ಕನ್ನಡ ಸುದ್ದಿ  /  Karnataka  /  Court News Karnataka High Court Concerns About Mining Activity Near Krs Dam Mandya Bengaluru News Uks

ಕೆಆರ್‌ಎಸ್‌ ಅಣೆಕಟ್ಟೆ ಸುತ್ತಮುತ್ತ ಗಣಿಗಾರಿಕೆ ಬೇಡ; 4 ರಾಜ್ಯಗಳ ಜೀವನದಿಗೆ ಅಪಾಯ, ಕರ್ನಾಟಕ ಹೈಕೋರ್ಟ್‌ ಕಾಳಜಿ

ಕೆಆರ್‌ಎಸ್ ಅಣೆಕಟ್ಟೆಯ ಸುತ್ತಮುತ್ತ ಗಣಿಗಾರಿಕೆ ಮತ್ತು ಅದಕ್ಕೆ ಪೂರಕ ಚಟುವಟಿಕೆಗಳು ಅಪಾಯಕಾರಿ. ಹೀಗಾಗಿ ಅದರ ಕುರಿತಾದ ತೀರ್ಮಾನಗಳನ್ನು, ತೀರ್ಪುಗಳನ್ನು ನೇರವಾಗಿ ಕೋರ್ಟ್‌ ತೆಗೆದುಕೊಳ್ಳಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ಗಣಿಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿಗೆ ಸ್ವಲ್ಪವೂ ಧಕ್ಕೆಯಾಗದ ರೀತಿಯಲ್ಲಿ ಕಾಪಾಡಿಕೊಳ್ಳಬೇಕು. ಅಂತಹ ತುರ್ತು, ಅನಿವಾರ್ಯ ಪರಿಸ್ಥಿತಿ ಇಂದು ಹೆಚ್ಚಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ (Karnataka High Court) ಕಾಳಜಿ ವ್ಯಕ್ತಪಡಿಸಿದೆ.

ಕಳೆದ ಜನವರಿ ತಿಂಗಳಲ್ಲಿ ಕೆಆರ್‌ಎಸ್ ಅಣೆಕಟ್ಟಿನ 20 ಕಿ.ಮೀ ಸುತ್ತಳತೆಯ ವ್ಯಾಪ್ತಿ ಪ್ರದೇಶದಲ್ಲಿ ಗಣಿಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆ ನಡೆಸದಂತೆ ನಿಷೇಧ ಹೇರಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿತ್ತು.

ಈ ತೀರ್ಪಿನ ಬಳಿಕ, ಕೋರ್ಟ್‌ ಹೇಳಿರುವ ಕೆಆರ್‌ಎಸ್ ಅಣೆಕಟ್ಟಿನ 20 ಕಿ.ಮೀ ಸುತ್ತಳತೆಯ ವ್ಯಾಪ್ತಿ ಪ್ರದೇಶದಿಂದ ಹೊರಗಿರುವ ಕಾರಣ ತಮಗೆ ಕ್ರಷಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನ ಮರಡಿ ಗ್ರಾಮದ ಮಂಚಮ್ಮದೇವಿ ಸ್ಟೋನ್ ಕ್ರಷರ್ ಹಾಗೂ ಎಂ.ಸ್ಯಾಂಡ್ ಘಟಕದ ಮಾಲೀಕ ವೈ.ಬಿ.ಅಶೋಕ್ ಗೌಡ ಪಟೇಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ವೇಳೆ ಹೈಕೋರ್ಟ್‌ ಮತ್ತೆ ಕೆಆರ್‌ಎಸ್ ಅಣೆಕಟ್ಟೆ ಕುರಿತು ಮತ್ತೆ ಕಾಳಜಿ ವ್ಯಕ್ತಪಡಿಸಿತು.

ಕೆಆರ್‌ಎಸ್‌ ಸುತ್ತಮುತ್ತ ಗಣಿಗಾರಿಕೆ; ಕರ್ನಾಟಕ ಹೈಕೋರ್ಟ್‌ ಹೇಳಿದ್ದಿಷ್ಟು

ಕರ್ನಾಟಕ, ತಮಿಳುನಾಡು, ಪುದುಚೆರಿ ಮತ್ತು ಕೇರಳಗಳಿಗೆ ನೀರುಣಿಸುವ ಜೀವನದಿ ಕಾವೇರಿ. ಇದಕ್ಕೆ ಕಟ್ಟಲಾಗಿರುವ ಕೆಆರ್‌ಎಸ್‌ (ಕೃಷ್ಣರಾಜ ಸಾಗರ) ಅಣೆಕಟ್ಟಿನ ಸುತ್ತಮುತ್ತ ಯಾವುದೇ ರೀತಿಯ ಗಣಿಗಾರಿಕೆ ಮತ್ತು ಅದಕ್ಕೆ ಹೊಂದಿಕೊಂಡ ಚಟುವಟಿಕೆ ಅತ್ಯಂತ ಅಪಾಯಕಾರಿ ಎಂದು ಹೈಕೋರ್ಟ್‌ ಹೇಳಿದೆ.

ಕೆಆರ್‌ಎಸ್‌ ಅಣೆಕಟ್ಟು ವ್ಯಾಪ್ತಿ ಹಾಗೂ ಅದರಾಚೆಗೂ ಕೂಡಾ ಯಾವುದೇ ಕಲ್ಲು ಗಣಿಗಾರಿಕೆ ಹಾಗೂ ಸ್ಫೋಟಕ ಚಟುವಟಿಕೆಗಳಿಗೆ ಸಂಬಂಧಿಸಿದ ತಕರಾರುಗಳಿದ್ದರೆ ಆ ಬಗ್ಗೆ ಶಾಸನಾತ್ಮಕವಾಗಿ ರೂಪುಗೊಂಡಿರುವ ಕರ್ನಾಟಕ ರಾಜ್ಯ ಜಲಾಶಯಗಳ ಸುರಕ್ಷಿತ ಸಮಿತಿಗೆ ಮನವಿ ಸಲ್ಲಿಸಬೇಕು. ಈ ವಿಚಾರಕ್ಕೆ ಸಂಬಂಧಿಸಿದ ಸಮಿತಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ವಿಭಾಗೀಯ ನ್ಯಾಯಪೀಠ ಹೇಳಿದೆ.

ಕೆಆರ್‌ಎಸ್‌ ಅಣೆಕಟ್ಟೆ ಸಮೀಪ ಮತ್ತು ಸುತ್ತಮುತ್ತ ಗಣಿಗಾರಿಕೆ ಸಂಬಂಧಿಸಿದ ವಿಚಾರದಲ್ಲಿ ತೀರ್ಮಾನ ಪ್ರಕಟಿಸಲು ಕೋರ್ಟ್ ಪರಿಣಿತಿ ಹೊಂದಿಲ್ಲ. ಅದರಂತೆ ಈ ಮನವಿಯನ್ನು ಸಮಿತಿಗೆ ಸಲ್ಲಿಸಿ ಬಗೆಹರಿಸಿಕೊಳ್ಳಬೇಕು ಎಂದು ವೈ.ಬಿ.ಅಶೋಕ್ ಗೌಡ ಪಟೇಲ್‌ಗೆ ನಿರ್ದೇಶಿಸಿದ ನ್ಯಾಯಪೀಠ, ಸದರಿ ದಾವೆಯನ್ನು ಇತ್ಯರ್ಥಗೊಳಿಸಿತು.

ಅರ್ಜಿದಾರ ವೈ.ಬಿ.ಅಶೋಕ್ ಗೌಡ ಪಟೇಲ್‌ ಪರವಾಗಿ ವಿಕ್ರಮ ಉನ್ನಿ ಬಾಲಕೃಷ್ಣ ವಕಾಲತ್ತು ವಹಿಸಿದ್ದರು. ಕರ್ನಾಟಕ ಸರ್ಕಾರದ ಪರ ಎಸ್ ಎಸ್ ಮಹೇಂದ್ರ ವಾದ ಮಂಡಿಸಿದರು.

ಏನಿದು ಪ್ರಕರಣ, ಅರ್ಜಿದಾರರ ಮನವಿ ಏನು

ಮಂಡ್ಯದ ಕೆಆರ್‌ಎಸ್ ಅಣೆಕಟ್ಟೆಯ ಸುತ್ತಲಿನ 20 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಮತ್ತು ಸಂಬಂಧಿತ ಚಟುವಟಿಕೆ ನಡೆಸದಂತೆ ಹೈಕೋರ್ಟ್ ನಿರ್ಬಂಧ ಹೇರಿದೆ ಎಂದು ತಿಳಿಸಿ, ತಮ್ಮ ಘಟಕದ ಕಾರ್ಯಾಚರಣೆ ನಿಲ್ಲಿಸಲು ಜಿಲ್ಲಾ ಸ್ಟೋನ್ ಕ್ರಷರ್ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರ 2024ರ ಜ.20ರಂದು ನೋಟೀಸ್ ನೀಡಿದೆ. ಮ್ಮದು ಕೇವಲ ಕ್ರಷರ್ ಮತ್ತು ಎಂ.ಸ್ಯಾಂಡ್ ಘಟಕ. ಕಲ್ಲು ಸ್ಫೋಟಿಸುವುದು ಸೇರಿ ಗಣಿಗಾರಿಕೆಗೆ ಸಂಬಂಧಿಸಿದ ಇತರೆ ಯಾವುದೇ ನಿರ್ಬಂಧಿತ ಚಟುವಟಿಕೆ ಕೈಗೊಳ್ಳುತ್ತಿಲ್ಲ. ಆದ್ದರಿಂದ ಘಟಕದ ಚಟುವಟಿಕೆ ಪುನರಾರಂಭಕ್ಕೆ ಅನುಮತಿ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ವೈ.ಬಿ.ಅಶೋಕ್ ಗೌಡ ಪಟೇಲ್‌ ದಾವೆ ಹೂಡಿದ್ದರು.

IPL_Entry_Point