯಿಂದಾಗಿ ನನ್ನ ಘನತೆಗೆ, ವರ್ಚಸ್ಸಿಗೆ ಹಾನಿಯಾಗಿದೆ. ಹೀಗಾಗಿ 204 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಆದೇಶಿಸಬೇಕು ಎಂದು ಕೋರಿ ಡಿಕೆ ಶಿವಕುಮಾರ್‌ ರಾಮನಗರ ಜಿಲ್ಲೆಯ ಕನಕಪುರ ಕೋರ್ಟ್‌ನಲ್ಲಿ ಅಸಲು ದಾವೆ ಹೂಡಿದ್ದರು.

ಬಸನಗೌಡ ಯತ್ನಾಳ್ ಹೇಳುತ್ತಿರುವುದೇನು

ಈ ಪ್ರಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಯತ್ನಾಳ್‌ ಅವರು, ಡಿಕೆ ಶಿವಕುಮಾರ್‌ ನನಗೆ ಕಿರುಕುಳ ನೀಡುವ ಏಕೈಕ ಉದ್ದೇಶದಿಂದ ಈ ದಾವೆಯನ್ನು ಕನಕಪುರದ ನ್ಯಾಯಾಲಯದಲ್ಲಿ ಹೂಡಿದ್ದಾರೆ. ನಾನು ವಿಜಯಪುರದ ಶಾಸಕನಾಗಿದ್ದೇನೆ. ವಿಜಯಪುರದಲ್ಲಿ ನೀಡಿರುವ ಹೇಳಿಕೆಗೆ ಕನಕಪುರದಲ್ಲಿ ದಾವೆ ಹೂಡಲಾಗಿದೆ. ಎರಡು ಪಟ್ಟಣಗಳ ನಡುವಿನ ಅಂತರ 565 ಕಿ.ಮೀ. ಇದೆ. ಇಷ್ಟು ದೂರದ ಅಂತರವನ್ನು ನಿರಾತಂಕವಾಗಿ ತಲುಪುವುದು ಕಷ್ಟವಾಗುತ್ತದೆ. ಆದ್ದರಿಂದ ಈ ಪ್ರಕರಣವನ್ನು ಕನಕಪುರದಿಂದ ಬೆಂಗಳೂರಿನ ಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ 2008 ರಿಂದಲೂ ಕನಕಪುರದ ಶಾಸಕರಾಗಿದ್ದು, ಅತ್ಯಂತ ಪ್ರಭಾವಿಗಳಲ್ಲಿ ಒಬ್ಬರು. ಈ ಪ್ರಕರಣದ ಸಾಕ್ಷ್ಯ ತಿರುಚುವ ಸಾಧ್ಯತೆ ಇರುವುದರಿಂದ ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಯತ್ನಾಳ್ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

(ವರದಿ- ಎಚ್‌ ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)