ಕನ್ನಡ ಸುದ್ದಿ  /  Karnataka  /  Court News Karnataka Hc Displeased With The Delay In Submitting The Report On Water Toilet Status In Bbmp Schools Uks

ಬಿಬಿಎಂಪಿ ಶಾಲೆಗಳಲ್ಲಿ ನೀರು, ಶೌಚಗೃಹ, ಮೂಲಸೌಕರ್ಯ ಸ್ಥಿತಿಗತಿ ವರದಿ ಸಲ್ಲಿಕೆ ವಿಳಂಬ; ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ

ಬಿಬಿಎಂಪಿ ಶಾಲೆಗಳಲ್ಲಿ ನೀರು, ಶೌಚಗೃಹ, ಮೂಲಸೌಕರ್ಯ ಸ್ಥಿತಿಗತಿ ವರದಿ ಸಲ್ಲಿಕೆ ವಿಳಂಬವಾಗಿರುವ ಬಗ್ಗೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವರದಿ ಸಲ್ಲಿಕೆಗೆ ಹೇಳಿ 5 ತಿಂಗಳಾದರೂ ಸಲ್ಲಿಸಿದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು. ಈ ವಿಚಾರಣೆಯ ವಿವರ ಇಲ್ಲಿದೆ.

ಕರ್ನಾಟಕ ಹೈಕೋರ್ಟ್ (ಎಡ ಚಿತ್ರ); ಬಿಬಿಎಂಪಿ ಕಚೇರಿ (ಬಲ ಚಿತ್ರ)
ಕರ್ನಾಟಕ ಹೈಕೋರ್ಟ್ (ಎಡ ಚಿತ್ರ); ಬಿಬಿಎಂಪಿ ಕಚೇರಿ (ಬಲ ಚಿತ್ರ)

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ಸಂಪರ್ಕ ಸೇರಿ ಅಗತ್ಯ ಮೂಲ ಸೌಕರ್ಯಗಳ ವಸ್ತುಸ್ಥಿತಿ ಕುರಿತು ವರದಿ ಸಲ್ಲಿಕೆ ವಿಳಂಬವಾಗಿರುವ ಬಗ್ಗೆ ಕರ್ನಾಟಕ ಹೈಕೋರ್ಟ್ (Karnataka High Court) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಈ ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್ ಕೊನೆಯದಾಗಿ 2 ವಾರಗಳ ಗಡುವು ನೀಡಿದೆ.

ಬಿಬಿಎಂಪಿ ಶಾಲೆಯಲ್ಲಿ ಬಹಳ ಬಡತನದಲ್ಲಿರುವ ಮಕ್ಕಳು ಓದುತ್ತಾರೆ. ನೀವು ಶಾಲೆಗಳ ಸೌಕರ್ಯ ಸುಧಾರಿಸುತ್ತಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಕರ್ನಾಟಕದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ವಿಚಾರವಾಗಿ 2013ರಲ್ಲಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಅಂಜಾರಿಯಾ, ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ಈ ರೀತಿ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಅಲ್ಲದೆ, ವರದಿ ಸಲ್ಲಿಸುವುದಕ್ಕೆ ಕೊನೆಯ ಗಡುವನ್ನೂ ನೀಡಿತು.

ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತ ಭಿನ್ನ ವರದಿಗಳು

ಶಾಲೆಯಿಂದ ಹೊರಗುಳಿದ ಮಕ್ಕಳ ಕೇಸ್‌ನಲ್ಲಿ ರಾಜ್ಯ ಸರ್ಕಾರ ಆದೇಶಗಳನ್ನು ಪಾಲಿಸಿದ್ದು ವರದಿ ಸಲ್ಲಿಸಿದೆ. ಆದರೆ, ಸರ್ಕಾರ ಸಲ್ಲಿಸಿದ ವರದಿ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಪರಿಶೀಲನಾ ವರದಿಯಲ್ಲಿ ಒಂದಿಷ್ಟು ವ್ಯತ್ಯಾಸಗಳಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಅಗತ್ಯ ನಿರ್ದೇಶನ ನೀಡಬೇಕಿದೆ. ಆದರೆ ಸಮಸ್ಯೆ ಇರುವುದು ಬಿಬಿಎಂಪಿಯದ್ದು ಎಂದು ಹಿರಿಯ ವಕೀಲ ಕೆ.ಎನ್ ಫಣೀಂದ್ರ ನ್ಯಾಯಪೀಠದ ಗಮನಸೆಳೆದರು.

ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿನ ಮೂಲಸೌಕರ್ಯಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ 2023ರ ಅಕ್ಟೋಬರ್ 9ರಂದು ನ್ಯಾಯಾಲಯ ಆದೇಶ ಮಾಡಿದೆ. ಇಲ್ಲಿವರೆಗೆ ಬಿಬಿಎಂಪಿ ವರದಿ ಸಲ್ಲಿಸಿಲ್ಲ ಎಂದು ಪ್ರಕರಣದಲ್ಲಿ ನ್ಯಾಯಾಲಯದ ಆಮಿಕಸ್ ಕ್ಯೂರಿ ಆಗಿ ನಿಯೋಜಿಸಲ್ಪಟ್ಟಿರುವ ಹಿರಿಯ ವಕೀಲ ಕೆ.ಎನ್ ಫಣೀಂದ್ರ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಪರ ವಕೀಲ ಎನ್.ಕೆ.ರಮೇಶ್, ಬಿಬಿಎಂಪಿ ವ್ಯಾಪ್ತಿಯಲ್ಲಿ 8 ವಲಯಗಳಿವೆ. ವಲಯವಾರು ಶಾಲೆಗಳ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ. ಒಂದು ವಾರ ಸಮಯ ಕೊಟ್ಟರೆ ಸಮಗ್ರ ವರದಿ ಸಲ್ಲಿಸುವುದಕ್ಕೆ ಅನುಕೂಲವಾಗುತ್ತದೆ ಎಂದು ವರದಿ ಸಲ್ಲಿಕೆ ವಿಳಂಬವಾಗುತ್ತಿರುವ ಬಗ್ಗೆ ಸಮಜಾಯಿಷಿ ನೀಡಲು ಪ್ರಯತ್ನಿಸಿದರು.

ಆದರೆ, ಬಿಬಿಎಂಪಿ ವಕೀಲರ ಸಮಜಾಯಿಷಿ ಕೊಡುವ ಪ್ರಯತ್ನಕ್ಕೆ ಅಸಮಾಧಾನಗೊಂಡ ನ್ಯಾಯಪೀಠ, ಆದೇಶ ಕೊಟ್ಟು ಐದು ತಿಂಗಳಾಗಿದೆ. ಕೊನೆಯದಾಗಿ ಎರಡು ವಾರ ಕಾಲಾವಕಾಶ ನೀಡಲಾಗುತ್ತಿದ್ದು, ಅಷ್ಟರೊಳಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ತಾಕೀತು ಮಾಡಿತು. ಅಲ್ಲದೆ ಈ ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 27 ಕ್ಕೆ ಮುಂದೂಡಿತು.

(This copy first appeared in Hindustan Times Kannada website. To read more like this please logon to kannada.hindustantimes.com)